ಕೇರಳ: ಕೊಲ್ಲಂನಲ್ಲಿ ಎಸ್ಎಫ್ಐ ವಿರುದ್ಧ ರಸ್ತೆಯಲ್ಲಿ ಕುಳಿತು ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಆಕ್ರೋಶ

ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟಿಸಿದ ಎಸ್ಎಫ್ಐ ಕಾರ್ಯಕರ್ತರು. ಇದರಿಂದ ಕುಪಿತಗೊಂಡ ರಾಜ್ಯಪಾಲರು ಪ್ರತಿಭಟನಾಕಾರರಿಗೆ ಪೊಲೀಸರು ರಕ್ಷಣೆ ನೀಡುತ್ತಿದ್ದಾರೆ. ಅವರ ವಿರುದ್ಧ ಪ್ರಕರಣ ದಾಖಲಿಸುವವರೆಗೂ ನಾನು ಇಲ್ಲಿಂದ ತೆರಳುವುದಿಲ್ಲ ಎಂದು ರಸ್ತೆಯಲ್ಲಿ ಕುಳಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇರಳ: ಕೊಲ್ಲಂನಲ್ಲಿ ಎಸ್ಎಫ್ಐ ವಿರುದ್ಧ ರಸ್ತೆಯಲ್ಲಿ ಕುಳಿತು ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಆಕ್ರೋಶ
ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್
Follow us
ರಶ್ಮಿ ಕಲ್ಲಕಟ್ಟ
|

Updated on: Jan 27, 2024 | 1:07 PM

ಕೊಲ್ಲಂ (ಕೇರಳ) ಜನವರಿ 27: ಕೊಲ್ಲಂ (Kollam) ಜಿಲ್ಲೆಯ  ನಿಲಮೇಲ್‌ನಲ್ಲಿ ಇಂದು (ಶನಿವಾರ) ಕೇರಳದ (Kerala) ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ (Arif Mohammed Khan) ವಿರುದ್ಧ ಎಸ್‌ಎಫ್‌ಐ (SFI) ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟಿಸಿದ ನಂತರ ನಾಟಕೀಯ ದೃಶ್ಯಗಳು ನಡೆದಿವೆ. ಎಸ್ಎಫ್ಐ ವಿರುದ್ಧ ಗುಡುಗಿದ ರಾಜ್ಯಪಾಲರು ವಾಹನದಿಂದ ಕೆಳಗಿಳಿದು  ಎಸ್ಎಫ್ಐ ಕಾರ್ಯಕರ್ತರು ಹಾಗೂ ಪೊಲೀಸರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರು ಪ್ರತಿಭಟನಾಕಾರರಿಗೆ ರಕ್ಷಣೆ ನೀಡುತ್ತಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸದೆ ಅಲ್ಲಿಂದ ಕದಲುವುದಿಲ್ಲ ಎಂಬ ದೃಢ ನಿಲುವಿನಿಂದ ರಾಜ್ಯಪಾಲರು ರಸ್ತೆಯಲ್ಲೇ ಕುಳಿತು ಪ್ರತಿಭಟನೆ ನಡೆಸಿದ್ದಾರೆ.

ಸದಾನಂದ ಆಶ್ರಮದಲ್ಲಿ ಸಮಾರಂಭವನ್ನು ಉದ್ಘಾಟಿಸಲು ರಾಜ್ಯಪಾಲರು ತಿರುವನಂತಪುರದಿಂದ ನಿಲಮೇಲ್ ಮೂಲಕ ಸದಾನಂದಪುರಕ್ಕೆ ಹೋಗುತ್ತಿದ್ದರು. ಪ್ರಯಾಣದ ವೇಳೆ ಎಸ್‌ಎಫ್‌ಐ ಸದಸ್ಯರು ರಾಜ್ಯಪಾಲರ ವಾಹನದ ಎದುರು ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು. ಇದರಿಂದ ಕುಪಿತಗೊಂಡ ರಾಜ್ಯಪಾಲರು ಕಾರಿನಿಂದ ಇಳಿದು ಪ್ರತಿಭಟನಾಕಾರರ ಮೇಲೆ ವಾಗ್ದಾಳಿ ನಡೆಸಿದ್ದಾರೆ.

ಪ್ರತಿಭಟನಾಕಾರರಿಗೆ ಪೊಲೀಸರು ರಕ್ಷಣೆ ನೀಡುತ್ತಿದ್ದಾರೆ. ಅವರ ವಿರುದ್ಧ ಪ್ರಕರಣ ದಾಖಲಿಸುವವರೆಗೂ ನಾನು ಇಲ್ಲಿಂದ ತೆರಳುವುದಿಲ್ಲ. ಪೊಲೀಸರೇ ಕಾನೂನನ್ನು ಉಲ್ಲಂಘಿಸಿದರೆ ಕಾನೂನನ್ನು ಯಾರು ಕಾಪಾಡುತ್ತಾರೆ ಎಂದು ರಾಜ್ಯಪಾಲರು ಕೊಲ್ಲಂ ಗ್ರಾಮಾಂತರ ಎಸ್‌ಪಿಯನ್ನು ತರಾಟೆಗೆ ತೆಗೆದುಕೊಂಡರು. ಮನವೊಲಿಸಲು ಬಂದ ಕಚೇರಿ ಸಿಬ್ಬಂದಿ ಮೇಲೂ ರಾಜ್ಯಪಾಲರು ಸಿಟ್ಟಿಗೆದ್ದರು. ಪ್ರಧಾನಿ ಕಚೇರಿಗೆ ಕರೆ ಮಾಡಿ ಗೃಹ ಸಚಿವ ಅಮಿತ್ ಶಾ ಅವರನ್ನು ಕರೆಸಿ ಎಂದು ಖಾನ್ ಪಟ್ಟು ಹಿಡಿದಿದ್ದಾರೆ.

ಸ್ಥಳೀಯ ಮುಖಂಡರು ಮಧ್ಯ ಪ್ರವೇಶಿಸಿ ಮನವೊಲಿಸಲು ಯತ್ನಿಸಿದರೂ ರಾಜ್ಯಪಾಲರು ಮಣಿಯಲಿಲ್ಲ. ರಾಜ್ಯದ ಗೃಹ ಇಲಾಖೆ ವಿಫಲವಾಗಿದ್ದು, ಪೊಲೀಸರು ಪ್ರತಿಭಟನಾಕಾರರ ಜತೆ ಶಾಮೀಲಾಗಿದ್ದಾರೆ ಎಂದು ರಾಜ್ಯಪಾಲರು ಆರೋಪಿಸಿದ್ದಾರೆ. ಇದೇ ವೇಳೆ ಎಲ್ಲ ಪ್ರತಿಭಟನಾಕಾರರನ್ನು ಪೊಲೀಸರು ಸ್ಥಳದಿಂದ ಚದುರಿಸಿದ್ದಾರೆ. ಈ ಹಿಂದೆಯೂ ಕಪ್ಪು ಬಾವುಟ ಪ್ರತಿಭಟನೆಯ ನಂತರ ರಾಜ್ಯಪಾಲರು ಇದೇ ರೀತಿ ಆಕ್ರೋಶ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ನಿಮ್ಹಾನ್ಸ್​​​​ ಬಯಾಪ್ಸಿ ಸ್ಯಾಂಪಲ್ಸ್​​ ಕಳವು ಕೇಸ್; ಕೇರಳದ ಖಾಸಗಿ ಮೆಡಿಕಲ್​​​ ಕಾಲೇಜು, ಸಂಸ್ಥೆಗಳಿಗೆ ಮಾರಾಟ

ಖಾನ್ ಮತ್ತು ಕೇರಳದಲ್ಲಿನ ಎಡ ಸರ್ಕಾರವು ಹಲವಾರು ವಿಷಯಗಳಲ್ಲಿ ಜಗಳವಾಡುತ್ತಿದೆ. ರಾಜ್ಯದಲ್ಲಿನ ವಿಶ್ವವಿದ್ಯಾಲಯಗಳ ಕಾರ್ಯನಿರ್ವಹಣೆ ಮತ್ತು ಅಸೆಂಬ್ಲಿ ಅಂಗೀಕರಿಸಿದ ಕೆಲವು ಮಸೂದೆಗಳಿಗೆ ರಾಜ್ಯಪಾಲರು ಸಹಿ ಹಾಕಿಲ್ಲ ಎಂಬುದು ಈ ಜಟಾಪಟಿಗೆ ಕಾರಣಗಳಲ್ಲೊಂದು. ಈ ಜಗಳಗಳ ನಡುವೆ ಗುರುವಾರ, ರಾಜ್ಯಪಾಲರು ಕೇರಳ ವಿಧಾನಸಭೆಯಲ್ಲಿ ತಮ್ಮ ಸಾಂಪ್ರದಾಯಿಕ ನೀತಿ ಭಾಷಣದಲ್ಲಿ ಕೊನೆಯ ಪ್ಯಾರಾಗ್ರಾಫ್ ಅನ್ನು ಮಾತ್ರ ಓದಿ ಎರಡು ನಿಮಿಷಗಳಲ್ಲಿ ಭಾಷಣ ಮುಗಿಸಿದ್ದರು.

ಎಸ್‌ಎಫ್‌ಐಯವರು ಪಿಣರಾಯಿಯವರ ಗೂಂಡಾಗಳು: ವಿ. ಮುರಳೀಧರನ್

ಎಸ್‌ಎಫ್‌ಐ ಕಾರ್ಯಕರ್ತರು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಗೂಂಡಾಗಳು. ಈ ಗೂಂಡಾಗಳ ಮೂಲಕ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರನ್ನು ಅಪಾಯಕ್ಕೆ ಸಿಲುಕಿಸಲು ರಾಜ್ಯ ಸರ್ಕಾರ ಯತ್ನಿಸುತ್ತಿದೆ ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ.ಎಸ್.ಎಫ್.ಐ. ಮುರಳೀಧರನ್ ಹೇಳಿದ್ದಾರೆ.

ರಾಜ್ಯಪಾಲರ ಧರಣಿ ಸತ್ಯಾಗ್ರಹದ ಕುರಿತು ಕಾಸರಗೋಡಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಮುರಳೀಧರನ್, ರಾಜ್ಯಪಾಲರು ಪೂರ್ವ ನಿಯೋಜಿತ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದು, ದಾರಿಯುದ್ದಕ್ಕೂ ಎಲ್ಲಾದರೂ ತೊಂದರೆ ಆಗುವ ಸಂಭವವಿದ್ದರೆ ರಾಜ್ಯಪಾಲರಿಗೆ ತಿಳಿಸುವುದು ಪೊಲೀಸರ ಜವಾಬ್ದಾರಿ. ಅದು ಸಾಧ್ಯವಾಗದಿದ್ದರೆ ಪೊಲೀಸರು ಬಹಿರಂಗವಾಗಿ ಒಪ್ಪಿಕೊಳ್ಳಬೇಕು. ಕೇರಳದಲ್ಲಿ ಕಾನೂನು ಸುವ್ಯವಸ್ಥೆ  ಹದಗೆಟ್ಟಿದೆ.

ರಾಜ್ಯದ ರಾಜ್ಯಪಾಲರು ರಸ್ತೆಯಲ್ಲಿ ಓಡಾಡದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಕೇರಳದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆಯೋ ಇಲ್ಲವೋ ಎಂಬುದನ್ನು ಇಂತಹ ವಾತಾವರಣ ನಿರ್ಮಿಸುವವರೇ ಹೇಳಬೇಕು ಎಂದು ಮುರಳೀಧರನ್ ಹೇಳಿದರು. ಸ್ವಜನಪಕ್ಷಪಾತ ಸೇರಿದಂತೆ ರಾಜ್ಯ ಸರ್ಕಾರದ ಲೋಪದೋಷಗಳ ವಿರುದ್ಧ ಪ್ರತಿಭಟನೆ ನಡೆಸುವ ಮೂಲಕ ರಾಜ್ಯಪಾಲರ ಮೇಲಿನ ಸಿಟ್ಟನ್ನು ಹೊರಹಾಕುತ್ತಿದ್ದಾರೆ ಎಂದು ಮುರಳೀಧರನ್ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ