ರಾಷ್ಟ್ರ ಧ್ವಜವನ್ನು ಉಲ್ಟಾ ಹಾರಿಸಿ, ಸಲ್ಯೂಟ್ ಮಾಡಿದ ಸಚಿವ; ರಾಜೀನಾಮೆಗೆ ಪಟ್ಟು ಹಿಡಿದ ಬಿಜೆಪಿ

| Updated By: ಸುಷ್ಮಾ ಚಕ್ರೆ

Updated on: Jan 26, 2022 | 4:56 PM

ಸಚಿವ ದೇವರಕೋವಿಲ್ ತಕ್ಷಣ ರಾಜೀನಾಮೆ ನೀಡಬೇಕು ಮತ್ತು ಅವರ ವಿರುದ್ಧ ಹಾಗೂ ರಾಷ್ಟ್ರಧ್ವಜಕ್ಕೆ ಅಗೌರವ ತೋರಿದ ಘಟನೆಗೆ ಸಂಬಂಧಿತ ಅಧಿಕಾರಿಗಳ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸಬೇಕು ಎಂದು ಬಿಜೆಪಿ ರಾಜ್ಯ ಮುಖ್ಯಸ್ಥ ಕೆ. ಸುರೇಂದ್ರನ್ ಒತ್ತಾಯಿಸಿದ್ದಾರೆ.

ರಾಷ್ಟ್ರ ಧ್ವಜವನ್ನು ಉಲ್ಟಾ ಹಾರಿಸಿ, ಸಲ್ಯೂಟ್ ಮಾಡಿದ ಸಚಿವ; ರಾಜೀನಾಮೆಗೆ ಪಟ್ಟು ಹಿಡಿದ ಬಿಜೆಪಿ
ಕೇರಳ ಸಚಿವ ಅಹಮ್ಮದ್ ದೇವರಕೋವಿಲ್
Follow us on

ಕಾಸರಗೋಡು: ಇಂದು ನಡೆದ ಗಣರಾಜ್ಯೋತ್ಸವದ (Republic Day) ವೇಳೆ ಕೇರಳದ ಸಚಿವರೊಬ್ಬರು ಕಾಸರಗೋಡು ಜಿಲ್ಲೆಯಲ್ಲಿ ರಾಷ್ಟ್ರಧ್ವಜವನ್ನು ತಲೆಕೆಳಗಾಗಿ ಹಾರಿಸಿದ್ದು, ರಾಷ್ಟ್ರಧ್ವಜಕ್ಕೆ ಅಗೌರವ ತೋರಿದ್ದಕ್ಕಾಗಿ ಪ್ರತಿಪಕ್ಷ ಬಿಜೆಪಿ ರಾಜೀನಾಮೆಗೆ ಆಗ್ರಹಿಸಿದೆ. ಈ ಘಟನೆ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಪಿಣರಾಯಿ ವಿಜಯನ್ (Pinarayi Vijayan) ಸರ್ಕಾರದಲ್ಲಿ ಬಂದರು ಮತ್ತು ಪುರಾತತ್ವ ಇಲಾಖೆ ಖಾತೆಯನ್ನು ಹೊಂದಿರುವ ಸಚಿವ ಅಹಮ್ಮದ್ ದೇವರಕೋವಿಲ್ ಇಂದು ಬೆಳಿಗ್ಗೆ ಕೇರಳದ ಕಾಸರಗೋಡಿನ ಮುನ್ಸಿಪಲ್ ಸ್ಟೇಡಿಯಂನಲ್ಲಿ ಧ್ವಜಾರೋಹಣ ನೆರವೇರಿಸಿದಾಗ ಈ ಘಟನೆ ಸಂಭವಿಸಿದೆ.

ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್‌ನ ಮಿತ್ರಪಕ್ಷವಾದ ಇಂಡಿಯನ್ ನ್ಯಾಷನಲ್ ಲೀಗ್ (ಐಎನ್‌ಎಲ್) ನ ನಾಮನಿರ್ದೇಶಿತ ಶಾಸಕರಾದ ದೇವರಕೋವಿಲ್ ಜಿಲ್ಲಾ ಕೇಂದ್ರದಲ್ಲಿ ನಡೆದ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿದ್ದರು. ವಿಶೇಷವೆಂದರೆ, ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಸಚಿವರು, ಜನಪ್ರತಿನಿಧಿಗಳು, ಪೊಲೀಸ್ ಅಧಿಕಾರಿಗಳು ಮತ್ತು ಇತರ ಗಣ್ಯರು ಸೇರಿದಂತೆ ಯಾರೂ ರಾಷ್ಟ್ರಧ್ವಜವನ್ನು ಉಲ್ಟಾ ಹಾರಿಸಿದ್ದನ್ನು ಗಮನಿಸಲಿಲ್ಲ.

ಧ್ವಜಾರೋಹಣ ನೆರವೇರಿಸಿದ ಬಳಿಕ ಸಚಿವರು ತಲೆಕೆಳಗಾಗಿದ್ದ ರಾಷ್ಟ್ರಧ್ವಜಕ್ಕೆ ವಂದನೆ ಸಲ್ಲಿಸಿ ನಂತರ ತಮ್ಮ ಭಾಷಣಕ್ಕೆ ಮುಂದಾದರು. ಇದರ ನಡುವೆ ಕಾರ್ಯಕ್ರಮವನ್ನು ವರದಿ ಮಾಡಲು ಅಲ್ಲಿ ನೆರೆದಿದ್ದ ಕೆಲವು ಮಾಧ್ಯಮದವರು ರಾಷ್ಟ್ರಧ್ವಜಕ್ಕೆ ಆದ ಅವಮಾನವನ್ನು ಎತ್ತಿ ತೋರಿಸಿದರು. ವಿಷಯ ಗೊತ್ತಾಗುತ್ತಿದ್ದಂತೆ ಸಚಿವರು ಹಿಂತಿರುಗಿ ರಾಷ್ಟ್ರ ಧ್ವಜವನ್ನು ಕೆಳಗಿಳಿಸಿ ಮತ್ತೆ ಸರಿಯಾಗಿ ಹಾರಿಸಿದರು.

ಈ ಘಟನೆಯ ವಿಡಿಯೋ ಎಲ್ಲೆಡೆ ಹರಿದಾಡಿ ಭಾರೀ ವಿವಾದಕ್ಕೆ ಕಾರಣವಾಯಿತು. ಈ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯ ಮುಖ್ಯಸ್ಥ ಕೆ. ಸುರೇಂದ್ರನ್ ಅವರು ಸಚಿವ ದೇವರಕೋವಿಲ್ ತಕ್ಷಣ ರಾಜೀನಾಮೆ ನೀಡಬೇಕು ಮತ್ತು ಅವರ ವಿರುದ್ಧ ಹಾಗೂ ರಾಷ್ಟ್ರಧ್ವಜಕ್ಕೆ ಅಗೌರವ ತೋರಿದ ಘಟನೆಗೆ ಸಂಬಂಧಿತ ಅಧಿಕಾರಿಗಳ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದ್ದಾರೆ.

ತ್ರಿವರ್ಣ ಧ್ವಜವನ್ನು ತಲೆಕೆಳಗಾಗಿ ಹಾರಿಸಿದ ನಂತರ ಸಚಿವರು ಗೌರವ ವಂದನೆ ಸಲ್ಲಿಸಿರುವುದು ತೀವ್ರ ಕಳವಳಕಾರಿ ಸಂಗತಿಯಾಗಿದೆ. ಇಂತಹ ಘೋರ ಪ್ರಮಾದ ನಡೆದರೂ ಸಚಿವರಾಗಲಿ, ಅಧಿಕಾರಿಗಳಾಗಲಿ ತಪ್ಪಿನ ಅರಿವಾಗದಿರುವುದು ಹಾಸ್ಯಾಸ್ಪದವಾಗಿದೆ ಎಂದು ಅವರು ಹೇಳಿದ್ದಾರೆ. ಈ ಘಟನೆಯ ಕುರಿತು ತನಿಖೆಗೆ ರಾಜ್ಯ ಡಿಜಿಪಿ ಆದೇಶಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ರಾಷ್ಟ್ರೀಯ ಧ್ವಜ ಅಥವಾ ಸಂವಿಧಾನಕ್ಕೆ ಅವಮಾನ ಮಾಡುವುದನ್ನು ತಡೆಗಟ್ಟುವ ಕಾಯ್ದೆ ಪ್ರಕಾರ, ಯಾವುದೇ ಸಾರ್ವಜನಿಕ ಸ್ಥಳದಲ್ಲಿ ಅಥವಾ ಸಾರ್ವಜನಿಕ ಕಾರ್ಯಕ್ರಮದಲ್ಲಿ ಯಾವುದೇ ಸ್ಥಳದಲ್ಲಿ ಭಾರತೀಯ ಧ್ವಜವನ್ನು ಸುಟ್ಟು, ವಿರೂಪಗೊಳಿಸುವುದು, ನಾಶಪಡಿಸುವುದು, ತುಳಿದು ಹಾಕುವುದು ಅಥವಾ ಅಗೌರವ ತೋರಿಸುವುದು, ಭಾರತೀಯ ರಾಷ್ಟ್ರೀಯ ಧ್ವಜ ಅಥವಾ ಭಾರತದ ಸಂವಿಧಾನ ಅಥವಾ ಅದರ ಯಾವುದೇ ಭಾಗವನ್ನು ಅವಹೇಳನ (ಪದಗಳ ಮೂಲಕ, ಮಾತನಾಡುವ ಅಥವಾ ಬರೆಯುವ ಮೂಲಕ ಅಥವಾ ಕೃತ್ಯಗಳ ಮೂಲಕ) ಮಾಡುವುದಕ್ಕೆ ಮೂರು ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ, ಅಥವಾ ದಂಡ ಅಥವಾ ಎರಡೂ ಶಿಕ್ಷೆ ನೀಡುವ ಅಧಿಕಾರವಿರುತ್ತದೆ.

ಇದನ್ನೂ ಓದಿ: ಅಧಿಕಾರಿಗಳಲ್ಲಿ ಭಯ ಹುಟ್ಟಿಸಲಿದೆ ಐಎಎಸ್ ನಿಯೋಜನೆ ನಿಯಮಗಳ ಬದಲಾವಣೆ: ಪ್ರಧಾನಿ ಮೋದಿಗೆ ಪತ್ರ ಬರೆದ ಕೇರಳ ಸಿಎಂ ಪಿಣರಾಯಿ ವಿಜಯನ್

ಚೆಕ್​ಪೋಸ್ಟ್​ನಲ್ಲಿ ಮೂವರ ನಕಲಿ ಕೊವಿಡ್ ರಿಪೋರ್ಟ್ ಪತ್ತೆ; ಕೇರಳ ಮೂಲದ ನಾಲ್ವರ ವಿರುದ್ಧ ಎಫ್ಐಆರ್ ದಾಖಲು