ಸೋಲಾರ್ ಹಗರಣದ ಆರೋಪಿಯ ಲೈಂಗಿಕ ಕಿರುಕುಳ ಪ್ರಕರಣ: ಕೇರಳ ಸಿಎಂ ನಿವಾಸದಲ್ಲಿ ಸಿಬಿಐ ಪರಿಶೀಲನೆ

| Updated By: ರಶ್ಮಿ ಕಲ್ಲಕಟ್ಟ

Updated on: May 03, 2022 | 1:47 PM

Solar scam ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರು 2012ರ ಸೆಪ್ಟೆಂಬರ್ 9ರಂದು ಮುಖ್ಯಮಂತ್ರಿಯಾಗಿದ್ದಾಗ ಕ್ಲಿಫ್ ಹೌಸ್‌ನಲ್ಲಿ ತನಗೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ದೂರುದಾರರು ಆರೋಪಿಸಿದ್ದರು.

ಸೋಲಾರ್ ಹಗರಣದ ಆರೋಪಿಯ ಲೈಂಗಿಕ ಕಿರುಕುಳ ಪ್ರಕರಣ: ಕೇರಳ ಸಿಎಂ ನಿವಾಸದಲ್ಲಿ ಸಿಬಿಐ ಪರಿಶೀಲನೆ
ಕ್ಲಿಫ್ ಹೌಸ್ - ಕೇರಳದ ಮಾಜಿ ಸಿಎಂ ಉಮ್ಮನ್ ಚಾಂಡಿ (ಒಳಚಿತ್ರ)
Follow us on

ತಿರುವನಂತಪುರಂ: ಕೇರಳದಲ್ಲಿ ಸೋಲಾರ್ ಹಗರಣದಲ್ಲಿ (Solar scam) ಭಾಗಿಯಾಗಿರುವ ಮಹಿಳೆಯ ಲೈಂಗಿಕ ಶೋಷಣೆ  ಪ್ರಕರಣ  ಕುರಿತು ತನಿಖೆ ನಡೆಸುತ್ತಿರುವ ಕೇಂದ್ರೀಯ ತನಿಖಾ ದಳ (CBI), ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ(Oommen Chandy) ವಿರುದ್ಧದ ತನಿಖೆಯ ಭಾಗವಾಗಿ ಮಂಗಳವಾರ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕ್ಲಿಫ್ ಹೌಸ್ ಅನ್ನು ಪರಿಶೀಲಿಸಿದೆ. ಚಾಂಡಿ ಅವರು 2012ರ ಸೆಪ್ಟೆಂಬರ್ 9ರಂದು ಮುಖ್ಯಮಂತ್ರಿಯಾಗಿದ್ದಾಗ ಕ್ಲಿಫ್ ಹೌಸ್‌ನಲ್ಲಿ ತನಗೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ದೂರುದಾರರು ಆರೋಪಿಸಿದ್ದರು. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಈಗ ತಂಗಿರುವ ಅಧಿಕೃತ ನಿವಾಸವನ್ನು ಪರಿಶೀಲಿಸಲು ಸಿಬಿಐ ರಾಜ್ಯ ಸರ್ಕಾರದಿಂದ ಅನುಮತಿ ಪಡೆದಿದೆ. ವಿಜಯನ್ ಅವರು ತಮ್ಮ ವೈದ್ಯಕೀಯ ಚಿಕಿತ್ಸೆಗೆ ಸಂಬಂಧಿಸಿದಂತೆ ಪ್ರಸ್ತುತ ಅಮೆರಿಕದಲ್ಲಿದ್ದಾರೆ. ಸಾಕ್ಷ್ಯ ಸಂಗ್ರಹಿಸುವ ಪ್ರಯತ್ನದ ಭಾಗವಾಗಿ ಮಂಗಳವಾರ ತಪಾಸಣೆ ನಡೆಸಿದ ಸಿಬಿಐ ತಂಡದೊಂದಿಗೆ ದೂರುದಾರ ಮಹಿಳೆಯೂ ಹಾಜರಿದ್ದರು. ಕಳೆದ ವರ್ಷ ಮಹಿಳೆಯ ದೂರುಗಳ ಆಧಾರದ ಮೇಲೆ ಸಿಬಿಐ ಆರು ಅತ್ಯಾಚಾರ ಪ್ರಕರಣಗಳನ್ನು ದಾಖಲಿಸಿದೆ. ಚಾಂಡಿ ಸೇರಿದಂತೆ ಕಾಂಗ್ರೆಸ್ ಸಂಸದರಾದ ಹೈಬಿ ಈಡನ್, ಅಡೂರ್ ಪ್ರಕಾಶ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್, ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಎಪಿ ಅಬ್ದುಲ್ಲಕುಟ್ಟಿ ಸೇರಿದಂತೆ ಇತರರು ಈ ಪ್ರಕರಣಗಳಲ್ಲಿ ಆರೋಪಿಗಳಾಗಿದ್ದಾರೆ.

ಲೈಂಗಿಕ ಶೋಷಣೆ ಆರೋಪದ ಆಧಾರದ ಮೇಲೆ ಇನ್ಸ್‌ಪೆಕ್ಟರ್ ನಿಬುಲ್ ಶಂಕರ್ ನೇತೃತ್ವದ ಸಿಬಿಐನ ಎರಡು ತಂಡಗಳು ಮಹಿಳಾ ದೂರುದಾರರೊಂದಿಗೆ ಕ್ಲಿಫ್ ಹೌಸ್‌ಗೆ ಬಂದವು. ಮೊದಲ ತಂಡ ಬೆಳಿಗ್ಗೆ 9:30 ರ ಸುಮಾರಿಗೆ ನಿವಾಸಕ್ಕೆ ಬಂದಿದ್ದು, ಎರಡನೇ ತಂಡವು ದೂರುದಾರರೊಂದಿಗೆ ಬೆಳಿಗ್ಗೆ 10 ಗಂಟೆಗೆ ಬಂದಿದೆ. ಕ್ಲಿಫ್ ಹೌಸ್‌ನ ಮುಂಭಾಗದಲ್ಲಿ ಪೊಲೀಸ್ ಬೆಟಾಲಿಯನ್ ಇತ್ತು ಎಂದು ದಿ ನ್ಯೂ ಇಂಡಿಯನ್ ಎಕ್ಸ್​​ಪ್ರೆಸ್ ವರದಿ ಮಾಡಿದೆ. ಕ್ಲಿಫ್ ಹೌಸ್‌ನಲ್ಲಿ ತನಿಖಾ ಸಂಸ್ಥೆಯು ಸಾಕ್ಷ್ಯ ಸಂಗ್ರಹವನ್ನು ನಡೆಸುತ್ತಿರುವುದು ಇದೇ ಮೊದಲು. ಸಾಕ್ಷ್ಯ ಸಂಗ್ರಹಣೆಗೆ ತಂಡವು ಈ ಹಿಂದೆಯೇ ಜನರಲ್ ಅಡ್ಮಿನಿಸ್ಟ್ರೇಷನ್ ಇಲಾಖೆಯಿಂದ ಅನುಮತಿ ಪಡೆದಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಅವರ ಕುಟುಂಬ ಅಮೆರಿಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾರಣ ಅಧಿಕೃತ ನಿವಾಸದಲ್ಲಿ ತನಿಖೆಗೆ ಇಲಾಖೆ ಅನುಮತಿ ನೀಡಿದೆ.

ಕಳೆದ ತಿಂಗಳು ಅಪರಾಧದ ಸಮಯದಲ್ಲಿ ಶಾಸಕರಾಗಿದ್ದ ಈಡನ್ ವಿರುದ್ಧದ ದೂರಿನ ತನಿಖೆಯ ಭಾಗವಾಗಿ ಸಿಬಿಐ ತಿರುವನಂತಪುರಂನ ಎಂಎಲ್ಎ ಹಾಸ್ಟೆಲ್ ಅನ್ನು ಪರಿಶೀಲಿಸಿತ್ತು.

ಸೋಲಾರ್ ಹಗರಣದ ತನಿಖೆ ನಡೆಸಿದ ನ್ಯಾಯಾಂಗ ಆಯೋಗ ಸೌರಶಕ್ತಿ ಪರಿಹಾರಗಳಿಗೆ ಸಂಬಂಧಿಸಿದಂತೆ ಹಲವಾರು ವ್ಯಕ್ತಿಗಳನ್ನು ವಂಚಿಸಿದ ಮಹಿಳೆಯ ಲೈಂಗಿಕ ದೌರ್ಜನ್ಯದ ಕುರಿತು ತನಿಖೆಯನ್ನು ಮರುಪ್ರಾರಂಭಿಸಿದೆ. ಹಿಂದಿನ ಎಲ್‌ಡಿಎಫ್ ಆಡಳಿತವು ಕಾಂಗ್ರೆಸ್ ನಾಯಕರ ವಿರುದ್ಧ ಅತ್ಯಾಚಾರ ಪ್ರಕರಣಗಳನ್ನು ದಾಖಲಿಸಲು ಪೊಲೀಸರಿಗೆ ಅವಕಾಶ ನೀಡಿತ್ತು.

ಕ್ರೈಂ ಬ್ರಾಂಚ್ ತನಿಖೆಯು ಯಾವುದೇ ಪ್ರಗತಿ ಸಾಧಿಸದ ಕಾರಣ, ದೂರುದಾರರು 2020 ರಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸುವಂತೆ ಪತ್ರ ಬರೆದಿದ್ದರು. ಅದರ ನಂತರ, ಹಿಂದಿನ ಸಿಪಿಎಂ ಸರ್ಕಾರವು ಕಳೆದ ವರ್ಷ ಜನವರಿಯಲ್ಲಿ ಪ್ರಕರಣದ ಸಿಬಿಐ ತನಿಖೆಗೆ ಶಿಫಾರಸು ಮಾಡಿದೆ.

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

Published On - 1:37 pm, Tue, 3 May 22