ಅತ್ಯಂತ ಕಿರಿಯ ವಯಸ್ಸಿನ ಕೇಂದ್ರ ಸಚಿವ: ಕಿಂಜರಾಪು ರಾಮಮೋಹನ್ ನಾಯ್ಡು ದಾಖಲೆ

Kinjarapu Ram Mohan Naidu Becomes Youngest Ever Union Minister: ತೆಲುಗು ದೇಶಂ ಪಕ್ಷದ ಸಂಸದ ಕಿಂಜರಾಪು ರಾಮಮೋಹನ್ ನಾಯ್ಡು 36ರ ವಯಸ್ಸಿನಲ್ಲಿ ಕೇಂದ್ರ ಕ್ಯಾಬಿನೆಟ್ ಸಚಿವರಾಗಿದ್ದಾರೆ. ಅತ್ಯಂತ ಕಿರಿಯ ವಯಸ್ಸಿನಲ್ಲಿ ಸಂಪುಟ ದರ್ಜೆ ಸಚಿವರಾದ ದಾಖಲೆಯನ್ನು ಅವರು ಬರೆದಿದ್ದಾರೆ. 26ರ ವಯಸ್ಸಿನಲ್ಲಿ ಅವರು ಸಂಸದರಾಗಿದ್ದರು. ಶ್ರೀಕಾಕುಲಂ ಕ್ಷೇತ್ರದಲ್ಲಿ ಸತತ ಮೂರನೇ ಬಾರಿ ಅವರು ಜಯಿಸಿದ್ದಾರೆ. ಟಿಡಿಪಿ ನಾಯಕ ಯರಂ ನಾಯ್ಡು ಅವರ ಮಗನಾದ ರಾಮಮೋಹನ್ ನಾಯ್ಡು, ಆಂಧ್ರದಲ್ಲಿ ಇತ್ತೀಚೆಗೆ ಟಿಡಿಪಿ ಪರ ಅಲೆ ಏಳಲು ಕಾರಣಕರ್ತರಾಗಿದ್ದಾರೆ.

ಅತ್ಯಂತ ಕಿರಿಯ ವಯಸ್ಸಿನ ಕೇಂದ್ರ ಸಚಿವ: ಕಿಂಜರಾಪು ರಾಮಮೋಹನ್ ನಾಯ್ಡು ದಾಖಲೆ
ಕಿಂಜರಾಪು ರಾಮಮೋಹನ್ ನಾಯ್ಡು
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 09, 2024 | 8:48 PM

ನವದೆಹಲಿ, ಜೂನ್ 9: ಟಿಡಿಪಿ ಸಂಸದ ಕಿಂಜರಾಪು ರಾಮಮೋಹನ್ ನಾಯ್ಡು (Kinjarapu Ram Mohan Naidu) ಅತಿಕಿರಿಯ ವಯಸ್ಸಿನ ಸಚಿವರಾದ ದಾಖಲೆ ನಿರ್ಮಿಸಿದ್ದಾರೆ. ಮೋದಿ 3.0 ಸರ್ಕಾರದಲ್ಲಿ ಅವರು ರಾಷ್ಟ್ರಪತಿಗಳಿಂದ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಮಮೋಹನ್ ನಾಯ್ಡು ಅವರಿಗೆ ಈಗ ವಯಸ್ಸು ಕೇವಲ 36 ವರ್ಷ. ಇಷ್ಟು ಕಿರಿಯ ವಯಸ್ಸಿನಲ್ಲಿ ಕೇಂದ್ರ ಮಂತ್ರಿಯಾದ ದಾಖಲೆ ಅವರದ್ದಾಗಿದೆ. ನರೇಂದ್ರ ಮೋದಿ ಸತತ ಮೂರು ಬಾರಿ ಪ್ರಧಾನಿ ಆದಂತೆ ರಾಮಮೋಹನ್ ನಾಯ್ಡು ಸತತ ಮೂರನೇ ಬಾರಿ ಸಂಸದರಾಗಿದ್ದಾರೆ. 2014ರಲ್ಲಿ ಅವರು 26ನೇ ವಯಸ್ಸಿಗೆ ಸಂಸದರಾಗಿದ್ದರು. ಎರಡನೇ ಅತ್ಯಂತ ಕಿರಿಯ ವಯಸ್ಸಿನ ಸಂಸದರೆಂಬ ದಾಖಲೆಯನ್ನು ಅವರು ಬರೆದಿದ್ದರು. ಈಗ ಅತ್ಯಂತ ಕಿರಿಯ ವಯಸ್ಸಿನ ಕೇಂದ್ರ ಮಂತ್ರಿ ಎಂಬ ದಾಖಲೆ ಅವರದ್ದಾಗಿದೆ. ಅವರಿಗೆ ಈಗ ಕ್ಯಾಬಿನೆಟ್ ದರ್ಜೆ ಸಚಿವ ಸ್ಥಾನವೇ ಸಿಕ್ಕಿದೆ.

ಕಿಂಜಿರಾಪು ರಾಮಮೋಹನ್ ನಾಯ್ಡು ಹಿನ್ನೆಲೆ…

ಆಂಧ್ರದ ಶ್ರೀಕಾಕುಲಂ ಕ್ಷೇತ್ರದಿಂದ ಟಿಡಿಪಿ ಟಿಕೆಟ್​ನಲ್ಲಿ ಸತತವಾಗಿ ಮೂರನೇ ಬಾರಿ ಗೆದ್ದಿರುವ ರಾಮಮೋಹನ್ ರೆಡ್ಡಿ ಅವರು ಮಾಜಿ ಕೇಂದ್ರ ಸಚಿವ ಕೆ ಯರನ್ ನಾಯ್ಡು ಅವರ ಮಗ. ಕುತೂಹಲ ಎಂದರೆ ಯರನ್ ನಾಯ್ಡು ಕೂಡ ಅತ್ಯಂತ ಕಿರಿಯ ವಯಸ್ಸಿನ ಕ್ಯಾಬಿನೆಟ್ ಮಿನಿಸ್ಟರ್ ಎಂಬ ದಾಖಲೆಯನ್ನು 1996ರಲ್ಲಿ ಸ್ಥಾಪಿಸಿದ್ದರು. 2012ರಲ್ಲಿ ಯರನ್ ನಾಯ್ಡು ದುರದೃಷ್ಟವಶಾತ್ ರಸ್ತೆ ಅಪಘಾತದಲ್ಲಿ ಅಕಾಲಿಕವಾಗಿ ಮರಣವಪ್ಪಿದ್ದರು. ಅದಾದ ಬಳಿಕ ರಾಮಮೋಹನ್ ನಾಯ್ಡು ರಾಜಕೀಯಕ್ಕೆ ಬರಬೇಕಾಯಿತು.

ಇದನ್ನೂ ಓದಿ: 3ನೇ ಬಾರಿ ಪ್ರಧಾನಿಯಾಗಿ ನೆಹರು ದಾಖಲೆಯನ್ನು ಸರಿಗಟ್ಟಿದ ನರೇಂದ್ರ ಮೋದಿ

ಅಪ್ಪ ಸತ್ತ ಎರಡು ವರ್ಷದಲ್ಲೇ ರಾಜಕೀಯಕ್ಕೆ ಬಂದ ರಾಮಮೋಹನ್ ರೆಡ್ಡಿ 2014ರಲ್ಲಿ 26ರ ಹರೆಯದಲ್ಲಿ ಚುನಾವಣೆಯಲ್ಲಿ ಗೆದ್ದು ಸಂಸದರಾದರು. ಆಗ ಅವರು ಎರಡನೇ ಅತಿ ಕಿರಿಯ ಸಂಸದರೆನಿಸಿದ್ದರು.

ಚಂದ್ರಬಾಬು ನಾಯ್ಡು ಅವರನ್ನು ಬಂಧಿಸಿದ ಸಂದರ್ಭದಲ್ಲಿ ಆಂಧ್ರದಲ್ಲಿ ಸಂಘಟನೆ ಕಟ್ಟಿ ಜನ ಬೆಂಬಲವನ್ನು ಟಿಡಿಪಿ ಪರವಾಗಿ ತಿರುಗಿಸಲು ಶ್ರಮಿಸಿದವರಲ್ಲಿ ರಾಮಮೋಹನ್ ನಾಯ್ಡು ಇದ್ದಾರೆ. ಟಿಡಿಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಅವರು ತಮ್ಮ ಸಂಘಟನಾ ಕೌಶಲ್ಯವನ್ನು ಸಾಬೀತುಪಡಿಸಿದರು. ಚಂದ್ರಬಾಬು ನಾಯ್ಡು ಅವರ ಮಗ ನಾರ ಲೋಕೇಶ್ ಜೊತೆ ಸೇರಿ ಪಕ್ಷ ಸಂಘಟನೆಯ ಕಾರ್ಯದಲ್ಲಿ ರಾಮಮೋಹನ್ ನಾಯ್ಡು ತೋರಿದ ಕೆಲಸ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದೆ.

ಇದನ್ನೂ ಓದಿ: ನನ್ನ 18 ವರ್ಷದ ಸಾರ್ವಜನಿಕ ಸೇವೆ ಈ ರೀತಿ ಅಂತ್ಯವಾಗುತ್ತೆಂದು ನಿರೀಕ್ಷಿಸಿರಲಿಲ್ಲ: ರಾಜೀವ್ ಚಂದ್ರಶೇಖರ್

ಪಕ್ಷ ಸಂಘಟನೆಯಲ್ಲಿ ಮಾತ್ರವಲ್ಲ, ಸಂಸದರಾಗಿಯೂ ರಾಮಮೋಹನ್ ನಾಯ್ಡು ಮೆಚ್ಚುಗೆ ಪಡೆದಿದ್ದಾರೆ. 2020ರಲ್ಲಿ ಸರ್ಕಾರದಿಂದ ಸಂಸದ ರತ್ನ ಪ್ರಶಸ್ತಿ ಕೂಡ ಲಭಿಸಿತ್ತು. ಅವರು ವಿವಿಧ ಸಂಸದೀಯ ಸ್ಥಾಯಿ ಸಮಿತಿ ಸದಸ್ಯರಾಗಿ ಕೆಲಸ ಮಾಡಿ ಗಮನ ಕೂಡ ಸೆಳೆದಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ