ಕೊಲ್ಕತ್ತಾ ಆಗಸ್ಟ್ 19: ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸ್ನಾತಕೋತ್ತರ ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ (Kolkata doctor’s murder case) ಪ್ರಮುಖ ಆರೋಪಿ ಸಂಜಯ್ ರಾಯ್‌ನ (Sanjay Roy) ಪಾಲಿಗ್ರಾಫ್ ಪರೀಕ್ಷೆ ನಡೆಸಲು ಕೇಂದ್ರೀಯ ತನಿಖಾ ದಳಕ್ಕೆ (CBI) ಸೋಮವಾರ ಅನುಮತಿ ಲಭಿಸಿದೆ. ಈಗ ಏಜೆನ್ಸಿಯ ವಶದಲ್ಲಿರುವ ಆರೋಪಿ ರಾಯ್‌ನ ಮನೋವಿಶ್ಲೇಷಣೆ ಪರೀಕ್ಷೆಯನ್ನು ಶನಿವಾರ ಸಿಬಿಐ ನಡೆಸಿತು. ಶುಕ್ರವಾರ ಮುಂಜಾನೆ 3 ರಿಂದ 5 ಗಂಟೆಯ ನಡುವೆ ಆರ್‌ಜಿ ಕರ್ ಆಸ್ಪತ್ರೆಯ ಎದೆಯ ವಿಭಾಗದ ಸೆಮಿನಾರ್ ಹಾಲ್‌ನಲ್ಲಿ ಸ್ನಾತಕೋತ್ತರ ತರಬೇತಿ ವೈದ್ಯರ ಶವ ಪತ್ತೆಯಾದ ಒಂದು ದಿನದ ನಂತರ ಕೋಲ್ಕತ್ತಾ ಪೊಲೀಸರು ಆತನನ್ನು ಬಂಧಿಸಿದ್ದರು.
ರಾಯ್ 2019 ರಲ್ಲಿ ನಾಗರಿಕ ಸ್ವಯಂಸೇವಕರಾಗಿ ಕೋಲ್ಕತ್ತಾ ಪೊಲೀಸ್‌ಗೆ ಸೇರಿದ್ದ. ಆತ ಕನಿಷ್ಠ ನಾಲ್ಕು ಬಾರಿ ಮದುವೆಯಾಗಿದ್ದು ಆತನೊಬ್ಬ ಕಾಮುಕ ಎಂದು ಪೊಲೀಸರು ಆರೋಪಿಸಿದ್ದಾರೆ. ಆರೋಪಿಯು ತರಬೇತಿ ಪಡೆದ ಬಾಕ್ಸರ್ ಆಗಿದ್ದು, ಹಲವು ವರ್ಷಗಳಿಂದ ಕೆಲವು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಹತ್ತಿರವಾಗಿದ್ದಾನೆ ಎಂದು ಪಿಟಿಐ ವರದಿ ತಿಳಿಸಿದೆ.
ಆಮೇಲೆ ಆತನನ್ನು ಕೋಲ್ಕತ್ತಾ ಪೊಲೀಸ್ ಕಲ್ಯಾಣ ಮಂಡಳಿಗೆ ಸ್ಥಳಾಂತರಿಸಲಾಗಿದ್ದು, ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಪೊಲೀಸ್ ಔಟ್‌ಪೋಸ್ಟ್‌ಗೆ ನಿಯೋಜಿಸಲಾಯಿತು.
ವೈದ್ಯೆ ಮೇಲಿನ ಅತ್ಯಾಚಾರ, ಹತ್ಯೆ ಖಂಡಿಸಿ ವೈದ್ಯರ ಸಂಘಟನೆ ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸುತ್ತಿದ್ದು , ವೈದ್ಯಕೀಯ ಸಮುದಾಯವನ್ನು ರಕ್ಷಿಸಲು ನ್ಯಾಯ ಮತ್ತು ಕಠಿಣ ಕಾನೂನುಗಳನ್ನು ಒತ್ತಾಯಿಸುತ್ತಿದೆ.
ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ, ಶವಪರೀಕ್ಷೆ ವರದಿಯಲ್ಲಿ ಉಸಿರುಗಟ್ಟಿಸುವಿಕೆಯಿಂದ ವೈದ್ಯೆ ಸಾವಿಗೀಡಾಗಿದ್ದಾಳೆ ಎಂದು ಹೇಳಲಾಗಿದೆ. ಅಷ್ಟೇ ಅಲ್ಲದೆ ಆಕೆಯ ಮೇಲೆ ಬಲವಂತವಾಗಿ ಅತ್ಯಾಚಾರ ಮಾಡಲಾಗಿದೆ ಎಂಬುದಕ್ಕೆ ಪುರಾವೆಗಳಿವೆ ಎಂದು ಹಲವಾರು ಮಾಧ್ಯಮ ವರದಿಗಳು ಹೇಳಿವೆ. ವರದಿಯ ಪ್ರಕಾರ ಸಂತ್ರಸ್ತೆಯ ದೇಹದ ಮೇಲೆ ಕೆನ್ನೆ, ತುಟಿಗಳು, ಮೂಗು, ಕುತ್ತಿಗೆ, ತೋಳುಗಳು ಮತ್ತು ಮೊಣಕಾಲುಗಳ ಸೇರಿದಂತೆ 16 ಗಾಯಗಳಿವೆ.
ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ, ಕಾಲೇಜಿನ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಅವರನ್ನು ಸತತ ನಾಲ್ಕನೇ ದಿನವೂ ವಿಚಾರಣೆ ನಡೆಸಿದೆ. ವೈದ್ಯರ ಸಾವಿನ ಸುದ್ದಿ ತಿಳಿದ ನಂತರ ಅವರು ಯಾರನ್ನು ಸಂಪರ್ಕಿಸಿದರು ಮತ್ತು ಸುಮಾರು ಮೂರು ಗಂಟೆಗಳ ಕಾಲ ಪೋಷಕರನ್ನು ಏಕೆ ಕಾಯುವಂತೆ ಮಾಡಿದರು ಎಂಬುದರ ಬಗ್ಗೆ ಅವರನ್ನು ವಿಚಾರಣೆಗೊಳಪಡಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಕೊಲ್ಕತ್ತಾ ಅತ್ಯಾಚಾರ-ಕೊಲೆ ಪ್ರಕರಣ; ರಸ್ತೆಯಲ್ಲೇ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಿದ ದೆಹಲಿ ವೈದ್ಯರು
ಘಟನೆಯ ನಂತರ ಆಸ್ಪತ್ರೆಯ ತುರ್ತು ಭವನದ ಸೆಮಿನಾರ್ ಹಾಲ್ ಬಳಿಯ ಕೊಠಡಿಗಳ ನವೀಕರಣಕ್ಕೆ ಆದೇಶಿಸಿದವರು ಯಾರು ಎಂದು ಸಹ ಮಾಜಿ ಪ್ರಾಂಶುಪಾಲರನ್ನು ಪ್ರಶ್ನಿಸಲಾಯಿತು ಎಂದು ಅಧಿಕಾರಿ ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:03 pm, Mon, 19 August 24