ಕುಂಭಮೇಳದ 3ನೇ ಶಾಹಿ ಸ್ನಾನದಲ್ಲಿ 13 ಲಕ್ಷ ಭಕ್ತರು ಭಾಗಿ, 5 ದಿನಗಳಲ್ಲಿ 2,167 ಮಂದಿಗೆ ಕೊವಿಡ್

Kumbh Mela 2021: ಉತ್ತರಾಖಂಡ ರಾಜ್ಯ ಆರೋಗ್ಯ ಇಲಾಖೆಯ ಅಂಕಿ ಅಂಶಗಳ ಪ್ರಕಾರ ಹರಿದ್ವಾರದಲ್ಲಿ ಕುಂಭ ಮೇಳ ನಡೆಯುವ ಪ್ರದೇಶಗಳಲ್ಲಿ 2,167ಮಂದಿಗೆ ಕೊವಿಡ್ ದೃಢಪಟ್ಟಿದೆ. ಮುಖ್ಯ ವೈದ್ಯಕೀಯ ಅಧಿಕಾರಿಯವರ ಪ್ರಕಾರ ಏಪ್ರಿಲ್ 10ರಿಂದ ಆರೋಗ್ಯ ಇಲಾಖೆಯು ಕುಂಭ ಮೇಳದ ಸ್ಥಳದಲ್ಲಿ 2,28,650 ಕೊವಿಡ್ ಪರೀಕ್ಷೆಗಳನ್ನು ಮಾಡಿದೆ.

ಕುಂಭಮೇಳದ 3ನೇ ಶಾಹಿ ಸ್ನಾನದಲ್ಲಿ 13 ಲಕ್ಷ ಭಕ್ತರು ಭಾಗಿ, 5 ದಿನಗಳಲ್ಲಿ 2,167 ಮಂದಿಗೆ ಕೊವಿಡ್
ಕುಂಭ ಮೇಳದ ದೃಶ್ಯ

ಹರಿದ್ವಾರ: ಉತ್ತರಾಖಂಡದ ಹರಿದ್ವಾರದಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳದಲ್ಲಿ ಏಪ್ರಿಲ್ 10ರಿಂದ ಈವರೆಗೆ 2,167 ಮಂದಿಗೆ ಕೊವಿಡ್ ದೃಢಪಟ್ಟಿದೆ. ಈ ಪೈಕಿ 18 ಸ್ವಾಮೀಜಿಗಳಿಗೆ ಕೊರೊನಾ ಸೋಂಕು ತಗಲಿದೆ. ಮಂಗಳವಾರ 9 ಸಾಮೀಜಿಗಳಿಗೆ ಸೋಂಕು ತಗುಲಿದ್ದು, ಇದಕ್ಕಿಂತ ಮುಂಚೆ 9 ಸ್ವಾಮೀಜಿಗಳಿಗೆ ಸೋಂಕು ತಗಲಿರುವುದು ದೃಢಪಟ್ಟಿತ್ತು ಎಂದು ಹರಿದ್ವಾರದ ಮುಖ್ಯ ವೈದ್ಯಕೀಯ ಅಧಿಕಾರಿ (CMO) ಡಾ.ಎಸ್.ಕೆ ಝಾ ಹೇಳಿದ್ದಾರೆ. ಏಪ್ರಿಲ್ 13 ಮತ್ತು ಏಪ್ರಿಲ್ 14ರಂದು ಕುಂಭ ಮೇಳದಲ್ಲಿ ಭಾಗವಹಿಸಿದ ಭಕ್ತರಿಗೆ ಆರ್​ಟಿಪಿಸಿಆರ್ ಪರೀಕ್ಷೆ ಮಾಡಿದರೆ ಸೋಂಕಿತರ ಸಂಖ್ಯೆ ಮತ್ತಷ್ಟು ಏರಿಕೆಯಾಗಬಹುದು ಎಂದು ಅವರು ಹೇಳಿದ್ದಾರೆ.

ಕುಂಭಮೇಳದಲ್ಲಿ ನಡೆಯುವ ಮೂರು ಶಾಹಿ ಸ್ನಾನಗಳ ಪೈಕಿ ಬುಧವಾರ ನಡೆದ ಶಾಹಿ ಸ್ನಾನದಲ್ಲಿ ಭಾಗವಹಿಸಿದವರ ಸಂಖ್ಯೆ ಕಡಿಮೆ ಆಗಿತ್ತು. ಜನರು ಕಡಿಮೆ ಆಗಿರುವುದರಿಂದ ಜನರ ಗುಂಪನ್ನು ಸಂಭಾಳಿಸುವುದು ಕೂಡಾ ಸುಲಭವಾಗಿದೆ ಎಂದು ಪೊಲೀಸ್ ಐಜಿ ಸಂಜಯ ಗುಂಜಯಲ್ ಹೇಳಿದ್ದಾರೆ.

ಉತ್ತರಾಖಂಡ ರಾಜ್ಯ ಆರೋಗ್ಯ ಇಲಾಖೆಯ ಅಂಕಿ ಅಂಶಗಳ ಪ್ರಕಾರ ಹರಿದ್ವಾರದಲ್ಲಿ ಕುಂಭ ಮೇಳ ನಡೆಯುವ ಪ್ರದೇಶಗಳಲ್ಲಿ 2,167ಮಂದಿಗೆ ಕೊವಿಡ್ ದೃಢಪಟ್ಟಿದೆ. ಮುಖ್ಯ ವೈದ್ಯಕೀಯ ಅಧಿಕಾರಿಯವರ ಪ್ರಕಾರ ಏಪ್ರಿಲ್ 10ರಿಂದ ಆರೋಗ್ಯ ಇಲಾಖೆಯು ಕುಂಭ ಮೇಳದ ಸ್ಥಳದಲ್ಲಿ 2,28,650 ಕೊವಿಡ್ ಪರೀಕ್ಷೆಗಳನ್ನು ಮಾಡಿದೆ. ಇಲ್ಲಿಗೆ ಆಗಮಿಸಿದ ಭಕ್ತರಿಗೆ ಆ್ಯಂಟಿಜೆನ್ , ಆರ್ ಟಿ ಪಿಸಿಆರ್ ಮತ್ತು ಟ್ರೂನಾಟ್ ಪರೀಕ್ಷೆಗಳನ್ನು ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

ಹರಿದ್ವಾರ, ಪೌರಿ, ಡೆಹ್ರಾಡೂನ್ ಮತ್ತು ತೆಹರಿಯಲ್ಲಿ ಕೊವಿಡ್ ಪರೀಕ್ಷೆ ಮಾಡಲಾಗಿದೆ. ಕುಂಭ ಮೇಳ ನಡೆಯುವ ಪ್ರದೇಶಗಳಲ್ಲಿ ಕನಿಷ್ಠ 50,000 ಕೊವಿಡ್ ಪರೀಕ್ಷೆಗಳನ್ನು ನಡೆಸಬೇಕು. ಮೇಳಕ್ಕೆ ಪ್ರವೇಶಿಸಬೇಕಾದರೆ ಆರ್ ಟಿಪಿಸಿಆರ್ ನೆಗೆಟಿವ್ ವರದಿ ಕಡ್ಡಾಯ ಎಂದು ಕೇಂದ್ರ ಸರ್ಕಾರ ಮತ್ತು ಉತ್ತರಾಖಂಡ ಹೈಕೋರ್ಟ್ ನಿರ್ದೇಶಿಸಿತ್ತು. ಆದರೆ ಕುಂಭ ಮೇಳದಲ್ಲಿ ಈ ನಿರ್ದೇಶನವನ್ನು ಪಾಲಿಸುವುದು ಕಷ್ಟ ಎಂದಿದ್ದಾರೆ ಝಾ.

ಪೊಲೀಸ್ ಕಂಟ್ರೋಲ್ ರೂಂ ಮಾಹಿತಿ ಪ್ರಕಾರ ಬುಧವಾರ ನಡೆದ ಬೈಸಾಕಿ ಸ್ನಾನದಲ್ಲಿ 13,51,631 ಮಂದಿ ಭಾಗಿಯಾಗಿದ್ದಾರೆ. ಬುಧವಾರ ಹರಿದ್ವಾರದಲ್ಲಿ 525 ಹೊಸ ಕೊವಿಡ್ ಪ್ರಕರಣಗಳು ಪತ್ತೆಯಾಗಿದ್ದು ಎರಡು ಸಾವು ಸಂಭವಿಸಿದೆ.   3000 ಸಕ್ರಿಯ ಪ್ರಕರಣಗಳು  ಇಲ್ಲಿ ವರದಿಯಾಗಿದ್ದು ಹರಿದ್ವಾರದಲ್ಲಿ ಕಳೆದ 5 ದಿನಗಳಲ್ಲಿ 2,167 ಹೊಸ ಕೊವಿಡ್ ಪ್ರಕರಣಗಳು ಪತ್ತೆಯಾಗಿದೆ

ಹರಿದ್ವಾರದಲ್ಲಿ 1986, 1998, 2010ದಲ್ಲಿ ನಡೆದ ಕುಂಭ ಮೇಳಕ್ಕೆ ಹೋಲಿಸಿದರೆ ಈ ವರ್ಷದ ಕುಂಭ ಮೇಳ ಅಚ್ಚುಕಟ್ಟಾಗಿತ್ತು. ಈ ಹಿಂದಿನ ಕುಂಭ ಮೇಳದಲ್ಲಿ ಕಾಲ್ತುಳಿತ ಸಂಭವಿಸಿತ್ತು. 2010ರಲ್ಲಿ ನಡೆದ ಕುಂಭಮೇಳದಲ್ಲಿ 1.60 ಕೋಟಿ ಭಕ್ತರು ಭಾಗಿಯಾಗಿದ್ದರು ಎಂದಿದ್ದಾರೆ ಗುಂಜಯಾಲ್. ಭದ್ರತಾ ಪಡೆಗಳು ಈಗ ಮುಂದಿನ ಶಾಹಿ ಸ್ನಾನ ಮತ್ತು ಕುಂಭ ಮೇಳದಲ್ಲಿ ನಡೆಯುವ ಇತರ ಕಾರ್ಯಕ್ರಮಗಳಿಗಾಗಿ ಸುರಕ್ಷಾ ಸಿದ್ಧತೆ ನಡೆಸುತ್ತಿದ್ದಾರೆ ಎಂದಿದ್ದಾರೆ ಗುಂಜಯಾಲ್.

ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ ಕೊವಿಡ್ ಸೋಂಕಿತರ ಸಂಖ್ಯೆ ಎರಡು ಲಕ್ಷ ದಾಟಿದೆ. ಬುಧವಾರ ದೇಶದಲ್ಲಿ ಪತ್ತೆಯಾದ ಹೊಸ ಕೊವಿಡ್ ಪ್ರಕರಣಗಳ ಸಂಖ್ಯೆ 2,00,739 ಆಗಿದ್ದು, 1,038 ಮಂದಿ ಸಾವಿಗೀಡಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ಒಟ್ಟು ಸೋಂಕಿತರ ಸಂಖ್ಯೆ 1,40,74,564 (1.4 ಕೋಟಿಗೆ) ತಲುಪಿದ್ದು ಈವರೆಗೆ ಸಾವಿಗೀಡಾದವ ಸಂಖ್ಯೆ 1,73,123 ಆಗಿದೆ. ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 14,71,877 ಆಗಿದ್ದು, 1,24,29,564 ಮಂದಿ ಚೇತರಿಸಿಕೊಂಡಿದ್ದಾರೆ. 11,44,93,238 ಮಂದಿ ಲಸಿಕೆ ಪಡೆದಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಇದನ್ನೂ ಓದಿ:  ಕೊವಿಡ್ ಕಾಲದಲ್ಲಿ ಕುಂಭಮೇಳ: ಈ ಹಿಂದೆಯೂ ಸೋಂಕು ಹರಡುವಿಕೆಗೆ ಕಾರಣವಾಗಿತ್ತು ಧಾರ್ಮಿಕ ಆಚರಣೆ

Coronavirus India Update: ಕಳೆದ 24 ಗಂಟೆಗಳಲ್ಲಿ 2 ಲಕ್ಷಕ್ಕಿಂತಲೂ ಹೆಚ್ಚು ಹೊಸ ಕೊವಿಡ್ ಪ್ರಕರಣಗಳು ಪತ್ತೆ, 1,038 ಮಂದಿ ಸಾವು

Published On - 2:28 pm, Thu, 15 April 21

Click on your DTH Provider to Add TV9 Kannada