ದೆಹಲಿ: ಬಿಜೆಪಿಯ ಸೈದ್ಧಾಂತಿಕ ಮಾರ್ಗದರ್ಶಕ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ತನ್ನ ಮುಖವಾಣಿ ಪಾಂಚಜನ್ಯ ನಿಯತಕಾಲಿಕೆಯಲ್ಲಿ ಇನ್ಫೋಸಿಸ್ನ ಕಾರ್ಯವೈಖರಿ ಕುರಿತು ಆಕ್ಷೇಪಿಸಿದ್ದ ಲೇಖನವೊಂದರಿಂದ ಅಂತರ ಕಾಯ್ದುಕೊಂಡಿದೆ. ಆದಾಯ ತೆರಿಗೆ ಮತ್ತು ಜಿಎಸ್ಟಿ ಸಂಗ್ರಹಕ್ಕಾಗಿ ಇನ್ಫೋಸಿಸ್ ರೂಪಿಸಿ ವೆಬ್ಪೋರ್ಟಲ್ನಲ್ಲಿ ಹಲವು ಲೋಪಗಳು ಕಾಣಿಸಿಕೊಂಡಿದ್ದವು. ‘ಪಾಂಚಜನ್ಯ’ದಲ್ಲಿ ಪ್ರಕಟವಾಗಿದ್ದ ಲೇಖನವು ಈ ಲೋಪಗಳ ಹಿಂದೆ ಭಾರತ ವಿರೋಧಿ ಸಂಚು ಇರಬಹುದು ಎಂದು ಶಂಕಿಸಿತ್ತು.
‘ಭಾರತದ ಆರ್ಥಿಕ ಹಿತಾಸಕ್ತಿಗೆ ಧಕ್ಕೆ ತರುವ ದೇಶವಿರೋಧಿ ಶಕ್ತಿಗಳ ಪ್ರಭಾವದಿಂದ ಇನ್ಫೋಸಿಸ್ ಹೀಗೆ ವರ್ತಿಸುತ್ತಿದೆಯೇ’ ಎಂದು ಆರ್ಎಸ್ಎಸ್ ಮುಖವಾಣಿಯ ಇತ್ತೀಚಿನ ಸಂಚಿಕೆಯಲ್ಲಿ ಪ್ರಶ್ನಿಸಲಾಗಿತ್ತು. ಖ್ಯಾತ ಉದ್ಯಮಿ ನಾರಾಯಣಮೂರ್ತಿ ಸ್ಥಾಪಿಸಿರುವ ಇನ್ಫೋಸಿಸ್ ಸಂಸ್ಥೆಯು ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿದ್ದು ಹಲವು ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.
ಈ ವಿವಾದಕ್ಕೆ ಸಂಬಂಧಿಸಿದಂತೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಆರ್ಎಸ್ಎಸ್ ವಕ್ತಾರ ಸುನಿಲ್ ಅಂಬೇಕರ್, ‘ಪಾಂಚಜನ್ಯದಲ್ಲಿ ಪ್ರಕಟವಾಗಿರುವ ಲೇಖನದಲ್ಲಿರುವ ಅಂಶಗಳು ಲೇಖಕರ ವೈಯಕ್ತಿಕ ಅಭಿಪ್ರಾಯ. ಇದನ್ನು ಆರ್ಎಸ್ಎಸ್ ಅಭಿಪ್ರಾಯ ಎಂದು ಭಾವಿಸಬೇಕಿಲ್ಲ ಎಂದು ಹೇಳಿದ್ದಾರೆ.
‘ಭಾರತೀಯ ಕಂಪನಿಯಾಗಿ ಇನ್ಫೋಸಿಸ್ ದೇಶದ ಪ್ರಗತಿಗೆ ಸಾಕಷ್ಟು ಕೊಡಗೆ ನೀಡಿದೆ. ಪೋರ್ಟಲ್ ನಿರ್ವಹಣೆ ವಿಚಾರದಲ್ಲಿ ಕೆಲ ಸಮಸ್ಯೆಗಳು ಕಂಡು ಬಂದಿರಬಹುದು. ಈ ಲೇಖನದಲ್ಲಿ ಪ್ರಸ್ತಾಪವಾಗಿರುವ ವಿಚಾರಗಳನ್ನು ಸಂಘದ ಪ್ರತಿಪಾದನೆ ಎಂದು ಭಾವಿಸಬಾರದು. ಅದು ಲೇಖಕರ ವೈಯಕ್ತಿಕ ಅಭಿಪ್ರಾಯ’ ಎಂದು ಅವರು ತಿಳಿಸಿದ್ದಾರೆ.
ತೆರಿಗೆ ಪೋರ್ಟಲ್ ನಿರ್ವಹಣೆ ಸಮಸ್ಯೆಯ ಬಗ್ಗೆ ಚರ್ಚಿಸಲು ಇನ್ಫೋಸಿಸ್ ಸಿಇಒ ಸಲಿಲ್ ಪಾರೆಖ್ ಅವರನ್ನು ಕಳೆದ ತಿಂಗಳು ದೆಹಲಿಗೆ ಕರೆಸಿಕೊಂಡಿದ್ದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಪೋರ್ಟಲ್ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಸೆಪ್ಟೆಂಬರ್ 15ರ ಒಳಗೆ ಎಲ್ಲ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ತಾಕೀತು ಮಾಡಿದ್ದರು. ಪೋರ್ಟಲ್ ಆರಂಭವಾದ ಸತತ ಎರಡೂವರೆ ತಿಂಗಳ ನಂತರವೂ ಸಮಸ್ಯೆಗಳು ಮುಂದುವರಿದಿರುವ ಕುರಿತು ವಿತ್ತ ಸಚಿವರು ಆಕ್ಷೇಪಿಸಿದ್ದರು. ತೆರಿಗೆದಾರರಿಗೆ ಪದೇಪದೆ ತೊಂದರೆಯಾಗುತ್ತಿರುವ ಬಗ್ಗೆ ವಿವರಣೆ ನೀಡುವಂತೆ ತಾಕೀತು ಮಾಡಿದ್ದರು.
As an Indian company, Infosys has made seminal contribution in progress of the country. There might be certain issues with a portal run by Infosys, but the article published by Panchjanya in this context only reflects individual opinion of the author. @editorvskbharat
— Sunil Ambekar (@SunilAmbekarM) September 5, 2021
ಪಾಂಚಜನ್ಯದಲ್ಲಿ ಪ್ರಕಟವಾಗಿದ್ದ ಲೇಖನವು ಇನ್ಫೋಸಿಸ್ ಸಂಸ್ಥೆಯ ಮೂಲಕ ದೇಶ ವಿರೋಧಿ ಶಕ್ತಿಗಳು ದೇಶದ ಆರ್ಥಿಕ ಸ್ಥಿರತೆಯನ್ನೇ ಹಾಳುಗೆಡವಲು ಯತ್ನಿಸುತ್ತಿವೆಯೇ ಎಂದು ಪ್ರಶ್ನಿಸಿತ್ತು. ಈ ಕಲ್ಪನೆಗಳನ್ನು ಪುಷ್ಟೀಕರಿಸಲು ಯಾವುದೇ ಸಾಕ್ಷ್ಯಗಳು ಇಲ್ಲ. ಅದರೆ ಇನ್ಫೋಸಿಸ್ ಈ ಹಿಂದೆಯೂ ನಕ್ಸಲೀಯರು, ಎಡಪಂಥೀಯರು ಮತ್ತು ತುಕ್ಡೆತುಕ್ಡೆ ಗುಂಪುಗಳನ್ನು ಬೆಂಬಲಿಸಿತ್ತು ಎಂದು ಆರೋಪಿಸಿತ್ತು.
ಲೇಖನದ ಕುರಿತು ಪ್ರತಿಕ್ರಿಯಿಸಿರುವ ಪಾಂಚಜನ್ಯ ಸಂಪಾದಕ ಹಿತೇಶ್ ಶಂಕರ್, ‘ಇನ್ಫೋಸಿಸ್ ದೊಡ್ಡ ಕಂಪನಿ. ವಿಶ್ವಾಸಾರ್ಹತೆಯ ಕಾರಣಕ್ಕಾಗಿಯೇ ಸರ್ಕಾರದ ಹಲವು ಪ್ರಮುಖ ಯೋಜನೆಗಳನ್ನು ನಿರ್ವಹಿಸಲು ಇನ್ಫೋಸಿಸ್ಗೆ ಅವಕಾಶ ಸಿಕ್ಕಿದೆ. ತೆರಿಗೆ ಪೋರ್ಟಲ್ನಲ್ಲಿರುವ ಸಮಸ್ಯೆಗಳು ರಾಷ್ಟ್ರೀಯ ಕಾಳಜಿಗೆ ಸಂಬಂಧಿಸಿದ ಪ್ರಶ್ನೆಗಳಾಗಿವೆ. ಇದಕ್ಕೆ ಕಾರಣರಾದವರನ್ನು ಹೊಣೆಗಾರರನ್ನಾಗಿಸಬೇಕು’ ಎಂದು ಆಗ್ರಹಿಸಿದ್ದರು.
(RSS Clarifies on Article in Panchajanya on accusing Infosys as Anti National)
ಇದನ್ನೂ ಓದಿ: ಆದಾಯ ತೆರಿಗೆ ಪೋರ್ಟಲ್ ಸಮಸ್ಯೆಗಳಿವು; ಇನ್ಫೋಸಿಸ್ ಸಿಇಒಗೆ ಹಣಕಾಸು ಸಚಿವರು ಬುಲಾವ್ ಕಳಿಸಿದ್ದು ಈ ಕಾರಣಕ್ಕೆ
ಇದನ್ನೂ ಓದಿ: ಆದಾಯ ತೆರಿಗೆ ಇ-ಫೈಲಿಂಗ್ಗೆ ಹತ್ತಾರು ವಿಘ್ನ: ಹಣಕಾಸು ಇಲಾಖೆಯಿಂದ ಇನ್ಫೋಸಿಸ್ ಸಿಇಒ ಸಲಿಲ್ ಪಾರೇಖ್ಗೆ ಬುಲಾವ್
Published On - 5:36 pm, Sun, 5 September 21