ಲಡಾಖ್​​ನಲ್ಲಿ ಅಪಘಾತ: ಯೋಧರ ಸಾವಿಗೆ ರಾಷ್ಟ್ರಪತಿ, ಪ್ರಧಾನಿ ಮೋದಿ ಸಂತಾಪ

Ladakh Accident ವಾಹನವು ರಸ್ತೆಯಿಂದ ಸ್ಕಿಡ್ ಆಗಿ ಸುಮಾರು 50-60 ಅಡಿ ಆಳಕ್ಕೆ ಶ್ಯೋಕ್ ನದಿಯಲ್ಲಿ ಬಿದ್ದಿತು, ಇದರ ಪರಿಣಾಮವಾಗಿ ಎಲ್ಲಾ ಪ್ರಯಾಣಿಕರಿಗೆ ಗಾಯಗಳಾಗಿವೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಲಡಾಖ್​​ನಲ್ಲಿ ಅಪಘಾತ: ಯೋಧರ ಸಾವಿಗೆ ರಾಷ್ಟ್ರಪತಿ, ಪ್ರಧಾನಿ ಮೋದಿ ಸಂತಾಪ
ಲಡಾಖ್ ಅಪಘಾತ
Edited By:

Updated on: May 27, 2022 | 8:16 PM

ಶುಕ್ರವಾರ ಲಡಾಖ್‌ನ (Ladakh) ತುರ್ತುಕ್ ಸೆಕ್ಟರ್‌ನಲ್ಲಿರುವ ಶ್ಯೋಕ್ ನದಿಗೆ (Shyok river) 26 ಯೋಧರನ್ನು ಹೊತ್ತೊಯ್ಯುತ್ತಿದ್ದ ವಾಹನವೊಂದು ಬಿದ್ದ ಪರಿಣಾಮ ಭಾರತೀಯ ಸೇನೆಯ (Indian Army) ಕನಿಷ್ಠ ಏಳು ಯೋಧರು ಸಾವಿಗೀಡಾಗಿದ್ದಾರೆ. ಅಪಘಾತದಲ್ಲಿ ಹತ್ತೊಂಬತ್ತು ಮಂದಿಗೆ ಗಂಭೀರ ಗಾಯಗಳಾಗಿದ್ದು, ಅವರೆಲ್ಲರನ್ನೂ ಪಂಚಕುಲದಲ್ಲಿರುವ ಸೇನೆಯ ವೆಸ್ಟರ್ನ್ ಕಮಾಂಡ್ ಆಸ್ಪತ್ರೆಗೆ ಏರ್‌ಲಿಫ್ಟ್ ಮಾಡಲಾಗಿದೆ. ನುಬ್ರಾದಿಂದ ತುರ್ತುಕ್‌ಗೆ ಸೇನಾ ಪಡೆಗಳನ್ನು ಹೊತ್ತೊಯ್ಯುತ್ತಿದ್ದ ವಾಹನವು ಲಾರ್ಗ್ಯಾಬ್, ಪಚ್ಚತಾಂಗ್ ಬಳಿ ನದಿಗೆ ಬಿದ್ದು ಈ ಅಪಘಾತ ಸಂಭವಿಸಿದೆ. ರಾಷ್ಟ್ರಪತಿ ರಾಮನಾಥ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈ ಘಟನೆ ಬಗ್ಗೆ ದುಃಖ ವ್ಯಕ್ತಪಡಿಸಿದ್ದು, ಗಾಯಗೊಂಡವರು ಶೀಘ್ರವೇ ಚೇತರಿಕೆಯಾಗಲಿ ಎಂದು ಹಾರೈಸಿದ್ದಾರೆ. ನಮ್ಮ ಧೀರ ಯೋಧರ ಜೀವವನ್ನು ಕಸಿದುಕೊಂಡ ಲಡಾಖ್​​ನ ರಸ್ತೆ ಅಪಘಾತದ ಬಗ್ಗೆ ಕೇಳಿ ಅತೀವ ನೋವಾಗಿದೆ. ಸಾವಿಗೀಡಾದ ಯೋಧರ ಕುಟುಂಬಗಳಿಗೆ ಸಂತಾಪಗಳು. ಗಾಯಗೊಂಡವರು ಬೇಗ ಚೇತರಿಸಿಕೊಳ್ಳಲಿ ಎಂದು ರಾಷ್ಟ್ರಪತಿಭವನದ ಅಧಿಕೃತ ಟ್ವಿಟರ್ ಖಾತೆಯಲ್ಲಿ ರಾಷ್ಟ್ರಪತಿ ಟ್ವೀಟ್ ಮಾಡಿದ್ದಾರೆ.  ಗಾಯಗೊಂಡವರಿಗೆ ಅಗತ್ಯವಿದ್ದ ಎಲ್ಲ ಸಹಾಯಗಳನ್ನು ಮಾಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ನಮ್ಮ ಧೀರ ಯೋಧರ ಸಾವಿಗೆ ಕಾರಣವಾದ ಲಡಾಖ್ ಬಸ್ ಅಪಘಾತದ ಬಗ್ಗೆ ದುಃಖಿತನಾಗಿದ್ದೇನೆ. ಮೃತರ ಕುಟುಂಬದೊಂದಿಗೆ ನನ್ನ ಪ್ರಾರ್ಥನೆಗಳಿವೆ. ಗಾಯಗೊಂಡವರು ಶೀಘ್ರ ಗುಣಮುಖರಾಗಲಿ.ಇದಕ್ಕೆ ಅಗತ್ಯವಿರುವ ಎಲ್ಲ ಸಹಾಯವನ್ನು ಮಾಡಲಾಗುವುದು ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಲಡಾಖ್​​ನಲ್ಲಿ ಸೇನಾವಾಹನ ಅಪಘಾತದ ಬಗ್ಗೆ ಕೇಳಿ ಅತೀವ ದುಃಖವಾಗಿದೆ. ಮೃತರ ಕುಟುಂಬಗಳಿಗೆ ಸಂತಾಪಗಳು. ಗಾಯಗೊಂಡ ಯೋಧರು ಶೀಘ್ರವೇ ಚೇತರಿಸಿಕೊಳ್ಳಲಿ ಎಂದು ನಾನು ಆಶಿಸುತ್ತೇನೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.


ವಾಹನವು ರಸ್ತೆಯಿಂದ ಸ್ಕಿಡ್ ಆಗಿ ಸುಮಾರು 50-60 ಅಡಿ ಆಳಕ್ಕೆ ಶ್ಯೋಕ್ ನದಿಯಲ್ಲಿ ಬಿದ್ದಿತು, ಇದರ ಪರಿಣಾಮವಾಗಿ ಎಲ್ಲಾ ಪ್ರಯಾಣಿಕರಿಗೆ ಗಾಯಗಳಾಗಿವೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. 26 ಸೈನಿಕರ ತಂಡವು ಪಾರ್ತಾಪುರದ ಟ್ರಾನ್ಸಿಟ್ ಕ್ಯಾಂಪ್‌ನಿಂದ ಉಪ-ಸೆಕ್ಟರ್ ಹನೀಫ್‌ನ ಮುಂದಿನ ಸ್ಥಳಕ್ಕೆ ತೆರಳುತ್ತಿತ್ತು. “ಬೆಳಿಗ್ಗೆ 9 ಗಂಟೆ ಸುಮಾರಿಗೆ, ಥೋಯಿಸ್‌ನಿಂದ 25 ಕಿಮೀ ದೂರದಲ್ಲಿ, ವಾಹನವು ರಸ್ತೆಯಿಂದ ಸ್ಕಿಡ್ ಆಗಿ ಶ್ಯೋಕ್ ನದಿಯಲ್ಲಿ ಬಿದ್ದಿತು” ಎಂದು ಅಧಿಕಾರಿ ಹೇಳಿದ್ದು ಪ್ರಕರಣ ಬಗ್ಗೆ ನುಬ್ರಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ