ಅರುಣಚಲ ಪ್ರದೇಶ, ಲಡಾಖ್​ ನಿಮಗೆ ಕಸದ ತೊಟ್ಟೆಯಾಯಿತೇ: ಕಳಂಕಿತ ಅಧಿಕಾರಿಗಳ ವರ್ಗಾವಣೆಗೆ ಆಕ್ರೋಶ

ಕಳಂಕಿತ ಐಎಎಸ್ ಅಧಿಕಾರಿಗಳನ್ನು ಲಡಾಖ್ ಮತ್ತು ಅರುಣಾಚಲ ಪ್ರದೇಶಕ್ಕೆ ವರ್ಗಾವಣೆ ಮಾಡಿರುವ ಕೇಂದ್ರ ಸರ್ಕಾರದ ಕ್ರಮದ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಅರುಣಚಲ ಪ್ರದೇಶ, ಲಡಾಖ್​ ನಿಮಗೆ ಕಸದ ತೊಟ್ಟೆಯಾಯಿತೇ: ಕಳಂಕಿತ ಅಧಿಕಾರಿಗಳ ವರ್ಗಾವಣೆಗೆ ಆಕ್ರೋಶ
ದೆಹಲಿ ಕ್ರೀಡಾಂಗಣದಲ್ಲಿ ವಾಕ್ ಮಾಡುತ್ತಿರುವ ಐಎಎಸ್ ಅಧಿಕಾರಿ ಸಂಜೀವ್ ಖಿರ್​ವಾರ್
TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

May 27, 2022 | 9:54 AM

ದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ವಿಐಪಿ ಸಂಸ್ಕೃತಿ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗುವಂತೆ ಮಾಡಿದ್ದ ಕಳಂಕಿತ ಐಎಎಸ್ ಅಧಿಕಾರಿಗಳನ್ನು ಲಡಾಖ್ ಮತ್ತು ಅರುಣಾಚಲ ಪ್ರದೇಶಕ್ಕೆ ವರ್ಗಾವಣೆ ಮಾಡಿರುವ ಕೇಂದ್ರ ಸರ್ಕಾರದ ಕ್ರಮದ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ‘ಈ ಅಧಿಕಾರಿಗಳ ವಿರುದ್ಧ ವಿಚಾರಣೆ ನಡೆಸಿ ಶಿಕ್ಷೆ ವಿಧಿಸಬೇಕಿತ್ತು. ಅದು ಬಿಟ್ಟು, ಶಿಕ್ಷೆಯೆಂದು ಅರುಣಾಚಲ ಪ್ರದೇಶ ಮತ್ತು ಲಡಾಖ್​ಗೆ ವರ್ಗಾವಣೆ ಮಾಡಿರುವುದು ತಪ್ಪು ಅಭಿಪ್ರಾಯ ಮೂಡಿಸಿದೆ’ ಎಂದು ಹಲವರು ಟ್ವಿಟರ್​ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಲಡಾಖ್ ಮತ್ತು ಅರುಣಾಚಲ ಪ್ರದೇಶಗಳ ಅಭಿವೃದ್ಧಿ ಬಗ್ಗೆ ಕೇಂದ್ರ ಸರ್ಕಾರವು ಈ ಮೊದಲು ನೀಡಿದ್ದ ಹೇಳಿಕೆಗಳ ಬಗ್ಗೆಯೂ ಹಲವರು ಅನುಮಾನ ವ್ಯಕ್ತಪಡಿಸಿದ್ದಾರೆ.

ಐಎಎಸ್ ಅಧಿಕಾರಿಗಳಾಗಿರುವ ಸಂಜೀವ್ ಖಿರ್​ವಾರ್ ಮತ್ತು ರಿಂಕು ದುಗ್ಗಾ ಅವರು ತಾವು ನಾಯಿಯೊಂದಿಗೆ ವಾಕಿಂಗ್ ಮಾಡಲು ಅನುಕೂಲವಾಗಬೇಕೆಂದು ತ್ಯಾಗರಾಜ ಕ್ರೀಡಾಂಗಣದಲ್ಲಿ ಕ್ರೀಡಾ ತರಬೇತಿಗೆ ತಡೆಯೊಡ್ಡಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಇಂಡಿಯನ್ ಎಕ್ಸ್​ಪ್ರೆಸ್ ಪತ್ರಿಕೆಯಲ್ಲಿ ವರದಿ ಪ್ರಕಟವಾದ ನಂತರ ಎಚ್ಚೆತ್ತುಕೊಂಡಿದ್ದ ಕೇಂದ್ರ ಸರ್ಕಾರವು ದೆಹಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಯಿಂದ ವರದಿ ಪಡೆದು, ಇವರಿಬ್ಬರನ್ನೂ ವರ್ಗಾವಣೆ ಮಾಡಿತ್ತು. ಇದೀಗ ಪ್ರತಿಪಕ್ಷಗಳು ಈ ವರ್ಗಾವಣೆ ಆದೇಶವನ್ನು ಪ್ರಶ್ನಿಸಿವೆ.

ಈ ಕುರಿತು ಟ್ವಿಟರ್​ನಲ್ಲಿ ತಕರಾರು ಎತ್ತಿರುವ ತೃಣಮೂಲ ಕಾಂಗ್ರೆಸ್​ನ ಲೋಕಸಭಾ ಸದಸ್ಯೆ ಮಹುವಾ ಮೊಯಿತ್ರಾ, ‘ಈಶಾನ್ಯ ಭಾರತದ ಅಭಿವೃದ್ಧಿ ಬಗ್ಗೆ ಕೇಂದ್ರ ಸರ್ಕಾರದ್ದು ಕೇವಲ ಬಾಯ್ಮಾತಿನ ಉಪಚಾರವಷ್ಟೇ. ಕಳಂಕಿತ ಐಎಎಸ್​ ಅಧಿಕಾರಿಯನ್ನು ವರ್ಗಾವಣೆ ಮಾಡುವ ಮೂಲಕ ನಿಮಗೆ ಬೇಡದ ಕಸ ಸುರಿಯುವ ಜಾಗವಾಗಿ ಅರುಣಾಚಲ ಪ್ರದೇಶವನ್ನು ಬಳಸಿಕೊಳ್ಳುತ್ತಿದ್ದೀರಿ. ಇದನ್ನು ಪ್ರತಿಭಟಿಸಬೇಕು’ ಎಂದು ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು ಮತ್ತು ಕೇಂದ್ರ ಸಚಿವ ಕಿರಣ್ ರಿಜಿಜು ಅವರನ್ನು ಟ್ಯಾಗ್ ಮಾಡಿ ಕೋಡಿದ್ದಾರೆ.

ಮತ್ತೋರ್ವ ಕಳಂಕಿತ ಅಧಿಕಾರಿಯನ್ನು ಲಡಾಖ್​ಗೆ ವರ್ಗಾವಣೆ ಮಾಡಿರುವುದಕ್ಕೆ ಕಾಶ್ಮೀರದ ರಾಜಕಾರಿಣಿ ಓಮರ್ ಅಬ್ದುಲ್ಲಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ‘ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಲು ಲಡಾಖ್​ಗೆ ಏಕೆ ವರ್ಗಾವಣೆ ಮಾಡಬೇಕು? ಉತ್ತಮ ಆತಿಥ್ಯಕ್ಕೆ ಹೆಸರಾದ ಜನರು ಅಲ್ಲಿದ್ದಾರೆ. ವಿಶ್ವದಲ್ಲಿ ಅತ್ಯುತ್ತಮ ಎನಿಸುವಂಥ ದೃಶ್ಯಾವಳಿಗಳಿವೆ. ಇಂಥ ಪ್ರದೇಶಕ್ಕೆ ಕಳಂಕಿತ ಅಧಿಕಾರಿಯನ್ನು ವರ್ಗಾಯಿಸುವ ಮೂಲಕ ಅದರ ಮಹತ್ವವನ್ನು ಕೇಂದ್ರ ಸರ್ಕಾರ ಏಕೆ ಕಡಿಮೆ ಮಾಡುತ್ತಿದೆ. ನನ್ನ ಇದೇ ಮಾತುಗಳು ಅರುಣಾಚಲ ಪ್ರದೇಶಕ್ಕೂ ಅನ್ವಯಿಸುತ್ತವೆ ಎಂದು ಅವರು ಹೇಳಿದ್ದಾರೆ.

ಇಬ್ಬರೂ ಕಳಂಕಿತ ಐಎಎಸ್ ಅಧಿಕಾರಿಗಳು 1994ರ ಅಗ್​ಮಟ್ (Arunachal Pradesh, Goa, Mizoram and Union Territories – AGMUT) ಕೇಡರ್​ಗೆ ಸೇರಿದವರು. ಈ ಪೈಕಿ ಸಂಜೀವ್ ಖಿರ್​ವಾರ್ ದೆಹಲಿ ಸರ್ಕಾರದ ಕಂದಾಯ ವಿಭಾಗದ ಕಾರ್ಯದರ್ಶಿಯಾಗಿದ್ದರೆ, ರಿಂಕು ದುಗ್ಗಾ ದೆಹಲಿ ಸರ್ಕಾರದ ಕಂದಾಯ ಮತ್ತು ಭೂಮಿ ವಿಭಾಗದ ಕಾರ್ಯದರ್ಶಿಯಾಗಿದ್ದಾರೆ.

ದೆಹಲಿ ಸರ್ಕಾರದ ಇಬ್ಬರು ಐಎಎಸ್ ಅಧಿಕಾರಿಗಳು ಕ್ರೀಡಾಂಗಣವನ್ನು ದುರುಪಯೋಗಪಡಿಸಿಕೊಂಡ ಕುರಿತು ಇಂಡಿಯನ್​ ಎಕ್ಸ್​ಪ್ರೆಸ್​ನಲ್ಲಿ ವರದಿ ಪ್ರಕಟವಾದ ತಕ್ಷಣ ಪ್ರತಿಕ್ರಿಯಿಸಿದ್ದ ಅಧಿಕಾರರೂಢ ಆಮ್ ಆದ್ಮಿ ಪಕ್ಷವು, ‘ಎಲ್ಲ ಕ್ರೀಡಾಂಗಣಗಳನ್ನು ರಾತ್ರಿ 10 ಗಂಟೆಯವರೆಗೂ ತೆರೆದಿಡಬೇಕು. ಕ್ರೀಡಾ ತರಬೇತಿ ಮುಂದುವರಿಯಬೇಕು’ ಎಂದು ಸೂಚಿಸಿತ್ತು.

ಐಎಎಸ್ ಅಧಿಕಾರಿ ದಂಪತಿ ತಮ್ಮ ನಾಯಿಯೊಂದಿಗೆ ಕ್ರೀಡಾಂಗಣದಲ್ಲಿ ವಾಕಿಂಗ್ ಮಾಡುತ್ತಿರುವ ಫೋಟೊ ಗುರುವಾರ ವೈರಲ್ ಆಗಿತ್ತು. ಇವರಿಬ್ಬರ ವರ್ಗಾವಣೆ ಆದೇಶವನ್ನು ಶಿಕ್ಷೆ ಎಂದೇ ಹಲವರು ವ್ಯಾಖ್ಯಾನಿಸಿದ್ದರು. ಈ ಮಾತುಗಳಿಗೆ ತೃಣಮೂಲ ಕಾಂಗ್ರೆಸ್​ನ ಎಂಪಿ ಮಹುವಾ ಮೊಯಿತ್ರಾ ಮತ್ತು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಪುಷ್ಟಿ ನೀಡುವಂತೆ ಮಾತನಾಡಿದ್ದರು.

ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada