ದೆಹಲಿ: ಲಖಿಂಪುರ ಖೇರಿ (Lakhimpur Kheri ) ಘಟನೆ ಯೋಜಿತ ಪಿತೂರಿ ಎಂದು ವಿಶೇಷ ತನಿಖಾ ತಂಡದ (SIT) ವರದಿ ಉಲ್ಲೇಖಿಸಿ ಕೇಂದ್ರದ ವಿರುದ್ಧ ಕಾಂಗ್ರೆಸ್ ಗುರುವಾರ ವಾಗ್ದಾಳಿಯನ್ನು ಮುಂದುವರೆಸಿದೆ. ಪ್ರಕರಣದಲ್ಲಿ ಬಂಧಿತರಾಗಿರುವ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ (Ajay Mishra) ಅವರ ಪುತ್ರ ಆಶಿಶ್ ಮಿಶ್ರಾ (Ashish Mishra) ಅವರನ್ನು ಪ್ರಧಾನಿ ನರೇಂದ್ರ ಮೋದಿ ರಕ್ಷಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಹೇಳಿದೆ. ಅಜಯ್ ಮಿಶ್ರಾ ಅವರನ್ನು ಅವರ ಸ್ಥಾನದಿಂದ ವಜಾಗೊಳಿಸುವಂತೆ ಕಾಂಗ್ರೆಸ್ (Congress) ಕೂಡ ಒತ್ತಾಯಿಸಿತು. ಬೆಳಗ್ಗೆ ಕಾಂಗ್ರೆಸ್ ಪಕ್ಷ ಮತ್ತು ಇತರ ವಿರೋಧ ಪಕ್ಷಗಳು ಸಂಸತ್ನ ಉಭಯ ಸದನಗಳ ಒಳಗೆ ಮಿಶ್ರಾ ಅಧಿಕಾರದಿಂದ ಕೆಳಗಿಳಿಯುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಮುಂದುವರಿದ ಪ್ರತಿಭಟನೆಯ ಹಿನ್ನೆಲೆಯಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯನ್ನು ಆರಂಭದಲ್ಲಿ ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು ಮತ್ತು ನಂತರ ಶುಕ್ರವಾರಕ್ಕೆ ಮುಂದೂಡಲಾಯಿತು. ಪ್ರಧಾನಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಎಸ್‌ಐಟಿ ವರದಿ ನೀಡಿದರೂ ಯಾವುದೇ ಕ್ರಮ ಕೈಗೊಳ್ಳದಿದ್ದರೆ ಪ್ರಧಾನಿ ಅವರನ್ನು ರಕ್ಷಿಸುತ್ತಿದ್ದಾರೆ ಎಂದು ಹೇಳಬೇಕಾಗುತ್ತದೆ. ಸಭಾಪತಿಯವರು ನಮ್ಮ ಮನವಿಗೆ ಕಿವಿಗೊಡಲಿಲ್ಲ ಮತ್ತು ಇದ್ದಕ್ಕಿದ್ದಂತೆ ಸದನವನ್ನು ಮುಂದೂಡಿದರು ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿರುವುದಾಗಿ ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.
ಲಖಿಂಪುರ ಖೇರಿ ಘಟನೆಗೆ ಸಂಬಂಧಿಸಿದಂತೆ ನಾವು ರಾಜ್ಯಸಭೆಯಲ್ಲಿ ನಿಯಮ 267 ರ ಅಡಿಯಲ್ಲಿ ನೋಟಿಸ್ ನೀಡಿದ್ದೇವೆ. ಅಲ್ಲಿ ನಡೆದ ಘಟನೆಗಳ ಬಗ್ಗೆ ನಾವು ಚರ್ಚೆ ಬಯಸಿದ್ದೇವೆ, ವಿಶೇಷವಾಗಿ ಎಸ್‌ಐಟಿ ರೈತರನ್ನು ಹತ್ಯೆ ಮಾಡುವುದು ಪೂರ್ವ ಯೋಜಿತ, ಪಿತೂರಿ ಮತ್ತು ಇದು ಕೊಲೆ ಎಂದು ಸ್ಪಷ್ಟವಾಗಿ ಹೇಳುತ್ತಿದೆ, ”ಎಂದು ಖರ್ಗೆ ಹೇಳಿದ್ದಾರೆ. ಪ್ರಕರಣದಲ್ಲಿ ನವೀಕರಿಸಿದ ಆರೋಪಪಟ್ಟಿಯನ್ನು ಸಲ್ಲಿಸಲಾಗಿದೆ ಎಂದ ಅವರು ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ತನ್ನ 13 ಸ್ನೇಹಿತರೊಂದಿಗೆ “ರೈತರನ್ನು ಹತ್ಯೆಮಾಡಿದ” ಸಂಚುಕೋರ ಎಂದು ಹೇಳಿದ್ದಾರೆ.
“ನಾವು ಇದನ್ನು ಸದನದ ಮುಂದೆ ಮಂಡಿಸಲು ಬಯಸಿದ್ದೇವೆ. ಸಭಾಪತಿಗೆ ಮನವಿ ಮಾಡಿ ಬೆಳಗ್ಗೆ ನೋಟಿಸ್ ನೀಡಿದ್ದೆವು. ರೈತರ ‘ಸತ್ಯಾಗ್ರಹ’ ನಿಲ್ಲಿಸಿ, ಇಲ್ಲದಿದ್ದರೆ 2 ನಿಮಿಷದಲ್ಲಿ ಅದನ್ನು ಹೇಗೆ ನಿಲ್ಲಿಸಬೇಕೆಂದು ಗೊತ್ತಿದೆ ಎಂದು ಸಚಿವ ಟೆನಿ ಒಮ್ಮೆ ರೈತರಲ್ಲಿ ಹೇಳಿದ್ದರು. ಬಹುಶಃ ಅವರ ಮಗ ಈ ರೀತಿ ವರ್ತಿಸಿರಬಹುದು ಎಂದು ಖರ್ಗೆ ಹೇಳಿದರು.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್, ಎಸ್‌ಐಟಿಯ ಸಂಶೋಧನೆಗಳ ನಂತರ ಲಖಿಂಪುರ ಖೇರಿ ಘಟನೆಯ ಬಗ್ಗೆ ಚರ್ಚಿಸಲು ಸರ್ಕಾರ ಹಿಂಜರಿಕೆ ತೋರಿಸುತ್ತಿದೆ ಎಂದು ಆರೋಪಿಸಿದರು ಕೇಂದ್ರ ಈ ಬಗ್ಗೆ ಹೇಳಿಕೆ ನೀಡಬೇಕು ಎಂದು ಅವರುಒತ್ತಾಯಿಸಿದರು. ಲಖಿಂಪುರ ಖೇರಿ ವಿಚಾರವಾಗಿ ಏನನ್ನೂ ಚರ್ಚಿಸಲು ಸರ್ಕಾರ ಸಿದ್ಧವಿಲ್ಲ, ಎಸ್‌ಐಟಿ ವಿಶೇಷ ವರದಿ ನೀಡಿದ್ದು, ಇದೊಂದು ಸ್ಪಷ್ಟ ಷಡ್ಯಂತ್ರ, ಸಂಸತ್ತು ಚರ್ಚೆಗೆ ಸಿದ್ಧವಾಗಿಲ್ಲ, ಇದು ಅತ್ಯಂತ ದುರದೃಷ್ಟಕರ, ಈ ಕುರಿತು ಹೇಳಿಕೆ ನೀಡಲು ಸರ್ಕಾರ ಮುಂದಾಗಬೇಕು ಎಂದಿದ್ದಾರೆ.
ಇದಕ್ಕೂ ಮುನ್ನ ಲೋಕಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ಪ್ರತಿಪಕ್ಷಗಳಿಗೆ ಈ ವಿಷಯದ ಬಗ್ಗೆ ಮಾತನಾಡಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು. ಏತನ್ಮಧ್ಯೆ, ತನಿಖೆ ನಡೆಯುತ್ತಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಪ್ರತಿಪಕ್ಷಗಳು ಈ ವಿಷಯವನ್ನು ಚರ್ಚಿಸಲು ನಿರಾಕರಿಸಿದವು. ಲಖಿಂಪುರ ಖೇರಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಮೇಲ್ವಿಚಾರಣೆಯ ತನಿಖೆ ನಡೆಯುತ್ತಿದೆ. ಸಂಸತ್ ಚರ್ಚೆಯ ಸ್ಥಳವಾಗಿದೆ. ನಾವು ಪ್ರತಿಪಕ್ಷಗಳಿಂದ ಸಲಹೆಗಳನ್ನು ತೆಗೆದುಕೊಳ್ಳಲು ಬಯಸುತ್ತೇವೆ. ನಾವು ಅವರನ್ನು ಚರ್ಚೆಗೆ ಕರೆಯುತ್ತೇವೆ ಆದರೆ ಅವರು ನಿರಾಕರಿಸುತ್ತಾರೆ” ಎಂದು ಜೋಶಿ ಹೇಳಿರುವುದಾಗಿ ಎಎನ್ಐ ವರದಿ ಮಾಡಿದೆ.
ಇದನ್ನೂ ಓದಿ: Parliament Winter Session 2021 ಲಖಿಂಪುರ ಖೇರಿಯಲ್ಲಿ ರೈತರನ್ನು ಹತ್ಯೆ ಮಾಡಿದ ಸಚಿವರಿಗೆ ಶಿಕ್ಷೆಯಾಗಬೇಕು: ರಾಹುಲ್ ಗಾಂಧಿ
Published On - 4:57 pm, Thu, 16 December 21