Lakhimpur Kheri violence ಲಖಿಂಪುರ ಖೇರಿ ಹಿಂಸಾಚಾರ ಉದ್ದೇಶಪೂರ್ವಕ ನಡೆದ ಕೃತ್ಯ, 13 ಆರೋಪಿಗಳ ವಿರುದ್ಧ ಕೊಲೆ ಯತ್ನ ಆರೋಪಕ್ಕೆ ಎಸ್‌ಐಟಿ ಆಗ್ರಹ

Lakhimpur Kheri violence ಲಖಿಂಪುರ ಖೇರಿ ಹಿಂಸಾಚಾರ ಉದ್ದೇಶಪೂರ್ವಕ ನಡೆದ ಕೃತ್ಯ, 13 ಆರೋಪಿಗಳ ವಿರುದ್ಧ ಕೊಲೆ ಯತ್ನ ಆರೋಪಕ್ಕೆ ಎಸ್‌ಐಟಿ ಆಗ್ರಹ
ಲಖಿಂಪುರ ಖೇರಿ ಹಿಂಸಾಚಾರ

ತನಿಖೆಯ ಆಧಾರದ ಮೇಲೆ ಎಸ್‌ಐಟಿ, ಕೊಲೆ ಯತ್ನ,  ಸ್ವಯಂಪ್ರೇರಣೆಯಿಂದ ಅಪಾಯಕಾರಿ ಆಯುಧಗಳಿಂದ ಗಂಭೀರವಾದ ಗಾಯವನ್ನು ಉಂಟುಮಾಡುವುದು, ಸಾಮಾನ್ಯ ಉದ್ದೇಶಕ್ಕಾಗಿ ಹಲವಾರು ವ್ಯಕ್ತಿಗಳು ಮಾಡಿದ ಕೃತ್ಯಗಳ ಆರೋಪಗಳನ್ನು ಸೇರಿಸಿ ನ್ಯಾಯಾಲಯಕ್ಕೆ ಮೊರೆ ಹೋಗಿದೆ.

TV9kannada Web Team

| Edited By: Rashmi Kallakatta

Dec 14, 2021 | 1:30 PM

ದೆಹಲಿ: ಲಖಿಂಪುರ ಖೇರಿ ಹಿಂಸಾಚಾರ ಘಟನೆಯ (Lakhimpur Kheri violence)ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (SIT) ಕೇಂದ್ರ ಸಚಿವ ಅಜಯ್ ಮಿಶ್ರಾ ಟೆನಿ (Ajay Mishra Teni) ಅವರ ಪುತ್ರ ಆಶಿಶ್ (Ashish) ಸೇರಿದಂತೆ 13 ಬಂಧಿತ ಆರೋಪಿಗಳ ವಿರುದ್ಧ ಕೊಲೆ ಯತ್ನದ ಆರೋಪ ಹೊರಿಸುವಂತೆ ಒತ್ತಾಯಿಸಿದೆ. ತನಿಖೆಯ ಆಧಾರದ ಮೇಲೆ ಎಸ್‌ಐಟಿ, ಕೊಲೆ ಯತ್ನ,  ಸ್ವಯಂಪ್ರೇರಣೆಯಿಂದ ಅಪಾಯಕಾರಿ ಆಯುಧಗಳಿಂದ ಗಂಭೀರವಾದ ಗಾಯವನ್ನು ಉಂಟುಮಾಡುವುದು, ಸಾಮಾನ್ಯ ಉದ್ದೇಶಕ್ಕಾಗಿ ಹಲವಾರು ವ್ಯಕ್ತಿಗಳು ಮಾಡಿದ ಕೃತ್ಯಗಳ ಆರೋಪಗಳನ್ನು ಸೇರಿಸಿ ನ್ಯಾಯಾಲಯಕ್ಕೆ ಮೊರೆ ಹೋಗಿದೆ. ಘಟನೆಯು ಉದ್ದೇಶಪೂರ್ವಕ ಕೃತ್ಯವಾಗಿದ್ದು, ನಿರ್ಲಕ್ಷ್ಯ ಅಥವಾ ನಿರ್ಲಕ್ಷತನದಿಂದ ಸಂಭವಿಸಿದಲ್ಲ ಎಂದು ಎಸ್‌ಐಟಿ ತನಿಖಾ ಅಧಿಕಾರಿ ವಿದ್ಯಾರಾಮ್ ದಿವಾಕರ್ ಹೇಳಿದ್ದಾರೆ.  ಸಾರ್ವಜನಿಕ ದಾರಿಯಲ್ಲಿ ವೇಗವಾಗಿ ವಾಹನ ಚಲಾಯಿಸುವುದು ಅಥವಾ ಸವಾರಿ ಮಾಡುವುದು, ಯಾವುದೇ ಕೃತ್ಯವನ್ನು ಮಾಡುವ ಮೂಲಕ ಯಾವುದೇ ವ್ಯಕ್ತಿಗೆ ಘೋರವಾದ ಗಾಯವನ್ನು ಉಂಟುಮಾಡುವುದು, ನಿರ್ಲಕ್ಷ್ಯದಿಂದ ಸಂಭವಿಸಿದ ಸಾವು ಆರೋಪಗಳನ್ನು ಬದಲಾಯಿಸಬೇಕೆಂದು ಎಸ್ಐಟಿ ಒತ್ತಾಯಿಸಿದೆ. ಅದೇ ವೇಳೆ ಈ ಪ್ರಕರಣದಲ್ಲಿ ಈಗಾಗಲೇ ಕೊಲೆ, ಗಲಭೆ, ಶಸ್ತ್ರಾಸ್ತ್ರಗಳನ್ನು ಹಿಡಿದು ಗಲಭೆ ನಡೆಸಿದ ಆರೋಪಗಳನ್ನು ಹೊರಿಸಲಾಗಿದೆ.

ಅಕ್ಟೋಬರ್ 3 ರಂದು, ಕೇಂದ್ರ ಸಚಿವ ಅಜಯ್ ಮಿಶ್ರಾ ಟೆನಿ ಅವರ ಪುತ್ರ ಆಶಿಶ್ ಮಿಶ್ರಾ ಅವರಿಗೆ ಸೇರಿದ ಎಸ್​ಯುವಿ ಹರಿದು ನಾಲ್ವರು ರೈತರು ಸೇರಿದಂತೆ ಎಂಟು ಜನರು ಸಾವನ್ನಪ್ಪಿದರು. ಪ್ರಕರಣದಲ್ಲಿ ಆಶಿಶ್ ಮಿಶ್ರಾ, ಲುವ್ಕುಶ್, ಆಶಿಶ್ ಪಾಂಡೆ, ಶೇಖರ್ ಭಾರ್ತಿ, ಅಂಕಿತ್ ದಾಸ್, ಲತೀಫ್, ಶಿಶುಪಾಲ್, ನಂದನ್ ಸಿಂಗ್, ಸತ್ಯಂ ತ್ರಿಪಾಠಿ, ಸುಮಿತ್ ಜೈಸ್ವಾಲ್, ಧರ್ಮೇಂದ್ರ ಬಂಜಾರಾ, ರಿಂಕು ರಾಣಾ ಮತ್ತು ಉಲ್ಲಾಸ್ ತ್ರಿವೇದಿಯನ್ನು ಬಂಧಿಸಲಾಗಿದೆ.

ಆರೋಪಿಗಳು ಲಖಿಂಪುರ ಖೇರಿ ಜಿಲ್ಲಾ ಕಾರಾಗೃಹದಲ್ಲಿದ್ದಾರೆ. ಏತನ್ಮಧ್ಯೆ, ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠವು ಆಶಿಶ್ ಮಿಶ್ರಾ ಅವರ ಜಾಮೀನು ಅರ್ಜಿಗೆ ಪ್ರತಿ-ಅಫಿಡವಿಟ್ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಎರಡು ವಾರಗಳ ಕಾಲಾವಕಾಶ ನೀಡಿದೆ. ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಹೆಚ್ಚುವರಿ ಅಡ್ವೊಕೇಟ್ ಜನರಲ್ ವಿನೋದ್ ಶಾಹಿ ಅವರು ನಡೆಯುತ್ತಿರುವ ತನಿಖೆಯ ಬಗ್ಗೆ ನ್ಯಾಯಾಲಯಕ್ಕೆ ತಿಳಿಸಿದರು. ಇನ್ನೂ ಹೆಚ್ಚಿನ ಸಂಖ್ಯೆಯ ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳಬೇಕಿದೆ ಎಂದು ಶಾಹಿ ಹೇಳಿದ್ದಾರೆ.

ಘಟನೆಗೆಸಂಬಂಧಿಸಿದಂತೆ ಲಖಿಂಪುರ ಪೊಲೀಸರು ಎರಡು ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ. ಮೃತ ರೈತರ ಕುಟುಂಬದವರು ಆಶಿಶ್ ಮಿಶ್ರಾ ಅವರನ್ನು ಪ್ರಮುಖ ಆರೋಪಿ ಎಂದು ಹೆಸರಿಸಿದ್ದಾರೆ. ಇನ್ನೊಂದು ಎಫ್‌ಐಆರ್ ಅನ್ನು ಲಖಿಂಪುರದ ಬಿಜೆಪಿ ಕಾರ್ಯಕರ್ತ ಸುಮಿತ್ ಜೈಸ್ವಾಲ್ ಅವರು ನಂತರ ಹಿಂಸಾಚಾರವನ್ನು ಪ್ರಚೋದಿಸಿದ ಆರೋಪದ ಮೇಲೆ ಹೆಸರಿಸದ ರೈತರ ವಿರುದ್ಧ ದಾಖಲಿಸಿದ್ದಾರೆ. ವೈರಲ್ ವಿಡಿಯೊಗಳಲ್ಲಿ, ಜೈಸ್ವಾಲ್ ರೈತರಿಗೆ ಗುದ್ದಿದ ಎಸ್​​ಯುವಿ ಒಂದರಿಂದ ಓಡುತ್ತಿರುವುದನ್ನು ಕಾಣಬಹುದು. ನಂತರ ಆಶಿಶ್ ಮಿಶ್ರಾ ಎಫ್‌ಐಆರ್‌ನಲ್ಲಿ ಸಹ ಆರೋಪಿಯಾಗಿ ಬಂಧಿಸಲಾಯಿತು. ಈ ಪ್ರಕರಣದ ಅರ್ಜಿಯನ್ನು ಸುಪ್ರೀಂಕೋರ್ಟ್ ವಿಚಾರಣೆ ನಡೆಸುತ್ತಿದ್ದಂತೆ ಯುಪಿ ಸರ್ಕಾರವು ಹಲವು ಕಠಿಣ ಪ್ರಶ್ನೆಗಳನ್ನು ಎದುರಿಸಿತು.

ಕಳೆದ ತಿಂಗಳು ಸುಪ್ರೀಂಕೋರ್ಟ್ ವಿಶೇಷ ತನಿಖಾ ತಂಡಕ್ಕೆ ತನಿಖೆಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಸೂಚಿಸಿತ್ತು. ಇದು ತಂಡಕ್ಕೆ ಮೂವರು ಐಪಿಎಸ್ ಅಧಿಕಾರಿಗಳನ್ನು ಸೇರಿಸಿದೆ. ಉತ್ತರ ಪ್ರದೇಶದವರಲ್ಲದಿದ್ದರೂ ಅವರನ್ನು ಯುಪಿ ಕೇಡರ್‌ಗೆ ನಿಯೋಜಿಸಲಾಗಿದೆ. ಸ್ಥಳೀಯ ಪೊಲೀಸರು ತನಿಖೆಯನ್ನು ಸರಿಯಾಗಿ ನಿರ್ವಹಿಸುವುದಿಲ್ಲ ಎಂಬ ಆತಂಕದಿಂದ ಈ ನಿಯೋಜನೆ ಮಾಡಲಾಗಿತ್ತು.

ಇದನ್ನೂ ಓದಿ:  Lakhimpur Kheri ಲಖಿಂಪುರ್ ಖೇರಿ ಪ್ರಕರಣ ತನಿಖೆ ನಡೆಸುತ್ತಿದ್ದ ಎಸ್‌ಐಟಿ ಮುಖ್ಯಸ್ಥರಿಗೆ ಹೊಸ ಹುದ್ದೆ

Follow us on

Most Read Stories

Click on your DTH Provider to Add TV9 Kannada