Srinagar Terrorist attack ಶ್ರೀನಗರದಲ್ಲಿ ಪೊಲೀಸ್ ಬಸ್ ಮೇಲೆ ಉಗ್ರರ ದಾಳಿ: ಪೊಲೀಸರ ಸಾವಿನ ಸಂಖ್ಯೆ 3ಕ್ಕೆ ಏರಿಕೆ
ಜೆವಾನ್ ಬಳಿ ಪೊಲೀಸ್ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಪೊಲೀಸ್ ವಾಹನದ ಮೇಲೆ ಮೂವರು ಭಯೋತ್ಪಾದಕರು ಮನಬಂದಂತೆ ಗುಂಡು ಹಾರಿಸಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಪೊಲೀಸರು ತಮ್ಮ ಕರ್ತವ್ಯಗಳನ್ನು ಮುಗಿಸಿ ತಮ್ಮ ಕ್ಯಾಂಪಸ್‌ಗೆ ಹಿಂತಿರುಗುತ್ತಿದ್ದರು.
ಶ್ರೀನಗರ: ಶ್ರೀನಗರದಲ್ಲಿ ಪೊಲೀಸ್ ಬಸ್ ಮೇಲೆ (Srinagar attack)ಸೋಮವಾರ ನಡೆದ ದಾಳಿಯಲ್ಲಿ ಮೃತರ ಸಂಖ್ಯೆ ಮೂರಕ್ಕೆ ತಲುಪಿದೆ. ಗಾಯಗೊಂಡ ಒಬ್ಬ ಪೊಲೀಸ್ ಮಂಗಳವಾರ ಸಾವಿಗೀಡಾಗಿದ್ದಾರೆ. ಶ್ರೀನಗರದಲ್ಲಿರುವ ಸೇನೆಯ 92 ಬೇಸ್ ಆಸ್ಪತ್ರೆಯಲ್ಲಿ(Army’s 92 Base hospital) ಗಂದರ್‌ಬಾಲ್ ನಿವಾಸಿ ಕಾನ್‌ಸ್ಟೆಬಲ್ ರಮೀಜ್ ಅಹ್ಮದ್ ಮಂಗಳವಾರ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸೋಮವಾರ ಶ್ರೀನಗರದ ಅತ್ಯಂತ ಭದ್ರವಾದ ಪ್ರದೇಶದಲ್ಲಿ ಉಗ್ರರು ಪೊಲೀಸ್ ಬಸ್ ಮೇಲೆ ದಾಳಿ ಮಾಡಿದ ನಂತರ ಇಬ್ಬರು ಪೊಲೀಸರು – ಗುಲಾಮ್ ಹಸನ್ (ಸಹಾಯಕ ಸಬ್ ಇನ್ಸ್‌ಪೆಕ್ಟರ್) ಮತ್ತು ಕಾನ್‌ಸ್ಟೆಬಲ್ ಶಫೀಕ್ ಅಲಿ ಸಾವಿಗೀಡಾಗಿದ್ದು 14 ಪೊಲೀಸರು ಗಾಯಗೊಂಡಿದ್ದರು. ಜೈಶ್-ಎ-ಮೊಹಮ್ಮದ್ (JeM) ನ ಒಂದು ಶಾಖೆ ಈ ದಾಳಿ ನಡೆಸಿದೆ. ಶ್ರೀನಗರ ನಗರದ ಹೊರವಲಯದಲ್ಲಿರುವ ಜೆವಾನ್‌ನಲ್ಲಿ ಜಮ್ಮು ಮತ್ತು ಕಾಶ್ಮೀರ (Jammu and Kashmir) ಪೊಲೀಸ್ ಸಶಸ್ತ್ರ ವಿಭಾಗದ 9 ನೇ ಬೆಟಾಲಿಯನ್‌ನ ಪೊಲೀಸ್ ಬಸ್‌ನ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದು ಇಬ್ಬರು ವಿದೇಶಿ ಭಯೋತ್ಪಾದಕರು ಮತ್ತು ಒಬ್ಬ ಸ್ಥಳೀಯ ಭಯೋತ್ಪಾದಕರ ಯೋಜಿತ ದಾಳಿಯಾಗಿದೆ. ಈ ದಾಳಿಯಲ್ಲಿ ಮೂವರು ಪೊಲೀಸ್ ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದಾರೆ. ಪಲಾಯನಗೈದ ಒಬ್ಬ ಭಯೋತ್ಪಾದಕನನ್ನು ಹಿಡಿಯಲಾಗುವುದು ಮತ್ತು ಗುಂಪನ್ನು ಶೀಘ್ರದಲ್ಲೇ ನಿಗ್ರಹ ಮಾಡಲಾಗುವುದು ಎಂದು ಶ್ರೀನಗರ ಭಯೋತ್ಪಾದಕ ದಾಳಿಯ ಬಗ್ಗೆ ಕಾಶ್ಮೀರದ ಐಜಿಪಿ ಹೇಳಿದ್ದಾರೆ.
Srinagar | IGP Kashmir Vijay Kumar along with other police personnel pays tribute to constable Rameez Ahmad Baba who lost his life in yesterday’s terrorist attack pic.twitter.com/YZb95om67A
— ANI (@ANI) December 14, 2021
ಜೆವಾನ್ ಬಳಿ ಪೊಲೀಸ್ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಪೊಲೀಸ್ ವಾಹನದ ಮೇಲೆ ಮೂವರು ಭಯೋತ್ಪಾದಕರು ಮನಬಂದಂತೆ ಗುಂಡು ಹಾರಿಸಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಪೊಲೀಸರು ತಮ್ಮ ಕರ್ತವ್ಯಗಳನ್ನು ಮುಗಿಸಿ ತಮ್ಮ ಕ್ಯಾಂಪಸ್‌ಗೆ ಹಿಂತಿರುಗುತ್ತಿದ್ದರು. ಪ್ರತಿದಾಳಿ ನಡೆಸಲಾಯಿತಾದರೂ ಕತ್ತಲೆಯ ಲಾಭವನ್ನು ಪಡೆದುಕೊಂಡು, ಭಯೋತ್ಪಾದಕರು ಸ್ಥಳದಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು ಎಂದು ಪೊಲೀಸ್ ತಮ್ಮ ಹೇಳಿಕೆಯಲ್ಲಿ ತಿಳಿಸಿದೆ.
ಪೊಲೀಸರ ಪ್ರತಿ ದಾಳಿಯಲ್ಲಿ ಓರ್ವ ಉಗ್ರ ಗಾಯಗೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಜೈಷೆ ಮೊಹಮ್ಮದ್ನ ಉಪಶಾಖೆಯಾದ ಕಾಶ್ಮೀರ್ ಟೈಗರ್ಸ್ ಈ ದಾಳಿಯನ್ನು ನಡೆಸಿದ್ದಾರೆ ಎಂದು ನಂಬಲರ್ಹ ಮೂಲಗಳು ಬಹಿರಂಗಪಡಿಸಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಜೆವಾನ್ ಜಮ್ಮು ಮತ್ತು ಕಾಶ್ಮೀರ ಪೋಲೀಸರ ಸಶಸ್ತ್ರ ವಿಂಗ್ ಸಂಕೀರ್ಣವನ್ನು ಹೊಂದಿದ್ದು ಹಲವಾರು ಸಶಸ್ತ್ರ ಪೊಲೀಸ್ ಬೆಟಾಲಿಯನ್‌ಗಳಿಗೆ ನೆಲೆಯಾಗಿದೆ. ಇದು ಸಿಆರ್‌ಪಿಎಫ್‌ನ ಸೆಕ್ಟರ್ ಹೆಡ್‌ಕ್ವಾರ್ಟರ್ ಮತ್ತು ಐಟಿಬಿಪಿಯ ಸ್ಟೇಷನ್ ಹೆಡ್‌ಕ್ವಾರ್ಟರ್‌ಗಳನ್ನು ಸಹ ಹೊಂದಿದೆ.
ಆಗಸ್ಟ್ 2019 ರಲ್ಲಿ ಜಮ್ಮು ಮತ್ತು ಕಾಶ್ಮೀರ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ನಂತರ ಮತ್ತು ಆ ವರ್ಷದ ಫೆಬ್ರವರಿಯಲ್ಲಿ 40 ಸಿಆರ್‌ಪಿಎಫ್ ಸಿಬ್ಬಂದಿಯನ್ನು ಹತ್ಯೆ ಮಾಡಿದ ಲೆಥ್‌ಪೋರಾ (ಪುಲ್ವಾಮಾ) ಕಾರ್ ಬಾಂಬ್ ದಾಳಿಯ ನಂತರ ಕಣಿವೆಯಲ್ಲಿ ಭದ್ರತಾ ಪಡೆಗಳ ಮೇಲೆ ಇದು ಮೊದಲ ಪ್ರಮುಖ ದಾಳಿಯಾಗಿದೆ.
ಇದನ್ನೂ ಓದಿ: Srinagar terror attack ಶ್ರೀನಗರದ ಹೊರವಲಯದಲ್ಲಿ ಪೊಲೀಸ್ ಬಸ್ ಮೇಲೆ ಉಗ್ರರ ಗುಂಡಿನ ದಾಳಿ; 2 ಪೊಲೀಸರು ಸಾವು, 12 ಮಂದಿಗೆ ಗಾಯ