Delhi Air Pollution: 328ಕ್ಕೆ ತಲುಪಿದ ವಾಯುಗುಣಮಟ್ಟ ಸೂಚ್ಯಂಕ; ದೆಹಲಿ ಮಾಲಿನ್ಯ ಸ್ಥಿತಿ ಅತ್ಯಂತ ಕಳಪೆ ಮಟ್ಟಕ್ಕೆ
ದೆಹಲಿಯಲ್ಲಿ ಸುಮಾರು ಒಂದು ತಿಂಗಳಿಂದಲೂ ವಾಯು ಮಾಲಿನ್ಯದ ಸಮಸ್ಯೆ ಎದುರಾಗಿದೆ. ಸುಪ್ರೀಂಕೋರ್ಟ್ ಕೂಡ ವಿಚಾರಣೆ ನಡೆಸುತ್ತಿದ್ದು, ಕೇಂದ್ರ ಮತ್ತು ದೆಹಲಿ ಸರ್ಕಾರಗಳನ್ನು ಹಲವು ಬಾರಿ ತರಾಟೆಗೆ ತೆಗೆದುಕೊಂಡಿದೆ.
ದೆಹಲಿಯಲ್ಲಿ ವಾಯುಗುಣಮಟ್ಟ ದಿನದಿಂದ ದಿನಕ್ಕೆ ಹಾಳಾಗುತ್ತಲೇ ಇದೆ. ದೆಹಲಿ ವಾತಾವರಣ ಸ್ವಚ್ಛವಾಗಲಿ, ವಾಯುಗುಣಮಟ್ಟ ಸುಧಾರಣೆಯಾಗಲಿ ಎಂದು ಕಾಯುತ್ತಿರುವ ಅಲ್ಲಿನ ಜನರಿಗೆ ಇಂದು ಬೆಳಗ್ಗೆ ಮತ್ತೆ ನಿರಾಸೆಯೇ ಕಾದಿತ್ತು. ಬೆಳ್ಳಂಬೆಳಗ್ಗೆಯೇ ದೆಹಲಿಯ ವಾಯು ಗುಣಮಟ್ಟ ಸೂಚ್ಯಂಕ (AQI) ಅತ್ಯಂತ ಕಳಪೆ ಹಂತಕ್ಕೆ ತಲುಪಿದೆ. ಸೋಮವಾರ ಸಂಜೆ ಹೊತ್ತಿಗೆ ಕಳಪೆ ಮಟ್ಟದ ಗಡಿಯಲ್ಲಿತ್ತು. ಅದು ಇಂದು ಮುಂಜಾನೆ ಹೊತ್ತಿಗೆ ಮತ್ತಷ್ಟು ಕೆಟ್ಟದಾಗಿದೆ. ಅಂದರೆ ಇಂದು ಮುಂಜಾನೆ ಹೊತ್ತಿಗೆ ದೆಹಲಿಯ ಎಕ್ಯೂಐ ಮಟ್ಟ 328ಕ್ಕೆ ತಲುಪಿತ್ತು ಎಂದು ವಾಯು ಗುಣಮಟ್ಟ ಮತ್ತು ಹವಾಮಾನ ಮುನ್ಸೂಚನೆ ಹಾಗೂ ಸಂಶೋಧನಾ ವ್ಯವಸ್ಥೆ ಮಾಹಿತಿ ನೀಡಿದೆ. ಸೋಮವಾರ ಬೆಳಗ್ಗೆ ಹೊತ್ತಿಗೆ ಎಕ್ಯೂಐ 256ರಷ್ಟಿತ್ತು.
ದೆಹಲಿಯಲ್ಲಿ ಸುಮಾರು ಒಂದು ತಿಂಗಳಿಂದಲೂ ವಾಯು ಮಾಲಿನ್ಯದ ಸಮಸ್ಯೆ ಎದುರಾಗಿದೆ. ಸುಪ್ರೀಂಕೋರ್ಟ್ ಕೂಡ ವಿಚಾರಣೆ ನಡೆಸುತ್ತಿದ್ದು, ಕೇಂದ್ರ ಮತ್ತು ದೆಹಲಿ ಸರ್ಕಾರಗಳನ್ನು ಹಲವು ಬಾರಿ ತರಾಟೆಗೆ ತೆಗೆದುಕೊಂಡಿದೆ. ಈಗ ದೆಹಲಿ ಸುತ್ತಲೂ ರೈತರು ಬೆಳೆ ಕಟಾವು ಮಾಡಿ, ಕಳೆ ಸುಡುವ ಪ್ರಕ್ರಿಯೆ ನಡೆಸುತ್ತಿರುವುದರಿಂದ ವಾಯು ಮಾಲಿನ್ಯ ಹೆಚ್ಚುತ್ತಿದೆ ಎಂದು ದೆಹಲಿ ಸರ್ಕಾರ ನೀಡಿದ್ದ ಕಾರಣಕ್ಕೆ ಸುಪ್ರೀಂಕೋರ್ಟ್ ತೀವ್ರ ಅಸಮಾಧಾನ ಹೊರಹಾಕಿತ್ತು. ಮಾಲಿನ್ಯಕ್ಕೆ ಕೇವಲ ರೈತರನ್ನೇಕೆ ಹೊಣೆ ಮಾಡುತ್ತೀರಿ. ವಾಹನ, ಕಾರ್ಖಾನೆಗಳಿಂದ ಹೊರಹೊಮ್ಮುವ ಮಲಿನ ಹೊಗೆ ನಿಯಂತ್ರಣಕ್ಕೆ ನೀವೇನು ಕ್ರಮ ಕೈಗೊಂಡಿದ್ದೀರಿ ಎಂದು ಪ್ರಶ್ನೆ ಮಾಡಿತ್ತು. 15 ದಿನಗಳ ಹಿಂದೆ ದೆಹಲಿಯ ವಾಯು ಗುಣಮಟ್ಟ ಅತ್ಯಂತ ಗಂಭೀರ ಪರಿಸ್ಥಿತಿ ತಲುಪಿತ್ತು. ಅದಾದ ಮೇಲೆ ದೆಹಲಿಯಲ್ಲಿ, ವರ್ಕ್ ಫ್ರಂ ಹೋಂ, ನಗರದೊಳಗೆ ಟ್ರಕ್ಗಳ ನಿಷೇಧದಂತ ಹಲವು ಕ್ರಮಗಳನ್ನು ಕೈಗೊಳ್ಳಲಾಯಿತು.
ದೆಹಲಿಯಲ್ಲಿ ಸೋಮವಾರ ಮತ್ತೆ ವಾಯುಮಾಲಿನ್ಯ ಕಳಪೆ ಹಂತಕ್ಕೆ ಹೋಗುತ್ತಿದ್ದಂತೆ ಪ್ರತಿಕ್ರಿಯೆ ನೀಡಿದ ಅರಣ್ಯ ಸಚಿವ ಗೋಪಾಲ ರಾಯ್, ಮತ್ತೆ ವಾಯುಮಾಲಿನ್ಯ ಹೆಚ್ಚುತ್ತಿರುವ ಕಾರಣ, ಎಲೆಕ್ಟ್ರಿಕ್ ಟ್ರಕ್ಗಳ ಪ್ರವೇಶ, ಸಂಕುಚಿತ ನೈಸರ್ಗಿಕ ಅನಿಲ ತರುವ ಟ್ರಕ್ಗಳ ಸಂಚಾರ ಮತ್ತು ಇತರ ಅತ್ಯಗತ್ಯ ಸೇವೆ ನೀಡುವ ಟ್ರಕ್ಗಳ ಸಂಚಾರ ಹೊರತು ಪಡಿಸಿ ಉಳಿದೆಲ್ಲ ರೀತಿಯ ಲಾರಿಗಳು ನಗರಕ್ಕೆ ಪ್ರವೇಶಿಸುವುದನ್ನು ಮತ್ತು ನಿರ್ಮಾಣ ಕಾಮಗಾರಿಗಳ ಮೇಲಿನ ನಿಷೇಧ ಮುಂದುವರಿಸಲಾಗುವುದು. ಹಾಗೆ, ನಿಷೇಧದ ಬಗ್ಗೆ ಡಿ.16ರಂದು ಮತ್ತೊಮ್ಮೆ ಪರಿಶೀಲನಾ ಸಭೆ ನಡೆಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
(ವಾಯುಗುಣಮಟ್ಟ ಸೂಚ್ಯಂಕ 51 ರಿಂದ 100ರವರೆಗೆ ಇದ್ದರೆ ತೃಪ್ತಿದಾಯಕ, 101-200ರವರೆಗೆ ಮಧ್ಯಮ, 201ರಿಂದ 300ರವರೆಗೆ ಇದ್ದರೆ ಕಳಪೆ ಮತ್ತು 300-400ರವರೆಗೆ ಇದ್ದರೆ ಅತ್ಯಂತ ಕಳಪೆ ಹಾಗೂ 401ರಿಂದ 500ರವರೆಗೆ ಇದ್ದರೆ ಅಪಾಯಕಾರಿ ಎಂದು ವಿಭಜಿಸಲಾಗಿದೆ.)
ಇದನ್ನೂ ಓದಿ: ವಿಭಿನ್ನವಾಗಿ ಕಾಣಿಸಿಕೊಳ್ಳಲು 40 ಲಕ್ಷ ರೂ.ಗಳನ್ನು ವ್ಯಯಿಸಿದ 22 ವರ್ಷದ ಟಿಕ್ಟಾಕ್ ಸ್ಟಾರ್