Omicron Update: ದೆಹಲಿಯಲ್ಲಿ 4, ರಾಜಸ್ಥಾನದಲ್ಲಿ 4 ಒಮಿಕ್ರಾನ್​ ಕೇಸ್​ ಪತ್ತೆ; ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 49ಕ್ಕೆ ಏರಿಕೆ

ಸದ್ಯ ದೇಶದಲ್ಲಿ ಮಹಾರಾಷ್ಟ್ರದಲ್ಲಿ 20, ರಾಜಸ್ಥಾನದಲ್ಲಿ 13, ಕರ್ನಾಟಕದಲ್ಲಿ 3, ಗುಜರಾತ್​ನಲ್ಲಿ 4, ದೆಹಲಿಯಲ್ಲಿ 6, ಚಂಡಿಗಢ್​​, ಕೇರಳ, ಆಂಧ್ರಪ್ರದೇಶಗಳಲ್ಲಿ ತಲಾ ಒಂದು ಒಮಿಕ್ರಾನ್​ ಪ್ರಕರಣಗಳು ಪತ್ತೆಯಾಗಿವೆ.

Omicron Update: ದೆಹಲಿಯಲ್ಲಿ 4, ರಾಜಸ್ಥಾನದಲ್ಲಿ 4 ಒಮಿಕ್ರಾನ್​ ಕೇಸ್​ ಪತ್ತೆ; ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 49ಕ್ಕೆ ಏರಿಕೆ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Lakshmi Hegde

Updated on:Dec 14, 2021 | 12:52 PM

ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಮತ್ತೆ 4 ಹೊಸ ಒಮಿಕ್ರಾನ್​ ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ದೆಹಲಿಯಲ್ಲಿ ಒಮಿಕ್ರಾನ್​ ಸೋಂಕಿತರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ. ಹಾಗೇ, ರಾಜಸ್ಥಾನದಲ್ಲಿ ಕೂಡ 4 ಕೇಸ್​ ದಾಖಲಾಗಿದ್ದು, ಅಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 13ಕ್ಕೆ ಏರಿದೆ. ಈ ಮೂಲಕ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 49ಕ್ಕೆ ತಲುಪಿದೆ. ನಿನ್ನೆ ಗುಜರಾತ್​​ನಲ್ಲಿ ವ್ಯಕ್ತಿಯೊಬ್ಬರಲ್ಲಿ ಒಮಿಕ್ರಾನ್​ ದೃಢಪಟ್ಟಿತ್ತು. ಅವರು ದಕ್ಷಿಣ ಆಫ್ರಿಕಾದಿಂದ ಆಗಮಿಸಿದ್ದವರಾಗಿದ್ದು, ಕೊವಿಡ್​ 19 ಪಾಸಿಟಿವ್​ ಬಂದಿತ್ತು. ಮಾದರಿಯನ್ನು ಹೆಚ್ಚಿನ ತಪಾಸಣೆಗೆ ಒಳಪಡಿಸಿದಾಗ ಅವರಲ್ಲಿ ಒಮಿಕ್ರಾನ್​ ಇರುವುದು ದೃಢಪಟ್ಟಿತ್ತು. ಹಾಗೇ, ಮಹಾರಾಷ್ಟ್ರದಲ್ಲಿ ಕೂಡ ಇಬ್ಬರು ದುಬೈನಿಂದ ಆಗಮಿಸಿದವರಲ್ಲಿ ಒಮಿಕ್ರಾನ್​ ಇರುವುದು ಗೊತ್ತಾಗಿತ್ತು. ಒಟ್ಟಾರೆ ನಿನ್ನೆ ದೇಶದಲ್ಲಿ ಒಮಿಕ್ರಾನ್​ ಸೋಂಕಿತರ ಸಂಖ್ಯೆ 41ಕ್ಕೆ ತಲುಪಿತ್ತು. 

ಇಂದು ದೆಹಲಿಯಲ್ಲಿ ಪತ್ತೆಯಾದ ನಾಲ್ವರಲ್ಲಿ ಎಲ್ಲರಿಗೂ ಸೌಮ್ಯ ಲಕ್ಷಣವಿದೆ. ದೆಹಲಿಯಲ್ಲಿರುವ ಒಟ್ಟಾರೆ 6 ಸೋಂಕಿತರಲ್ಲಿ ಒಬ್ಬರು ಚೇತರಿಸಿಕೊಳ್ಳುತ್ತಿದ್ದು, ಆಸ್ಪತ್ರೆಯಿಂದ ಡಿಸ್​ಚಾರ್ಜ್​ ಆಗಿದ್ದಾರೆ. ಹಾಗಿದ್ದಾಗ್ಯೂ ಸದ್ಯ ದೆಹಲಿಯ ಎಲ್​ಎನ್​ಜೆಪಿ ಆಸ್ಪತ್ರೆಯಲ್ಲಿ 35 ಕೊವಿಡ್​ ಸೋಂಕಿತರು ಮತ್ತು 3 ಒಮಿಕ್ರಾನ್​ ಶಂಕಿತರು ಅಡ್ಮಿಟ್ ಆಗಿದ್ದಾರ ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್​ ತಿಳಿಸಿದ್ದಾರೆ. ಹಾಗೇ, ರಾಜಸ್ಥಾನದಲ್ಲಿ ಇಂದು ಪತ್ತೆಯಾದ ಒಮಿಕ್ರಾನ್​ ಸೋಂಕಿತರ ಆರೋಗ್ಯವೂ ಸ್ಥಿರವಾಗಿದೆ ಎಂದು ಅಲ್ಲಿನ ಆರೋಗ್ಯ ಸಚಿವ ಪ್ರಸಾದಿ ಲಾಲ್​ ಮೀನಾ ಹೇಳಿದ್ದಾರೆ. ದೆಹಲಿಯಲ್ಲಿ ಮೊದಲ ಒಮಿಕ್ರಾನ್​ ಸೋಂಕಿತ 37ವರ್ಷದ ವ್ಯಕ್ತಿ. ಇವರೀಗ ಆಸ್ಪತ್ರೆಯಿಂದ ಡಿಸ್​ಚಾರ್ಜ್ ಆಗಿದ್ದಾರೆ. ಇವರು ರಾಂಚಿಯ ನಿವಾಸಿಯಾಗಿದ್ದು ಟಾಂಜಾನಿಯಾದಿಂದ ದೆಹಲಿಗೆ ದೋಹಾ ಮಾರ್ಗವಾಗಿ, ಡಿಸೆಂಬರ್ 2ರಂದು ಕತಾರ್​ ಏರ್​ವೇ ವಿಮಾನದಲ್ಲಿ ಬಂದಿದ್ದರು.

ಸದ್ಯ ದೇಶದಲ್ಲಿ ಮಹಾರಾಷ್ಟ್ರದಲ್ಲಿ 20, ರಾಜಸ್ಥಾನದಲ್ಲಿ 13, ಕರ್ನಾಟಕದಲ್ಲಿ 3, ಗುಜರಾತ್​ನಲ್ಲಿ 4, ದೆಹಲಿಯಲ್ಲಿ 6, ಚಂಡಿಗಢ್​​, ಕೇರಳ, ಆಂಧ್ರಪ್ರದೇಶಗಳಲ್ಲಿ ತಲಾ ಒಂದು ಒಮಿಕ್ರಾನ್​ ಪ್ರಕರಣಗಳು ಪತ್ತೆಯಾಗಿವೆ. ಈ ಎಲ್ಲ ಸೋಂಕಿತರನ್ನೂ ಆಸ್ಪತ್ರೆಗಳಲ್ಲಿ ಪ್ರತ್ಯೇಕವಾಗಿ ಅಡ್ಮಿಟ್ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಒಮಿಕ್ರಾನ್​ ಮೊದಲು ಪತ್ತೆಯಾಗಿದ್ದು ಕರ್ನಾಟದಲ್ಲಿ ಆಗಿದ್ದರೂ, ಸದ್ಯ ಮಹಾರಾಷ್ಟ್ರದಲ್ಲಿ ಅತ್ಯಂತ ಹೆಚ್ಚು ಪ್ರಕರಣಗಳಿವೆ.  ಒಮಿಕ್ರಾನ್ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಪ್ರಸರಣಗೊಳ್ಳುತ್ತಿರುವ ತಳಿಯಾಗಿದ್ದು, ಸಹಜವಾಗಿಯೇ ಆತಂಕ ಮೂಡಿಸಿದೆ. ಈ ಮಧ್ಯೆ ಒಮಿಕ್ರಾನ್​ ನಿರ್ದಿಷ್ಟ ತಪಾಸಣೆಗಾಗಿ ದೆಹಲಿ ಐಐಟಿ ಒಂದು ವಿಧಾನವನ್ನೂ ಅಭಿವೃದ್ಧಿಪಡಿಸಿದೆ.

ಇದನ್ನೂ ಓದಿ: Ravindra Jadeja: ಭರ್ಜರಿ ಫಾರ್ಮ್​ನಲ್ಲಿರುವಾಗಲೇ ನಿವೃತ್ತಿ ನೀಡಲು ಮುಂದಾದ ಟೀಮ್ ಇಂಡಿಯಾದ ಸ್ಟಾರ್ ಆಟಗಾರ

Published On - 12:50 pm, Tue, 14 December 21