Video: ವಾರಾಣಸಿಯಲ್ಲಿ ಬಿಜೆಪಿ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸಭೆ; ಮಧ್ಯಾಹ್ನ ಸಮಾವೇಶದಲ್ಲಿ ಭಾಗಿ
ಉತ್ತರಪ್ರದೇಶದಲ್ಲಿ 2022ರ ಪ್ರಾರಂಭದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಮುಂದಿನ ಅವಧಿಗೂ ಅಧಿಕಾರ ಉಳಿಸಿಕೊಳ್ಳಲು ಅಲ್ಲಿ ಬಿಜೆಪಿ ಈಗಾಗಲೇ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ.
ವಾರಾಣಸಿ: ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi)ಯವರು ಕಳೆದ ಎರಡು ದಿನಗಳಿಂದ ವಾರಾಣಸಿ ಪ್ರವಾಸದಲ್ಲಿದ್ದಾರೆ. ನಿನ್ನೆ ಮೊದಲ ದಿನ ಅವರು ಕಾಶಿ ವಿಶ್ವನಾಥ ಕಾರಿಡಾರ್ ಮೊದಲ ಹಂತವನ್ನು ಉದ್ಘಾಟನೆ ಮಾಡಿದ್ದಾರೆ. ನಂತರ ಮಧ್ಯರಾತ್ರಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಟ್ಟಿಗೆ ಸೇರಿ ಬನಾರಸ್ ರೈಲ್ವೆ ನಿಲ್ದಾಣವನ್ನು ಪರಿಶೀಲನೆ ನಡೆಸಿದರು. ಹಾಗೇ, ಇಂದು ಬೆಳಗ್ಗೆ ವಾರಾಣಸಿಯಲ್ಲಿ, ಭಾರತೀಯ ಜನತಾ ಪಕ್ಷದ ಮುಖ್ಯಮಂತ್ರಿಗಳು (ವಿವಿಧ ರಾಜ್ಯಗಳ) ಮತ್ತು ಜಿಲ್ಲೆ ಮತ್ತು ಮಂಡಲ್ ಅಧ್ಯಕ್ಷರ ಜತೆ ಸಭೆ ನಡೆಸಿದ್ದಾರೆ. ಇಂದು ಪ್ರಧಾನಿ ನರೇಂದ್ರ ಮೋದಿಯವರು ಬಿಜೆಪಿ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸುತ್ತಾರೆ ಎಂಬುದನ್ನು ನಿನ್ನೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದರು. ಇಂದಿನ ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಕೂಡ ಭಾಗವಹಿಸಿದ್ದರು.
#WATCH | PM Narendra Modi chairs a meeting of the Chief Ministers of BJP-ruled states in Varanasi, Uttar Pradesh pic.twitter.com/kQ1qjVtbzk
— ANI UP (@ANINewsUP) December 14, 2021
ಉತ್ತರಪ್ರದೇಶದಲ್ಲಿ 2022ರ ಪ್ರಾರಂಭದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಮುಂದಿನ ಅವಧಿಗೂ ಅಧಿಕಾರ ಉಳಿಸಿಕೊಳ್ಳಲು ಅಲ್ಲಿ ಬಿಜೆಪಿ ಈಗಾಗಲೇ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ. ಅದಕ್ಕೆ ಸಾಕ್ಷಿಯೆಂಬಂತೆ ಪ್ರಧಾನಮಂತ್ರಿ ಮೋದಿಯವರು ಪದೇಪದೆ ಅಲ್ಲಿಗೆ ತೆರಳಿ ಸಾಲುಸಾಲು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡುತ್ತಿದ್ದಾರೆ. ಇತ್ತೀಚೆಗೆ ನೊಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶಂಕುಸ್ಥಾಪನೆ ಮಾಡಿದ್ದ ಅವರು, ಬಳಿಕ ಸರಯೂ ರಾಷ್ಟ್ರೀಯ ನಾಲೆ ಯೋಜನೆಗೆ ಉದ್ಘಾಟನೆ ಮಾಡಿದ್ದಾರೆ. ನಿನ್ನೆ ಅವರ ಕನಸಿನ ಯೋಜನೆಯಾದ ಕಾಶಿ ವಿಶ್ವನಾಥ ಕಾರಿಡಾರ್ನ್ನು ಲೋಕಾರ್ಪಣೆ ಮಾಡಿದ್ದಾರೆ. ಉತ್ತರ ಪ್ರದೇಶ ಚುನಾವಣೆ ಪೂರ್ವ ಮಾಡಿದ ಕೆಲವು ಸಮೀಕ್ಷೆಗಳು, ಅಲ್ಲಿ ಬಿಜೆಪಿ ಮತ್ತು ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷಗಳ ನಡುವೆ ನೇರ ಹಣಾಹಣಿ ನಡೆಯಲಿದೆ ಎಂದು ವರದಿ ನೀಡಿವೆ.
ಇಂದು ಮಧ್ಯಾಹ್ನ 3ಗಂಟೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಉತ್ತರಪ್ರದೇಶ, ಉತ್ತರಾಖಂಡ, ಗೋವಾ, ಅಸ್ಸಾಂ, ಅರುಣಾಚಲಪ್ರದೇಶ, ಗುಜರಾತ್, ಹರ್ಯಾಣ, ಹಿಮಾಚಲ ಪ್ರದೇಶ, ಕರ್ನಾಟಕ, ಮಧ್ಯಪ್ರದೇಶ, ಮಣಿಪುರ, ತ್ರಿಪುರದ ಮುಖ್ಯಮಂತ್ರಿಗಳ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಸಮಾವೇಶದಲ್ಲಿ ಬಿಹಾರ ಮತ್ತು ನಾಗಾಲ್ಯಾಂಡ್ ರಾಜ್ಯಗಳ ಉಪಮುಖ್ಯಮಂತ್ರಿಗಳೂ ಇರುವರು. ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈಗಾಗಲೇ ತಮ್ಮ ಪತ್ನಿಯೊಂದಿಗೆ ಕಾಶಿಗೆ ತೆರಳಿದ್ದಾರೆ.
ಇದನ್ನೂ ಓದಿ: WPI Inflation: ಸಗಟು ದರ ಸೂಚ್ಯಂಕ ಹಣದುಬ್ಬರ ನವೆಂಬರ್ ತಿಂಗಳಿನಲ್ಲಿ 12 ವರ್ಷಗಳ ಗರಿಷ್ಠ ಮಟ್ಟಕ್ಕೆ ಏರಿ ಶೇ 14.23ಕ್ಕೆ