ಲಕ್ನೋ ವಿಮಾನ ನಿಲ್ದಾಣದಲ್ಲಿ ತಡೆದ ಪೊಲೀಸರ ವಿರುದ್ಧ ಛತ್ತೀಸ್​ಗಢದ ಸಿಎಂ ಭೂಪೇಶ್ ಬಘೇಲ್ ಧರಣಿ

| Updated By: ಸುಷ್ಮಾ ಚಕ್ರೆ

Updated on: Oct 05, 2021 | 7:02 PM

Bhupesh Baghel: ಛತ್ತೀಸ್​ಗಢದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರನ್ನು ಲಕ್ನೋ ವಿಮಾನ ನಿಲ್ದಾಣದಲ್ಲಿ ಪೊಲೀಸರು ತಡೆದಿದ್ದಾರೆ. ಯಾವ ಆದೇಶವೂ ಇಲ್ಲದೆ ಈ ರೀತಿ ಅಡ್ಡಗಟ್ಟಿರುವುದನ್ನು ವಿರೋಧಿಸಿ ವಿಮಾನ ನಿಲ್ದಾಣದ ನೆಲದ ಮೇಲೇ ಕುಳಿತು ಸಿಎಂ ಭೂಪೇಶ್ ಬಘೇಲ್ ಧರಣಿ ನಡೆಸಿದ್ದಾರೆ.

ಲಕ್ನೋ ವಿಮಾನ ನಿಲ್ದಾಣದಲ್ಲಿ ತಡೆದ ಪೊಲೀಸರ ವಿರುದ್ಧ ಛತ್ತೀಸ್​ಗಢದ ಸಿಎಂ ಭೂಪೇಶ್ ಬಘೇಲ್ ಧರಣಿ
ಛತ್ತೀಸ್​ಗಢದ ಸಿಎಂ ಭೂಪೇಶ್ ಬಘೇಲ್
Follow us on

ಲಕ್ನೋ: ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ (Lakhimpur Kheri) ನಡೆದ ಹಿಂಸಾಚಾರದಲ್ಲಿ 8 ಜನ ಸಾವನ್ನಪ್ಪಿದ ಬಳಿಕ ಹಿಂಸಾಚಾರ ಭುಗಿಲೆದ್ದಿತ್ತು. ಈ ಘಟನೆಯನ್ನು ವಿರೋಧಿಸಿದ ಪ್ರಿಯಾಂಕಾ ಗಾಂಧಿ, ಅಖಿಲೇಶ್ ಯಾದವ್ ಅವರನ್ನು ಬಂಧಿಸಲಾಗಿತ್ತು. ಪ್ರಿಯಾಂಕಾ ಗಾಂಧಿ (Priyanka Gandhi) ಅವರನ್ನು ಸೀತಾಪುರ ಪೊಲೀಸರು ಬಂಧಿಸಿರುವ ಹಿನ್ನೆಲೆ ಅವರನ್ನು ಭೇಟಿಯಾಗಲು ತೆರಳುತ್ತಿದ್ದ ಛತ್ತೀಸ್​ಗಢದ ಮುಖ್ಯಮಂತ್ರಿ ಭೂಪೇಶ್ ಬಘೇಲ್ (Bhupesh Baghel) ಅವರನ್ನು ಲಕ್ನೋ ವಿಮಾನ ನಿಲ್ದಾಣದಲ್ಲಿ ಪೊಲೀಸರು ತಡೆದಿದ್ದಾರೆ. ಯಾವ ಆದೇಶವೂ ಇಲ್ಲದೆ ಈ ರೀತಿ ಅಡ್ಡಗಟ್ಟಿರುವುದನ್ನು ವಿರೋಧಿಸಿ ವಿಮಾನ ನಿಲ್ದಾಣದ ನೆಲದ ಮೇಲೇ ಕುಳಿತು ಸಿಎಂ ಭೂಪೇಶ್ ಬಘೇಲ್ ಧರಣಿ ನಡೆಸಿದ್ದಾರೆ.

ಪ್ರಿಯಾಂಕಾ ಗಾಂಧಿ ತಮ್ಮನ್ನು ಕಾನೂನುಬಾಹಿರವಾಗಿ ಬಂಧಿಸಲಾಗಿದೆ ಎಂದು ವಿಡಿಯೋದಲ್ಲಿ ಹೇಳಿದ್ದರು. ನಿನ್ನೆಯಿಂದ ಅವರನ್ನು ಪೊಲೀಸ್ ವಶದಲ್ಲಿ ಇರಿಸಿಕೊಳ್ಳಲಾಗಿತ್ತು. ಇಂದು ಅವರನ್ನು ಬಂಧಿಸಲಾಗಿದೆ. ಅವರನ್ನು ನೋಡಲೆಂದು ನಾನು ಹೋಗುವಾಗ ವಿಮಾನ ನಿಲ್ದಾಣದಲ್ಲೇ ನನ್ನನ್ನು ತಡೆಯಲಾಗಿದೆ. ಯಾವುದೇ ಆದೇಶವೂ ಇಲ್ಲದೆ ನನ್ನನ್ನು ತಡೆಯಲಾಗಿದೆ ಎಂದು ಸಿಎಂ ಭೂಪೇಶ್ ಬಘೇಲ್ ತಾವು ಏರ್​ಪೋರ್ಟ್​ನಲ್ಲಿ ಕೆಳಗೆ ಕುಳಿತಿರುವ ಫೋಟೋ ಹಾಗೂ ಸುತ್ತಲೂ ಪೊಲೀಸ್ ಸಿಬ್ಬಂದಿ ನಿಂತಿರುವ ಫೋಟೋವನ್ನು ಟ್ವಿಟ್ಟರ್​ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಲಖಿಂಪುರ ಖೇರಿಯ ಹಿಂಸಾಚಾರದ ಬಳಿಕ ಅಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಇಲ್ಲಿ ಮೃತಪಟ್ಟವರ ಕುಟುಂಬಗಳನ್ನು ಭೇಟಿಯಾಗಲು ಬಂದಿದ್ದ ಪ್ರಿಯಾಂಕಾ ಗಾಂಧಿ ಸೇರಿದಂತೆ ಹಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ತಂದೆಯ ಊರು ಲಖೀಂಪುರ ಖೇರಿಯ ಟಿಕೂನಿಯಾ ಎಂಬಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಅವರು ಮುಖ್ಯ ಅತಿಥಿಯಾಗಿ ಆಗಮಿಸಬೇಕಿತ್ತು. ಆದರೆ ಕೇಶವ ಪ್ರಸಾದ್​ ಇದ್ದ ಕಾರನ್ನು ಕೃಷಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರು ತಡೆದಿದ್ದರು. ಈ ವೇಳೆ ಎರಡು ಕಾರು ಅವರ ಮೇಲೆ ಹರಿದು ಇಬ್ಬರು ರೈತರು ಮೃತಪಟ್ಟಿದ್ದರು. ಅದರಲ್ಲಿ ಒಂದು ಕಾರು ಚಲಾಯಿಸಿದ್ದ ಆರೋಪದಲ್ಲಿ ಅಜಯ್ ಮಿಶ್ರಾ ಅವರ ಮಗ ಆಶಿಶ್ ಎಂದು ಎಫ್​ಐಆರ್ ದಾಖಲಿಸಲಾಗಿತ್ತು.

ಇಬ್ಬರು ರೈತರು ಸಾವನ್ನಪ್ಪಿದ ನಂತರ ಹಿಂಸಾಚಾರ ಹೆಚ್ಚಾಗಿ ನಿಷೇಧಾಜ್ಞೆ ಘೋಷಿಸಲಾಗಿತ್ತು. ಯೋಗಿ ಆದಿತ್ಯನಾಥ್ ಅವರ ಸರ್ಕಾರ ಮೃತರ ಕುಟುಂಬಗಳಿಗೆ 45 ಲಕ್ಷ ರೂ. ಪರಿಹಾರ ಹಾಗೂ ಉದ್ಯೋಗ ನೀಡುವ ಭರವಸೆ ನೀಡಿದೆ. ಹಾಗೇ ಗಾಯಾಳುಗಳಿಗೆ 10 ಲಕ್ಷ ರೂ. ನೀಡುವುದಾಗಿ ಭರವಸೆ ನೀಡಿದೆ.

ಹಿಂಸಾಚಾರ ನಡೆದ ಲಖಿಂಪುರ ಖೇರಿಗೆ ನಿನ್ನೆ ಭೇಟಿ ನೀಡಲು ಮುಂದಾಗಿದ್ದ ಕಾಂಗ್ರೆಸ್​ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಸೀತಾಪುರದ ಪೊಲೀಸರು ವಶಕ್ಕೆ ಪಡೆದು, ಗೆಸ್ಟ್​ಹೌಸ್​​ನಲ್ಲಿ ಇರಿಸಿದ್ದರು. ಹೀಗೆ ವಶಕ್ಕೆ ಪಡೆದು 24 ಗಂಟೆ ಬಳಿಕ ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿ ಒಟ್ಟು 10 ಮಂದಿ ಕಾಂಗ್ರೆಸ್​ ನಾಯಕರನ್ನು ಇಂದು ಸೀತಾಪುರ ಪೊಲೀಸರು ಅಧಿಕೃತವಾಗಿ ಬಂಧಿಸಿದ್ದಾರೆ.

ಇದನ್ನೂ ಓದಿ: Lakhimpur Kheri violence: ಪ್ರಿಯಾಂಕಾ ಗಾಂಧಿ ಸೇರಿ 11 ಕಾಂಗ್ರೆಸ್​ ನಾಯಕರ ಅಧಿಕೃತ ಬಂಧನ; ನವಜೋತ್​ ಸಿಂಗ್​ ಸಿಧುರಿಂದ ಎಚ್ಚರಿಕೆ

Lakhimpur Kheri Violence: ಲಖಿಂಪುರ ಖೇರಿ ಹತ್ಯೆ ಸ್ಥಳದಲ್ಲಿ ನನ್ನ ಮಗ ಇದ್ದುದು ನಿಜವಾದರೆ ರಾಜೀನಾಮೆ ನೀಡುತ್ತೇನೆ; ಸಚಿವ ಅಜಯ್ ಮಿಶ್ರಾ