ಅಸ್ಸಾಂನಲ್ಲಿ ಶಾಲಾ ಮಕ್ಕಳು ದಾಟುವಾಗಲೇ ಮುರಿದು ಬಿದ್ದ ತೂಗು ಸೇತುವೆ; 30ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಾಯ
ಚೇರಗಿ ವಿದ್ಯಾಪೀಠ ಹೈಸ್ಕೂಲ್ ವಿದ್ಯಾರ್ಥಿಗಳು ಸಿಂಗ್ಲಾ ನದಿಯನ್ನು ದಾಟುತ್ತಿದ್ದಾಗ ಇದ್ದಕ್ಕಿದ್ದಂತೆ ತೂಗು ಸೇತುವೆ ಕುಸಿದು ವಿದ್ಯಾರ್ಥಿಗಳು ನದಿಗೆ ಬಿದ್ದಿದ್ದಾರೆ.
ಗುವಾಹಟಿ: ಅಸ್ಸಾಂ ರಾಜ್ಯದ ಕರೀಂಗಂಜ್ ಜಿಲ್ಲೆಯಲ್ಲಿ ಶಾಲಾ ವಿದ್ಯಾರ್ಥಿಗಳು ಸಂಜೆ ಮನೆಗೆ ವಾಪಾಸ್ ಹೋಗುತ್ತಿದ್ದಾಗ ತೂಗು ಸೇತುವೆ ಕುಸಿದು ಬಿದ್ದಿದೆ. ಇದರಿಂದ 30ಕ್ಕೂ ಹೆಚ್ಚು ಮಕ್ಕಳು ಗಾಯಗೊಂಡಿದ್ದಾರೆ. ಸ್ಥಳೀಯರ ಸಮಯಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದ್ದು, ಯಾರಿಗೂ ಪ್ರಾಣಾಪಾಯವಾಗಿಲ್ಲ.
ಕರೀಂಗಂಜ್ ಜಿಲ್ಲೆಯ ಚೇರಗಿ ಪ್ರದೇಶದಲ್ಲಿ ಸೋಮವಾರ ಈ ಘಟನೆ ನಡೆದಿದೆ. ಸಿಂಗ್ಲಾ ನದಿಗೆ ಹಾಕಲಾಗಿರುವ ತೂಗು ಸೇತುವೆ ಚೇರಗಿ ಪ್ರದೇಶ ಹಾಗೂ ಹಳ್ಳಿಯ ನಡುವೆ ಸಂಪರ್ಕ ಕಲ್ಪಿಸುತ್ತದೆ. ಕಳೆದ ಹಲವು ವರ್ಷಗಳಿಂದ ವಿದ್ಯಾರ್ಥಿಗಳು ಇತರ ಪ್ರದೇಶಗಳು ಮತ್ತು ಶಾಲೆಗಳನ್ನು ತಲುಪಲು ಈ ಸೇತುವೆಯನ್ನು ಬಳಸುತ್ತಿದ್ದಾರೆ. ಸೋಮವಾರ ಸಂಜೆ ವಿದ್ಯಾರ್ಥಿಗಳು ಶಾಲೆಯಿಂದ ಮನೆಗೆ ವಾಪಾಸ್ ಹೋಗುವಾಗ ಈ ಘಟನೆ ನಡೆದಿದೆ.
ಚೇರಗಿ ವಿದ್ಯಾಪೀಠ ಹೈಸ್ಕೂಲ್ ವಿದ್ಯಾರ್ಥಿಗಳು ಸಿಂಗ್ಲಾ ನದಿಯನ್ನು ದಾಟುತ್ತಿದ್ದಾಗ ಇದ್ದಕ್ಕಿದ್ದಂತೆ ತೂಗು ಸೇತುವೆ ಕುಸಿದು ವಿದ್ಯಾರ್ಥಿಗಳು ನದಿಗೆ ಬಿದ್ದಿದ್ದಾರೆ. ತಕ್ಷಣ ಸ್ಥಳೀಯರು ನೀರಿಗೆ ಧುಮುಕಿ ವಿದ್ಯಾರ್ಥಿಗಳನ್ನು ರಕ್ಷಿಸಿದ್ದಾರೆ. ಈ ಘಟನೆಯಲ್ಲಿ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.
ಗಾಯಗೊಂಡ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 3 ವರ್ಷಗಳ ಹಿಂದೆ ತೂಗು ಸೇತುವೆಯನ್ನು ನಿರ್ಮಿಸಲಾಗಿದೆ. ಸೇತುವೆ ಕುಸಿಯಲು ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ. ಸಮಯಕ್ಕೆ ಸರಿಯಾಗಿ ಅಕ್ಕಪಕ್ಕದ ಮನೆಯವರು ಧಾವಿಸಿ ಬಂದು ಸಹಾಯ ಮಾಡಿದ್ದರಿಂದ ಯಾರಿಗೂ ಹೆಚ್ಚಿನ ಅಪಾಯವಾಗಿಲ್ಲ.
Karnataka Bypolls 2021: ಕೊನೆಗೂ ಹಾನಗಲ್ ಉಪಚುನಾವಣೆ ಬಿಜೆಪಿ ಉಸ್ತುವಾರಿ ಪಟ್ಟಿಗೆ ಬಿವೈ ವಿಜಯೇಂದ್ರ ಸೇರ್ಪಡೆ