Lakhimpur Kheri violence: ಪ್ರಿಯಾಂಕಾ ಗಾಂಧಿ ಸೇರಿ 11 ಕಾಂಗ್ರೆಸ್​ ನಾಯಕರ ಅಧಿಕೃತ ಬಂಧನ; ನವಜೋತ್​ ಸಿಂಗ್​ ಸಿಧುರಿಂದ ಎಚ್ಚರಿಕೆ

TV9 Digital Desk

| Edited By: Lakshmi Hegde

Updated on:Oct 05, 2021 | 6:15 PM

ಪಂಜಾಬ್​ ಕಾಂಗ್ರೆಸ್​ ನಾಯಕ ನವಜೋತ್​ ಸಿಂಗ್​ ಸಿಧು ಟ್ವೀಟ್​ ಮಾಡಿ, ಲಖಿಂಪುರ ಖೇರಿಯಲ್ಲಿ ರೈತರ ಮೇಲೆ ಕಾರು ಹರಿಸಿ, ಹಿಂಸಾಚಾರಕ್ಕೆ ಕಾರಣರಾದ ಕೇಂದ್ರ ಸಚಿವರ ಪುತ್ರನನ್ನು ನಾಳೆಯೊಳಗೆ ಬಂಧಿಸುವಂತೆ ಆಗ್ರಹಿಸಿದ್ದಾರೆ.

Lakhimpur Kheri violence: ಪ್ರಿಯಾಂಕಾ ಗಾಂಧಿ ಸೇರಿ 11 ಕಾಂಗ್ರೆಸ್​ ನಾಯಕರ ಅಧಿಕೃತ ಬಂಧನ; ನವಜೋತ್​ ಸಿಂಗ್​ ಸಿಧುರಿಂದ ಎಚ್ಚರಿಕೆ
ಪ್ರಿಯಾಂಕಾ ಗಾಂಧಿ ಬಂಧನ

ಹಿಂಸಾಚಾರ ನಡೆದ ಲಖಿಂಪುರ ಖೇರಿ (Lakhimpur Kheri violence)ಗೆ ನಿನ್ನೆ ಭೇಟಿ ನೀಡಲು ಮುಂದಾಗಿದ್ದ ಕಾಂಗ್ರೆಸ್​ ಪ್ರಧಾನಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra)ರನ್ನು ಸೀತಾಪುರದ ಬಳಿ ಪೊಲೀಸರು ವಶಕ್ಕೆ ಪಡೆದು, ಗೆಸ್ಟ್​ಹೌಸ್​​ನಲ್ಲಿ ಇರಿಸಿದ್ದರು. ಹೀಗೆ ವಶಕ್ಕೆ ಪಡೆದು 24ಗಂಟೆ ಬಳಿಕ ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿ ಒಟ್ಟು 10 ಮಂದಿ ಕಾಂಗ್ರೆಸ್​ ನಾಯಕರನ್ನು ಇಂದು ಸೀತಾಪುರ ಪೊಲೀಸರು ಅಧಿಕೃತವಾಗಿ ಬಂಧಿಸಿದ್ದಾರೆ. ಎಲ್ಲರ ವಿರುದ್ಧವೂ ಎಫ್​ಐಆರ್​ ದಾಖಲಿಸಿದ್ದಾರೆ. ಹೀಗೆ ಪ್ರಿಯಾಂಕಾ ಗಾಂಧಿಯವರೊಟ್ಟಿಗೆ ಬಂಧನಕ್ಕೆ ಒಳಗಾದವರಲ್ಲಿ ಕಾಂಗ್ರೆಸ್​ ನಾಯಕ ದೀಪೇಂದರ್ ಸಿಂಗ್​ ಹೂಡಾ, ಯುಪಿ ಕಾಂಗ್ರೆಸ್​ ರಾಜ್ಯ ಅಧ್ಯಕ್ಷ ಅಜಯ್​ ಕುಮಾರ್​ ಲಲ್ಲು, ಪಕ್ಷದ ಎಂಎಲ್​ಸಿ ದೀಪಕ್​ ಸಿಂಗ್​ ಕೂಡ ಇದ್ದಾರೆ. ಕ್ರಿಮಿನಲ್​ ಪ್ರೊಸೀಜರ್​ ಕೋಡ್​ನ ಸೆಕ್ಷನ್​ 151ರ ಅಡಿ ಇವರನ್ನೆಲ್ಲ ಬಂಧಿಸಲಾಗಿದೆ.

ಈ ಬಗ್ಗೆ ಹರ್​ಗಾಂವ್​ ಠಾಣೆ ಅಧಿಕಾರಿ ಬ್ರಿಜೇಶ್​ ಕುಮಾರ್​ ತ್ರಿಪಾಠಿ ಮಾಹಿತಿ ನೀಡಿದ್ದಾರೆ. ನಿನ್ನೆ ಪ್ರಿಯಾಂಕಾ ಗಾಂಧಿಯವರು ಲಖಿಂಪುರ ಖೇರಿಗೆ ಹೊರಟಿದ್ದರು. ನಾವು ಅವರನ್ನು ತಡೆದು, ಅಲ್ಲಿ ಸೆಕ್ಷನ್​ 144 ಜಾರಿಯಾಗಿದೆ. ಹಾಗಾಗಿ ನೀವು ಹೋಗುವಂತಿಲ್ಲ ಎಂದು ಹೇಳಿದ್ದೆವು. ಆದರೂ ನಮ್ಮ ಮಾತು ಕೇಳಲಿಲ್ಲ. ಆಗ ಅನಿವಾರ್ಯವಾಗಿ ಅವರನ್ನು ವಶಕ್ಕೆ ಪಡೆದು ಸ್ಥಳೀಯ ಗೆಸ್ಟ್​ಹೌಸ್​​ನಲ್ಲಿ ಇರಿಸಲಾಗಿತ್ತು. ಇಂದು ಬಂಧನವಾಗಿದೆ. ಮುಂದಿನ ಕ್ರಮದ ಬಗ್ಗೆ ಹಿರಿಯ ಅಧಿಕಾರಿಗಳು ನಿರ್ಧಾರ ಮಾಡುತ್ತಾರೆ ಎಂದು ಹೇಳಿದ್ದಾರೆ.

ಪ್ರತಿಭಟನಾ ಮೆರವಣಿಗೆ ಎಚ್ಚರಿಕೆ ನೀಡಿದ ನವಜೋತ್​ ಸಿಂಗ್ ಸಿಧು ಈ ಮಧ್ಯೆ ಪಂಜಾಬ್​ ಕಾಂಗ್ರೆಸ್​ ನಾಯಕ ನವಜೋತ್​ ಸಿಂಗ್​ ಸಿಧು ಟ್ವೀಟ್​ ಮಾಡಿ, ಭಾನುವಾರ ಲಖಿಂಪುರ ಖೇರಿಯಲ್ಲಿ ರೈತರ ಮೇಲೆ ಕಾರು ಹರಿಸಿ, ಹಿಂಸಾಚಾರಕ್ಕೆ ಕಾರಣರಾದ ಕೇಂದ್ರ ಸಚಿವರ ಪುತ್ರನನ್ನು ನಾಳೆಯೊಳಗೆ (ಬುಧವಾರ) ಬಂಧಿಸದೆ ಇದ್ದರೆ ಹಾಗೇ, ಅನಗತ್ಯವಾಗಿ ಬಂಧಿಸಲ್ಪಟ್ಟಿರುವ ನಮ್ಮ ನಾಯಕಿ ಪ್ರಿಯಾಂಕಾ ಗಾಂಧಿಯವರನ್ನು ಬಿಡುಗಡೆ ಮಾಡದೆ ಇದ್ದರೆ, ಪಂಜಾಬ್​ ಕಾಂಗ್ರೆಸ್​​ನಿಂದ ಲಖಿಂಪುರ ಖೇರಿ ಕಡೆಗೆ ಪ್ರತಿಭಟನಾ ಮೆರವಣಿಗೆ ಹೊರಡಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ನವಜೋತ್​ ಸಿಂಗ್​ ಸಿಧು ನಿನ್ನೆ ಲಖಿಂಪುರ ಖೇರಿಯಲ್ಲಿ ಹಿಂಸಾಚಾರ ನಡೆದ ಬೆನ್ನಲ್ಲೇ ಚಂಡಿಗಡ್​​ನ ರಾಜ್ಯಪಾಲರ ಭವನದ ಎದುರು ಪ್ರತಿಭಟನೆ ನಡೆಸಿದ್ದರು. ಅದಾದ ಬಳಿಕ ಅವರನ್ನು ಸಾರಂಗಪುರ ಪೊಲೀಸರು ಬಂಧಿಸಿ, ನಂತರ ಬಿಡುಗಡೆ ಮಾಡಿದ್ದರು. ಇಂದು ಟ್ವೀಟ್ ಮಾಡಿ, ನೇರವಾಗಿ ಲಖಿಂಪುರ ಖೇರಿಗೇ ಹೋಗುತ್ತೇವೆ ಎಂದಿದ್ದಾರೆ. ತಮ್ಮ ಟ್ವೀಟ್​​ನಲ್ಲಿ ಆಶೀಶ್​ ಮಿಶ್ರಾರ ಹೆಸರನ್ನು ಉಲ್ಲೇಖಿಸದೆ ಇದ್ದರೂ, ಘಟನೆಯ ಹಿಂದೆ ಕೇಂದ್ರ ಸಚಿವರ ಪುತ್ರ ಇದ್ದಾರೆ ಎಂಬುದನ್ನು ಹೇಳಿದ್ದಾರೆ.

ಇದನ್ನೂ ಓದಿ: ಉತ್ತರ ಪ್ರದೇಶ ಸರ್ಕಾರ ಆರ್​ಎಸ್​ಎಸ್​ ಹಿಡಿತದಲ್ಲಿದೆ; ಕಾಂಗ್ರೆಸ್ ಸರಿಯಾಗಿದ್ದಿದ್ದರೆ ದೇಶ ಹೀಗಿರುತ್ತಿರಲಿಲ್ಲ: ಹೆಚ್​ಡಿ ಕುಮಾರಸ್ವಾಮಿ

Video: ಲಖನೌಗೆ ಪ್ರಧಾನಿ ಮೋದಿ ಭೇಟಿ ಸುದ್ದಿ ಕೇಳಿ ವಿಡಿಯೋ ಬಿಡುಗಡೆ ಮಾಡಿ ‘ನೀವಿದನ್ನು ನೋಡಿದ್ದೀರಾ‘? ಎಂದ ಪ್ರಿಯಾಂಕಾ ಗಾಂಧಿ ವಾದ್ರಾ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada