ನನ್ನ ಬಂಧನ ಕಾನೂನುಬಾಹಿರ, ಸ್ಥಳದಲ್ಲಿ ಇರದವರ ವಿರುದ್ಧವೂ ಎಫ್​ಐಆರ್ ದಾಖಲಿಸಲಾಗಿದೆ; ಪ್ರಿಯಾಂಕಾ ಗಾಂಧಿ ಆರೋಪ

| Updated By: ಸುಷ್ಮಾ ಚಕ್ರೆ

Updated on: Oct 06, 2021 | 12:52 PM

Priyanka Gandhi Arrest : ಇಂದಿಗೆ ಪ್ರಿಯಾಂಕಾ ಗಾಂಧಿ ಅವರನ್ನು ಬಂಧಿಸಿ 56 ಗಂಟೆಗಳಾಗಿವೆ. ಇನ್ನೂ ಅವರನ್ನು ಕೋರ್ಟ್​ಗೆ ಹಾಜರುಪಡಿಸಿಲ್ಲ.

ನನ್ನ ಬಂಧನ ಕಾನೂನುಬಾಹಿರ, ಸ್ಥಳದಲ್ಲಿ ಇರದವರ ವಿರುದ್ಧವೂ ಎಫ್​ಐಆರ್ ದಾಖಲಿಸಲಾಗಿದೆ; ಪ್ರಿಯಾಂಕಾ ಗಾಂಧಿ ಆರೋಪ
ಪ್ರಿಯಾಂಕಾ ಗಾಂಧಿ ಬಂಧನದ ವೇಳೆಯ ದೃಶ್ಯ
Follow us on

ಲಕ್ನೋ: ಉತ್ತರ ಪ್ರದೇಶದ ಲಖಿಂಪುರ ಖೇರಿ ಹಿಂಸಾಚಾರದ ಸ್ಥಳಕ್ಕೆ ಭೇಟಿ ನೀಡುವಾಗ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ವಾರೆಂಟ್ ತೋರಿಸದಿದ್ದರೆ ನನ್ನನ್ನು ನೀವು ಮುಟ್ಟುವಂತಿಲ್ಲ ಎಂದು ಪೊಲೀಸರಿಗೆ ಪ್ರಿಯಾಂಕಾ ಹೇಳಿದರೂ ಕೇಳದೆ ಅವರನ್ನು ಕರೆದುಕೊಂಡು ಹೋಗಿ ಗೆಸ್ಟ್​ ಹೌಸ್​ನಲ್ಲಿ ಗೃಹಬಂಧನದಲ್ಲಿರಿಸಲಾಗಿತ್ತು. ಬಳಿಕ ನಿನ್ನೆ ಸಂಜೆ ಅವರನ್ನು ಅಧಿಕೃತವಾಗಿ ಬಂಧಿಸಲಾಗಿದೆ. 38 ಗಂಟೆಗಳಿಗೂ ಹೆಚ್ಚು ಕಾಲ ನನ್ನನ್ನು ಸೀತಾಪುರದ ಗೆಸ್ಟ್ ಹೌಸ್​ನಲ್ಲಿ ಇರಿಸಿದ್ದು ಸಂಪೂರ್ಣವಾಗಿ ಕಾನೂನು ಬಾಹಿರವಾಗಿದೆ. ಸೆಕ್ಷನ್ 151ರ ಅಡಿಯಲ್ಲಿ ನನ್ನನ್ನು ಬಂಧಿಸುತ್ತಿರುವುದಾಗಿ ನನಗೆ ಪೊಲೀಸರು ಹೇಳಿದರು. ಆದರೆ, ಅವರು ಎಫ್​ಐಆರ್ ಪ್ರತಿಯನ್ನು ನನಗೆ ತೋರಿಸಿಲ್ಲ ಎಂದು ನಿನ್ನೆ ರಾತ್ರಿ ಆರೋಪಿಸಿದ್ದಾರೆ.

ಕಾನೂನುಬಾಹಿರವಾಗಿ ನನ್ನನ್ನು ಬಂಧಿಸಲಾಗಿದೆ. ಒತ್ತಾಯಪೂರ್ವಕವಾಗಿ ನನ್ನನ್ನು ಕರೆದುಕೊಂಡು ಹೋಗಲಾಗಿದೆ. ದೈಹಿಕವಾಗಿ ಒತ್ತಡ ಹೇರಿ ನನ್ನನ್ನು ಹಾಗೂ ನನ್ನ ಜೊತೆಗೆ ಬಂದಿದ್ದವರನ್ನು ಬಂಧಿಸಲಾಗಿದೆ. ನನ್ನನ್ನು ವಶಕ್ಕೆ ಪಡೆದ ಬಳಿಕ ಮ್ಯಾಜಿಸ್ಟ್ರೇಟ್ ಮುಂದೆಯೂ ಹಾಜರುಪಡಿಸಿಲ್ಲ ಅಥವಾ ನ್ಯಾಯಾಂಗದ ಅಧಿಕಾರಿಗಳ ಎದುರೂ ಹಾಜರುಪಡಿಸಿಲ್ಲ. ಅಲ್ಲದೆ, ನನಗೆ ನನ್ನ ವಕೀಲರನ್ನು ಭೇಟಿಯಾಗಲು ಅವಕಾಶವನ್ನೂ ನೀಡಿಲ್ಲ ಎಂದು ಪ್ರಿಯಾಂಕಾ ಗಾಂಧಿ ಆರೋಪಿಸಿದ್ದಾರೆ.

ಲಖಿಂಪುರ್ ಖೇರಿಯಲ್ಲಿ ಹಿಂಸಾಚಾರ ನಡೆದ ಹಿನ್ನೆಲೆಯಲ್ಲಿ ಅಲ್ಲಿಗೆ ತೆರಳುತ್ತಿದ್ದ ಪ್ರಿಯಾಂಕಾ ಗಾಂಧಿ ಅವರನ್ನು ಸೀತಾಪುರದಲ್ಲಿ ಬಂಧಿಸಲಾಗಿತ್ತು. ಸೀತಾಪುರದಲ್ಲಿ ಪ್ರಿಯಾಂಕಾ ಗಾಂಧಿಯ ಬಂಧನಕ್ಕೆ ಸಂಬಂಧಿಸಿದ ಸತ್ಯಗಳು ಮತ್ತು ಸನ್ನಿವೇಶಗಳು ಉತ್ತರ ಪ್ರದೇಶದಲ್ಲಿ ಕಾನೂನಿಗೆ ಬೆಲೆಯಿಲ್ಲ ಎಂಬುದನ್ನು ಖಚಿತವಾಗಿ ದೃಢಪಡಿಸುತ್ತದೆ ಎಂದು ಕಾಂಗ್ರೆಸ್ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಇಂದಿಗೆ ಪ್ರಿಯಾಂಕಾ ಗಾಂಧಿ ಅವರನ್ನು ಬಂಧಿಸಿ 56 ಗಂಟೆಗಳಾಗಿವೆ. ಇನ್ನೂ ಅವರನ್ನು ಕೋರ್ಟ್​ಗೆ ಹಾಜರುಪಡಿಸಿಲ್ಲ.

ಪ್ರಿಯಾಂಕಾ ಗಾಂಧಿಯನ್ನು ಸಿಆರ್‌ಪಿಸಿ ಸೆಕ್ಷನ್ 151 ರ ಅಡಿಯಲ್ಲಿ ಬಂಧಿಸಲಾಗಿದೆ ಎಂದು ಹೇಳಿದ್ದಾರೆ. ಸೆಕ್ಷನ್ 151ರ ಅಡಿಯಲ್ಲಿ ಬಂಧಿಸಿದ ಯಾವುದೇ ವ್ಯಕ್ತಿಯನ್ನು ನ್ಯಾಯಾಧೀಶರ ಆದೇಶವಿಲ್ಲದೆ 24 ಗಂಟೆಗಳಿಗಿಂತ ಹೆಚ್ಚು ಕಾಲ ಬಂಧಿಸುವಂತಿಲ್ಲ. ಆದರೂ 50 ಗಂಟೆಗೂ ಹೆಚ್ಚು ಕಾಲ ಪ್ರಿಯಾಂಕಾ ಗಾಂಧಿ ಅವರನ್ನು ಬಂಧನದಲ್ಲಿ ಇರಿಸಲಾಗಿದೆ ಎಂದು ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಹೇಳಿಕೆ ನೀಡಿದ್ದರು.

ಲಖೀಂಪುರ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಒಟ್ಟು 11 ಮಂದಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ನನ್ನನ್ನೂ ಸೇರಿ 11 ಜನರ ವಿರುದ್ಧ ಎಫ್​ಐಆರ್ ದಾಖಲಿಸಲಾಗಿದೆ ಎಂಬುದನ್ನು ನಾನು ಮೊಬೈಲ್​ನಲ್ಲಿ ಸೋಷಿಯಲ್ ಮೀಡಿಯಾ ಮೂಲಕ ತಿಳಿದುಕೊಂಡೆ. ಆ 11 ಜನರ ಪೈಕಿ 8 ಜನರು ನಾವು ತೆರಳುವಾಗ ನಮ್ಮ ಜೊತೆ ಇರಲೇ ಇಲ್ಲ. ಆದರೂ ಅವರ ಇರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಲಕ್ನೋದಿಂದ ನನಗೆಂದು ಬಟ್ಟೆ ತಂದುಕೊಟ್ಟು ಹೋದ ಇಬ್ಬರು ವ್ಯಕ್ತಿಗಳ ಹೆಸರನ್ನು ಕೂಡ ಆ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ಪ್ರಿಯಾಂಕಾ ಗಾಂಧಿ ಆಕ್ಷೇಪಿಸಿದ್ದಾರೆ.

ಇದನ್ನೂ ಓದಿ: Lakhimpur Kheri violence: ಪ್ರಿಯಾಂಕಾ ಗಾಂಧಿ ಸೇರಿ 11 ಕಾಂಗ್ರೆಸ್​ ನಾಯಕರ ಅಧಿಕೃತ ಬಂಧನ; ನವಜೋತ್​ ಸಿಂಗ್​ ಸಿಧುರಿಂದ ಎಚ್ಚರಿಕೆ

Priyanka Gandhi: ಬಂಧನದ ಬಳಿಕ ಪೊರಕೆ ಹಿಡಿದು ಕಸ ಗುಡಿಸಿದ ಪ್ರಿಯಾಂಕಾ ಗಾಂಧಿ; ವೈರಲ್ ವಿಡಿಯೋ ಇಲ್ಲಿದೆ

Published On - 12:42 pm, Wed, 6 October 21