Lakhimpur Kheri violence: ಕೇಂದ್ರ ಸಚಿವರ ಪುತ್ರ ಆಶಿಶ್ ಮಿಶ್ರಾ, ಇತರ 13 ಮಂದಿ ವಿರುದ್ಧ ಆರೋಪ ದಾಖಲಿಸಿದ ಯುಪಿ ನ್ಯಾಯಾಲಯ

| Updated By: ರಶ್ಮಿ ಕಲ್ಲಕಟ್ಟ

Updated on: Dec 06, 2022 | 4:05 PM

ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಸುನಿಲ್ ಕುಮಾರ್ ವರ್ಮಾ ಅವರು ಮುಂದಿನ ವಿಚಾರಣೆಯನ್ನು ಡಿಸೆಂಬರ್ 16 ಎಂದು ನಿಗದಿಪಡಿಸಿದ್ದಾರೆ ಎಂದು ಜಿಲ್ಲಾ ಸರ್ಕಾರಿ ವಕೀಲ (ಕ್ರಿಮಿನಲ್) ಅರವಿಂದ್ ತ್ರಿಪಾಠಿ ತಿಳಿಸಿದ್ದಾರೆ.

Lakhimpur Kheri violence: ಕೇಂದ್ರ ಸಚಿವರ ಪುತ್ರ ಆಶಿಶ್ ಮಿಶ್ರಾ, ಇತರ 13 ಮಂದಿ ವಿರುದ್ಧ ಆರೋಪ ದಾಖಲಿಸಿದ ಯುಪಿ ನ್ಯಾಯಾಲಯ
ಆಶಿಶ್ ಮಿಶ್ರಾ
Follow us on

ಲಖನೌ: ಲಖಿಂಪುರ ಖೇರಿ (Lakhimpur Kheri )ಹಿಂಸಾಚಾರದಲ್ಲಿ ನಾಲ್ವರು ರೈತರನ್ನು ಹತ್ಯೆಗೈದ ಪ್ರಕರಣದಲ್ಲಿ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ (Ashish Mishra) ಮತ್ತು ಇತರ 13 ಜನರ ವಿರುದ್ಧ ಉತ್ತರ ಪ್ರದೇಶ(Uttar Pradesh) ನ್ಯಾಯಾಲಯ ಮಂಗಳವಾರ ಆರೋಪ ದಾಖಲಿಸಿದೆ ಎಂದು ಸರ್ಕಾರದ ವಕೀಲರು ತಿಳಿಸಿದ್ದಾರೆ. ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಸುನಿಲ್ ಕುಮಾರ್ ವರ್ಮಾ ಅವರು ಮುಂದಿನ ವಿಚಾರಣೆಯನ್ನು ಡಿಸೆಂಬರ್ 16 ಎಂದು ನಿಗದಿಪಡಿಸಿದ್ದಾರೆ ಎಂದು ಜಿಲ್ಲಾ ಸರ್ಕಾರಿ ವಕೀಲ (ಕ್ರಿಮಿನಲ್) ಅರವಿಂದ್ ತ್ರಿಪಾಠಿ ತಿಳಿಸಿದ್ದಾರೆ.ಕಳೆದ ವರ್ಷ ಅಕ್ಟೋಬರ್ 3 ರಂದು, ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರ ಭೇಟಿಯ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿದ್ದಾಗ ಭುಗಿಲೆದ್ದ ಹಿಂಸಾಚಾರದಲ್ಲಿ ಲಖಿಂಪುರ ಖೇರಿಯಲ್ಲಿ ಎಂಟು ಜನರು ಸಾವನ್ನಪ್ಪಿದರು. ಉತ್ತರ ಪ್ರದೇಶ ಪೊಲೀಸ್ ಎಫ್‌ಐಆರ್‌ನ ಪ್ರಕಾರ, ಆಶಿಶ್ ಮಿಶ್ರಾ ಕುಳಿತಿದ್ದ ಎಸ್‌ಯುವಿ ಹರಿದು ನಾಲ್ವರು ರೈತರು ಸಾವಿಗೀಡಾಗಿದ್ದರು. ಘಟನೆಯ ನಂತರ, ಕೋಪಗೊಂಡ ರೈತರು ಚಾಲಕ ಮತ್ತು ಇಬ್ಬರು ಬಿಜೆಪಿ ಕಾರ್ಯಕರ್ತರನ್ನು ಹೊಡೆದುಕೊಂದಿದ್ದರು. ಇದೀಗ ರದ್ದಾದ ಕೇಂದ್ರದ ಕೃಷಿ ಸುಧಾರಣಾ ಕಾನೂನುಗಳ ಬಗ್ಗೆ ಪ್ರತಿಪಕ್ಷಗಳು ಮತ್ತು ರೈತ ಗುಂಪುಗಳ ಆಕ್ರೋಶಕ್ಕೆ ಕಾರಣವಾದ ಹಿಂಸಾಚಾರದಲ್ಲಿ ಪತ್ರಕರ್ತ ಕೂಡಾ ಸಾವಿಗೀಡಾಗಿದ್ದರು.


ಘಟನೆಯಲ್ಲಿ ಹತ್ಯೆಗೀಡಾದ ಪತ್ರಕರ್ತ ರಮಣ್ ಕಶ್ಯಪ್ ಅವರ ಸಹೋದರ ಪವನ್ ಕಶ್ಯಪ್ ಅವರು ನ್ಯಾಯಾಲಯದ ತೀರ್ಪನ್ನು ಸ್ವಾಗತಿಸಿದ್ದಾರೆ. “ನಾನು ನ್ಯಾಯಾಂಗಕ್ಕೆ ಕೃತಜ್ಞನಾಗಿದ್ದೇನೆ. ನಾನು ಸುಪ್ರೀಂಕೋರ್ಟ್‌ಗೆ ಧನ್ಯವಾದ ಹೇಳಲು ಬಯಸುತ್ತೇನೆ. ವಿಳಂಬವಾಗಿದೆ, ಆದರೆ ಆರೋಪಗಳನ್ನು  ಮಾಡಲಾಗಿದೆ. ನನಗೆ ನ್ಯಾಯಾಂಗ ವ್ಯವಸ್ಥೆಯಲ್ಲಿ ಸಂಪೂರ್ಣ ನಂಬಿಕೆ ಇದೆ ಎಂದಿದ್ದಾರೆ. ಪೊಲೀಸ್ ಚಾರ್ಜ್‌ಶೀಟ್‌ನಲ್ಲಿ ಮಿಶ್ರಾ ವಿರುದ್ಧ ಕೊಲೆ ಆರೋಪ ಹೊರಿಸಲಾಗಿತ್ತು.

ಈ ಘಟನೆಯು ಆಡಳಿತಾರೂಢ ಬಿಜೆಪಿ ವಿರುದ್ಧ ಆಕ್ರೋಶವನ್ನುಂಟು ಮಾಡಿತ್ತು. ಗೃಹ ಖಾತೆಯ ರಾಜ್ಯ ಸಚಿವ ಅಜಯ್ ಮಿಶ್ರಾ ಅವರನ್ನು ಸರ್ಕಾರ ರಕ್ಷಿಸಿದೆ ಎಂದು ರೈತರು ಆರೋಪಿಸಿದ್ದರು. ರೈತರು ಆಂದೋಲನವನ್ನು ನಿಲ್ಲಿಸದಿದ್ದರೆ “ಎರಡು ನಿಮಿಷಗಳಲ್ಲಿ ರೈತರನ್ನು ಸರಿಪಡಿಸುವುದಾಗಿ” ಸಚಿವರು ಬೆದರಿಕೆಯೊಡ್ಡಿದ ಬೆನ್ನಲ್ಲೇ ರೈತರ ಮೇಲೆ ಕಾರು ಹರಿಸಿದ ಘಟನೆ ನಡೆದಿತ್ತು.  ಈ ಘಟನೆಯನ್ನು ಖಂಡಿಸಿದ ಪ್ರತಿಪಕ್ಷ ಮತ್ತು ರೈತರ ಸಂಘಟನೆ ಮಿಶ್ರಾ ಅವರ ರಾಜೀನಾಮೆಗೆ ಒತ್ತಾಯಿಸಿತ್ತು.

ರೈತರ ಸಾವಿನ ನಂತರ ಸುಪ್ರೀಂಕೋರ್ಟ್ ಮಧ್ಯಪ್ರವೇಶಿಸಿದ್ದು ಆಶಿಶ್ ಮಿಶ್ರಾ ಅವರನ್ನು ಬಂಧಿಸಲಾಯಿತು. ಅಲಹಾಬಾದ್ ಹೈಕೋರ್ಟ್ ಫೆಬ್ರವರಿಯಲ್ಲಿ ಅವರಿಗೆ ಜಾಮೀನು ನೀಡಿ, ಪೊಲೀಸ್ ತನಿಖೆಯ ಬಗ್ಗೆ ಪ್ರಶ್ನಿಸಿತ್ತು.

ಈ ವರ್ಷದ ಏಪ್ರಿಲ್ 18 ರಂದು, ಸುಪ್ರೀಂ ಕೋರ್ಟ್ ಆಶಿಶ್ ಮಿಶ್ರಾಗೆ ನೀಡಿದ್ದ ಜಾಮೀನನ್ನು ರದ್ದುಗೊಳಿಸಿ ಒಂದು ವಾರದೊಳಗೆ ಶರಣಾಗುವಂತೆ ಕೇಳಿತು. ಅಲಹಾಬಾದ್ ಹೈಕೋರ್ಟ್‌ನಲ್ಲಿ ಸಂತ್ರಸ್ತರಿಗೆ “ನ್ಯಾಯಯುತ ಮತ್ತು ಪರಿಣಾಮಕಾರಿ ವಿಚಾರಣೆ” ನಿರಾಕರಿಸಲಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು.

ಲಖಿಂಪುರ ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯಲ್ಲಿ, ಆಶಿಶ್ ಮಿಶ್ರಾ ಮತ್ತು ಇತರ ಆರೋಪಿಗಳು ತಮ್ಮ ವಿರುದ್ಧ ಸುಳ್ಳು ಆರೋಪ ಹೊರಿಸಲಾಗಿದೆ ಎಂದು ವಾದಿಸಿದ್ದರು. ಎಲ್ಲಾ ಆರೋಪಿಗಳ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿತ್ತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

 

Published On - 4:04 pm, Tue, 6 December 22