10 ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿರುವ ಲಕ್ಷದ್ವೀಪದ ಸಂಸದ ಫೈಜಲ್ ಲೋಕಸಭೆಯಿಂದ ಅನರ್ಹ

| Updated By: ಆಯೇಷಾ ಬಾನು

Updated on: Jan 14, 2023 | 8:35 AM

2009 ರಲ್ಲಿ ದಾಖಲಾದ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕರು ಮತ್ತು ಇತರ ಮೂವರಿಗೆ 10 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದ ನಂತರ ಶುಕ್ರವಾರ ತಡ ರಾತ್ರಿ ಲೋಕಸಭೆ ಸಚಿವಾಲಯ ಈ ತೀರ್ಮಾನವನ್ನು ಪ್ರಕಟಿಸಿದೆ.

10 ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿರುವ ಲಕ್ಷದ್ವೀಪದ ಸಂಸದ ಫೈಜಲ್ ಲೋಕಸಭೆಯಿಂದ ಅನರ್ಹ
ಮೊಹಮ್ಮದ್ ಫೈಜಲ್
Follow us on

ಲಕ್ಷದ್ವೀಪದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಸಂಸದ ಮೊಹಮ್ಮದ್ ಫೈಜಲ್(Lakshadweep MP Mohammad Faizal)  ಅವರನ್ನು ಲೋಕಸಭಾ ಸದಸ್ಯರಾಗಿ ಅನರ್ಹಗೊಳಿಸಲಾಗಿದೆ ಎಂದು ಲೋಕಸಭೆ ಸಚಿವಾಲಯ ಶುಕ್ರವಾರ ತಡರಾತ್ರಿ ತಿಳಿಸಿದೆ. 2009 ರಲ್ಲಿ ದಾಖಲಾದ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕರು ಮತ್ತು ಇತರ ಮೂವರಿಗೆ 10 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದ ನಂತರ ಶುಕ್ರವಾರ ತಡ ರಾತ್ರಿ ಲೋಕಸಭೆ ಸಚಿವಾಲಯ ಈ ತೀರ್ಮಾನವನ್ನು ಪ್ರಕಟಿಸಿದೆ.

ಲಕ್ಷದ್ವೀಪದ ಕವರಟ್ಟಿಯ ಜಿಲ್ಲಾ ಸೆಷನ್ಸ್ ನ್ಯಾಯಾಲಯವು ಬುಧವಾರ ಎನ್‌ಸಿಪಿ ಸಂಸದ ಮತ್ತು ಇತರ ಆರೋಪಿಗಳ ಜಾಮೀನನ್ನು ಅಮಾನತುಗೊಳಿಸಿತ್ತು. ನಂತರ ಅವರನ್ನು ಕೇರಳದ ಕಣ್ಣೂರು ಕೇಂದ್ರ ಕಾರಾಗೃಹಕ್ಕೆ ಕರೆದೊಯ್ಯಲಾಯಿತು. ಶಿಕ್ಷೆಯ ವಿರುದ್ಧ ಫೈಝಲ್ ಕೇರಳ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರೂ, ಅದು ತೀರ್ಪಿಗೆ ತಡೆ ನೀಡಲು ನಿರಾಕರಿಸಿತು.

ಇದನ್ನೂ ಓದಿ: ಕೊಲೆ ಯತ್ನ ಪ್ರಕರಣದಲ್ಲಿ ಲಕ್ಷದ್ವೀಪದ ಸಂಸದ ಮೊಹಮ್ಮದ್ ಫೈಝಲ್​ಗೆ 10 ವರ್ಷ ಜೈಲು ಶಿಕ್ಷೆ ಪ್ರಕಟ

ಪ್ರಾಸಿಕ್ಯೂಷನ್ ಪ್ರಕಾರ, 2009ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಮಾಜಿ ಕೇಂದ್ರ ಸಚಿವ ಪಿಎಂ ಸಯೀದ್ ಅವರ ಅಳಿಯ ಕಾಂಗ್ರೆಸ್ ಮುಖಂಡ ಮೊಹಮ್ಮದ್ ಸಾಲಿಯಾ ಅವರ ಜೊತೆ ವಾಗ್ವಾದ ನಡೆದ ನಂತರ ಅವರ ವಿರುದ್ಧ ಹಲ್ಲೆ ನಡೆಸಲು ಸಂಸದ ಮೊಹಮ್ಮದ್ ಫೈಜಲ್ ಜನರ ಗುಂಪನ್ನು ಕರೆದುಕೊಂಡು ಬಂದು ಹಲ್ಲೆ ನಡೆಸಿದ್ದರು. ಈ ಘಟನೆಯಲ್ಲಿ ಗಾಯಗೊಂಡ ಸಾಲಿಯಾ ಅವರನ್ನು ಕೇರಳಕ್ಕೆ ಕರೆದೊಯ್ದು ಖಾಸಗಿ ಆಸ್ಪತ್ರೆಯಲ್ಲಿ ಹಲವು ತಿಂಗಳುಗಳ ಕಾಲ ಚಿಕಿತ್ಸೆ ಕೊಡಿಸಲಾಯಿತು. ಮತ್ತೊಂದೆಡೆ ಭಾರತೀಯ ದಂಡ ಸಂಹಿತೆಯಡಿ ಫೈಜಲ್ ಹಾಗೂ ಇತರರ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿತ್ತು.

ಇನ್ನು ಈ ಪ್ರಕರಣದಲ್ಲಿ 32 ಆರೋಪಿಗಳಿದ್ದು, ಮೊದಲ ನಾಲ್ವರಿಗೆ ಶಿಕ್ಷೆ ವಿಧಿಸಲಾಗಿದೆ. ಸಂಸದ ಫೈಜಲ್ ಈ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿದ್ದಾರೆ. ಆರೋಪಿಗಳ ಪರ ವಕೀಲರು ಇದೊಂದು ಸಣ್ಣ ಘರ್ಷಣೆ ಎಂದು ವಾದ ಮಂಡಿಸಿದರೂ, ನ್ಯಾಯಾಧೀಶರು ವೈದ್ಯಕೀಯ ವರದಿಗಳನ್ನು ಉಲ್ಲೇಖಿಸಿ ಮತ್ತು ಗಾಯಾಳು ದೀರ್ಘಾವಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವುದನ್ನು ಉಲ್ಲೇಖಿಸಿ ವಕೀಲರ ವಾದವನ್ನು ತಿರಸ್ಕರಿಸಿದರು.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 8:35 am, Sat, 14 January 23