ರಾಷ್ಟ್ರೀಯ ಜನತಾ ದಳ (RJD) ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ (Lalu Prasad Yadav) ಅವರು ಗುರುವಾರ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು “ಭ್ರಷ್ಟರ ಸಂಚಾಲಕ” ಎಂದು ಕರೆದಿದ್ದು, ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ವಿರೋಧ ಪಕ್ಷಗಳ ಮಹಾಮೈತ್ರಿಕೂಟವು ಕನಿಷ್ಠ 300 ಸ್ಥಾನಗಳನ್ನು ಪಡೆಯುತ್ತದೆ ಎಂದು ಹೇಳಿದ್ದಾರೆ. ಮದುವೆಯಾಗುವಂತೆ ರಾಹುಲ್ ಗಾಂಧಿಯವರಿಗೆ ನೀಡಿದ ಸಲಹೆಯು ಕಾಂಗ್ರೆಸ್ ನಾಯಕನಿಗೆ ಪ್ರಧಾನಿ ಅಭ್ಯರ್ಥಿ ಎಂಬ ಸೂಚನೆಯೇ ಎಂದು ಕೇಳಿದಾಗ, ಬಿಹಾರದ ಮಾಜಿ ಮುಖ್ಯಮಂತ್ರಿ ಎರಡೂ ಪ್ರತ್ಯೇಕ ವಿಷಯ. ಆದರೆ ಯಾರು ಪ್ರಧಾನಿಯಾಗುತ್ತಾರೆಯೋ ಅವರಿಗೆ ಪತ್ನಿ ಇರಬೇಕು. ಪತ್ನಿ ಇಲ್ಲದೆ ಪ್ರಧಾನಿ ನಿವಾಸದಲ್ಲಿ ಇರುವುದು ತಪ್ಪು. ಹಾಗೆ ಇರಕೂಡದು ಎಂದು ಹೇಳಿದ್ದಾರೆ.
ಏಕನಾಥ್ ಶಿಂಧೆ ನೇತೃತ್ವದ ಸರ್ಕಾರಕ್ಕೆ ಅಜಿತ್ ಪವಾರ್ ಸೇರ್ಪಡೆಯನ್ನು ಉಲ್ಲೇಖಿಸಿದ ಲಾಲು ಪ್ರಸಾದ್ ಯಾದವ್, ಮೋದಿ “ಭ್ರಷ್ಟರ ಸಂಚಾಲಕ.”ಈ ಹಿಂದೆ ಯಾರನ್ನು ಭ್ರಷ್ಟ ಎಂದು ಕರೆದಿದ್ದರೋ ಅದೇ ವ್ಯಕ್ತಿಯನ್ನು ಅವರು ಮಂತ್ರಿ ಮಾಡಿದ್ದು ನೀವು ನೋಡಿಲ್ಲವೇ?” ಎಂದು ಹೇಳಿದ್ದಾರೆ.
ಕಳೆದ ತಿಂಗಳು ಪಾಟ್ನಾದಲ್ಲಿ ವಿರೋಧ ಪಕ್ಷಗಳು ನಡೆಸಿದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಲಾಲು ಪ್ರಸಾದ್ ಯಾದವ್ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಶೀಘ್ರದಲ್ಲೇ ಮದುವೆಯಾಗುವಂತೆ ಸಲಹೆ ನೀಡಿದ್ದರು. ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಯಲ್ಲಿ ಬಹಳ ಒಳ್ಳೆಯ ಕೆಲಸ ಮಾಡಿದರು. ಲೋಕಸಭೆಯಲ್ಲಿ ಅದಾನಿ ಗುಂಪು ವಿವಾದದ ಬಗ್ಗೆ ಚೆನ್ನಾಗಿ ಮಾತನಾಡಿದರು. ನೀವು ನಮ್ಮ ಸಲಹೆಯನ್ನು ಕೇಳಲಿಲ್ಲ, ಮದುವೆಯಾಗಲಿಲ್ಲ.. ಮದುವೆಯಾಗಬೇಕಿತ್ತು … ಅಭಿ ಭೀ ಸಮಯ್ ಬೀತಾ ನಹೀ ಹೈ, ಶಾದಿ ಕರಿಯೇ ಔರ್ ಹಮ್ ಲೋಗ್ ಬಾರಾತಿ ಚಲೇನ್ (ಇನ್ನೂ ತಡವಾಗಿಲ್ಲ. ಮದುವೆಯಾಗಿ, ನಾವು ಮದುವೆ ದಿಬ್ಬಣದಲ್ಲಿ ಬರ್ತೀವಿ) ಎಂದು ಲಾಲು ಪ್ರಸಾದ್ ಯಾದವ್ ಹೇಳಿದ್ದಾರೆ.
ಅಂದಹಾಗೆ, ಅನೇಕ ರಾಜಕೀಯ ಪಂಡಿತರು ಈ ಸಲಹೆಯನ್ನು ರಾಹುಲ್ ಗಾಂಧಿಯನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಲಾಗಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ಜುಲೈ 17-18 ರಂದು ವಿರೋಧ ಪಕ್ಷಗಳ ಸಭೆಗಾಗಿ ಗುರುವಾರ ಬೆಳಗ್ಗೆ ಬೆಂಗಳೂರಿಗೆ ಪ್ರಯಾಣಿಸುವುದಾಗಿ ಲಾಲು ಪ್ರಸಾದ್ ಹೇಳಿದ್ದಾರೆ.
ರಕ್ತ ಪರೀಕ್ಷೆ ಸೇರಿದಂತೆ ನಿತ್ಯದ ವೈದ್ಯಕೀಯ ಪರೀಕ್ಷೆಗಾಗಿ ನಾನು ದೆಹಲಿಗೆ ಹೋಗುತ್ತಿದ್ದೇನೆ, ನಂತರ ನಾನು ಮತ್ತೆ ಪಾಟ್ನಾಗೆ ಬರುತ್ತೇನೆ. ಇದಾದ ನಂತರ ವಿರೋಧ ಪಕ್ಷಗಳ ಸಭೆಗಾಗಿ ಬೆಂಗಳೂರಿಗೆ ಹೋಗುತ್ತೇನೆ.2024 ರ ಲೋಕಸಭೆ ಚುನಾವಣೆಯಲ್ಲಿ ಕೇಂದ್ರದಿಂದ ಮೋದಿ ಪದಚ್ಯುತಿಗೆ ವೇದಿಕೆ ಸಿದ್ಧಪಡಿಸುತ್ತೇನೆ ಎಂದು ಪಾಟ್ನಾ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಲಾಲು ಹೇಳಿದ್ದಾರೆ.
ಜುಲೈ 17-18 ರಂದು ಬೆಂಗಳೂರಿನಲ್ಲಿ ಸಮಾನ ಮನಸ್ಕ ವಿರೋಧ ಪಕ್ಷಗಳ ಎರಡನೇ ಸಭೆ ನಡೆಯಲಿದೆ. ಮೊದಲ ಸಭೆ ಜೂನ್ 23 ರಂದು ಪಾಟ್ನಾದಲ್ಲಿ ನಡೆದಿತ್ತು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ