ಬೆಂಗಳೂರು: ‘ಹಿಂದಿ ನಮ್ಮ ರಾಷ್ಟ್ರ ಭಾಷೆಯಾಗಿತ್ತು, ಈಗಲೂ ಅದು ನಮ್ಮ ರಾಷ್ಟ್ರ ಭಾಷೆ (National Language), ಮುಂದೆಯೂ ಅದೇ ನಮ್ಮ ರಾಷ್ಟ್ರೀಯ ಭಾಷೆಯಾಗಿರುತ್ತದೆ’ ಬಾಲಿವುಡ್ ನಟ ಅಜಯ್ ದೇವಗನ್ (Ajay Devgn) ಅವರ ಈ ಟ್ವೀಟ್ ನಿನ್ನೆಯಿಂದ ಭಾರತದಲ್ಲಿ ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿದೆ. ಅವರ ಈ ಒಂದು ಟ್ವೀಟ್ನಿಂದಾಗಿ ಇಡೀ ದಕ್ಷಿಣ ಭಾರತೀಯರು ಒಗ್ಗಟ್ಟಾಗಿ ಟ್ವಿಟ್ಟರ್ನಲ್ಲಿ ಛೀಮಾರಿ ಹಾಕುತ್ತಿದ್ದಾರೆ. ಕಿಚ್ಚ ಸುದೀಪ್ (Kiccha Sudeepa) ಬಹಳ ಸಂಯಮದಿಂದ ಅಜಯ್ ದೇವಗನ್ಗೆ ಟ್ವೀಟ್ನಲ್ಲೇ ಉತ್ತರ ನೀಡಿದ ಬಳಿಕ ಅಜಯ್ ದೇವಗನ್ ಕ್ಷಮೆ ಯಾಚಿಸಿದ್ದೂ ಆಯಿತು. ಆದರೆ, ಕನ್ನಡಿಗರು ಹಾಗೂ ದಕ್ಷಿಣ ಭಾರತೀಯರು ಈ ವಿಷಯವನ್ನು ಅಲ್ಲಿಗೇ ಬಿಡಲಿಲ್ಲ. #StopHindiImposition ಎಂದು ಮತ್ತೆ ಟ್ವಿಟ್ಟರ್ನಲ್ಲಿ ಅಭಿಯಾನವನ್ನೇ ಶುರು ಮಾಡಿದ್ದಾರೆ. ಈ ಕಾರಣಕ್ಕಾಗಿ 2 ದಿನಗಳಿಂದ ಹಿಂದಿ, ಅಜಯ್ ದೇವಗನ್ ಹಾಗೂ ಕಿಚ್ಚ ಸುದೀಪ್ ಟ್ವಿಟ್ಟರ್ನಲ್ಲಿ ಟ್ರೆಂಡಿಂಗ್ನಲ್ಲಿರುವ ವಿಷಯಗಳಾಗಿವೆ.
ಕನ್ನಡದ ನಟ ಕಿಚ್ಚ ಸುದೀಪ್ ಒಂದೆರಡು ದಿನಗಳ ಹಿಂದೆ ಕಾರ್ಯಕ್ರಮವೊಂದರಲ್ಲಿ ‘ಹಿಂದಿ ನಮ್ಮ ರಾಷ್ಟ್ರ ಭಾಷೆಯಲ್ಲ’ ಎಂದು ಹೇಳಿದ್ದರು. ಅದಕ್ಕೆ ಸ್ವಲ್ಪ ತಡವಾಗಿಯೇ ಪ್ರತಿಕ್ರಿಯಿಸಿರುವ ಬಾಲಿವುಡ್ ನಟ ಅಜಯ್ ದೇವಗನ್, ‘ಹಿಂದಿ ನಮ್ಮ ರಾಷ್ಟ್ರ ಭಾಷೆ ಅಲ್ಲವೆಂದ ಮೇಲೆ ನಿಮ್ಮ ದಕ್ಷಿಣ ಭಾರತದ ಸಿನಿಮಾಗಳನ್ನು ಹಿಂದಿಗೆ ಡಬ್ ಮಾಡಿ ಏಕೆ ಬಿಡುಗಡೆ ಮಾಡುತ್ತೀರಿ? ನಿಮ್ಮ ಪ್ರಾದೇಶಿಕ ಭಾಷೆಗಳಲ್ಲಿ ಮಾತ್ರ ಬಿಡುಗಡೆ ಮಾಡಬಹುದಲ್ಲ. ಹಿಂದಿ ಎಂದೆಂದಿಗೂ ನಮ್ಮ ರಾಷ್ಟ್ರೀಯ ಭಾಷೆ’ ಎಂದು ಹಿಂದಿಯಲ್ಲೇ ಟ್ವೀಟ್ ಮಾಡಿದ್ದರು. ಇದು ಟ್ವಿಟ್ಟರ್ನಲ್ಲಿ ತೀವ್ರ ಕೋಲಾಹಲಕ್ಕೆ ಕಾರಣವಾಗಿತ್ತು. ಹಲವರು ಸಂವಿಧಾನ ಮತ್ತು ಕೋರ್ಟ್ ಆದೇಶವನ್ನು ಉಲ್ಲೇಖಿಸಿ ಹಿಂದಿ ನಮ್ಮ ರಾಷ್ಟ್ರ ಭಾಷೆಯಲ್ಲ ಎಂದು ಅಜಯ್ ದೇವಗನ್ಗೆ ಛೀಮಾರಿ ಹಾಕಿದ್ದರು. ದಕ್ಷಿಣ ಭಾರತೀಯರು ಮಾತ್ರವಲ್ಲದೆ ಉತ್ತರ ಭಾರತೀಯರು ಕೂಡ ಅಜಯ್ ದೇವಗನ್ ಟ್ವೀಟ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಹಾಗಿದ್ದರೆ ಭಾರತದ ರಾಷ್ಟ್ರೀಯ ಭಾಷೆಯ ಬಗ್ಗೆ ಸಂವಿಧಾನದಲ್ಲಿ ಏನು ಹೇಳಲಾಗಿದೆ?
ಬಾಲಿವುಡ್ ನಟ ಅಜಯ್ ದೇವಗನ್ ಮತ್ತು ಕಿಚ್ಚ ಸುದೀಪ್ ನಡುವಿನ ಟ್ವೀಟ್ ವಾರ್ ಬಳಿಕ ದೇಶದಲ್ಲಿ ಮತ್ತೊಮ್ಮೆ ‘ಹಿಂದಿ ನಮ್ಮ ರಾಷ್ಟ್ರ ಭಾಷೆಯೇ?’ ಎಂಬ ಪ್ರಶ್ನೆ ಎದ್ದಿದೆ. ಈ ಕುರಿತು ನಿನ್ನೆಯಿಂದ ಭಾರೀ ಚರ್ಚೆಯಾಗುತ್ತಿದೆ. ಹಿಂದಿ ಹೇರಿಕೆ ವಿರುದ್ಧ ಮತ್ತೆ ಆಕ್ರೋಶ ಭುಗಿಲೆದ್ದಿದೆ. ಸಂವಿಧಾನದ ಪ್ರಕಾರ ಹಿಂದಿ ಭಾರತದ ರಾಷ್ಟ್ರೀಯ ಭಾಷೆಯಲ್ಲ. ಹಿಂದಿ ಕೂಡ ಭಾರತದ ಪ್ರಾದೇಶಿಕ ಭಾಷೆಗಳಲ್ಲಿ ಒಂದು ಅಷ್ಟೇ. ಹಿಂದಿ ಭಾರತದಲ್ಲಿ ಅತಿ ಹೆಚ್ಚು ಜನ ಬಳಸುವ ಪ್ರಾದೇಶಿಕ ಭಾಷೆಯಾದ್ದರಿಂದ ಅದಕ್ಕೆ ಹೆಚ್ಚಿನ ಮಾನ್ಯತೆ ನೀಡಲಾಗುತ್ತಿದೆ. ಕೇಂದ್ರ ಸರ್ಕಾರದ ಆಡಳಿತದಲ್ಲಿ ಬಳಸಲಾಗುವ ಹಿಂದಿ ಒಂದು ಅಧಿಕೃತ ಭಾಷೆಯಷ್ಟೇ.
.@KicchaSudeep मेरे भाई,
आपके अनुसार अगर हिंदी हमारी राष्ट्रीय भाषा नहीं है तो आप अपनी मातृभाषा की फ़िल्मों को हिंदी में डब करके क्यूँ रिलीज़ करते हैं?
हिंदी हमारी मातृभाषा और राष्ट्रीय भाषा थी, है और हमेशा रहेगी।
जन गण मन ।— Ajay Devgn (@ajaydevgn) April 27, 2022
ಸಂವಿಧಾನದ 8ನೇ ಶೆಡ್ಯೂಲ್ ಪ್ರಕಾರ ಆಯಾ ಪ್ರಾದೇಶಿಕ ಭಾಷೆಗಳು ಆಯಾ ರಾಜ್ಯದ ಅಧಿಕೃತ ಭಾಷೆಯಾಗಿರುತ್ತದೆ. ಅಂದರೆ ಕನ್ನಡಿಗರಿಗೆ ಕನ್ನಡವೇ ರಾಷ್ಟ್ರೀಯ ಭಾಷೆ. ತಮಿಳರಿಗೆ ತಮಿಳು ರಾಷ್ಟ್ರೀಯ ಭಾಷೆ. ಹೀಗೆ ಭಾರತದ ಸಂವಿಧಾನದಲ್ಲಿ 22 ಭಾಷೆಗಳನ್ನು ಹೆಸರಿಸಲಾಗಿದೆ. ಹಿಂದಿ, ಬೆಂಗಾಲಿ, ಗುಜರಾತಿ, ಅಸ್ಸಾಮೀಸ್, ಕನ್ನಡ, ತಮಿಳು, ತೆಲುಗು, ಮಲಯಾಳಂ, ಕಾಶ್ಮೀರಿ, ಕೊಂಕಣಿ, ಮಣಿಪುರಿ, ಮರಾಠಿ, ನೇಪಾಳಿ, ಒರಿಯಾ, ಪಂಜಾಬಿ, ಸಂಸ್ಕೃತ, ಸಿಂಧಿ, ಉರ್ದು, ಬೋಡೋ, ಸಂತಲಿ, ಮೈಥಿಲಿ, ಡೋಗ್ರಿ ಈ ಭಾಷೆಗಳು ಭಾರತದ ಆಡಳಿತ ಮತ್ತು ಅಧಿಕೃತ ಭಾಷೆಗಳ ಪಟ್ಟಿಗೆ ಸೇರಿವೆ.
ಈ 22 ಭಾಷೆಗಳ ಪೈಕಿ 14 ಭಾಷೆಗಳನ್ನು ಆರಂಭದಲ್ಲೇ ಸಂವಿಧಾನದಲ್ಲಿ ಸೇರಿಸಲಾಗಿತ್ತು. ಬಳಿಕ, ಸಂವಿಧಾನಕ್ಕೆ ತಿದ್ದುಪಡಿ ಮಾಡಿ ಬೇರೆ ಭಾಷೆಗಳನ್ನು ಸೇರಿಸಲಾಯಿತು. 1967ರಲ್ಲಿ ಸಿಂಧಿ, 1992ರಲ್ಲಿ ಕೊಂಕಣಿ, ಮಣಿಪುರಿ, ನೇಪಾಳಿ, 2004ರಲ್ಲಿ ಸಂತಲಿ, ಮೈಥಿಲಿ, ಬೋಡೋ, ಡೋಗ್ರಿ ಭಾಷೆಗಳಲ್ಲಿ ಸಂವಿಧಾನದಲ್ಲಿ ಸೇರಿಸಲಾಯಿತು. ಅಂದರೆ, ಹಿಂದಿಯ ಜೊತೆಗೆ ಕನ್ನಡ, ತಮಿಳು, ತೆಲುಗು, ಮಲಯಾಳಂ, ಮರಾಠಿ ಮುಂತಾದ ಒಟ್ಟು 14 ಭಾಷೆಗಳು ಆರಂಭದಿಂದಲೂ ಸಂವಿಧಾನದಲ್ಲಿ ಆಡಳಿತ ಭಾಷೆಗಳಾಗಿ ಮಾನ್ಯತೆ ಪಡೆದಿವೆ. ಹಾಗೆ ನೋಡಿದರೆ, ನಮ್ಮ ಕರ್ನಾಟಕ ಹೆಮ್ಮೆ ಪಡುವ ಇನ್ನೊಂದು ಅಂಶ ಇದೆ. ಕರ್ನಾಟಕದಲ್ಲಿ ಬಹಳ ಜನ ಕೊಂಕಣಿ ಭಾಷೆಯನ್ನು ಮಾತನಾಡುತ್ತಾರೆ. ಲಕ್ಷಾಂತರ ಜನ ಈ ಭಾಷೆಯನ್ನು ಮಾತನಾಡುತ್ತಾರೆ. ಹಾಗಾಗಿ ಕರ್ನಾಟಕದ ಎರಡು ಭಾಷೆ ಭಾರತದ ರಾಷ್ಟ್ರ ಭಾಷೆಗಳ ಪಟ್ಟಿಯಲ್ಲಿವೆ ಎಂದರೆ ತಪ್ಪಿಲ್ಲ.
And sir @ajaydevgn ,,
I did understand the txt you sent in hindi. Tats only coz we all have respected,loved and learnt hindi.
No offense sir,,,but was wondering what’d the situation be if my response was typed in kannada.!!
Don’t we too belong to India sir.
?— Kichcha Sudeepa (@KicchaSudeep) April 27, 2022
ಸಂವಿಧಾನದ ಪ್ರಕಾರ ಭಾರತದಲ್ಲಿ ಯಾವುದೇ ರಾಷ್ಟ್ರೀಯ ಭಾಷೆಗಳಿಲ್ಲ. ಭಾರತದಲ್ಲಿ ಒಟ್ಟು 780ಕ್ಕೂ ಹೆಚ್ಚು ಭಾಷೆಗಳಿವೆ. ಅವುಗಳಲ್ಲಿ 22 ಭಾಷೆಗಳನ್ನು ಮಾತ್ರ ಆಡಳಿತ ಭಾಷೆಯನ್ನಾಗಿ ಮಾಡಲಾಗಿದೆ. ಭಾರತದಲ್ಲಿ ಹೆಚ್ಚು ರಾಜ್ಯಗಳಲ್ಲಿ ಬಳಸಲಾಗುವ ಭಾಷೆ ಎಂಬ ಕಾರಣಕ್ಕೆ ಕೇಂದ್ರ ಸರ್ಕಾರದಲ್ಲಿ ಮೊದಲಿನಿಂದಲೂ ಹಿಂದಿ ಭಾಷೆಯ ಬಳಕೆಯನ್ನು ಮಾಡಲಾಗುತ್ತಿದೆ. ಇದು ಆಡಳಿತದ ಅನುಕೂಲಕ್ಕಾಗಿ ಮಾಡಿಕೊಂಡಿದ್ದೇ ವಿನಃ ಸಂವಿಧಾನದ ಪ್ರಕಾರವಲ್ಲ. ಹಾಗೇ, ಬೇರೆ ದೇಶಗಳ ಜೊತೆಗಿನ ವ್ಯವಹಾರಕ್ಕೆ ಅನುಕೂಲವಾಗಲಿ ಎಂಬ ಕಾರಣದಿಂದ ಭಾರತದಲ್ಲಿ ಇಂಗ್ಲಿಷ್ ಅನ್ನು ವ್ಯಾವಹಾರಿಕ ಭಾಷೆಯಾಗಿ ಬಳಸಲಾಗುತ್ತದೆ. ಭಾರತದ ಸರ್ವೋಚ್ಚ ನ್ಯಾಯಾಲಯದಲ್ಲಿ ಸಂವಿಧಾನದ ಪ್ರಕಾರ ಬಳಸಬಹುದಾದ ಆಡಳಿತ ಭಾಷೆ ಎಂದರೆ ಇಂಗ್ಲಿಷ್ ಮಾತ್ರ. ಅಲ್ಲಿ ಹಿಂದಿಯನ್ನು ಬಳಕೆ ಮಾಡುವುದಿಲ್ಲ.
ಭಾರತದ ನೋಟಿನಲ್ಲೂ ಕನ್ನಡಕ್ಕಿದೆ ಸ್ಥಾನ:
ಭಾರತದ ಕರೆನ್ಸಿಯಲ್ಲಿ ಮಹಾತ್ಮ ಗಾಂಧಿ ಫೋಟೋ, ಅಶೋಕ ಸ್ಥಂಭದ ಜೊತೆಗೆ ಭಾರತದ ಪ್ರಮುಖ 15 ಭಾಷೆಗಳನ್ನು ಕೂಡ ಬರೆದಿರಲಾಗುತ್ತದೆ. ಇದನ್ನು ನೀವು ಕೂಡ ಗಮನಿಸಿರಬಹುದು. ಆಯಾ ನೋಟಿನ ಮೇಲೆ ಅದರ ಮೌಲ್ಯವನ್ನು 15 ಭಾಷೆಗಳಲ್ಲಿ ಬರೆದಿರಲಾಗುತ್ತದೆ (ಕನ್ನಡದಲ್ಲಿ ಉದಾ: ನೂರು ರೂಪಾಯಿಗಳು, ಹತ್ತು ರೂಪಾಯಿಗಳು, ಇಪ್ಪತ್ತು ರೂಪಾಯಿಗಳು ಇತ್ಯಾದಿ). ಆ 15 ಭಾಷೆಗಳಲ್ಲಿ ಹಿಂದಿಯ ಜೊತೆಗೆ ದಕ್ಷಿಣ ಭಾರತದ ಎಲ್ಲ ಭಾಷೆಗಳು ಕೂಡ ಇರುತ್ತದೆ. ಕನ್ನಡ, ಅಸ್ಸಾಮಿ, ಬೆಂಗಾಲಿ, ಗುಜರಾತಿ, ಕಾಶ್ಮೀರಿ, ಕೊಂಕಣಿ, ಮಲಯಾಳಂ, ಮರಾಠಿ, ನೇಪಾಳಿ, ಒಡಿಯಾ, ಪಂಜಾಬಿ, ಸಂಸ್ಕೃತ, ತಮಿಳು, ತೆಲುಗು ಮತ್ತು ಉರ್ದು ಭಾಷೆಯಲ್ಲಿ ಭಾರತದ ನೋಟಿನ ಮೇಲೆ ರೂಪಾಯಿಯ ಮೌಲ್ಯವನ್ನು ಬರೆದಿರಲಾಗುತ್ತದೆ. ಇದು ಈ ಎಲ್ಲ 15 ಭಾಷೆಗಳಿಗೂ ಸಮಾನವಾದ ಮಾನ್ಯತೆಯಿದೆ ಎಂಬುದನ್ನು ಸೂಚಿಸುತ್ತದೆ.
ಬಿಹಾರ, ಛತ್ತೀಸ್‌ಗಢ, ದೆಹಲಿ, ಹಿಮಾಚಲ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಉತ್ತರಾಖಂಡದಂತಹ ರಾಜ್ಯಗಳಲ್ಲಿ ಸುಮಾರು 366 ಮಿಲಿಯನ್ ಜನ ಹಿಂದಿ ಮಾತನಾಡುತ್ತಾರೆ. ಮಹಾರಾಷ್ಟ್ರದಲ್ಲಿ ಕೂಡ ಬಹುಪಾಲು ಜನ ಮರಾಠಿಯ ಜೊತೆಗೆ ಹಿಂದಿಯನ್ನೂ ಮಾತನಾಡುತ್ತಾರೆ. ಹೀಗಾಗಿ, ಭಾರತದಲ್ಲಿ ಹಿಂದಿ ಭಾಷೆಯ ಬಳಕೆ ಹೆಚ್ಚಾಗಿದೆ. ಹಾಗೆಂದ ಮಾತ್ರಕ್ಕೆ ಅದೇ ರಾಷ್ಟ್ರೀಯ ಭಾಷೆ ಎಂದು ಅರ್ಥವಲ್ಲ.
ಕೆಲವು ವರ್ಷಗಳಿಂದ ದಕ್ಷಿಣ ಭಾರತೀಯರು ಹಿಂದಿ ಹೇರಿಕೆ ವಿರುದ್ಧ ದಂಗೆದ್ದಿದ್ದು, ಕೇಂದ್ರ ಸರ್ಕಾರ ಹಿಂದಿ ಭಾಷೆಯನ್ನು ನಮ್ಮ ಮೇಲೆ ಹೇರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಬಾಲಿವುಡ್ ಮಂದಿ ಹಾಗೂ ಉತ್ತರ ಭಾರತದ ರಾಜಕಾರಣಿಗಳು ಹಿಂದಿ ರಾಷ್ಟ್ರೀಯ ಭಾಷೆ ಎಂದು ಹೇರಲು ಪ್ರಯತ್ನಿಸಿದ ಅನೇಕ ಘಟನೆಗಳು ನಡೆದಿವೆ. ಈ ಕುರಿತು ಗುಜರಾತ್ ಹೈಕೋರ್ಟ್ 2010ರಲ್ಲಿ ಭಾರತಕ್ಕೆ ಯಾವುದೇ ಅಧಿಕೃತ ರಾಷ್ಟ್ರ ಭಾಷೆ ಇಲ್ಲವೆಂದು ತೀರ್ಪು ನೀಡಿತ್ತು. ರಾಜಕೀಯ, ಸಾಂಸ್ಕೃತಿಕ ಮತ್ತು ಸಾಮಾಜಿಕ ಕಾರ್ಯಗಳಿಗಾಗಿ ಬಳಸಲಾಗುವ ಯಾವುದೇ ಭಾಷೆಯನ್ನು ರಾಷ್ಟ್ರೀಯ ಭಾಷೆ ಎನ್ನಲಾಗುತ್ತದೆ. ರಾಷ್ಟ್ರೀಯ ನ್ಯಾಯಾಲಯ, ಸಂಸತ್ತು ಅಥವಾ ವ್ಯವಹಾರ ಉದ್ದೇಶಗಳಿಗೆ, ಸರ್ಕಾರಿ ವ್ಯವಹಾರಕ್ಕಾಗಿ ಬಳಸಲಾಗುವ ಭಾಷೆ ಅಧಿಕೃತ ಭಾಷೆಯಾಗಿರುತ್ತದೆ.
ಹಿಂದಿ ಭಾಷೆಯನ್ನು ಮಾತನಾಡುವ ರಾಜ್ಯಗಳೊಂದಿಗೆ ಸಂವಹನ ನಡೆಸುವಾಗ ಆರ್ಟಿಕಲ್ 343 ರ ಪ್ರಕಾರ ಕೇಂದ್ರ ಸರ್ಕಾರವು ಹಿಂದಿ ಭಾಷೆಯನ್ನು ಬಳಸುತ್ತದೆ. ಹಿಂದಿಯನ್ನು ಬಳಸದ ಇತರೆ ರಾಜ್ಯಗಳೊಂದಿಗೆ ಸಂವಹನ ಮಾಡಲು ಇಂಗ್ಲಿಷ್ ಭಾಷೆ ಬಳಸಲು ಸೂಚಿಸಲಾಗಿದೆ. ಭಾರತದ ಸಂವಿಧಾನದ ಪ್ರಕಾರ, ಹಿಂದಿ ಮತ್ತು ಇಂಗ್ಲಿಷ್ ಅಧಿಕೃತ ಭಾಷೆಗಳೇ ವಿನಃ ರಾಷ್ಟ್ರೀಯ ಭಾಷೆಗಳಲ್ಲ.
ಇದನ್ನೂ ಓದಿ: ಹಿಂದಿ ವಿವಾದ: ಸುದೀಪ್ ವರ್ಸಸ್ ಅಜಯ್ ದೇವಗನ್ ಕಾಂಟ್ರವರ್ಸಿ ಶುರು ಆಗಿದ್ದು ಹೇಗೆ? ಇಲ್ಲಿದೆ ವಿವರ..
Published On - 5:49 pm, Thu, 28 April 22