Kichcha Sudeep: ‘ನಾವೂ ಭಾರತಕ್ಕೆ ಸೇರಿದವರಲ್ಲವೇ ಸರ್’; ಹಿಂದಿ ರಾಷ್ಟ್ರಭಾಷೆ ಎಂದ ಅಜಯ್ ದೇವಗನ್ಗೆ ಕಿಚ್ಚ ಸುದೀಪ್ ಪ್ರತ್ಯುತ್ತರ
Ajay Devgan | Kichcha Sudeep: ಅಜಯ್ ದೇವಗನ್ ‘ಹಿಂದಿ ರಾಷ್ಟ್ರಭಾಷೆ’ ವಿಚಾರದ ಕುರಿತಂತೆ ಪ್ರತಿಕ್ರಿಯಿಸಿದ್ದಕ್ಕೆ ಕಿಚ್ಚ ಸುದೀಪ್ ಪ್ರತ್ಯುತ್ತರ ಬರೆದಿದ್ದಾರೆ. ‘ಹಿಂದಿಯಲ್ಲಿ ಬರೆದಿದ್ದನ್ನು ಅರ್ಥಮಾಡಿಕೊಂಡೆ. ಆದರೆ ನಾನು ಕನ್ನಡದಲ್ಲಿ ಪ್ರತಿಕ್ರಿಯೆ ಬರೆದರೆ ನಿಮಗೆ ಅರ್ಥವಾಗುತ್ತಿತ್ತೇ?’ ಎಂದು ಪ್ರಶ್ನಿಸಿದ್ದಾರೆ ಸ್ಯಾಂಡಲ್ವುಡ್ ನಟ ಕಿಚ್ಚ.
ರಾಷ್ಟ್ರಭಾಷೆಯ ವಿಚಾರಕ್ಕೆ ಸಂಬಂಧಪಟ್ಟಂತೆ ಕಿಚ್ಚ ಸುದೀಪ್ ಹಾಗೂ ಅಜಯ್ ದೇವಗನ್ ಟ್ವಿಟರ್ನಲ್ಲಿ ಪರಸ್ಪರ ಚರ್ಚೆ ನಡೆಸಿದ್ದಾರೆ. ಇದೀಗ ಸಖತ್ ಸುದ್ದಿಯಾಗುತ್ತಿದೆ. ‘ಹಿಂದಿ ರಾಷ್ಟ್ರ ಭಾಷೆಯಲ್ಲ’ ಎಂದು ಕಿಚ್ಚ ಸುದೀಪ್ (Kichcha Sudeep) ಹೇಳಿದ್ದಕ್ಕೆ ಪ್ರತಿಯಾಗಿ ಬಾಲಿವುಡ್ ನಟ ಅಜಯ್ ದೇವಗನ್ (Ajay Devgan) ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ್ದರು. ಅದರಲ್ಲಿ ಅವರು, ‘ಹಿಂದಿ ರಾಷ್ಟ್ರಭಾಷೆ ಅಲ್ಲದಿದ್ದರೆ ಮತ್ತೇಕೆ ನಿಮ್ಮ ಚಿತ್ರಗಳನ್ನು ಡಬ್ ಮಾಡಿ ತೆರೆ ಕಾಣಿಸುತ್ತೀರಿ?’ ಎಂದು ಪ್ರಶ್ನಿಸಿದ್ದರು. ಜತೆಗೆ ‘ಹಿಂದಿ ನಮ್ಮ ಮಾತೃಭಾಷೆ. ಈ ಹಿಂದೆ ರಾಷ್ಟ್ರಭಾಷೆಯಾಗಿತ್ತು, ಈಗಲೂ ಆಗಿದೆ, ಮುಂದೆಯೂ ಆಗಿರಲಿದೆ’’ ಎಂದು ಅಜಯ್ ದೇವಗನ್ ಹೇಳಿದ್ದರು. ಇದು ದೊಡ್ಡ ಮಟ್ಟದಲ್ಲಿ ಚರ್ಚೆ ಹುಟ್ಟುಹಾಕಿತ್ತು. ಇದಕ್ಕೆ ಕಿಚ್ಚ ಸುದೀಪ್ ಪ್ರತ್ಯುತ್ತರ ಬರೆದಿದ್ದರು. ವಿವಾದಕ್ಕೆ ಅಂತ್ಯ ಹಾಡುವ ಉದ್ದೇಶದಿಂದ ಸುದೀಪ್, ‘‘ನಾನು ಬೇರೆಯದ್ದೇ ರೀತಿಯ ಸನ್ನಿವೇಶದಲ್ಲಿ ಇದನ್ನು ಹೇಳಿದ್ದೇನೆ. ನಾನು ನಮ್ಮ ದೇಶದ ಎಲ್ಲಾ ಭಾಷೆಗಳನ್ನೂ ಗೌರವಿಸುತ್ತೇನೆ. ನಾನು ಯಾರನ್ನೋ ನೋಯಿಸಲು, ಪ್ರಚೋದಿಸಲು ಅಥವಾ ಯಾವುದೇ ಚರ್ಚೆಯನ್ನು ಪ್ರಾರಂಭಿಸಲು ಆ ಹೇಳಿಕೆ ನೀಡಿಲ್ಲ’’ ಎಂದು ಹೇಳಿದ್ದರು. ಇದೀಗ ಸುದೀಪ್ ಮುಂದುವರೆದು ಅಜಯ್ ಅವರಿಗೆ ಹೊಸ ಪ್ರಶ್ನೆಯೊಂದನ್ನು ಮುಂದಿಟ್ಟಿದ್ದಾರೆ.
ಕಿಚ್ಚ ಸುದೀಪ್ ಟ್ವೀಟ್ನಲ್ಲಿ ಹೇಳಿದ್ದೇನು?
ಅಜಯ್ ದೇವಗನ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದನ್ನು ನಾನು ಅರ್ಥ ಮಾಡಿಕೊಂಡೆ, ಆದರೆ ಅದಕ್ಕೆ ಪ್ರತಿಕ್ರಿಯೆ ಕನ್ನಡದಲ್ಲಿ ಬರೆದರೆ ನಿಮಗೆ ಅರ್ಥವಾಗುತ್ತಿತ್ತೇ? ಎಂದು ಸುದೀಪ್ ಮರುಪ್ರಶ್ನಿಸಿದ್ದಾರೆ. ‘‘ನೀವು ಹಿಂದಿಯಲ್ಲಿ ಕಳುಹಿಸಿದ ಟೆಕ್ಸ್ಟ್ ನನಗೆ ಅರ್ಥವಾಯಿತು. ನಾವೆಲ್ಲರೂ ಗೌರವಿಸಿದ್ದೇವೆ, ಪ್ರೀತಿಸುತ್ತೇವೆ ಮತ್ತು ಹಿಂದಿಯನ್ನು ಕಲಿತಿದ್ದೇವೆ. ತಪ್ಪಿಲ್ಲ ಸರ್, ಆದರೆ ನನ್ನ ಪ್ರತಿಕ್ರಿಯೆಯನ್ನು ಕನ್ನಡದಲ್ಲಿ ಟೈಪ್ ಮಾಡಿದರೆ ಪರಿಸ್ಥಿತಿ ಏನಾಗಬಹುದು ಎಂದು ಆಶ್ಚರ್ಯ ಪಡುತ್ತಿದ್ದೆ.!! ನಾವೂ ಭಾರತಕ್ಕೆ ಸೇರಿದವರಲ್ಲವೇ ಸರ್?’’ ಎಂದು ಸುದೀಪ್ ಅಜಯ್ ದೇವಗನ್ ಅವರಿಗೆ ಪ್ರತಿಕ್ರಿಯೆ ನೀಡಿದ್ದಾರೆ.
And sir @ajaydevgn ,, I did understand the txt you sent in hindi. Tats only coz we all have respected,loved and learnt hindi. No offense sir,,,but was wondering what’d the situation be if my response was typed in kannada.!! Don’t we too belong to India sir. ?
— Kichcha Sudeepa (@KicchaSudeep) April 27, 2022
ಸುದೀಪ್ ಮಾತಿಗೆ ಅಜಯ್ ದೇವಗನ್ ಪ್ರತಿಕ್ರಿಯೆ ಏನು?
ಸುದೀಪ್ ಮಾತಿಗೆ ಪ್ರತಿಕ್ರಿಯಿಸಿದ ಅಜಯ್ ದೇವಗನ್, ‘ಗೊಂದಲಗಳನ್ನು ನಿವಾರಿಸಿದ್ದಕ್ಕೆ ಧನ್ಯವಾದಗಳು. ನಾನು ಇಡೀ ಚಿತ್ರರಂಗವನ್ನು ಒಂದು ಎಂದು ಭಾವಿಸುತ್ತೇನೆ. ಬೇರೆ ಭಾಷೆಗಳನ್ನು ಗೌರವಿಸುತ್ತೇವೆ, ಅಂತೆಯೇ ನಮ್ಮ ಭಾಷೆಯನ್ನೂ ಗೌರವಿಸಲು ಬಯಸುತ್ತೇವೆ. ಈ ನಡುವೆ ಅನುವಾದ ಮಾಡುವಾಗ ಅರ್ಥ ತಪ್ಪಾಗಿರಬಹುದು’’ ಎಂದು ಬರೆದಿದ್ದಾರೆ.
ಅಜಯ್ ದೇವಗನ್ಗೆ ಮತ್ತೆ ಪ್ರತಿಕ್ರಿಯೆ ಬರೆದ ಕಿಚ್ಚ ಸುದೀಪ್:
‘ಅನುವಾದ ಮತ್ತು ವಿಷಯಗಳನ್ನು ಅರ್ಥ ಮಾಡಿಕೊಳ್ಳುವುದು ನಮ್ಮ ದೃಷ್ಟಿಕೋನಕ್ಕೆ ತಕ್ಕಂತೆ’ ಎಂದು ಸುದೀಪ್ ಪ್ರತಿಕ್ರಿಯಿಸಿದ್ದಾರೆ. ‘‘ಆದ್ದರಿಂದಲೇ ಸಂಪೂರ್ಣ ವಿಷಯ ತಿಳಿದು ಪ್ರತಿಕ್ರಿಯೆ ನೀಡುವುದು ಮುಖ್ಯವಾಗುತ್ತದೆ. ಇದಕ್ಕೆ ನಿಮ್ಮನ್ನು ದೂಷಿಸುವುದಿಲ್ಲ. ಆದರೆ ನಿಮ್ಮಿಂದ ಕ್ರಿಯಾತ್ಮಕ ಕೆಲಸಗಳಿಗೆ ಪ್ರತಿಕ್ರಿಯೆ ಬಂದಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು ಹಾಗೂ ಸಂತೋಷಪಡುತ್ತಿದ್ದೆ’ ಎಂದು ಸುದೀಪ್ ಬರೆದಿದ್ದಾರೆ.
Translation & interpretations are perspectives sir. Tats the reason not reacting wothout knowing the complete matter,,,matters.:) I don’t blame you @ajaydevgn sir. Perhaps it would have been a happy moment if i had received a tweet from u for a creative reason. Luv&Regards❤️ https://t.co/lRWfTYfFQi
— Kichcha Sudeepa (@KicchaSudeep) April 27, 2022
ಕಿಚ್ಚ ಸುದೀಪ್ ಹಾಗೂ ಅಜಯ್ ದೇವಗನ್ ಚರ್ಚೆಯ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ರಾಷ್ಟ್ರೀಯ ಭಾಷೆಯ ಕುರಿತ ಚರ್ಚೆಗಳು ಮುನ್ನಲೆಗೆ ಬಂದಿವೆ. ಟ್ವಿಟರ್ನಲ್ಲಿ ಕನ್ನಡ, ನ್ಯಾಷನಲ್ ಲಾಂಗ್ವೇಜ್ ಮೊದಲಾದ ವಿಚಾರಗಳು ಟ್ರೆಂಡಿಂಗ್ ಪಟ್ಟಿಯಲ್ಲಿ ಕಾಣಿಸಿಕೊಂಡಿವೆ.
Published On - 7:15 pm, Wed, 27 April 22