ರಾಯಚೂರಿನಲ್ಲಿ ಮಹರ್ಷಿ ವಾಲ್ಮೀಕಿ ಪುತ್ಥಳಿ ಅನಾವರಣಗೊಳಿಸಿದ ನಟ ಸುದೀಪ್; ನೆಚ್ಚಿನ ನಟನನ್ನು ನೋಡಲು ಮುಗಿಬಿದ್ದ ಅಭಿಮಾನಿಗಳು
ರಾಯಚೂರು ಜಿಲ್ಲೆ ಸಿರವಾರ ತಾಲೂಕಿನ ಕುರಕುಂದ ಗ್ರಾಮದಲ್ಲೇ ನಟ ಸುದೀಪ್ ದೇವಸ್ಥಾನ ನಿರ್ಮಿಸಲಾಗಿತ್ತು. ಸುದೀಪ್ ಜೊತೆ ಮಹರ್ಷಿ ವಾಲ್ಮೀಕಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ.
ರಾಯಚೂರು: ಜಿಲ್ಲೆಗೆ ನಟ ಸುದೀಪ್ ಆಗಮಿಸಿದ್ದು ಮಹರ್ಷಿ ವಾಲ್ಮೀಕಿ ಪುತ್ಥಳಿ ಅನಾವರಣಗೊಳಿಸಿದ್ದಾರೆ. ರಾಯಚೂರು ಜಿಲ್ಲೆ ಸಿರವಾರ ತಾಲೂಕಿನ ಕುರಕುಂದ ಗ್ರಾಮದಲ್ಲಿ ಪುತ್ಥಳಿ ಅನಾವರಣಗೊಳಿಸಿದ್ದಾರೆ. ಈ ವೇಳೆ ಲೇಡಿ ಪಿಎಸ್ಐ ಜೊತೆ ಓರ್ವ ಯುವಕ ಅನುಚಿತ ವರ್ತನೆ ಆರೋಪ ಕೇಳಿ ಬಂದಿದೆ. ಲೇಡಿ ಪಿಎಸ್ಐ ಗೀತಾಂಜಲಿ ಯುವಕನನ್ನ ಹಿಡಿದು ಲಾಠಿ ರುಚಿ ತೋರಿಸಿದ್ದಾರೆ. ಇದಲ್ಲದೇ ಕೆಲ ಪೊಲೀಸರ ಜೊತೆಯೂ ಆ ಯುವಕ ಅನುಚಿತ ವರ್ತನೆ ತೋರಿದ್ದು ಘಟನೆ ಬಳಿಕ ಆ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಅಭಿನಯ ಚಕ್ರವರ್ತಿ ನಟ ಸುದೀಪ್ಗೆ ದೇಶಾದ್ಯಂತ ಅಭಿಮಾನಿಗಳ ಬಳಗವೇ ಇದೆ. ಜೊತೆಗೆ ನಟ ಸುದೀಪ್ ಅದೆಷ್ಟೋ ಸಮಾಜಮುಖಿ ಕೆಲಸಗಳಲ್ಲಿ ತೊಡಗಿದ್ದಾರೆ. ಇವೆಲ್ಲಾ ಕಾರಣಗಳಿಂದ ಪ್ರೇರಣೆಗೊಳಗಾಗಿರೊ ದೇವರಾಜ್ ಅನ್ನೋ ಅಭಿಮಾನಿ, ನಟ ಸುದೀಪ್ಗಾಗಿ ದೇವಸ್ಥಾನವನ್ನೇ ಕಟ್ಟಿಸಿದ್ದರು. ರಾಯಚೂರು ಜಿಲ್ಲೆ ಸಿರವಾರ ತಾಲೂಕಿನ ಕುರಕುಂದ ಗ್ರಾಮದಲ್ಲೇ ನಟ ಸುದೀಪ್ ದೇವಸ್ಥಾನ ನಿರ್ಮಿಸಲಾಗಿತ್ತು. ಸುದೀಪ್ ಜೊತೆ ಮಹರ್ಷಿ ವಾಲ್ಮೀಕಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಇದರ ಉದ್ಘಾಟನೆಗೆಂದು ಅಭಿಮಾನಿ ದೇವರಾಜ್, ನಟ ಸುದೀಪ್ ಭೇಟಿ ಮಾಡಿದ್ದಾರೆ. ಆದ್ರೆ, ತಮ್ಮ ಮೂರ್ತಿ ಪ್ರತಿಷ್ಠಾಪನೆ ಹಾಗೂ ತಮಗಾಗೇ ತಮ್ಮ ಹೆಸರಿನಲ್ಲಿ ನಿರ್ಮಿಸಲಾದ ದೇವಸ್ಥಾನಕ್ಕೆ ನಟ ಸುದೀಪ್ ಒಪ್ಪಿಗೆ ನೀಡಿರ್ಲಿಲ್ಲ.
ನಟ ಸುದೀಪ್ ಪ್ರತಿಮೆ ಪಕ್ಕದಲ್ಲೇ ವಾಲ್ಮೀಕಿ ಮಹರ್ಷಿಯ ಪ್ರತಿಮೆ ಕೂಡ ಇದೆ. ಹೀಗಾಗಿ ಮಹಾನುಭಾವರ ಪಕ್ಕದಲ್ಲಿ ತಮ್ಮ ಪ್ರತಿಮೆ ಹಾಗೂ ದೇವಸ್ಥಾನ ನಿರ್ಮಾಣಕ್ಕೆ ನಟ ಸುದೀಪ್ ಒಪ್ಪಿರ್ಲಿಲ್ಲ. ನಾನೂ ಓಬ್ಬ ಮನುಷ್ಯ. ನಾನು ತಪ್ಪು ಮಾಡ್ತಿನಿ. ಹೀಗಾಗಿ ತಮ್ಮ ಪುತ್ಧಳಿ ತೆಗೆದು ಬೇರೆ ನಾಯಕರದ್ದು ಹಾಕಿ ಅಂತ ಹೇಳಿದ್ರು. ನಟ ಸುದೀಪ್ ಗಾಗಿಯೇ ದೇವಸ್ಥಾನ ನಿರ್ಮಿಸಲು 35-40 ಲಕ್ಷ ಖರ್ಚು ಮಾಡಲಾಗಿದೆ. ಇದಕ್ಕೆಲ್ಲಾ ಗ್ರಾಮಸ್ಥರು ಕೂಡ ಸಾಕಷ್ಡು ಶ್ರಮಪಟ್ಟಿದ್ದಾರೆ. ಸುದೀಪ್ ಹೇಳಿದಂತೆ ಅವರ ಪ್ರತಿಮೆ ತೆಗೆದು, ವೀರ ಮದಕರಿ ನಾಯಕನ ಮೂರ್ತಿ ಪ್ರತಿಸ್ಠಾಪಿಸಲಾಗಿದೆ. ಆದ್ರೆ ಸುದೀಪ್ ಅವರ ಪುತ್ಥಳಿಯನ್ನು ತಮ್ಮ ಮನೆ ದೇವರ ಕೋಣೆಯಲ್ಲಿಟ್ಟು ಬದುಕಿರುವವರೆಗೂ ಪೂಜಿಸ್ತಿನಿ ಅಂತ ಸುದೀಪ್ ಅಭಿಮಾನಿ ದೇವರಾಜ್ ಹೇಳಿದ್ದಾರೆ.
ಈ ಮಧ್ಯೆ ಇಂದು ನಟ ಸುದೀಪ್ ಖುದ್ದು ಮಹರ್ಷಿ ವಾಲ್ಮೀಕಿ ಹಾಗೂ ವೀರ ಮದಕರಿ ನಾಯಕನ ಪುತ್ಥಳಿ ಅನಾವರಣಗೊಳಿಸಿದ್ದಾರೆ. ನೆಚ್ಚಿನ ನಟ ಸುದೀಪ್ ರನ್ನು ನೋಡಲು ರಾಯಚೂರು, ಯಾದಗಿರಿ ಜಿಲ್ಲೆಯ ಸಹಸ್ರಾರು ಜನ ಆಗಮಿಸಿದ್ದಾರೆ.
ಇದನ್ನೂ ಓದಿ: ದಾವಣಗೆರೆ ರಾಗಿ ಖರೀದಿ ಕೇಂದ್ರದಲ್ಲಿ ಗೋಲ್ಮಾಲ್ ಆರೋಪ; ಎಪಿಎಂಸಿ ಆವರಣದಲ್ಲಿ ರೈತರ ಪ್ರತಿಭಟನೆ
Published On - 12:14 pm, Wed, 27 April 22