ಭುವನೇಶ್ವರ: ಒಡಿಶಾದ ಭುವನೇಶ್ವರದಲ್ಲಿ ಆತಂಕಕಾರಿ ಘಟನೆಯೊಂದು ನಡೆದಿದ್ದು, ಭುವನೇಶ್ವರದ ಖಾಸಗಿ ಕಾನೂನು ಕಾಲೇಜಿನ ಸಹಾಯಕ ಪ್ರಾಧ್ಯಾಪಕನನ್ನು ಇಂದು ತನ್ನ ತಂದೆಯನ್ನು ಕೊಲೆ ಮಾಡಿದ ಆರೋಪದ ಮೇಲೆ ಬಂಧಿಸಲಾಗಿದೆ. ಭುವನೇಶ್ವರ ಡಿಸಿಪಿ ಪ್ರತೀಕ್ ಸಿಂಗ್ ಪ್ರಕಾರ, ಸಾವನ್ನಪ್ಪಿರುವ ಸೆಂಟ್ರಲ್ ಪಿಎಸ್‌ಯು ನಾಲ್ಕೊದ ನಿವೃತ್ತ ಅಧಿಕಾರಿಯಾಗಿದ್ದ ಸುನಿಲ್ ಚೌಧರಿಗೆ ಅವರ ಮಗ ಅನಿರುದ್ಧ್ ಚೌಧರಿ ಚಾಕುವಿನಿಂದ ಎದೆ ಮತ್ತು ಹೊಟ್ಟೆಗೆ ಅನೇಕ ಬಾರಿ ಇರಿದಿದ್ದಾರೆ.
38 ವರ್ಷದ ಆರೋಪಿ ಅನಿರುದ್ಧ್ ಚೌಧರಿ ತನ್ನ ಪತ್ನಿಯೊಂದಿಗಿನ ಜಗಳದ ಹಿನ್ನೆಲೆಯಲ್ಲಿ ಮಂಚೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಕಲಹಂಗಾ ಪ್ರದೇಶದ ಅಪಾರ್ಟ್‌ಮೆಂಟ್‌ನಲ್ಲಿ ಪೋಷಕರೊಂದಿಗೆ ವಾಸಿಸುತ್ತಿದ್ದ. ಈ ವೇಳೆ ಆತ ತಂದೆಗೆ ಇರಿದಿದ್ದಾನೆ. ಇಂದು ಬೆಳಗ್ಗೆ ತಾಯಿ ಸುನೀತಾ ಅವರ ಸಮ್ಮುಖದಲ್ಲಿ ನಡೆದ ದಾರುಣ ಘಟನೆ ಇದಾಗಿದೆ. ಹಣಕಾಸಿನ ವಿವಾದಗಳು ಜಗಳಕ್ಕೆ ಕಾರಣವಾಯಿತು ಎನ್ನಲಾಗಿದೆ.
ಇದನ್ನೂ ಓದಿ: Crime News: 10 ವರ್ಷದ ಮಗಳ ಮೇಲೆ ಅತ್ಯಾಚಾರವೆಸಗಿ ಗರ್ಭಿಣಿಯಾಗಿಸಿದ ಅಪ್ಪನಿಗೆ 101 ವರ್ಷ ಜೈಲು ಶಿಕ್ಷೆ
ಈ ಕುರಿತು ಮಾಹಿತಿ ಪಡೆದ ನಂತರ, ಬೆಳಿಗ್ಗೆ 4.30ರ ಸುಮಾರಿಗೆ ಪಿಸಿಆರ್ ವ್ಯಾನ್ ಘಟನಾ ಸ್ಥಳಕ್ಕೆ ಧಾವಿಸಿತು. ತೀವ್ರವಾಗಿ ಗಾಯಗೊಂಡ ವ್ಯಕ್ತಿಯನ್ನು ಕ್ಯಾಪಿಟಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಅಲ್ಲಿ ವೈದ್ಯರು ಆ ವ್ಯಕ್ತಿ ಈಗಾಗಲೇ ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು ಎಂದು ಸಿಂಗ್ ಹೇಳಿದ್ದಾರೆ.
ವಿವಿಧ ಮೂಲಗಳಿಂದ ಭಾರೀ ಪ್ರಮಾಣದ ಸಾಲಗಳನ್ನು ಪಡೆದಿದ್ದ ಅನಿರುದ್ಧ್, ಹಣಕಾಸಿನ ನೆರವಿಗಾಗಿ ತನ್ನ ತಂದೆಯೊಂದಿಗೆ ಜಗಳವಾಡುತ್ತಿದ್ದನು ಎಂದು ಹೇಳಲಾಗಿದೆ. ಸುನೀಲ್ ತನ್ನ ಮಗನಿಗೆ ಹಣ ನೀಡಲು ನಿರಾಕರಿಸಿದಾಗ, ಪರಿಸ್ಥಿತಿ ಹಿಂಸಾತ್ಮಕ ವಾಗ್ವಾದಕ್ಕೆ ತಿರುಗಿ ಹಲ್ಲೆಗೆ ಕಾರಣವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಸಾಲ ವಾಪಸ್ ಕೇಳಿದ್ದಕ್ಕೆ ಬಟ್ಟೆ ಅಂಗಡಿಗೆ ನುಗ್ಗಿ ಮಹಿಳೆ ಮೇಲೆ ಹಲ್ಲೆ; ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಮಂಚೇಶ್ವರ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 103 (ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಫೋರೆನ್ಸಿಕ್ ತಜ್ಞರು ಅಪರಾಧ ನಡೆದ ಸ್ಥಳದಿಂದ ಅನಿರುದ್ಧ್ ಮತ್ತು ಅವರ ತಂದೆ ಬಳಸಿದ ಆಯುಧ ಮತ್ತು ಧರಿಸಿದ್ದ ಬಟ್ಟೆ ಸೇರಿದಂತೆ ಸಾಕ್ಷಿಗಳನ್ನು ಸಂಗ್ರಹಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ. ಈ ಘಟನೆಯ ಕುರಿತು ಹೆಚ್ಚಿನ ವಿವರಗಳನ್ನು ಸಂಗ್ರಹಿಸಲು ಅನಿರುದ್ಧನ ತಾಯಿಯನ್ನೂ ವಿಚಾರಣೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ