ತಿರುವನಂತಪುರಂ: ಕೇರಳದಲ್ಲಿ ಭ್ರಷ್ಟಾಚಾರದಿಂದ ಅಭಿವೃದ್ಧಿ ಕುಂಠಿತವಾಗಿದೆ. ದಶಕಗಳಿಂದ ಎರಡು ಮೈತ್ರಿಕೂಟಗಳ ಸರ್ಕಾರಗಳು ಕೇವಲ ಭ್ರಷ್ಟಾಚಾರದಲ್ಲಿ ನಿರತವಾಗಿವೆ. ಹೀಗಾಗಿ, ಕೇರಳ ರಾಜ್ಯದ ಜನರು ಬದಲಾವಣೆ ಬಯಸಿದ್ದಾರೆ ಎಂದು ಗೃಹ ಸಚಿವ ಅಮಿತ್ ಶಾ ಕೇರಳ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಇತ್ತೀಚಿಗೆ ಕೇರಳದಲ್ಲಿ ಸದ್ದು ಮಾಡುತ್ತಿರುವ ಚಿನ್ನದ ಅಕ್ರಮ ಸಾಗಾಟ ಪ್ರಕರಣವನ್ನು ಪ್ರಸ್ತಾಪಿಸಿ ವಾಗ್ದಾಳಿ ನಡೆಸಿದ ಅವರು, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೇಂದ್ರ ತನಿಖಾ ದಳಗಳು ರಾಜಕೀಯ ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ದೂರಿದ್ದರು. ಆದರೆ ಚಿನ್ನ ಮತ್ತು ಡಾಲರ್ಗಳ ಅಕ್ರಮ ಸಾಗಾಟ ಪ್ರಕರಣದ ಆರೋಪ ಹೊತ್ತಿರುವ ಅವರು ತಮ್ಮ ಕಚೇರಿಯಲ್ಲಿ ಕೆಲಸ ಮಾಡುತ್ತಾರೋ ಇಲ್ಲವೋ ಎಂದು ಪ್ರಶ್ನಿಸಬಯಸುತ್ತೇನೆ ಎಂದು ಅವರು ಟೀಕಿಸಿದ್ದಾರೆ.
ವಿಮಾನ ನಿಲ್ದಾಣದಲ್ಲಿ ಅಕ್ರಮ ಚಿನ್ನ ಸಾಗಾಟ ಮಾಡುತ್ತಿರುವುದು ಪತ್ತೆಯಾದಾಗ ಅಧಿಕಾರಿಗಳ ಮೇಲೆ ಒತ್ತಡ ಹಾಕಿದ್ದೀರೋ ಇಲ್ಲವೋ ಎಂಬುದನ್ನು ಪಿಣರಾಯಿ ವಿಜಯರನ್ ಸ್ಪಷ್ಟಪಡಿಸಬೇಕು. ಅಲ್ಲದೇ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳ ಮೇಲೆ ದಾಳಿಯನ್ನೂ ನಡೆಸಲಾಗಿತ್ತು. ಕೇರಳ ಸರ್ಕಾರ ಈ ದಾಳಿಯ ಕುರಿತು ತನಿಖೆ ನಡೆಸಿದ ಬಗ್ಗೆ ಸಹ ಕೇರಳ ಮುಖ್ಯಮಂತ್ರಿ ಸ್ಪಷ್ಟ ಉತ್ತರ ನೀಡಬೇಕು ಎಂದು ಗೃಹ ಸಚಿವ ಅಮಿತ್ ಶಾ ತೀವ್ರತರದ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಪಕ್ಷದ ಕುರಿತು ತಮ್ಮ ವಾಗ್ಬಾಣ ಹರಿಬಿಟ್ಟ ಅವರು, ‘ಪಶ್ಚಿಮ ಬಂಗಾಳದಲ್ಲಿ ಕಮ್ಯುನಿಸ್ಟ್ ಪಕ್ಷದ ಜತೆ ಹೊಂದಾಣಿಕೆ ಮಾಡಿಕೊಂಡಿರುವ ಕಾಂಗ್ರೆಸ್ ಕೇರಳದಲ್ಲಿ ಕಮ್ಯುನಿಸ್ಟರ ವಿರುದ್ಧ ಹೋರಾಡುತ್ತಿದೆ. ಕೇರಳದಲ್ಲಿ ಮುಸ್ಲಿಂ ಲೀಗ್ ಜತೆ ಗುರುತಿಸಿಕೊಂಡಿರುವ ಕಾಂಗ್ರೆಸ್ ಮಹಾರಾಷ್ಟ್ರದಲ್ಲಿ ಶಿವಸೇನೆಯ ಜತೆ ಸರ್ಕಾರ ರಚಿಸಿದೆ. ಇಂತಹ ವೈರುಧ್ಯಮಯ ಸಿದ್ಧಾಂತ ಹೊಂದಿರುವ ಪಕ್ಷಕ್ಕೆ ಯಾವ ಕಾರಣಕ್ಕೆ ಎಂತ ಚಲಾವಣೆ ಮಾಡುತ್ತೀರಿ? ಎಂದು ಕೇರಳ ಮತದಾರರನ್ನು ಉದ್ದೇಶಿಸಿ ಪ್ರಶ್ನೆ ಮಾಡಿದರು.
ಕೇರಳದ 140 ಸೀಟುಗಳಿಗೆ ಚುನಾವಣಾ ದಿನಾಂಕ ಪ್ರಕಟವಾಗಿದ್ದು, ಏಪ್ರಿಲ್ 6ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಕೇರಳ ವಿಧಾನಸಭೆಯ ಒಟ್ಟು ಸದಸ್ಯ ಬಲ 140. ಅಧಿಕಾರ ದಕ್ಕಿಸಿಕೊಳ್ಳಲು ಬೇಕಾದ ಸರಳ ಬಹುಮತ ಸಾಬೀತುಪಡಿಸಲು ಮ್ಯಾಜಿಕ್ ನಂಬರ್ 71. ಸದಾ ಎಡಪಕ್ಷಗಳ ಎಲ್ಡಿಎಫ್ ಮತ್ತು ಕಾಂಗ್ರೆಸ್ ನೇತೃತ್ವದ ಯುಡಿಎಫ್ ನಡುವೆ ಪ್ರತಿ ಬಾರಿ ಕೇರಳ ಸರ್ಕಾರದ ಅಧಿಕಾರ ಹೊಯ್ದಾಡುತ್ತಿರುತ್ತದೆ. ಈ ಸಲ ಏನಾಗಬಹುದು? ಎಂಬ ಕುತೂಹಲ ಹೆಚ್ಚುತ್ತಿದೆ.
ಇದನ್ನೂ ಓದಿ: ಕೇರಳ ರಾಜಕಾರಣ: ಎಲ್ಡಿಎಫ್, ಯುಡಿಎಫ್, ತೃತೀಯ ರಂಗ- ಶಕ್ತಿ ದೌರ್ಬಲ್ಯಗಳ ವಿಶ್ಲೇಷಣೆ
ಪೆಟ್ರೋಲ್-ಡೀಸೆಲ್ ತೆರಿಗೆ ಕಡಿತದ ವಿಚಾರದಲ್ಲಿ ಧರ್ಮಸಂಕಟದ ಸ್ಥಿತಿ: ನಿರ್ಮಲಾ ಸೀತಾರಾಮನ್