ದೆಹಲಿ: ರೈತರು ತಮ್ಮ ಬೇಡಿಕೆಯ ಬಗ್ಗೆ ಸ್ಥಿರ ನಿಲುವು ಹೊಂದಿಲ್ಲ. ರೈತ ಮುಖಂಡರು ತಮ್ಮ ಬೇಡಿಕೆ ಏನೆಂದು ಖಚಿತ ನಿಲುವು ತಿಳಿಸುತ್ತಿಲ್ಲ ಎಂದು ಬಿಜೆಪಿಯ ಮೂಲಗಳು ಆಕ್ಷೇಪ ವ್ಯಕ್ತಪಡಿಸಿವೆ. ವಿವಿಧ ರೈತ ಗುಂಪುಗಳ ಜೊತೆ ಹಲವು ಸುತ್ತಿನ ಮಾತುಕತೆ ನಡೆಸಿದ ಬಳಿಕ ಈ ವಿಚಾರ ತಿಳಿದುಬಂದಿದೆ ಎಂದಿರುವ ಬಿಜೆಪಿ, ಇದೇ ಕಾರಣದಿಂದ ಸರ್ಕಾರಕ್ಕೆ ರೈತರ ಸಮಸ್ಯೆ ಬಗೆಹರಿಸಲು ತಡೆಯಾಗುತ್ತಿದೆ ಎಂದೂ ತಿಳಿಸಿದೆ.
ಈ ಬಗ್ಗೆ ಮಾತನಾಡಿರುವ ಪಂಜಾಬ್ನ ಹಿರಿಯ ಬಿಜೆಪಿ ಮುಖಂಡರು, ರೈತರು ತಮ್ಮ ಆಂದೋಲನ ಆರಂಭಿಸಿದಾಗಲೇ ಪಂಜಾಬ್ ಬಿಜೆಪಿ ರಾಜ್ಯಾಧ್ಯಕ್ಷ ಅಶ್ವಿನಿ ಶರ್ಮ ಮತ್ತು ನಮ್ಮ ಪಕ್ಷದ ಇತರ ನಾಯಕರು ಭಾರತೀಯ ಕಿಸಾನ್ ಯೂನಿಯನ್ನ (BKU) ರೈತ ಮುಖಂಡರನ್ನು ಭೇಟಿಯಾಗಿ ಅವರ ಬೇಡಿಕೆಯನ್ನು ಆಲಿಸಿದ್ದರು ಎಂದು ಹೇಳಿದ್ದಾರೆ.
ಈ ಮೊದಲು, ಕನಿಷ್ಠ ಬೆಂಬಲ ಬೆಲೆ (MSP) ಉಳಸಿಕೊಳ್ಳಬೇಕು ಎಂಬ ಬಗ್ಗೆ ಲಿಖಿತ ರೂಪದಲ್ಲಿ ದಾಖಲೆ ನೀಡುವಂತೆ ರೈತ ನಾಯಕರು ಕೇಳಿಕೊಂಡಿದ್ದರು. ಅವರ ಅಹವಾಲನ್ನು ಕೇಂದ್ರ ಕೃಷಿ ಸಚಿವರಿಗೆ ನವೆಂಬರ್ನಲ್ಲೇ ತಿಳಿಸಲಾಗಿತ್ತು. ಸರ್ಕಾರ ಇದಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ನೀಡಿತ್ತು. ಕನಿಷ್ಠ ಬೆಂಬಲ ಬೆಲೆ ಕೊಡುವುದಾಗಿ ಲಿಖಿತ ರೂಪದಲ್ಲಿ ದಾಖಲೆ ನೀಡಲು ಒಪ್ಪಿಕೊಂಡಿತ್ತು. ಡಿ.3ರಂದು ನಡೆದ ಸಭೆಯಲ್ಲಿ ರೈತ ಮುಖಂಡರೂ ಈ ಬಗ್ಗೆ ಸಂತಸ ವ್ಯಕ್ತಪಡಿಸಿದ್ದರು. ಆದರೆ, ನಂತರ ಡಿ.5ರಂದು ನಡೆದ ಸಭೆಯಲ್ಲಿ ನೂತನ ಕೃಷಿ ಕಾಯ್ದೆಗಳನ್ನೇ ಹಿಂಪಡೆಯಬೇಕು ಎಂದು ರೈತರು ಪಟ್ಟುಹಿಡಿದಿದ್ದಾರೆ ಎಂದು ಬಿಜೆಪಿ ಮುಖಂಡರು ಹೇಳಿದ್ದಾರೆ.
ರೈತರು ತಮ್ಮ ನಿರ್ಧಾರವನ್ನು ಬದಲಿಸುತ್ತಿದ್ದಾರೆ. ರೈತರ ಜೊತೆ ಮಾತುಕತೆ ಮುಗಿಸಲು ಇದರಿಂದ ತಡೆಯಾಗುತ್ತಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ರಾಜ್ಯ ಸಚಿವ ಸೋಮ್ ಪ್ರಕಾಶ್ ಹೇಳಿದ್ದಾರೆ. ರೈತರು ಮತ್ಯಾರದೋ ಒತ್ತಡದಿಂದಾಗಿ ತಮ್ಮ ನಿಲುವು ಬದಲಿಸುತ್ತಿದ್ದಾರಾ ಎಂದು ಗೊತ್ತಿಲ್ಲ. ಆದರೆ, ಅವರಿಗೆ ಸಮಸ್ಯೆ ಬಗೆಹರಿಸಿಕೊಳ್ಳದಂತೆ ಒತ್ತಡವಿರುವಂತೆ ಕಾಣುತ್ತಿದೆ ಎಂದಿದ್ದಾರೆ.
ಡಿಸೆಂಬರ್ 3ರ ಸಭೆಯಲ್ಲಿ, ಕೇಂದ್ರವು ರೈತರ ಅಹವಾಲು ಆಲಿಸಿ ನೂತನ ಕೃಷಿ ಕಾಯ್ದೆಗಳಲ್ಲಿ ಕೆಲವು ತಿದ್ದುಪಡಿ ತರಲು ಒಪ್ಪಿಗೆ ಸೂಚಿಸಿತ್ತು. MSP, APMC ತೆರಿಗೆ, ಖಾಸಗಿ ಖರೀದಿದಾರರು ಮತ್ತು ಮಾರಾಟಗಾರರ ನೋಂದಣಿ, ಕೃಷಿ ವಿದ್ಯುತ್ ದರಪಟ್ಟಿ ಮುಂತಾದ ಸಮಸ್ಯೆಗಳ ಬಗ್ಗೆ ಮಾತುಕತೆ ನಡೆಸಿತ್ತು. ಈ ಬಗ್ಗೆ ರೈತರು ಸಂತಸ ವ್ಯಕ್ತಪಡಿಸಿದ್ದರು. ಆದರೆ, ಮುಂದಿನ ಸಭೆಯಲ್ಲಿ ಅವರು ತಮ್ಮ ನಿರ್ಧಾರ ಬದಲಿಸಿದ್ದಾರೆ ಎಂದು ಸೋಮ್ ಪ್ರಕಾಶ್ ಹೇಳಿದ್ದಾರೆ.
ಒಂದೊಮ್ಮೆ ಕೆಲವು ರೈತ ಮುಖಂಡರು ತಾವು ಸರ್ಕಾರದೊಂದಿಗೆ ಮಾತುಕತೆಗೆ ಸಿದ್ಧವಿರುವುದಾಗಿ ಹೇಳುತ್ತಾರೆ. ಮತ್ತೊಮ್ಮೆ, ಇತರ ರೈತ ನಾಯಕರನ್ನೂ ಮಾತುಕತೆಗೆ ಒಪ್ಪಿಸುವುದಾಗಿ ಹೇಳುತ್ತಾರೆ. ಬಳಿಕ ನೂತನ ಕಾಯ್ದೆಗಳನ್ನು ಹಿಂಪಡೆಯಲೇಬೇಕು ಎಂದು ಪಟ್ಟು ಹಿಡಿದು ಕೂರುತ್ತಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ರೈತರೊಂದಿಗೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಲು ಮುಂದಿನ ದಿನಾಂಕವನ್ನು ಶೀಘ್ರವೇ ತಿಳಿಸುವುದಾಗಿ ಸರ್ಕಾರ ಹೇಳಿದೆ.
ಕೃಷಿ ಕಾಯ್ದೆಗಳ ಕುರಿತು ‘ತಪ್ಪು ಕಲ್ಪನೆ’ ದೂರ ಮಾಡಲು ಯತ್ನ: ರೈತ ಸಮುದಾಯದ ಮನವೊಲಿಸಲು ಹೊರಟ ಬಿಜೆಪಿ
Published On - 2:46 pm, Wed, 16 December 20