ಲೋಕಲ್ ಟ್ರೇನ್ವೊಂದು ಪ್ಲಾಟ್ಫಾರ್ಮ್ಗೆ ನುಗ್ಗಿ, ಅದರ ತುದಿಯಲ್ಲಿ ಇದ್ದ ಬಫರ್ಗೆ ಡಿಕ್ಕಿ ಹೊಡೆದ ಘಟನೆ ಚೆನ್ನೈನ ಬೀಚ್ ರೈಲ್ವೆ ಸ್ಟೇಶನ್ನಲ್ಲಿ ನಡೆದಿದೆ. ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಆದರೆ ಪ್ಲಾಟ್ಫಾರ್ಮ್ನ ಮೇಲಿದ್ದ ಐಆರ್ಸಿಟಿಸಿಗೆ ಸೇರಿದ ನೀರು ಮಾರಾಟ ಅಂಗಡಿಗೆ ಹಾನಿಯಾಗಿದೆ. ಅಂದಹಾಗೇ, ಇದೊಂದು ಸಬ್ಅರ್ಬನ್ (ಅಲ್ಲೇ ಸ್ಥಳೀಯವಾಗಿ ಸಂಚರಿಸುವ) ರೈಲಾಗಿದ್ದು, ಘಟನೆ ನಡೆದಾಗ ಅದರೊಳಗೆ ಪ್ರಯಾಣಿಕರು ಇರಲಿಲ್ಲ. ಆದರೆ ಪ್ಲಾಟ್ಫಾರ್ಮ್ ಮೇಲೆ ಒಂದಷ್ಟು ಮಂದಿ ನಿಂತಿದ್ದರು ಎಂದು ವರದಿಯಾಗಿದೆ. ಇದೊಂದು ಎಲೆಕ್ಟ್ರಿಕಲ್ ಮಲ್ಟಿಪಲ್ ಯುನಿಟ್ ಆಗಿದ್ದು, ಬೀಚ್ ಸ್ಟೇಶನ್ನಿಂದ ಹೊರಟ ಸಂದರ್ಭದಲ್ಲಿ ರೈಲಿನಲ್ಲಿ ವಿದ್ಯುತ್ ಅಡಚಣೆಯುಂಟಾಗಿ ಬ್ರೇಕ್ ಫೇಲ್ ಆಗಿದ್ದರಿಂದ ಹೀಗಾಯಿತು. ಸಂಜೆ ಸುಮಾರು 4.25ರ ಹೊತ್ತಿಗೆ ಘಟನೆ ನಡೆದಿದೆ. ಲೋಕೋ ಪೈಲಟ್ ಶಂಟರ್ ಶಂಕರ್ ಎಂಬುವರು ರೈಲು ಚಾಲನೆ ಮಾಡುತ್ತಿದ್ದರು ಎಂದು ರೈಲ್ವೆ ಪೊಲೀಸ್ ತಿಳಿಸಿದ್ದಾರೆ.
ಈ ರೈಲು ಬೀಚ್ ಸ್ಟೇಶನ್ನಿಂದ ಚೆಂಗಲ್ಪಟ್ಟುವಿಗೆ ಹೋಗಬೇಕಿತ್ತು. ಸಂಜೆ 4.35ರ ಹೊತ್ತಿಗೆ ಬೀಚ್ ಸ್ಟೇಶನ್ ಬಿಡಬೇಕಿತ್ತು. ಹಾಗೇ, ರೈಲು ನಿಧಾನಕ್ಕೆ ಚಲಿಸುತ್ತಿತ್ತು. ಪ್ಲಾಟ್ಫಾರ್ಮ್ನ ತುತ್ತತುದಿಗೆ ಹೋಗುವಷ್ಟರಲ್ಲಿ ಲೋಕೊ ಪೈಲಟ್ ಶಂಕರ್ ನಿಯಂತ್ರಣ ಕಳೆದುಕೊಂಡರು. ಒಮ್ಮೆಲೇ ರೈಲಿನ ವೇಗ ಜಾಸ್ತಿ ಆಗಿ ಪ್ಲಾಟ್ಫಾರ್ಮ್ಗೆ ಹೊಡೆಯಿತು. ಹೀಗಾಗಿ ರೈಲಿನ ಮೊದಲ ಕೋಚ್ (ಮೋಟಾರ್ ಕೋಚ್) ಪ್ಲಾಟ್ಫಾರ್ಮ್ ಮೇಲೆ ಹತ್ತಿತು. ಟ್ರೇಲರ್ ಕೋಚ್ ಪ್ಲಾಟ್ಫಾರ್ಮ್ ಗೋಡೆಗೆ ಹೊಡೆಯಿತು. ಶಂಕರ್ ರೈಲಿನಿಂದ ಜಿಗಿದು ಪಾರಾದರು. ಅವರಿಗೆ ಯಾವುದೇ ಗಾಯವಾಗಿಲ್ಲ ಎಂದೂ ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಘಟನೆ ನಡೆದ ಬಳಿಕ ರೈಲು ಸಂಚಾರದಲ್ಲಿ ಅಡಚಣೆಯಾಗಿಲ್ಲ. ಎಂದಿನಂತೆ ರೈಲು ಸಂಚಾರ ನಡೆದಿದೆ. ಲೋಕೋ ಕ್ಯಾಬಿನ್ನಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿತು. ಹೀಗಾಗಿ ಬ್ರೇಕ್ ಫೇಲ್ ಆಯಿತು ಎಂದು ಲೋಕೋಪೈಲಟ್ ಹೇಳಿದ್ದಾರೆ. ಆದರೆ ಈ ಬಗ್ಗೆ ಇನ್ನಷ್ಟು ತನಿಖೆ ನಡೆಯಲಿದೆ. ಹಾಗೇ, ಬೀಚ್ ಸ್ಟೇಶನ್ನಲ್ಲಿ ಹಾಳಾದ ಪ್ಲಾಟ್ಫಾರ್ಮ್ ರಿಪೇರಿ ಕಾರ್ಯವೂ ನಡೆಯುತ್ತಿದೆ ಎಂದು ದಕ್ಷಿಣ ರೈಲ್ವೆ ಚೆನ್ನೈ ವಿಭಾಗದ ಪಿಆರ್ಒ ಎಲುಮಲೈ ತಿಳಿಸಿದ್ದಾರೆ. ನಿನ್ನೆ ಭಾನುವಾರ ಆಗಿದ್ದರಿಂದ ಜನರೂ ಕಡಿಮೆಯಿದ್ದರು. ಆದರೆ ಬೇರೆ ವಾರಗಳಲ್ಲಿ ಪ್ಲಾಟ್ಫಾರ್ಮ್ನಲ್ಲಿ, ಅದರಲ್ಲೂ ಐಆರ್ಸಿಟಿಸಿಯ ನೀರಿನ ಅಂಗಡಿ ಬಳಿ ತುಂಬ ಜನ ಇರುತ್ತಾರೆ. ಅಪಘಾತ ಆಗುವ ಸಂದರ್ಭದಲ್ಲಿ ರೈಲು ತುಂಬ ನಿಧಾನವಾಗಿ ಸಂಚರಿಸುತ್ತಿತ್ತು ಎಂದು ಘಟನೆ ವೇಳೆ ಸ್ಥಳದಲ್ಲಿದ್ದ ಜನರು ಹೇಳಿದ್ದಾಗಿ ಕೆಲವು ಮಾಧ್ಯಮಗಳು ವರದಿ ಮಾಡಿವೆ.
Published On - 10:37 am, Mon, 25 April 22