ತಮಿಳುನಾಡಿನಲ್ಲಿ ಬಿಜೆಪಿ-ಪಿಎಂಕೆ ನಡುವೆ ಸೀಟು ಹಂಚಿಕೆ ಮಾತುಕತೆ ಅಂತಿಮ
ತಮಿಳುನಾಡಿನ ಪ್ರಾದೇಶಿಕ ಪಕ್ಷವಾಗಿರುವ ಪಿಎಂಕೆಯೊಂದಿಗೆ ಎನ್‌ಡಿಎ ಮೈತ್ರಿ ಮಾಡಿಕೊಂಡಿದ್ದು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಿಎಂಕೆ 10 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ.
ಏಪ್ರಿಲ್ನಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆ(Lok Sabha Election)ಗೆ ತಮಿಳುನಾಡಿನಲ್ಲಿ ಪಿಎಂಕೆ ಹಾಗೂ ಬಿಜೆಪಿ ಮೈತ್ರಿ ಮಾಡಿಕೊಂಡಿದ್ದು, ಸೀಟು ಹಂಚಿಕೆ ಮಾತುಕತೆಯನ್ನು ಪೂರೈಸಿದೆ. ಬಿಜೆಪಿ ಜತೆ ಮಂಗಳವಾರ ಬೆಳಗ್ಗೆ ಸಭೆ ನಡೆದಿದ್ದು, ಸೀಟು ಹಂಚಿಕೆ ಒಪ್ಪಂದವನ್ನು ಅಂತಿಮಗೊಳಿಸಲಾಗಿದೆ. ಬಿಜೆಪಿಯು ಪ್ರಾದೇಶಿಕ ಪಕ್ಷವಾಗಿರುವ ಪಾಟ್ಟಾಳಿ ಮಕ್ಕಳ್ ಕಚ್ಚಿ(ಪಿಎಂಕೆ)ಗೆ 10 ಸ್ಥಾನಗಳನ್ನು ನೀಡಿದೆ. ಉತ್ತರ ತಮಿಳುನಾಡಿನ ಬಲ ರಾಜಕೀಯ ಶಕ್ತಿಯಾಗಿರುವ ಪಿಎಂಕೆ ಬಿಜೆಪಿ ನೇತೃತ್ವದ ಎನ್‌ಡಿಎ ಸೇರಲು ನಿರ್ಧರಿಸಿದ ಒಂದು ದಿನದ ನಂತರ ಈ ಬೆಳವಣಿಗೆ ನಡೆದಿದೆ.
ಪಿಎಂಕೆ ಜೊತೆ ಮೈತ್ರಿ ಮಾಡಿಕೊಳ್ಳುವ ನಿರೀಕ್ಷೆಯಲ್ಲಿದ್ದ ಪ್ರಮುಖ ವಿರೋಧ ಪಕ್ಷವಾದ ಎಐಎಡಿಎಂಕೆಗೆ ಈ ಕ್ರಮ ಹಿನ್ನಡೆಯಾಗಿದೆ. ಇಂದು ಬೆಳಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಕೆ ಅಣ್ಣಾಮಲೈ ಮತ್ತು ಪಿಎಂಕೆ ಸಂಸ್ಥಾಪಕ ರಾಮದಾಸ್ ಅವರ ತೈಲಪುರಂ ನಿವಾಸದಲ್ಲಿ ಸಭೆ ನಡೆಸಿ ಒಪ್ಪಂದಕ್ಕೆ ಸಹಿ ಹಾಕಿದರು.
ಪಿಎಂಕೆ ವನ್ನಿಯಾರ್ ಸಮುದಾಯದ ಪ್ರಾಬಲ್ಯದ ಪಕ್ಷವಾಗಿದೆ ಮತ್ತು ರಾಜ್ಯದ ಉತ್ತರದ ಕೆಲವು ಜಿಲ್ಲೆಗಳಲ್ಲಿ ಗಮನಾರ್ಹ ಪ್ರಭಾವವನ್ನು ಹೊಂದಿದೆ.
ಮತ್ತಷ್ಟು ಓದಿ: ಲೋಕಸಭಾ ಚುನಾವಣೆ: ಪಶುಪತಿ ಪರಾಸ್ ಬಿಟ್ಟು, ಚಿರಾಗ್ ಪಾಸ್ವಾನ್ ಆಯ್ಕೆ ಮಾಡಿದ ಬಿಜೆಪಿ
ಅಣ್ಣಾಮಲೈ ಹೇಳಿದ್ದೇನು? ಪಿಎಂಕೆ ಎನ್‌ಡಿಎಯಲ್ಲಿ ತಮಿಳುನಾಡಿನ 10 ಸ್ಥಾನಗಳಿಂದ ಸ್ಪರ್ಧಿಸಲಿದೆ ಎಂದು ಅಣ್ಣಾಮಲೈ ನಂತರ ಪಿಎಂಕೆ ಅಧ್ಯಕ್ಷ ಮತ್ತು ರಾಜ್ಯಸಭಾ ಸಂಸದ ಡಾ.ಅನ್ಬುಮಣಿ ರಾಮದಾಸ್ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಪಿಎಂಕೆ ಕಳೆದ 10 ವರ್ಷಗಳಿಂದ ಎನ್‌ಡಿಎಯಲ್ಲಿದೆ, ಪ್ರಧಾನಿ ನರೇಂದ್ರ ಮೋದಿ ಅವರು ಪ್ರಸ್ತುತ ಮಾಡುತ್ತಿರುವ ಸಮಾಜದ ಹಿತದೃಷ್ಟಿಯಿಂದ ಕ್ರಾಂತಿಕಾರಿ ಆಲೋಚನೆಗಳನ್ನು ಜಾರಿಗೆ ತರಲು ಅವರು ಬಯಸಿದ್ದಾರೆ ಎಂದು ಅಣ್ಣಾಮಲೈ ರಾಮದಾಸ್ ಅವರನ್ನು ಶ್ಲಾಘಿಸಿದರು.
ಉಭಯ ಪಕ್ಷಗಳ ಪ್ರಮುಖರ ನಡುವೆ ನಡೆದ ಸಭೆಯಲ್ಲಿ ಕೇಂದ್ರ ಸಚಿವ ಎಲ್.ಮುರುಗನ್ ಉಪಸ್ಥಿತರಿದ್ದರು. ಮಂಗಳವಾರ ಸೇಲಂ ಜಿಲ್ಲೆಯಲ್ಲಿ ನಡೆಯಲಿರುವ ರ್ಯಾಲಿಯಲ್ಲಿ ರಾಮದಾಸ್ ಅವರು ಪ್ರಧಾನಿ ಮೋದಿಯವರೊಂದಿಗೆ ಪಾಲ್ಗೊಳ್ಳಬಹುದು ಎಂದು ಹೇಳಲಾಗುತ್ತಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ