ಲೋಕಸಭಾ ಚುನಾವಣೆ(Lok Sabha Election) ಘೋಷಣೆಯಾಗುತ್ತಿದ್ದಂತೆ ಮೈತ್ರಿ ಪರ್ವ ಶುರುವಾಗಿದೆ. ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್ ಠಾಕ್ರೆ ಗೃಹ ಸಚಿವ ಅಮಿತ್ ಶಾರನ್ನು ಭೇಟಿಯಾಗಿದ್ದಾರೆ. ಸುಮಾರು ಅರ್ಧಗಂಟೆಗಳ ಕಾಲ ಮಾತುಕತೆ ನಡೆಸಿದ್ದಾರೆ.
ಲೋಕಸಭೆ ಚುನಾವಣೆಗೆ ಮುನ್ನವೇ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಬಲಗೊಳ್ಳಲಿದೆ. ರಾಜ್ ಠಾಕ್ರೆ ಅವರ ಪಕ್ಷ ಎಂಎನ್‌ಎಸ್ ಎನ್‌ಡಿಎ ಸೇರುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ನಾಯಕ ರಾಜ್ ಠಾಕ್ರೆ ಮಂಗಳವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ದೆಹಲಿಯ ಅವರ ನಿವಾಸದಲ್ಲಿ ಭೇಟಿಯಾದರು.
ಕಳೆದ ನಾಲ್ಕು ದಿನಗಳಲ್ಲಿ ದೆಹಲಿಗೆ ಠಾಕ್ರೆ ಅವರ ಎರಡನೇ ಭೇಟಿ ಇದಾಗಿದೆ. ಏಕನಾಥ್ ಶಿಂಧೆಯವರ ಶಿವಸೇನೆಗೆ ಬಿಜೆಪಿ ನಿರೀಕ್ಷಿಸಿದಷ್ಟು ಬೆಂಬಲ ಸಿಗುತ್ತಿಲ್ಲ. ರಾಜ್ ಠಾಕ್ರೆ ಅವರ ಪಕ್ಷವು ಮುಂಬೈ, ಕೊಂಕಣ, ಪುಣೆ, ನಾಸಿಕ್‌ನಂತಹ ಪ್ರದೇಶಗಳಲ್ಲಿ ಪ್ರಬಲವಾಗಿದ್ದು ಎನ್‌ಡಿಎ ಲಾಭವಾಗಬಹುದು ಎನ್ನುವ ಭರವಸೆ ಇದೆ.
ಅಮಿತ್ ಶಾ ಅವರೊಂದಿಗಿನ ರಾಜ್ ಠಾಕ್ರೆ ಅವರ ಈ ಸಭೆಯು ಮಹಾರಾಷ್ಟ್ರದಲ್ಲಿ ಲೋಕಸಭೆ ಚುನಾವಣೆಯಲ್ಲಿ ಮೈತ್ರಿಯನ್ನು ಬಲಪಡಿಸಲು ರಾಜ್ ಠಾಕ್ರೆ ಅವರೊಂದಿಗೆ ಮೈತ್ರಿ ಮಾಡಿಕೊಳ್ಳಲು ಭಾರತೀಯ ಜನತಾ ಪಕ್ಷ (ಬಿಜೆಪಿ) ಸಿದ್ಧವಾಗಿದೆ ಎಂಬುದರ ಸೂಚನೆಯಾಗಿದೆ.
ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಎನ್‌ಡಿಎ ಮೈತ್ರಿಕೂಟದ ಭಾಗವಾಗುವುದು ಬಹುತೇಕ ಖಚಿತವಾಗಿದೆ. ಮೈತ್ರಿ ಸೂತ್ರವನ್ನು ಅಂತಿಮಗೊಳಿಸಲು ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನಿವಾಸದಲ್ಲಿ ಭೇಟಿಯಾಗಿದ್ದಾರೆ.
ಮತ್ತಷ್ಟು ಓದಿ: ತಮಿಳುನಾಡಿನಲ್ಲಿ ಬಿಜೆಪಿ-ಪಿಎಂಕೆ ನಡುವೆ ಸೀಟು ಹಂಚಿಕೆ ಮಾತುಕತೆ ಅಂತಿಮ
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಅವರು ರಾಜ್ ಠಾಕ್ರೆ ಅವರನ್ನು ಭೇಟಿ ಮಾಡಿ ಮೈತ್ರಿ ಬಗ್ಗೆ ಚರ್ಚಿಸಿದರು ನಂತರ ಇಬ್ಬರೂ ನಾಯಕರು ಅಮಿತ್ ಶಾ ನಿವಾಸಕ್ಕೆ ತಲುಪಿದ್ದರು. ರಾಜ್ ಠಾಕ್ರೆ ಎನ್‌ಡಿಎ ಮೈತ್ರಿಕೂಟಕ್ಕೆ ಸೇರ್ಪಡೆಯಾಗುವುದರೊಂದಿಗೆ ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಲಾಭವಾಗಲಿದೆ. ರಾಜ್ ಠಾಕ್ರೆ ಅವರು ದಿವಂಗತ ಬಾಳಾಸಾಹೇಬ್ ಠಾಕ್ರೆಯವರ ಸೋದರಳಿಯರಾಗಿದ್ದಾರೆ.
ದಕ್ಷಿಣ ಮುಂಬೈ ಮತ್ತು ಮಹಾರಾಷ್ಟ್ರದ ಶಿರಡಿಯ ಈ ಎರಡು ಸ್ಥಾನಗಳಿಗೆ ರಾಜ್ ಠಾಕ್ರೆ ಬೇಡಿಕೆ ಇಟ್ಟಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ. ಮಾತುಕತೆಯಲ್ಲಿ ಈ ಸ್ಥಾನಗಳು ಇತ್ಯರ್ಥವಾದರೆ, ಅವರೂ ಎನ್‌ಡಿಎ ಸೇರಬಹುದು.
ಎನ್ಡಿಎಯಲ್ಲಿ ಬಿಜೆಪಿ ಹೊರತುಪಡಿಸಿ, ಅದರಲ್ಲಿ ಶಿವಸೇನೆ (ಏಕನಾಥ್ ಶಿಂಧೆ), ಅಜಿತ್ ಪವಾರ್ ಅವರ ಎನ್‌ಸಿಪಿ ಮತ್ತು ರಾಮದಾಸ್ ಅಠಾವಳೆ ಅವರ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದಂತಹ ಪಕ್ಷಗಳು ಸೇರಿವೆ. ಹೀಗಿರುವಾಗ ಎಂಎನ್‌ಎಸ್ ಕೂಡ ಈ ಮೈತ್ರಿಕೂಟಕ್ಕೆ ಸೇರ್ಪಡೆಗೊಂಡರೆ ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಈ ಎಲ್ಲ ಪಕ್ಷಗಳ ನಡುವೆ ಮಾತುಕತೆ ಹೇಗೆ ಸಾಧ್ಯ ಎಂಬುದನ್ನು ಕಾದು ನೋಡಬೇಕಿದೆ.
ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು ಈ ಬಾರಿ ಮಹಾರಾಷ್ಟ್ರದ 48 ರಲ್ಲಿ 45ಕ್ಕೂ ಹೆಚ್ಚಿನ ಲೋಕಸಭಾ ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ಹೊಂದಿದೆ. ಕೇಂದ್ರದಲ್ಲಿ ಎನ್‌ಡಿಎ 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಗುರಿ ಹೊಂದಿದ್ದು, ಬಿಜೆಪಿ ಏಕಾಂಗಿಯಾಗಿ 370ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಗುರಿ ಹೊಂದಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ