ವಿದೇಶಿ ಮಹಿಳೆಯ ತೊಡೆ ಮೇಲೆ ಜಗನ್ನಾಥ ಸ್ವಾಮಿ ಟ್ಯಾಟೂ; ಒಡಿಶಾದಲ್ಲಿ ಭಾರೀ ಆಕ್ರೋಶ

ಒಡಿಶಾದ ಭುವನೇಶ್ವರದ ಪಾರ್ಲರ್‌ನಲ್ಲಿ ವಿದೇಶಿ ಮಹಿಳೆಯೊಬ್ಬರ ತೊಡೆಯ ಮೇಲೆ ಹಾಕಲಾದ ಪುರಿ ಜಗನ್ನಾಥ ಸ್ವಾಮಿಯ ಟ್ಯಾಟೂ ಹಾಕಿರುವ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ದೇವರ ಫೋಟೋವನ್ನು ದೇಹದ ತೊಡೆಯ ಸ್ಥಳದಲ್ಲಿ ಹಾಕಿಕೊಂಡಿರುವುದನ್ನು ನೋಡಿ ಬೇಸರ ವ್ಯಕ್ತಪಡಿಸಿದ ಜಗನ್ನಾಥ ಸ್ವಾಮಿಯ ಭಕ್ತರು ಪ್ರತಿಭಟನೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಬ್ಬರನ್ನು ಬಂಧಿಸಲಾಗಿದೆ.

ವಿದೇಶಿ ಮಹಿಳೆಯ ತೊಡೆ ಮೇಲೆ ಜಗನ್ನಾಥ ಸ್ವಾಮಿ ಟ್ಯಾಟೂ; ಒಡಿಶಾದಲ್ಲಿ ಭಾರೀ ಆಕ್ರೋಶ
Lord Jagannath Tattoo

Updated on: Mar 03, 2025 | 10:30 PM

ಭುವನೇಶ್ವರ (ಮಾರ್ಚ್ 3): ವಿದೇಶಿ ಮಹಿಳೆಯ ತೊಡೆಯ ಮೇಲೆ ಜಗನ್ನಾಥ ದೇವರ ಹಚ್ಚೆ ಹಾಕಿಸಿಕೊಂಡ ಘಟನೆ ಒಡಿಶಾದಲ್ಲಿ ಆಕ್ರೋಶಕ್ಕೆ ಕಾರಣವಾಗಿದ್ದು, ಆ ಟ್ಯಾಟೂ ಚಿತ್ರಿಸಿದ ಕಲಾವಿದ ಮತ್ತು ಅವರ ಬಾಸ್ ಇಬ್ಬರನ್ನುಕೂಡ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಭುವನೇಶ್ವರದ ಪಾರ್ಲರ್‌ನಲ್ಲಿ ಬಿಡಿಸಿದ ಟ್ಯಾಟೂವಿನ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಆಕೆಯ ದೇಹದ ಮೇಲೆ “ಅನುಚಿತ” ಸ್ಥಳದಲ್ಲಿ ದೇವರ ಆಕೃತಿಯನ್ನು ನೋಡಿ ಬೇಸರ ವ್ಯಕ್ತಪಡಿಸಿದ ಜಗನ್ನಾಥನ ಭಕ್ತರು ಪ್ರತಿಭಟನೆ ನಡೆಸಿದ್ದಾರೆ.

ಈ ವಿವಾದದ ನಂತರ, ಸರ್ಕಾರೇತರ ಸಂಸ್ಥೆಯಲ್ಲಿ ಕೆಲಸ ಮಾಡುವ ಮಹಿಳೆ ಮತ್ತು ಹಚ್ಚೆ ಹಾಕಿಸಿಕೊಂಡ ಪಾರ್ಲರ್‌ನ ಮಾಲೀಕರು ಸಾಮಾಜಿಕ ಮಾಧ್ಯಮದಲ್ಲಿ ಸಾರ್ವಜನಿಕ ಕ್ಷಮೆ ಯಾಚಿಸಿದ್ದಾರೆ. ಭಾನುವಾರ ಸಂಜೆ ಕೆಲವು ಜಗನ್ನಾಥ ಭಕ್ತರು ಸಾಹಿದ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಬಿಎನ್‌ಎಸ್ ಸೆಕ್ಷನ್ 299 (ಯಾವುದೇ ವರ್ಗದ ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವ ಮೂಲಕ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.

ಇದನ್ನೂ ಓದಿ: ಒಂದೇ ವಾರದಲ್ಲಿ 2ನೇ ಬಾರಿ ಪುರಿ ಜಗನ್ನಾಥ ದೇವಾಲಯದ ರತ್ನ ಭಂಡಾರದ ಬಾಗಿಲು ಓಪನ್; ಕಾರಣ ಇಲ್ಲಿದೆ

ಈ ಕುರಿತಾದ ತನಿಖೆಯ ಸಮಯದಲ್ಲಿ, ವಿದೇಶಿ ಮಹಿಳೆ ಮಾರ್ಚ್ 1ರಂದು ಟ್ಯಾಟೂ ಅಂಗಡಿಗೆ ಭೇಟಿ ನೀಡಿರುವುದು ಕಂಡುಬಂದಿದೆ. ಟ್ಯಾಟೂ ಅಂಗಡಿ ಮಾಲೀಕ ರಾಕಿ ರಂಜನ್ ಬಿಸೋಯ್ ಅವರ ಸೂಚನೆಯ ಮೇರೆಗೆ, ಅಶ್ವಿನಿ ಕುಮಾರ್ ಪ್ರಧಾನ್ ಆ ಮಹಿಳೆಯ ತೊಡೆಯ ಮೇಲೆ ಟ್ಯಾಟೂ ಚಿತ್ರಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ಹೇಳಿದರು. ಬಿಸೋಯ್ ಹಾಕಿದ ಟ್ಯಾಟೂ ಹೊಂದಿರುವ ವಿದೇಶಿ ಮಹಿಳೆ ಆ ಫೋಟೋವನ್ನು ಕ್ಲಿಕ್ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಇದು ಬೇಗ ವೈರಲ್ ಆಯಿತು.

ಇದನ್ನೂ ಓದಿ: ಪುರಿ ಜಗನ್ನಾಥ ದೇವಸ್ಥಾನಕ್ಕೆ 10 ಬ್ಯಾಟರಿ ಚಾಲಿತ ವಾಹನಗಳನ್ನು ಹಸ್ತಾಂತರಿಸಿದ ಪ್ರಲ್ಹಾದ್ ಜೋಶಿ

ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಕ್ಷಮೆ ಕೋರಿರುವ ವಿದೇಶಿ ಮಹಿಳೆ, ನಾನು ಯಾರಿಗೂ ಕಾಣದ ಜಾಗದಲ್ಲಿ ಜಗನ್ನಾಥನ ಟ್ಯಾಟೂ ಹಾಕೆಂದು ಹೇಳಿದೆ. ನಾನು ನಿಜವಾಗಿಯೂ ಜಗನ್ನಾಥ ಸ್ವಾಮಿಯ ಭಕ್ತೆ. ಇದು ಇಷ್ಟು ದೊಡ್ಡ ತಪ್ಪೆಂದು ನನಗೆ ಗೊತ್ತಿರಲಿಲ್ಲ. ನನ್ನನ್ನು ಕ್ಷಮಿಸಿ, ನಾನು ಈ ಟ್ಯಾಟೂವನ್ನು ತೆಗೆಸಿಕೊಳ್ಳುತ್ತೇನೆ ಎಂದು ಆಕೆ ಕೈ ಮುಗಿದು ಮನವಿ ಮಾಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ