ಪತ್ತನಂತಿಟ್ಟ (ಕೇರಳ) ಮಾರ್ಚ್ 15: ಮುಂಬರುವ ಲೋಕಸಭೆ ಚುನಾವಣೆಯಲ್ಲಿ (Lok sabha Election) ಕೇರಳದಿಂದ (Kerala) ಬಿಜೆಪಿ ಸೀಟುಗಳನ್ನು ಗೆಲ್ಲಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಶುಕ್ರವಾರ ಹೇಳಿದ್ದಾರೆ. ಪತ್ತನಂತಿಟ್ಟದಲ್ಲಿ ಬಿಜೆಪಿ ಅಭ್ಯರ್ಥಿ ಅನಿಲ್ ಆ್ಯಂಟನಿ ಪರ ಪ್ರಚಾರ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಈ ಬಾರಿ ಕೇರಳದಲ್ಲಿ ಕಮಲ ಅರಳಲಿದೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 400 ಸೀಟುಗಳನ್ನು ಗೆಲ್ಲುವ ಭರವಸೆ ಇದೆ. ಅದೇ ವೇಳೆ ಈ ಬಾರಿ ಕೇರಳದಲ್ಲಿ ತಮ್ಮ ಪಕ್ಷ ಎರಡಂಕಿ ಸೀಟು ಪಡೆಯುವುದಾಗಿ ಮೋದಿ ಹೇಳಿದ್ದಾರೆ.
ಮಲಯಾಳಂನಲ್ಲಿ ಭಾಷಣ ಆರಂಭಿಸಿ ಮಾತನಾಡಿದ ಮೋದಿ, ರಾಜ್ಯದ ಜನರು ಭ್ರಷ್ಟ ಮತ್ತು ಅಸಮರ್ಥ ಸರ್ಕಾರದಿಂದ ಬಳಲುತ್ತಿದ್ದಾರೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಎಡಪಕ್ಷ ಮತ್ತು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಭ್ರಷ್ಟಾಚಾರ ಮತ್ತು ಅದಕ್ಷತೆಯಿಂದ ಪೀಡಿತ ಸರ್ಕಾರಗಳ ಅಡಿಯಲ್ಲಿ ರಾಜ್ಯದ ಜನರು ಕಷ್ಟಗಳನ್ನು ಸಹಿಸಿಕೊಂಡಿದ್ದಾರೆ ಎಂದಿದ್ದಾರೆ.
The enthusiasm in Pathanamthitta assures me that the ‘Lotus’ will bloom in Kerala. Addressing a massive rally. Do watch!https://t.co/J6anmZ9cmD
— Narendra Modi (@narendramodi) March 15, 2024
ರಾಷ್ಟ್ರೀಯ ಮಟ್ಟದಲ್ಲಿ ಎಲ್‌ಡಿಎಫ್ ಮತ್ತು ಯುಡಿಎಯು ಒಂದಾಯಿತು. ಕೇರಳದಲ್ಲಿ ಮಾತ್ರ ಅವರು ಹೋರಾಡಿ ಜನರನ್ನು ಕಬಳಿಸುತ್ತಿದ್ದಾರೆ. ತ್ರಿಪುರದಲ್ಲೂ ತಮಿಳುನಾಡಿನಲ್ಲೂ ಅವರು ಹೇಳ ಹೆಸರಿಲ್ಲದಂತಾದರು. ಕಾಂಗ್ರೆಸ್ ಪಕ್ಷದ್ದು ಸೋಲಾರ್ ಹಗರಣ ಆಗಿದ್ದರೆ, ಎಲ್ಡಿಎಫ್ನದ್ದು ಚಿನ್ನದ ಹಗರಣ. ಅಕ್ರಮ ರಾಜಕೀಯ ಮತ್ತು ತಾರತಮ್ಯವೇ ಎರಡೂ ಪಕ್ಷಗಳ ಉದ್ದೇಶ ಎಂದು ಮೋದಿ ಕಾಂಗ್ರೆಸ್ ಮತ್ತು ಎಲ್‌ಡಿಎಫ್ ವಿರುದ್ಧ ಟೀಕಾಪ್ರಹಾರ ಮಾಡಿದ್ದಾರೆ. ಮಲಯಾಳಿಗಳು ಪ್ರಗತಿಪರ ಚಿಂತನೆಯವರು. ಕಾಂಗ್ರೆಸ್ ಮತ್ತು ಎಲ್ ಡಿಎಫ್ ಪುರಾತನ ಕಾಲದ ಚಿಂತನೆಯುಳ್ಳವರು ಎಂದು ಮೋದಿ ಹೇಳಿದ್ದಾರೆ.
“ಕಳೆದ 10 ವರ್ಷಗಳಲ್ಲಿ, ನಾವು ಪ್ರತಿ ಪ್ರದೇಶದ ಪ್ರತಿಯೊಂದು ವರ್ಗದ ಜನರಿಗೆ ಸಾಧ್ಯವಾದಷ್ಟು ಎಲ್ಲಾ ಪ್ರಯತ್ನಗಳನ್ನು ಮಾಡಿದ್ದೇವೆ. ನಾವು ಯುದ್ಧದಲ್ಲಿ ಸಿಲುಕಿಕೊಂಡಿದ್ದ ಇರಾಕ್‌ನಿಂದ ನರ್ಸ್ಗಳನ್ನು ಮರಳಿ ಕರೆತಂದಿದ್ದೇವೆ. ನಾವು ಬಿಕ್ಕಟ್ಟಿನ ನಡುವೆ ಸಿಲುಕಿಕೊಂಡಿದ್ದ ಪಾದ್ರಿಗಳನ್ನು ಮರಳಿ ಕರೆತಂದಿದ್ದೇವೆ. ಕೊರೊನಾ ಸಮಯದಲ್ಲಿ ಭಾರತೀಯರನ್ನು ಪ್ರಪಂಚದ ಪ್ರತಿಯೊಂದು ಭಾಗದಿಂದ ಮರಳಿ ಕರೆತರಲಾಯಿತು. ಏಕೆಂದರೆ ಒಬ್ಬ ಭಾರತೀಯ ತೊಂದರೆಯಲ್ಲಿದ್ದರೂ, ನಮ್ಮ ಸರ್ಕಾರವು ಅವರೊಂದಿಗೆ ಬಲವಾಗಿ ನಿಂತಿದೆ, ಇದು ‘ಮೋದಿಯವರ ಗ್ಯಾರಂಟಿ” ಎಂದು ಪ್ರಧಾನಿ ಹೇಳಿದರು.
ಇದನ್ನೂ ಓದಿ:Lok Sabha election 2024: ಮಾ.16ಕ್ಕೆ ಲೋಕಸಭಾ ಚುನಾವಣೆ ದಿನಾಂಕ ಘೋಷಣೆ
ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ರಾಜ್ಯದ ಕ್ರೈಸ್ತ ಸಮುದಾಯವನ್ನು ತಲುಪುವ ನಿಟ್ಟಿನಲ್ಲಿ,ವ್ಯಾಟಿಕನ್ ನಗರದಲ್ಲಿ ಪೋಪ್ ಫ್ರಾನ್ಸಿಸ್ ಅವರೊಂದಿಗಿನ ಭೇಟಿಯನ್ನು ನೆನಪಿಸಿಕೊಂಡರು.
“ಅಧಿಕಾರವನ್ನು ಮಾತ್ರ ಗುರಿಯಾಗಿಸಿಕೊಂಡ ರಾಜಕೀಯ ಪಕ್ಷಗಳು ಎಂದಿಗೂ ಜನರ ಕಲ್ಯಾಣಕ್ಕಾಗಿ ಕೆಲಸ ಮಾಡಲಾರವು. ಎಲ್‌ಡಿಎಫ್ ಮತ್ತು ಯುಡಿಎಫ್ ಇಲ್ಲಿ ಪರಸ್ಪರ ಹೊಡೆದಾಡಿಕೊಂಡಂತೆ ನಟಿಸುತ್ತವೆ, ಆದರೆ ದೆಹಲಿಯಲ್ಲಿ ಪರಸ್ಪರ ಅಪ್ಪಿಕೊಳ್ಳುತ್ತವೆ. ಕಾಂಗ್ರೆಸ್ ಮತ್ತು ಎಡಪಕ್ಷಗಳು ಕೇರಳವನ್ನು ಲೂಟಿ ಮಾಡಿವೆ. ಕೇರಳದ ಜನರು ಇದನ್ನು ಅರ್ಥಮಾಡಿಕೊಂಡಿದ್ದಾರೆ. ಪ್ರಸ್ತುತ ಕೇರಳದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಮೋದಿ ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ