LPG Cylinder Price: ಅಡುಗೆ ಅನಿಲದ ಬೆಲೆ ಮತ್ತೆ ಏರಿಕೆ: ಬೆಂಗಳೂರು ಸೇರಿದಂತೆ ದೇಶದ ವಿವಿಧೆಡೆ ಸಿಲಿಂಡರ್ ದರ ಇಷ್ಟಾಗಿದೆ
Domestic Gas Cylinder Price: ಕಳೆದ ಮೂರು ತಿಂಗಳಲ್ಲಿ ಪ್ರತಿ ಸಿಲಿಂಡರ್ನ ಬೆಲೆ ಒಟ್ಟು ₹ 200 ಹೆಚ್ಚಾಗಿದೆ. ಡಿಸೆಂಬರ್ ತಿಂಗಳಲ್ಲಿ ₹ 100 ಹೆಚ್ಚಾಗಿತ್ತು. ಜನವರಿ ತಿಂಗಳಲ್ಲಿ ಹೆಚ್ಚಳ ಕಂಡಿರಲಿಲ್ಲ.
ದೆಹಲಿ: ತೈಲ ಮಾರಾಟ ಕಂಪನಿಗಳು ಗುರುವಾರ ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು ಮತ್ತೆ ₹ 25ರಷ್ಟು ಹೆಚ್ಚಿಸಿವೆ. ದೆಹಲಿಯಲ್ಲಿ 14.2 ಕೆಜಿ ಸಿಲಿಂಡರ್ನ ಬೆಲೆ ₹ 794 ಮುಟ್ಟಿದೆ. ಬೆಲೆ ಏರಿಕೆಗೂ ಮುನ್ನ ಸಿಲಿಂಡರ್ ಬೆಲೆ ₹ 769 ಇತ್ತು. ಫೆಬ್ರುವರಿ ತಿಂಗಳಲ್ಲಿ 3ನೇ ಬಾರಿಗೆ ಬೆಲೆ ಹೆಚ್ಚಿಸಲಾಗಿದೆ. ಫೆ.4ರಂದು ₹ 25, ಫೆ.15ರಂದು ₹ 50 ಹೆಚ್ಚಿಸಲಾಗಿತ್ತು. ಸಿಲಿಂಡರ್ ಬೆಲೆಯು ಬೆಂಗಳೂರಿನಲ್ಲಿ ₹ 794 (₹ 679), ಕೊಲ್ಕತ್ತಾದಲ್ಲಿ ₹ 820 (₹ 795), ಮುಂಬೈನಲ್ಲಿ ₹ 794 (₹ 769), ಚೆನ್ನೈನಲ್ಲಿ ₹ 810 (₹ 785), ಹೈದರಾಬಾದ್ನಲ್ಲಿ ₹ 846.50 (₹ 821.50) ಇದೆ. (ಆವರಣದಲ್ಲಿರುವುದು ಹಿಂದಿನ ದರ)
ಕಳೆದ ಮೂರು ತಿಂಗಳಲ್ಲಿ ಪ್ರತಿ ಸಿಲಿಂಡರ್ನ ಬೆಲೆ ಒಟ್ಟು ₹ 200 ಹೆಚ್ಚಾಗಿದೆ. ಡಿಸೆಂಬರ್ ತಿಂಗಳಲ್ಲಿ ₹ 100 ಹೆಚ್ಚಾಗಿತ್ತು. ಜನವರಿ ತಿಂಗಳಲ್ಲಿ ಹೆಚ್ಚಳ ಕಂಡಿರಲಿಲ್ಲ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಆದ ಏರುಪೇರಿನಿಂದ ಈ ಸಿಲಿಂಡರ್ ಬೆಲೆ ಹೆಚ್ಚಾಗಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ.
ಪೆಟ್ರೋಲ್-ಡೀಸೆಲ್ ಜೊತೆಗೆ ಸಿಲಿಂಡರ್ ಬರೆ ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಜಾರಿಗೆ ತಂದಿದ್ದ ಲಾಕ್ಡೌನ್ ಅವಧಿಯಲ್ಲಿ ತೈಲ ಬೆಲೆ ಯಾವುದೇ ಏರಿಳಿತ ಕಂಡಿರಲಿಲ್ಲ. ಆದರೆ, ಲಾಕ್ಡೌನ್ ಪೂರ್ಣಗೊಳ್ಳುತ್ತಿದ್ದಂತೆ ಕೇಂದ್ರ ಸರ್ಕಾರ ಪೆಟ್ರೋಲ್ ದರವನ್ನು ಹೆಚ್ಚಿಸುತ್ತಿದೆ. ಈಗಾಗಲೇ ಲೀಟರ್ ಪೆಟ್ರೋಲ್ ದರ ದೇಶಾದ್ಯಂತ 100 ರೂಪಾಯಿ ಸಮೀಪಕ್ಕೆ ಬಂದಿದೆ. ಈಗ ಅಡುಗೆ ಅನಿಲದ ಬೆಲೆಯನ್ನು ಸಿಲಿಂಡರ್ಗೆ ₹ 25 ಹೆಚ್ಚಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
ಪ್ರತಿ ಸಿಲಿಂಡರ್ ಬೆಲೆ ₹ 25 ರೂಪಾಯಿ ಹೆಚ್ಚಾಗಲಿದೆ. 2020ರ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಅಡುಗೆ ಅನಿಲದ ಬೆಲೆಯನ್ನು ಕೇಂದ್ರ ಸರ್ಕಾರ ಇಳಿಕೆ ಮಾಡಿತ್ತು. ಜೂನ್, ಜುಲೈನಲ್ಲಿ ಮತ್ತೆ ಏರಿಕೆ ಕಂಡಿದ್ದ ದರ, ನಂತರ ನಾಲ್ಕು ತಿಂಗಳು ಯಾವುದೇ ಬದಲಾವಣೆ ಕಂಡಿರಲಿಲ್ಲ. 2020ರ ಡಿಸೆಂಬರ್ ತಿಂಗಳಲ್ಲಿ ಪ್ರತಿ ಸಿಲಿಂಡರ್ ದರ 100 ರೂಪಾಯಿ ಏರಿಕೆ ಆಗಿತ್ತು. ಫೆಬ್ರುವರಿ ತಿಂಗಳಲ್ಲಿ ಈವರೆಗೆ ಮೂರು ಬಾರಿ ಸಿಲಿಂಡರ್ ಬೆಲೆ ಹೆಚ್ಚಿಸಲಾಗಿದೆ.
ಪೆಟ್ರೋಲ್ ದರ ಏರಿಕೆಯಿಂದ ಸಾಮಾನ್ಯ ಜನರು ತತ್ತರಿಸಿ ಹೋಗಿದ್ದಾರೆ. ಹೀಗಿರುವಾಗಲೇ ಅಡುಗೆ ಅನಿಲ ದರವನ್ನು ಏರಿಕೆ ಮಾಡಿರುವ ಬಗ್ಗೆ ಸಾಮಾನ್ಯರು ಆಕ್ರೋಶ ಹೊರ ಹಾಕಿದ್ದಾರೆ.
ಇದನ್ನೂ ಓದಿ: Tv9 Digital Live | ಪೆಟ್ರೋಲ್, ಡೀಸೆಲ್ ಬೆಲೆಗಳು ಏಕೆ ಒಂದೇ ಸಮನೆ ಏರುತ್ತಿವೆ?
Published On - 1:55 pm, Thu, 25 February 21