Lumpy Skin Diesease: ನಿಯಂತ್ರಣಕ್ಕೆ ಬಾರದ ಚರ್ಮಗಂಟು ರೋಗ; ರಾಜಸ್ಥಾನದಲ್ಲಿ 11 ಸಾವಿರ ಹಸುಗಳ ಸಾವು, ದೇಶದೆಲ್ಲೆಡೆ ಆತಂಕ

ಚರ್ಮಗಂಟು ರೋಗವು ರೈತರನ್ನು ಭಾವನಾತ್ಮಕವಾಗಿಯೂ ಸಾಕಷ್ಟು ಘಾಸಿಗೊಳಿಸಿದೆ. ಕಳೆದ ವರ್ಷ ಕರ್ನಾಟಕದಲ್ಲಿಯೂ ಈ ಸೋಂಕು ಜಾನುವಾರುಗಳ ಜೀವ ತೆಗೆದಿತ್ತು.

Lumpy Skin Diesease: ನಿಯಂತ್ರಣಕ್ಕೆ ಬಾರದ ಚರ್ಮಗಂಟು ರೋಗ; ರಾಜಸ್ಥಾನದಲ್ಲಿ 11 ಸಾವಿರ ಹಸುಗಳ ಸಾವು, ದೇಶದೆಲ್ಲೆಡೆ ಆತಂಕ
ಚರ್ಮಗಂಟು ರೋಗ (ಸಾಂದರ್ಭಿಕ ಚಿತ್ರ)Image Credit source: PTI
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Aug 11, 2022 | 9:55 AM

ದೆಹಲಿ: ಉತ್ತರ ಭಾರತದ ವಿವಿಧೆಡೆ ಜಾನುವಾರುಗಳಿಗೆ ಚರ್ಮಗಂಟು ರೋಗ (Lumpy Skin Disease – LSD) ಬಾಧಿಸುತ್ತಿದೆ. ಕಣ್ಣೆದುರೇ ಹಸು-ಎಮ್ಮೆಗಳು ನರಳಿ ಸಾಯುವುದನ್ನು ನೋಡಲಾಗದೆ ರೈತರು ಪರಿತಪಿಸುತ್ತಿದ್ದಾರೆ. ಪಾಕಿಸ್ತಾನದೊಂದಿಗೆ ಗಡಿ ಹಂಚಿಕೊಂಡಿರುವ ರಾಜಸ್ಥಾನದಲ್ಲಿ ಮೊದಲು ಕಾಣಿಸಿಕೊಂಡ ಸೋಂಕು ಇದೀಗ ಗುಜರಾತ್, ಪಂಜಾಬ್​, ಹರಿಯಾಣ, ಹಿಮಾಚಲ ಪ್ರದೇಶ, ಉತ್ತರಾಖಂಡ್, ಅಂಡಮಾನ್ ಮತ್ತು ನಿಕೋಬಾರ್ ರಾಜ್ಯಗಳಲ್ಲಿ ತೀವ್ರವಾಗಿ ಹರಡಿದೆ. ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರಗಳಲ್ಲಿಯೂ ಸೋಂಕು ಕಾಣಿಸಿಕೊಳ್ಳುತ್ತಿದ್ದು ದೇಶದೆಲ್ಲೆಡೆ ರೈತರಲ್ಲಿ ಆತಂಕ ಮೂಡಿದೆ. ಬೇಸಾಯದ ಕೆಲಸಗಳಿಗೆ ಹೆಗಲೆಣೆಯಾಗುವ, ಹಾಲು ಒದಗಿಸುವ ಮೂಲಕ ಆರ್ಥಿಕ ಆಧಾರವಾಗುವ ಜಾನುವಾರುಗಳನ್ನು ರೈತರು ಕೇವಲ ಪ್ರಾಣಿಗಳೆಂದು ಕಾಣುವುದಿಲ್ಲ. ಕುಟುಂಬದ ಭಾಗವಾಗಿ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಚರ್ಮಗಂಟು ರೋಗವು ರೈತರನ್ನು ಭಾವನಾತ್ಮಕವಾಗಿಯೂ ಸಾಕಷ್ಟು ಘಾಸಿಗೊಳಿಸಿದೆ. ಕಳೆದ ವರ್ಷ ಕರ್ನಾಟಕದಲ್ಲಿಯೂ ಈ ಸೋಂಕು ಜಾನುವಾರುಗಳ ಜೀವ ತೆಗೆದಿತ್ತು.

ಇದನ್ನೂ ಓದಿ: ಜಾನುವಾರುಗಳ ಕಾಡುವ ಚರ್ಮಗಂಟು ರೋಗ ತಡೆಗಟ್ಟಲು ಈ ಮಾರ್ಗಗಳನ್ನು ಅನುಸರಿಸಿ

ಪಶ್ಚಿಮ ರಾಜಸ್ಥಾನದಲ್ಲಿ ಪರಿಸ್ಥಿತಿ ವಿಷಮಿಸಿದೆ. ಕಳೆದ ಏಪ್ರಿಲ್​ನಿಂದಲೇ ರಾಜಸ್ಥಾನದ ಜಾನುವಾರುಗಳಿಗೆ ಚರ್ಮ ಗಂಟುರೋಗ ಕಾಡಲು ಆರಂಭಿಸಿತ್ತು. ರಕ್ತ ಹೀರುವ ಕೀಟಗಳಿಂದ ಗಂಟುರೋಗ ಹರಡುತ್ತದೆ. ಚರ್ಮದ ಮೇಲೆ ಗಂಟುಗಳು ಕಾಣಿಸಿಕೊಂಡು ನೋವುಂಟು ಮಾಡುತ್ತವೆ. ಆಫ್ರಿಕಾ ಮೂಲದ ಈ ಸೋಂಕು ಪಾಕಿಸ್ತಾನದ ಮೂಲಕ ಭಾರತಕ್ಕೆ ಬಂದಿದೆ. ರಾಜಸ್ಥಾನದಲ್ಲಿ ಈವರೆಗೆ 2.5 ಲಕ್ಷ ಜಾನುವಾರುಗಳಿಗೆ ಸೋಂಕು ತಗುಲಿದ್ದು, 11 ಸಾವಿರ ರಾಸುಗಳು ಮೃತಪಟ್ಟಿವೆ. ರೋಗ ನಿಯಂತ್ರಣ ಮತ್ತು ಲಸಿಕಾಕರಣ ಅಭಿಯಾನಕ್ಕೆ ಕೇಂದ್ರ ಸರ್ಕಾರ ನೆರವು ನೀಡಬೇಕು ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಕೋರಿದ್ದಾರೆ. ಸೋಂಕು ನಿಯಂತ್ರಣಕ್ಕಾಗಿ ₹ 14 ಕೋಟಿ ಮಂಜೂರು ಮಾಡಿದ್ದು, 500 ಹಂಗಾಮಿ ಹುದ್ದೆಗಳನ್ನು ಸೃಜಿಸಲಾಗಿದ್ದು, ತಾತ್ಕಾಲಿಕವಾಗಿ ಹಲವೆಡೆ ಪಶು ಚಿಕಿತ್ಸಾ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.

ಗುಜರಾತ್: ಕಾರ್ಯಪಡೆ ರಚನೆ

ಗುಜರಾತ್​ನಲ್ಲಿಯೂ ಜಾನುವಾರುಗಳಿಗೆ ಚರ್ಮಗಂಟು ರೋಗ ವ್ಯಾಪಿಸುತ್ತಿದೆ. ಪಶುಸಂಗೋಪನಾ ವಿಶ್ವವಿದ್ಯಾಲದ ಕುಲಪತಿಯ ನೇತೃತ್ವದಲ್ಲಿ ರಾಜ್ಯ ಸರ್ಕಾರವು ಏಳು ಸದಸ್ಯರ ವಿಶೇಷ ಕಾರ್ಯಪಡೆಯನ್ನು ರಚಿಸಿದೆ. ಗುಜರಾತ್​ನಲ್ಲಿ ಈವರೆಗೆ 76,154 ರಾಸುಗಳಿಗೆ ಚರ್ಮಗಂಟು ರೋಗ ಸೋಂಕು ದೃಢಪಟ್ಟಿದ್ದು, 3 ಸಾವಿರ ಜಾನುವಾರುಗಳು ಮೃತಪಟ್ಟಿವೆ. ಆರೋಗ್ಯವಾಗಿರುವ 31.14 ಲಕ್ಷ ಜಾನುವಾರುಗಳಿಗೆ ಅಲ್ಲಿನ ಸರ್ಕಾರವು ಮುಂಜಾಗ್ರತಾ ಕ್ರಮವಾಗಿ ಲಸಿಕೆ ಹಾಕಿಸಿದೆ. ಜಾನುವಾರುಗಳ ಸಾಗಣೆಯ ಮೇಲೆ ವಿವಿಧ ಜಿಲ್ಲೆಗಳಲ್ಲಿ ನಿರ್ಬಂಧ ಹೇರಲಾಗಿದೆ.

ಪಂಜಾಬ್​: ಬಿಗಡಾಯಿಸಿದ ಪರಿಸ್ಥಿತಿ

ಚರ್ಮಗಂಟು ರೋಗವು ಪಂಜಾಬ್, ಹರಿಯಾಣ ಮತ್ತು ಹಿಮಾಚಲ ಪ್ರದೇಶಗಳಲ್ಲಿಯೂ ತೀವ್ರವಾಗಿ ಹರಡುತ್ತಿದೆ. ಪಂಜಾಬ್​ನಲ್ಲಿ 27,000 ಹಸುಗಳಿಗೆ ಸೋಂಕು ತಗುಲಿದ್ದು, ಈ ಪೈಕಿ ಸುಮಾರು 500 ಜಾನುವಾರುಗಳು ಮೃತಪಟ್ಟಿವೆ. ನೆರೆಯ ರಾಜಸ್ಥಾನದಲ್ಲಿ ರೋಗ ವ್ಯಾಪಿಸುತ್ತಿದ್ದರೂ ಈ ರಾಜ್ಯಗಳು ಅಗತ್ಯ ಸಿದ್ಧತೆ ಮಾಡಿಕೊಳ್ಳದ ಪರಿಣಾಮ ಪರೀಕ್ಷೆ ಮತ್ತು ಚಿಕಿತ್ಸೆಗೆ ರೈತರು ಪರದಾಡುವಂತಾಗಿದೆ. ಹಿಮಾಚಲ ಪ್ರದೇಶ ಮತ್ತು ಹರಿಯಾಣ ರಾಜ್ಯಗಳಲ್ಲಿಯೂ ಪರಿಸ್ಥಿತಿ ಭಿನ್ನವಾಗಿಲ್ಲ.

ಲಸಿಕೆ ಬಿಡುಗಡೆ

ಚರ್ಮಗಂಟು ರೋಗ ಹರಡದಂತೆ ತಡೆಯಲು ನೀಡುವ ಲಸಿಕೆಯನ್ನು ಕೇಂದ್ರ ಕೃಷಿ ಮತ್ತು ರೈತರ ಕ್ಷೇಮಾಭಿವೃದ್ಧಿ ಇಲಾಖೆ ಸಚಿವ ನರೇಂದ್ರ ಸಿಂಗ್ ತೋಮಾರ್ ಬಿಡುಗಡೆ ಮಾಡಿದ್ದಾರೆ. ಲಂಪಿ-ಪ್ರೊವ್ಯಾಕ್ (Lumpi-ProVac) ಹೆಸರಿನ ಈ ಲಸಿಕೆಯು ಜಾನುವಾರುಗಳನ್ನು ಚರ್ಮಗಂಟು ಸೋಂಕಿನಿಂದ ಕಾಪಾಡುತ್ತದೆ.

Published On - 9:55 am, Thu, 11 August 22