ಭೋಪಾಲ್: ನನ್ನ ಹೊಲಕ್ಕೆ ಹೋಗಲು ಅಕ್ಕಪಕ್ಕದವರು ದಾರಿ ಬಿಡುತ್ತಿಲ್ಲ. ಕೃಷಿ ಕೆಲಸ ಮಾಡಲು, ಕೃಷಿ ಉಪಕರಣಗಳನ್ನು ಸಾಗಿಸಲು ಮತ್ತು ದನಕರುಗಳನ್ನು ಹೊಲಕ್ಕೆ ಕೊಂಡೊಯ್ಯಲು ಆಗುತ್ತಿಲ್ಲ. ಹೀಗಾಗಿ ನನಗೆ ಹೆಲಿಕಾಪ್ಟರ್ ಖರೀದಿಸಲು ಸಾಲ ಕೊಡಿಸಿ, ಹೆಲಿಕಾಪ್ಟರ್ ಹಾರಿಸಲು ಲೈಸೆನ್ಸ್ ಮಾಡಿಸಿಕೊಡಿ ಎಂದು ಮಧ್ಯಪ್ರದೇಶದ ಮಂದ್ಸೌರ್ ಜಿಲ್ಲೆಯ ರೈತ ಮಹಿಳೆಯೊಬ್ಬರು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಗೆ ಪತ್ರ ಬರೆದಿದ್ದಾರೆ.
ವ್ಯಕ್ತಿಯೊಬ್ಬ ತನ್ನಿಬ್ಬರು ಮಕ್ಕಳ ನೆರವಿನೊಂದಿಗೆ ಹೊಲಕ್ಕೆ ಹೋಗುವ ದಾರಿ ಮುಚ್ಚಿದ ಹಿನ್ನೆಲೆಯಲ್ಲಿ ಅಗರ್ ಗ್ರಾಮದ ಬಸಂತಿ ಲಾಲ್ ಲೊಹರ್ ಎಂಬಾಕೆ ರಾಷ್ಟ್ರಪತಿಗೆ ಪತ್ರ ಬರೆಯಲು ನಿರ್ಧರಿಸಿದರು. ಪರಮ್ಚಂದ್ ಪಾಟೀದಾರ್ ಎಂಬಾತ ತನ್ನ ಮಕ್ಕಳಾದ ಲವ ಮತ್ತು ಕುಶ ಅವರ ಚಿತಾವಣೆಯಿಂದ ನನ್ನ ಹೊಲದ ದಾರಿ ಮುಚ್ಚಿದ್ದಾನೆ. ನನಗೆ ಹೊಲಕ್ಕೆ ಹೋಗಲು, ಕೆಲಸ ಮಾಡಲು ಆಗುತ್ತಿಲ್ಲ ಎಂದು ಹಿಂದಿಯಲ್ಲಿ ಟೈಪ್ ಮಾಡಿರುವ ಪತ್ರದಲ್ಲಿ ಹೇಳಲಾಗಿದೆ.
ಗ್ರಾಮ ಪಂಚಾಯಿತಿಯಿಂದ ಭೋಪಾಲ್ನ ಹಿರಿಯ ಅಧಿಕಾರಿಗಳವರೆಗೆ ಹಲವರಿಗೆ ಈ ಕುರಿತು ದೂರು ನೀಡಿದೆ. ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೂ ಪತ್ರ ಬರೆದೆ. ಆದರೂ ಸಮಸ್ಯೆ ಪರಿಹಾರವಾಗಿಲ್ಲ ಎಂದು ಆಕೆ ಹೇಳಿದ್ದಾರೆ.
ರಾಷ್ಟ್ರಪತಿಗೆ ಬರೆದ ಪತ್ರ ತೋರಿಸುತ್ತಿರುವ ರೈತ ಮಹಿಳೆ
ಆಕೆಯ ಹೆಬ್ಬೆಟ್ಟಿನ ಗುರುತು ಮತ್ತು ಸಹಿಯೊಂದಿಗೆ ಪತ್ರ ಅಂತ್ಯಗೊಂಡಿದೆ. ಕೃಷಿ ಉಪಕರಣಗಳನ್ನು ಹೊಲಕ್ಕೆ ಸಾಗಿಸಲು ನನಗೆ ಹೆಲಿಕಾಪ್ಟರ್ ಅಗತ್ಯಗತ್ಯವಾಗಿ ಬೇಕಾಗಿದೆ ಎಂಬ ಮನವಿಯನ್ನು ಪತ್ರದಲ್ಲಿ ಒತ್ತಿ ಹೇಳಲಾಗಿದೆ.
ಪತ್ರವು ವೈರಲ್ ಆದ ಹಿನ್ನೆಲೆಯಲ್ಲಿ ಮಂದ್ಸೌರ್ ಜಿಲ್ಲಾಡಳಿತವು ಬಸಂತಿ ಕಾಳಜಿಯನ್ನು ಪರಿಗಣಿಸಿ, ಸ್ಥಳಕ್ಕೆ ಕಂದಾಯ ಅಧಿಕಾರಿಗಳ ತಂಡ ಕಳಿಸಿಕೊಟ್ಟಿತ್ತು. ಈ ತಂಡವು ಸ್ಥಳಪರಿಶೀಲನೆ ನಡೆಸಿದಾಗ ಬಸಂತಿ ಅವರ ಹೊಲದ ದಾರಿಗೆ ಯಾವುದೇ ನಿರ್ಬಂಧ ಇರುವುದು ಪತ್ತೆಯಾಗಲಿಲ್ಲ ಎಂದು ಜಿಲ್ಲಾಧಿಕಾರಿ ಮನೋಜ್ ಪುಷ್ಪ್ ಹೇಳಿದ್ದಾರೆ.
ಇದನ್ನೂ ಓದಿ: ವ್ಯಕ್ತಿ-ವ್ಯಕ್ತಿತ್ವ | ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ನಡೆದು ಬಂದ ಹಾದಿ