ಮಹಾರಾಷ್ಟ್ರದಲ್ಲಿ ಇನ್ನು 6 ತಿಂಗಳು ಮಾಸ್ಕ್ ಕಡ್ಡಾಯ: ಮುಖ್ಯಮಂತ್ರಿ ಉದ್ಧವ್ ಠಾಕ್ರೆ
ರೋಗ ಬರುವ ಮುನ್ನವೇ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವುದು ಉತ್ತಮ. ಕನಿಷ್ಠ 6 ತಿಂಗಳುಗಳವರೆಗೆ ಸಾರ್ವಜನಿಕ ಪ್ರದೇಶಗಳಲ್ಲಿ ವ್ಯವಹರಿಸುವಾಗ ಮಾಸ್ಕ್ ಧರಿಸುವುದು ಕಡ್ಡಾಯ ಎಂದಿದ್ದಾರೆ ಉದ್ಧವ್ ಠಾಕ್ರೆ
ಮುಂಬೈ: ಮಹಾರಾಷ್ಟ್ರದಲ್ಲಿ ಮುಂದಿನ 6 ತಿಂಗಳುಗಳವರೆಗೆ ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದು ಕಡ್ಡಾಯ ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ.
ಭಾನುವಾರ ಆರೆ ಮೆಟ್ರೊ ಕಾರ್ ಶೆಡ್ ಯೋಜನೆ ಮತ್ತು ಕೋವಿಡ್-19 ಪ್ರಕರಣಗಳ ಬಗ್ಗೆ ಮಾತನಾಡಿದ ಅವರು ತಜ್ಞರು ಲಾಕ್ ಡೌನ್ ಅಥವಾ ರಾತ್ರಿ ಕರ್ಫ್ಯೂ ಹೇರಿಕೆಗೆ ಸಹಮತ ಸೂಚಿಸಿದ್ದಾರೆ. ಆದರೆ ರಾಜ್ಯದಲ್ಲಿ ಪೂರ್ಣ ಪ್ರಮಾಣದಲ್ಲಿ ಅಲ್ಲದೇ ಇದ್ದರೂ ಕೋವಿಡ್ ನಿಯಂತ್ರಣದಲ್ಲಿರುವ ಕಾರಣ ಈ ರೀತಿಯ ನಿರ್ಬಂಧಗಳು ಬೇಡ ಎಂಬುದು ನನ್ನ ಅಭಿಪ್ರಾಯ ಎಂದಿದ್ದಾರೆ.
ಕಳೆದ ಕೆಲವು ತಿಂಗಳುಗಳಿಂದ ಮಹಾರಾಷ್ಟ್ರದಲ್ಲಿ ಕೋವಿಡ್ ಪ್ರಕರಣಗಳು ಕಡಿಮೆಯಾಗಿವೆ. ಶನಿವಾರ ಮಹಾರಾಷ್ಟ್ರದಲ್ಲಿ 3,940 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದು ಒಂದೇ ದಿನ 74 ಸಾವು ಸಂಭವಿಸಿದೆ.
ಜನವರಿ– ಫೆಬ್ರುವರಿ ತಿಂಗಳಲ್ಲಿ ರಾಜ್ಯದಲ್ಲಿ ಕೋವಿಡ್ 2ನೇ ಅಲೆ ಅಪ್ಪಳಿಸುವ ಸಾಧ್ಯತೆ ಇರುವುದರಿಂದ ಯಾವುದೇ ಕಾರಣಕ್ಕೂ ಕೋವಿಡ್ ವಿರುದ್ಧದ ಹೋರಾಟವನ್ನು ಕಡಿಮೆ ಮಾಡಬೇಡಿ ಎಂದು ಸರ್ಕಾರ ಆಡಳಿತ ಸಂಸ್ಥೆಗಳಿಗೆ ಸುತ್ತೋಲೆ ಕಳುಹಿಸಿತ್ತು. ಆದಾಗ್ಯೂ, ಬ್ರಿಟನ್ ಮತ್ತು ಇತರ ಐರೋಪ್ಯ ರಾಷ್ಟ್ರಗಳಲ್ಲಿ ಎರಡನೇ ಅಲೆ ಬಂದಿದ್ದರೂ ಭಾರತಕ್ಕೆ ಕೋವಿಡ್ 2ನೇ ಅಲೆ ಬರುವ ಸಾಧ್ಯತೆ ಇಲ್ಲ ಎಂದು ತಜ್ಞರು ಹೇಳಿದ್ದಾರೆ.
ರೋಗ ಬರುವ ಮುನ್ನವೇ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವುದು ಉತ್ತಮ. ಕನಿಷ್ಠ 6 ತಿಂಗಳುಗಳವರೆಗೆ ಸಾರ್ವಜನಿಕ ಪ್ರದೇಶಗಳಲ್ಲಿ ವ್ಯವಹರಿಸುವಾಗ ಮಾಸ್ಕ್ ಧರಿಸುವುದು ಕಡ್ಡಾಯ ಎಂದಿದ್ದಾರೆ ಠಾಕ್ರೆ.
ನವೆಂಬರ್ 28ರಂದು ರಾಜ್ಯ ಸರ್ಕಾರ ಒಂದು ವರ್ಷ ಪೂರ್ತಿಗೊಳಿಸಿತ್ತು. ನಮ್ಮ ಸರ್ಕಾರ ಪತನ ಆಗುತ್ತದೆ ಎಂದು ತುಂಬಾ ಜನರು ಅಂದುಕೊಂಡಿದ್ದರು. ಆದರೆ ಸರ್ಕಾರ ಒಂದು ವರ್ಷ ಪೂರ್ಣಗೊಳಿಸುವುದರ ಜತೆಗೆ ಹಲವಾರು ಸಂದಿಗ್ಧ ಪರಿಸ್ಥಿತಿಗಳನ್ನೂ ಎದುರಿಸಿದೆ ಎಂದು ಠಾಕ್ರೆ ಹೇಳಿದ್ದಾರೆ.
ಕೊರೊನಾ ಲಸಿಕೆ ಸ್ವೀಕರಿಸಲು ಮುಸ್ಲಿಂ ಮುಖಂಡರ ಹಿಂದೇಟು: ಶುರುವಾಗಿದೆ ವಿಜ್ಞಾನ-ಧಾರ್ಮಿಕ ಜಿಜ್ಞಾಸೆ