ಕೇರಳದಲ್ಲಿ ಮತ್ತೆ ಕಾಣಿಸಿಕೊಂಡ ಶೀಗೆಲ್ಲಾ ಸೋಂಕು: ಓರ್ವ ಬಾಲಕ ಸಾವು
ಕೇರಳದಲ್ಲಿ ಶೀಗೆಲ್ಲಾ ಬ್ಯಾಕ್ಟೀರಿಯಾದಿಂದ ಬರುವ ಶೀಗೆಲ್ಲೋಸಿಸ್ ರೋಗಕ್ಕೆ 11ರ ಹರೆಯದ ಬಾಲಕನೊಬ್ಬ ಸಾವಿಗೀಡಾಗಿದ್ದಾನೆ. ಉತ್ತರ ಕೇರಳದ ಜಿಲ್ಲೆಗಳಲ್ಲಿ ಸೋಂಕು ಹರಡುವಿಕೆ ತಡೆಯಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಕೋಯಿಕ್ಕೋಡ್: ಕೇರಳದಲ್ಲಿ ಶೀಗೆಲ್ಲಾ ಬ್ಯಾಕ್ಟೀರಿಯಾ ಸೋಂಕು ಮತ್ತೆ ಕಾಣಿಸಿಕೊಂಡಿದ್ದು, ಕೋಯಿಕ್ಕೋಡ್ ಜಿಲ್ಲೆಯಲ್ಲಿ 11ರ ಹರೆಯದ ಬಾಲಕ ಸೋಂಕಿನಿಂದ ಮೃತಪಟ್ಟಿದ್ದಾನೆ. 2 ದಿನಗಳ ಹಿಂದೆ ಬಾಲಕ ಮೃತಪಟ್ಟಿದ್ದು, ಉತ್ತರ ಕೇರಳದಲ್ಲಿ 50ಕ್ಕಿಂತಲೂ ಹೆಚ್ಚು ಮಂದಿಗೆ ರೋಗ ಲಕ್ಷಣಗಳು ಕಾಣಿಸಿಕೊಂಡಿವೆ.
ಶೀಗೆಲ್ಲಾ ಸೋಂಕು ಹರಡುವಿಕೆ ತಡೆಯಲು ಆರೋಗ್ಯ ಇಲಾಖೆ ಮತ್ತು ಕೋಯಿಕ್ಕೋಡ್ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಜಿಲ್ಲಾಧಿಕಾರಿ ಎಸ್. ಸಾಂಬಾಶಿವರಾವ್ ಅವರ ನೇತೃತ್ವದಲ್ಲಿನ ತಂಡವು ರೋಗ ಪತ್ತೆಯಾಗಿರುವ ಕೋಟ್ಟಪರಂಬ್ ಪ್ರದೇಶಕ್ಕೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ ಬಗ್ಗೆ ಮಾಹಿತಿ ಕಲೆ ಹಾಕಿದೆ. ಭಾನುವಾರ ಇಲ್ಲಿ ನಡೆದ ವೈದ್ಯಕೀಯ ಶಿಬಿರದಲ್ಲಿ 29 ಮಂದಿಗೆ ಸೋಂಕು ಇರುವುದಾಗಿ ಪತ್ತೆಯಾಗಿತ್ತು. ಇದರಲ್ಲಿ 2 ವರ್ಷದ ಕೆಳಗಿನ ಇಬ್ಬರು ಮಕ್ಕಳನ್ನು ಕೋಯಿಕ್ಕೋಡ್ ವೈದ್ಯಕೀಯ ಕಾಲೇಜಿನಲ್ಲಿ ದಾಖಲಿಸಲಾಗಿದೆ.
ರೋಗದ ಬಗ್ಗೆ ನಿರ್ಲಕ್ಷ್ಯ ಬೇಡ, ಸೋಂಕು ಹರಡುವುದನ್ನು ತಡೆಯಲು ಶುಚಿತ್ವ ಕಾಪಾಡಿ ಎಂದು ಕೇರಳದ ಆರೋಗ್ಯ ಸಚಿಕೆ ಕೆ.ಕೆ ಶೈಲಜಾ ಹೇಳಿದ್ದಾರೆ.
ಕಳೆದ ವರ್ಷ ಕೀಳಪಯ್ಯನ್ನೂರ್ ವೆಸ್ಟ್ ಎಲ್ಪಿ ಶಾಲೆಯ 40 ಮಕ್ಕಳಿಗೆ ವಾಂತಿ ಬೇಧಿಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ವಿದ್ಯಾರ್ಥಿಗಳ ಮಲದ ಮಾದರಿ ಪರೀಕ್ಷೆಗೊಳಪಡಿಸಿದಾಗ ಶೀಗೆಲ್ಲಾ ಬ್ಯಾಕ್ಟೀರಿಯಾ ಇರುವುದು ಪತ್ತೆಯಾಗಿತ್ತು. ಆಸ್ಪತ್ರೆಗೆ ದಾಖಲಾದ ವಿದ್ಯಾರ್ಥಿಗಳ ಮನೆಯಲ್ಲಿ ಬಳಸುವ ನೀರು ಪರೀಕ್ಷೆಗೊಳಪಡಿಸಿದಾಗ ನೀರಿನಲ್ಲಿ ಈ ಬ್ಯಾಕ್ಟೀರಿಯಾ ಇರುವುದನ್ನು ಜಿಲ್ಲಾ ಆರೋಗ್ಯ ಇಲಾಖೆ ಪತ್ತೆ ಹಚ್ಚಿತ್ತು.
ಆರೋಗ್ಯ ತಜ್ಞರ ಪ್ರಕಾರ ಶೀಗೆಲ್ಲೋಸಿಸ್ ಎಂಬ ರೋಗಕ್ಕೆ ಶೀಗೆಲ್ಲಾ ಬ್ಯಾಕ್ಟೀರಿಯಾ ಕಾರಣ. ಹೊಟ್ಟೆನೋವು , ಬೇಧಿ ಮತ್ತು ಜ್ವರ ರೋಗಲಕ್ಷಣಗಳು. ಅಭಿವೃದ್ಧಿಶೀಲ ದೇಶಗಳಲ್ಲಿ ಈ ಸೋಂಕು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಜನನಿಬಿಡ ಪ್ರದೇಶಗಳಲ್ಲಿ ಶುಚಿತ್ವದ ಕೊರತೆ ಇರುವೆಡೆ ಈ ಸೋಂಕು ಹರಡಿಕೊಳ್ಳುತ್ತದೆ. ಕೆಲವೊಬ್ಬರಿಗೆ ಸೋಂಕು ಬಾಧಿಸಿದರೂ ರೋಗ ಲಕ್ಷಣಗಳು ಕಂಡುಬರುವುದಿಲ್ಲ. ಆದರೂ ಇವರು ರೋಗವಾಹಕರಾಗುತ್ತಾರೆ.
ಕಲುಷಿತ ನೀರು ಮತ್ತು ಆಹಾರದ ಮೂಲಕವೂ ಸೋಂಕು ಹರಡುತ್ತದೆ. ಆದರೆ ಆಹಾರದ ಮೂಲಕ ಹರಡುವಿಕೆಯ ಸಾಧ್ಯತೆ ಕಡಿಮೆ ಅಂತಾರೆ ಅಧಿಕಾರಿಗಳು. ಸೋಂಕು ಪ್ರಕರಣಗಳು ವರದಿಯಾಗಿರುವ ಪ್ರದೇಶಗಳಲ್ಲಿ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಆರೋಗ್ಯ ಇಲಾಖೆ ಸಮುದಾಯ ವೈದ್ಯಕೀಯ ಇಲಾಖೆಗೆ ನಿರ್ದೇಶಿಸಿದೆ.
ಈ ಸೋಂಕು ಮಾರಣಾಂತಿಕ ಅಲ್ಲದೇ ಇದ್ದರೂ ನಿರ್ಜಲೀಕರಣದಿಂದಾಗಿ ದೇಹಕ್ಕೆ ಅಪಾಯ ಸಂಭವಿಸುವ ಸಾಧ್ಯತೆ ಇದೆ. ಹಾಗಾಗಿ ನಿರ್ಲಕ್ಷ್ಯ ಸಲ್ಲದು. ರೋಗ ಲಕ್ಷಣ ಕಂಡ ಕೂಡಲೇ ಚಿಕಿತ್ಸೆ ಪಡೆಯಬೇಕು ಮತ್ತು ಶುಚಿತ್ವ ಕಾಪಾಡಬೇಕು ಎಂದು ಕೋಯಿಕ್ಕೋಡ್ ಬೇಬಿ ಮೆಮೊರಿಯಲ್ ಆಸ್ಪತ್ರೆಯ ತುರ್ತು ನಿಗಾ ಘಟಕದ ಮುಖ್ಯಸ್ಥ ಡಾ. ಸಿ. ಅನೂಪ್ ಕುಮಾರ್ ಹೇಳಿದ್ದಾರೆ.