Delhi Chalo ಚಳವಳಿಯಲ್ಲಿ ಜೀವತೆತ್ತ 20ಕ್ಕೂ ಹೆಚ್ಚು ರೈತರ ಸಾವಿಗೆ ಏನು ಕಾರಣ?
ಚಳವಳಿಯಲ್ಲಿ ಭಾಗವಹಿಸಿದ ರೈತರ ಸಾವಿಗೆ ದೆಹಲಿಯ ಕಲುಷಿತ ವಾತಾವರಣದಿಂದ ಉಂಟಾದ ಅನಾರೋಗ್ಯವೂ ಕಾರಣವಾಯಿತು. ಜೀವನ ಶೈಲಿಯಲ್ಲಾದ ದಿಢೀರ್ ಬದಲಾವಣೆ ವೃದ್ಧ ರೈತರ ಅನಾರೋಗ್ಯವನ್ನು ಏರುಪೇರು ಮಾಡಿತು.
ದೆಹಲಿ: ಕೇಂದ್ರದ ಕೃಷಿ ಕಾನೂನು ವಿರೋಧಿಸಿ ನಡೆಯುತ್ತಿರುವ ದೆಹಲಿ ಚಲೋ ಚಳವಳಿಯಲ್ಲಿ ಈವರೆಗೆ ಮೃತಪಟ್ಟ 20ಕ್ಕೂ ಹೆಚ್ಚು ರೈತರು ವಿವಿಧ ಕಾರಣಗಳಿಂದ ಮೃತಪಟ್ಟಿದ್ದಾರೆ. ತೀವ್ರ ಚಳಿ, ರಸ್ತೆ ಅಪಘಾತ ಮತ್ತು ಹೃದಯಾಘಾತಗಳಿಂದ ರೈತರು ಸಾವನ್ನಪ್ಪಿದ್ದಾರೆ. ಮೃತ ರೈತರ ಕುಟುಂಬಗಳಿಗೆ ಪರಿಹಾರ ಒದಗಿಸಲು ರೈತ ಒಕ್ಕೂಟಗಳು ತೀರ್ಮಾನಿಸಿವೆ.
ರೈತರ ಸಾವಿಗೆ ಕೇಂದ್ರ ಸರ್ಕಾರವೇ ಕಾರಣ ಎಂಬ ಬರಹಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಪ್ರಧಾನಿ ನರೇಂದ್ರ ಮೋದಿ ರೈತರ ಸಾವಿನ ಹೊಣೆ ಹೋರಬೇಕೆಂಬ ವಾದವೂ ಮುನ್ನೆಲೆಗೆ ಬರುತ್ತಿದೆ. ಆದರೆ, ರೈತರ ಸಾವಿಗೆ ನೈಜ ಕಾರಣಗಳೇನು ಎಂಬ ಪ್ರಶ್ನೆಯನ್ನೂ ಮತ್ತೊಂದು ವಲಯ ಮುಂದಿಡುತ್ತಿದೆ. ದೆಹಲಿ ಚಲೋದಲ್ಲಿ ಭಾಗವಹಿಸಿದ ರೈತರ ಸಾವಿನ ಪ್ರತ್ಯಕ್ಷ ಮತ್ತು ಪರೋಕ್ಷ ಕಾರಣಗಳನ್ನು ಹುಡುಕುವ ಪ್ರಯತ್ನವನ್ನು ‘ಟಿವಿ9 ಡಿಜಿಟಲ್’ ಮಾಡಿತು.
ಚಳವಳಿ ದೆಹಲಿ ತಲುಪುವ ಹಂತದಲ್ಲಿ ಪೊಲೀಸರ ಬಲ ಪ್ರಯೋಗದ ಕುರಿತು ದೇಶಾದ್ಯಂತ ಗಂಭೀರ ಚರ್ಚೆಯಾಗಿತ್ತು. ಪೊಲೀಸರು ರೈತರನ್ನು ಅಮಾನುಷವಾಗಿ ನಡೆಸಿಕೊಳ್ಳುತ್ತಿದ್ದಾರೆ ಎಂಬ ಅಭಿಪ್ರಾಯ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗಿತ್ತು. ಅಶ್ರುವಾಯು ಅಥವಾ ಲಾಟಿಯೇಟುಗಳನ್ನು ಎದುರಿಸಿ ನಿಂತ ರೈತರ ಫೋಟೊ, ವಿಡಿಯೊಗಳನ್ನು ಲಕ್ಷಾಂತರ ಜನರು ಶೇರ್ ಮಾಡಿದ್ದರು. ಆದರೆ ಈವರೆಗೆ ಪೊಲೀಸರ ಬಲ ಪ್ರಯೋಗದಿಂದ ಓರ್ವ ರೈತನೂ ಮೃತಪಟ್ಟಿಲ್ಲ ಎಂಬುದು ಮಾತ್ರ ಸ್ಪಷ್ಟ.
ಇದನ್ನೂ ಓದಿ: ಆರ್.ಎಸ್.ದೇಶಪಾಂಡೆ ಸಂದರ್ಶನ | ಕೃಷಿ ಮಸೂದೆ ವಿರುದ್ದದ ಹೋರಾಟದಲ್ಲಿ ರಾಜಕಾರಣಿಗಳ ಬೇಳೆಕಾಳು ಬೇಯತ್ತಿರೋದು ನಿಜ
ಸಾವಿಗೆ ಕಾರಣಗಳು ನ.27ರಂದು ದೆಹಲಿ-ಭೈವಂತಿ ಹೆದ್ದಾರಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ 45 ವರ್ಷದ ಧನ್ನಾ ಸಿಂಗ್ ಎಂಬ ರೈತ ಮೃತಪಟ್ಟಿದ್ದರು. 40 ಗ್ರಾಮಗಳ ರೈತರನ್ನು ಸಂಘಟಿಸಿ ದೆಹಲಿ ಚಲೋಗೆ ಕರೆತಂದಿದ್ದ ಧನ್ನಾ ಸಿಂಗ್ ಟ್ರ್ಯಾಕ್ಟರ್ಗೆ ವೇಗವಾಗಿ ಬಂದ ಲಾರಿಯೊಂದು ಡಿಕ್ಕಿ ಹೊಡೆದದ್ದಿಂದ ಸಂಭವಿಸಿದ ಅಪಘಾತದಲ್ಲಿ ಅವರು ಅಸು ನೀಗಿದ್ದರು.
ಕರ್ನಾಲ್ನಲ್ಲಿ ಸಂಭವಿಸಿದ ಇನ್ನೊಂದು ರಸ್ತೆ ಅಪಘಾತದಲ್ಲಿ ಲಾಭ್ ಸಿಂಗ್ ಮತ್ತು ಗುರ್ಪ್ರೀತ್ ಸಿಂಗ್ ಮೃತಪಟ್ಟಿದ್ದರು. ಅವರ ನಿಧನಕ್ಕೆ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಸಹ ಶೋಕ ವ್ಯಕ್ತಪಡಿಸಿದ್ದರು. ಅಲ್ಲದೇ, ಕಳೆದ ವಾರ ನಡೆದ ರಸ್ತೆ ಅಪಘಾತದಲ್ಲಿ ನಾಲ್ಕು ರೈತರು ಮೃತರಾಗಿದ್ದರು. ಹೀಗೆ, ದೆಹಲಿ ತಲುಪುವ ಮುನ್ನವೇ ವಿವಿಧ ಭಾಗಗಳಿಂದ ಹೊರಟ 8ಕ್ಕೂ ಹೆಚ್ಚು ರೈತರು ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪಿದ್ದಾರೆ.
ದೆಹಲಿ ಚಲೋಗೆ ಬೆಂಬಲಿಸಿದ ಇನ್ನೋರ್ವ ರೈತನ ಸಾವು ಮಾತ್ರ ಮನಕಲುಕುವಂತಿತ್ತು. ಟಿಕ್ರಿ ಗಡಿಯತ್ತ ಹೊರಟಿದ್ದ 55 ವರ್ಷದ ಜನಕ್ ರಾಜ್ ಕಾರು ದಹಿಸಿಹೋಗಿತ್ತು. ಮೆಕಾನಿಕ್ ವೃತ್ತಿಯ ಜನಕ್ ರಾಜ್ ಜಜ್ಜರ್ ಜಿಲ್ಲೆಯ ನಜಾಫ್ಗರ್ ಫ್ಲೈಒವರ್ ಬಳಿ ಕಾರಲ್ಲೇ ಸಜೀವ ದಹನವಾಗಿದ್ದರು. ಆದರೆ, ಈ ಸಾವಿಗೆ ಚಳವಳಿಯೇ ನೇರ ಕಾರಣ ಎಂದು ನೂರಕ್ಕೆ ನೂರು ಪ್ರತಿಶತಃ ಹೇಳುವಂತಿಲ್ಲ. ವೃತ್ತಿಯಲ್ಲಿ ಮೆಕಾನಿಕ್ ಆಗಿದ್ದ ಜನಕ್ ರಾಜ್ ಚಳವಳಿಯಲ್ಲಿ ಭಾಗವಹಿಸಿದ ರೈತರ ಟ್ರ್ಯಾಕ್ಟರ್ ಮತ್ತು ಟ್ರಕ್ಗಳ ರಿಪೇರಿಗೆಂದು ದೆಹಲಿಯತ್ತ ಆಗಮಿಸುತ್ತಿದ್ದರು. ತಮ್ಮ ಮೆಕಾನಿಕ್ ಅಂಗಡಿ ಮುಚ್ಚಿ ದೆಹಲಿ ಚಲೋಗೆ ತೆರಳಿದ್ದ ಅವರ ಪ್ರಾಣಪಕ್ಷಿ ದಾರಿಮಧ್ಯೆಯೇ ಹಾರಿಹೋಗಿತ್ತು.
ಚಳವಳಿಯಲ್ಲಿ ಭಾಗವಹಿಸಿದ ರೈತರ ಸಾವಿಗೆ ದೆಹಲಿಯ ಕಲುಷಿತ ವಾತಾವರಣದಿಂದ ಉಂಟಾದ ಅನಾರೋಗ್ಯವೂ ಕಾರಣವಾಯಿತು. ದೆಹಲಿಯ ಚಳಿ, ಕಲುಷಿತ ಗಾಳಿ, ಮನೆ ತೊರೆದ ನಂತರದ ನಿರಂತರ ಪಯಣ, ಬದಲಾದ ಆಹಾರ ರೈತರ ಅನಾರೋಗ್ಯಕ್ಕೆ ಕಾರಣವಾಯಿತು. ಅಲ್ಲದೇ ಜೀವನ ಶೈಲಿಯಲ್ಲಾದ ದಿಢೀರ್ ಬದಲಾವಣೆ ವೃದ್ಧ ರೈತರ ಅನಾರೋಗ್ಯವನ್ನು ಏರುಪೇರು ಮಾಡಿತು.
ಇದನ್ನೂ ಓದಿ: ಎಂ.ಎಸ್. ಶ್ರೀರಾಮ್ ಸಂದರ್ಶನ| ಕೃಷಿ ಕಾಯ್ದೆಗಳ ಉಪಯುಕ್ತತೆ ಬಗ್ಗೆ ದೊಡ್ಡ ಪ್ರಶ್ನಾರ್ಥಕ ಚಿಹ್ನೆ ಇದೆ
ಹೃದಯಾಘಾತದಿಂದ ಮೂವರ ಸಾವು
ಡಿ.2ರಂದು 45 ವರ್ಷದ ಗುಜ್ರಂತ್ ಸಿಂಗ್ ಮತ್ತು 55 ವರ್ಷದ ಲಖ್ವಿರ್ ಸಿಂಗ್ ಅನಾರೋಗ್ಯದಿಂದ ಮೃತಪಟ್ಟರು. ಒಂದು ತಿಂಗಳಲ್ಲಿ ಜಯದ ಮಂದಹಾಸದೊಂದಿಗೆ ಮನೆಗೆ ಮರಳುವೆ ಎಂಬ ಭರವಸೆ ನೀಡಿ ಲಖ್ವಿರ್ ಸಿಂಗ್ ಮನೆಯಿಂದ ಹೊರಟಿದ್ದರು. ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಪೊಲೀಸರು ಷರಾ ಬರೆದರು. ಮೊಹಾಲಿಯ ಫತೇಗರ್ ಸಮೀಪದ ಸುಖ್ದೇವ್ ಸಿಂಗ್, ದೀಪ್ಸಿಂಗ್ ಮತ್ತು ಮಖ್ಖಾನ್ ಕಾನ್ ಎಂಬ ಇಬ್ಬರು ರೈತರು ಹೃದಯಾಘಾತದಿಂದ ಜೀವ ತೊರೆದಿದ್ದರು. ದೆಹಲಿ ಚಲೋ ಆರಂಭವಾಗಿ 11ನೇ ದಿನ ಹೊಟ್ಟೆನೋವಿನಿಂದ ಇನ್ನೋರ್ವ ರೈತ ಚಲಿಸುತ್ತಿದ್ದ ಟ್ರ್ಯಾಕ್ಟರ್ನಲ್ಲೇ ಇಹಲೋಕ ತ್ಯಜಿಸಿದ್ದರು.
ರೈತರ ಬೇಡಿಕೆ ಈಡೇರದ ಕಾರಣ ಮನನೊಂದು ಚಳವಳಿಯ 22ನೇ ದಿನ ವ್ಯಕ್ತಿಯೋರ್ವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಹರಿಯಾಣದ ಗುರುದ್ವಾರದ ಧಾರ್ಮಿಕ ಮುಖ್ಯಸ್ಥ ಬಾಬಾ ರಾಮ್ ಸಿಂಗ್, ದೆಹಲಿ- ಸೋನಿಪತ್ ಗಡಿಯ ಕುಂಡ್ಲಿಯಲ್ಲಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಸರ್ಕಾರ ರೈತರಿಗೆ ಅನ್ಯಾಯವೆಸಗುತ್ತಿರುವ ಸರ್ಕಾರದ ವಿರುದ್ಧ ಸಿಟ್ಟು ಮತ್ತು ನೋವಿನಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಪತ್ರ ಬರೆದು ಅವರು, ಸ್ವತಃ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.
ದೆಹಲಿ ಚಲೋದಲ್ಲಿ ಭಾಗವಹಿಸಿದ 20ಕ್ಕೂ ಹೆಚ್ಚು ರೈತರು ಮೃತಪಟ್ಟರೂ, ಎಲ್ಲರ ಸಾವಿಗೂ ಚಳವಳಿಯೊಂದೇ ನೇರ ಕಾರಣವಲ್ಲ. ದೆಹಲಿಯಂತೆಯೇ ಪಂಜಾಬ್ನಲ್ಲೂ ತೀವ್ರ ಚಳಿಯ ವಾತಾವರಣವಿದೆ. ಚಳಿಗೆ ಸೆಡ್ಡು ಹೊಡೆಯುವ ತಯಾರಿ, ಮುಂಜಾಗ್ರತಾ ಕ್ರಮಗಳೊಂದಿಗೆ ರೈತ ಸಂಘಟನೆಗಳು ಹೊರಟಿದ್ದವು. ದಿನಕ್ಕೊಬ್ಬ ರೈತರ ಸಾವಾಗುತ್ತಿದೆ ಎಂದು ಕೇಂದ್ರವನ್ನು ದೂರುವ ಬರಹಗಳು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿವೆ. ಆದರೆ, ಎಲ್ಲಾ ರೈತರ ಸಾವಿಗೂ ಚಳವಳಿಯೊಂದೇ ನೇರ ಕಾರಣವಲ್ಲ ಎಂಬ ವಿಶ್ಲೇಷಣೆಗಳೂ ಕೇಳಿಬಂದಿವೆ.
R.S. Deshpande interview: ಕೃಷಿ ಮಸೂದೆ ವಿರುದ್ದದ ಹೋರಾಟದಲ್ಲಿ ರಾಜಕಾರಣಿಗಳ ಬೇಳೆಕಾಳು ಬೇಯತ್ತಿರೋದು ನಿಜ
Explainer | ಕನಿಷ್ಠ ಬೆಂಬಲ ಬೆಲೆ MSP ಎಂದರೇನು? ಪಂಜಾಬ್ ರೈತರಿಗೇಕೆ ಕೃಷಿ ಕಾಯ್ದೆಗಳ ಬಗ್ಗೆ ಇಷ್ಟು ಆತಂಕ?
ಎಂ.ಎಸ್. ಶ್ರೀರಾಮ್ ಸಂದರ್ಶನ| ಕೃಷಿ ಕಾಯ್ದೆಗಳ ಉಪಯುಕ್ತತೆ ಬಗ್ಗೆ ದೊಡ್ಡ ಪ್ರಶ್ನಾರ್ಥಕ ಚಿಹ್ನೆ ಇದೆ
‘ಕಾಯ್ದೆ ವಾಪಸ್ ಸಾಧ್ಯವಿಲ್ಲ’: Union Minister Pralhad Joshi Exclusive Interview With TV9