ಮಹಾರಾಷ್ಟ್ರ ಡಿಸಿಎಂ ಅಜಿತ್​ ಪವಾರ್​ಗೆ ಬಿಗ್​ ಶಾಕ್​; 1000 ಕೋಟಿ ರೂ.ಮೌಲ್ಯದ ಆಸ್ತಿ ಜಪ್ತಿ ಮಾಡಿದ ಐಟಿ

Ajit Pawar: 90 ದಿನಗಳಲ್ಲಿ ಅಂದರೆ ಮೂರು ತಿಂಗಳಲ್ಲಿ ಅಜಿತ್​ ಪವಾರ್​ ಈ ಆಸ್ತಿ ಬೇನಾಮಿ ಅಲ್ಲ ಎಂಬುದನ್ನು ಸಾಬೀತು ಪಡಿಸಬೇಕು. ಅಷ್ಟೂ ಆಸ್ತಿಯ ಕಾನೂನು ಬದ್ಧ ದಾಖಲೆಗಳನ್ನು ಸಲ್ಲಿಸಬೇಕು. 

ಮಹಾರಾಷ್ಟ್ರ ಡಿಸಿಎಂ  ಅಜಿತ್​ ಪವಾರ್​ಗೆ ಬಿಗ್​ ಶಾಕ್​; 1000 ಕೋಟಿ ರೂ.ಮೌಲ್ಯದ ಆಸ್ತಿ ಜಪ್ತಿ ಮಾಡಿದ ಐಟಿ
ಅಜಿತ್ ಪವಾರ್​
Edited By:

Updated on: Nov 02, 2021 | 11:58 AM

ಮಹಾರಾಷ್ಟ್ರದ ಉಪಮುಖ್ಯಮಂತ್ರಿ., ಎನ್​ಸಿಪಿ ನಾಯಕ ಅಜಿತ್ ಪವಾರ್ (Ajit Pawar)​ ಅವರ ಸುಮಾರು 1000 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಇಂದು ಆದಾಯ ತೆರಿಗೆ ಇಲಾಖೆ (Income Tax Department) ಜಪ್ತಿ ಮಾಡಿದೆ. ಹೀಗೆ ಬೇನಾಮಿ ಆಸ್ತಿಯನ್ನು ಜಪ್ತಿ ಮಾಡಿದ ಸಂಬಂಧ ಆದಾಯ ತೆರಿಗೆ ಇಲಾಖೆ  ಅಜಿತ್​ ಪವಾರ್​ಗೆ ನೋಟಿಸ್​ ಕೂಡ ನೀಡಿದೆ. ಇವಿಷ್ಟೂ ಮೌಲ್ಯದ ಆಸ್ತಿ ಅಜಿತ್​ ಪವಾರ್​ ಮತ್ತು ಅವರ ಕುಟುಂಬಕ್ಕೆ ಸೇರಿದ್ದು ಎಂದು ಐಟಿ ಅಧಿಕಾರಿಗಳು ತಿಳಿಸಿದ್ದಾರೆ.  

ದಕ್ಷಿಣ ದೆಹಲಿಯಲ್ಲಿರುವ 20 ಕೋಟಿ ರೂಪಾಯಿ ಮೌಲ್ಯದ ಫ್ಲ್ಯಾಟ್​, ಅಜಿತ್ ಪವಾರ್​ ಪುತ್ರ ಪಾರ್ಥ ಅವರಿಗೆ ಸೇರಿದ, ನಿರ್ಮಲ್​  ಹೌಸ್​​ನಲ್ಲಿರುವ ಸುಮಾರು 25 ಕೋಟಿ ರೂ.ಬೆಲೆಯ ಕಚೇರಿ, ಜರಂದೇಶ್ವರದಲ್ಲಿ ಇರುವ ಸುಮಾರು 600 ಕೋಟಿ ರೂ.ಮೌಲ್ಯದ ಸಕ್ಕರೆ ಕಾರ್ಖಾನೆ, 250 ಕೋಟಿ ರೂ.ಬೆಲೆಯ ಗೋವಾದಲ್ಲಿರುವ ಒಂದು ರೆಸಾರ್ಟ್ ಮತ್ತು ಮಹಾರಾಷ್ಟ್ರದ ವಿವಿಧ 27 ಪ್ರದೇಶಗಳಲ್ಲಿರುವ 500 ಕೋಟಿ ರೂ.ಮೌಲ್ಯದ ಭೂಮಿಯನ್ನು ಬೇನಾಮಿ ಆಸ್ತಿಯೆಂದು ಪರಿಗಣಿಸಿ ಆದಾಯ ತೆರಿಗೆ ಇಲಾಖೆ ಮುಟ್ಟುಗೋಲು ಹಾಕಿಕೊಂಡಿದೆ.

ಇನ್ನು 90 ದಿನಗಳಲ್ಲಿ ಅಂದರೆ ಮೂರು ತಿಂಗಳಲ್ಲಿ ಅಜಿತ್​ ಪವಾರ್​ ಈ ಆಸ್ತಿ ಬೇನಾಮಿ ಅಲ್ಲ ಎಂಬುದನ್ನು ಸಾಬೀತು ಪಡಿಸಬೇಕು. ಅಷ್ಟೂ ಆಸ್ತಿಯ ಕಾನೂನು ಬದ್ಧ ದಾಖಲೆಗಳನ್ನು ಸಲ್ಲಿಸಬೇಕು.  ಐಟಿ ಇಲಾಖೆಯ ತನಿಖೆ, ವಿಚಾರಣೆ ಮುಗಿಯುವವರೆಗೂ ಅವರು ಈ ಆಸ್ತಿಗಳನ್ನು ಮಾರಾಟ ಮಾಡಲು ಸಾಧ್ಯವಿಲ್ಲ. ಅಜಿತ್​ ಪವಾರ್ ಐಟಿ ಕೆಂಗಣ್ಣಿಗೆ ಗುರಿಯಾಗಿದ್ದು ಇದೇ ಮೊದಲಲ್ಲ. ಕಳೆದ ತಿಂಗಳು ಆದಾಯ ತೆರಿಗೆ ಇಲಾಖೆ ಅಜಿತ್​ ಪವಾರ್ ಕುಟುಂಬಕ್ಕೆ ಸೇರಿದ ಎರಡು ರಿಯಲ್​ ಎಸ್ಟೇಟ್​​ ಗ್ರೂಪ್​​​ನಲ್ಲಿ ಶೋಧ ನಡೆಸಿತ್ತು. ಈ ವೇಳೆ 184 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಪತ್ತೆ ಮಾಡಿತ್ತು. ಅದಕ್ಕೆ ಸಂಬಂಧಪಟ್ಟಂತೆ ಅಕ್ಟೋಬರ್​ 7ರಂದು 70 ಪ್ರದೇಶಗಳಲ್ಲಿ ಶೋಧ ಕಾರ್ಯ ನಡೆಸಿತ್ತು. ಆಗ ಪ್ರತಿಕ್ರಿಯೆ ನೀಡಿದ್ದ ಅಜಿತ್ ಪವಾರ್​ ಐಟಿಯವರು ಶೋಧ ಕಾರ್ಯ ನಡೆಸಿದರರೆ ನನಗೇನೂ ಸಮಸ್ಯೆ ಇಲ್ಲ ಎಂದಿದ್ದರು.

ಮಹಾರಾಷ್ಟ್ರ ರಾಜಕೀಯದಲ್ಲಿ ಸದಾ ಒಂದಿಲ್ಲೊಂದು ಸಂಚಲನ ಏಳುತ್ತಲೇ ಇದೆ. ಇಂದು ಭ್ರಷ್ಟಾಚಾರ ಮತ್ತು ಸುಲಿಗೆ ಪ್ರಕರಣದಲ್ಲಿ ಎನ್​ಸಿಪಿಯ ಇನ್ನೊಬ್ಬ ನಾಯಕ, ಮಹಾರಾಷ್ಟ್ರ ಮಾಜಿ ಗೃಹ ಸಚಿವ ಅನಿಲ್​ ದೇಶ್​ಮುಖ್​ ಕೂಡ ಇಡಿ ಅಧಿಕಾರಿಗಳಿಂದ ಬಂಧಿತರಾಗಿದ್ದಾರೆ. ಇದೀಗ ನೇರವಾಗಿ ಡಿಸಿಎಂ ಬುಡಕ್ಕೇ ಕೇಂದ್ರ ತನಿಖಾ ದಳ ಬಂದಿದೆ. ಅಜಿತ್ ಪವಾರ್​ ಅವರು ಎನ್​ಸಿಪಿ ಮುಖ್ಯಸ್ಥ ಶರದ್​ ಪವಾರ್ ಸಂಬಂಧಿಯೂ ಹೌದು.

ಇದನ್ನೂ ಓದಿ: ಮಹಾರಾಷ್ಟ್ರ ಮಾಜಿ ಗೃಹ ಸಚಿವ ಅನಿಲ್​ ದೇಶ್​ಮುಖ್​​ರನ್ನು ಅರೆಸ್ಟ್ ಮಾಡಿದ ಇ ಡಿ ಅಧಿಕಾರಿಗಳು; ಪರಮ್​ ಬೀರ್​ ಸಿಂಗ್​ ಎಲ್ಲಿ?

Ayurveda Day 2021: ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಯುರ್ವೇದ ಔಷಧಿ; ನೀವು ತಿಳಿಯಲೇಬೇಕಾದ ಒಂದಿಷ್ಟು ಮಾಹಿತಿ ಇಲ್ಲಿದೆ

Published On - 11:37 am, Tue, 2 November 21