ಗೋವಾದಲ್ಲಿ ಗೆದ್ದರೆ ಅಯೋಧ್ಯೆಗೆ ಉಚಿತ ಯಾತ್ರೆ ನಡೆಸುತ್ತೇವೆ: ಅರವಿಂದ್ ಕೇಜ್ರಿವಾಲ್ ಘೋಷಣೆ
Goa Assembly Election 2022: ಗೋವಾ ಚುನಾವಣೆ ಮೇಲೆ ಬರೀ ಆಪ್ ಅಷ್ಟೇ ಅಲ್ಲ ಟಿಎಂಸಿ ಕೂಡ ಕಣ್ಣಿಟ್ಟಿದೆ. ಆದರೆ ಮಮತಾ ಬ್ಯಾನರ್ಜಿ ಧ್ಯೇಯ ಇಲ್ಲಿ ಬಿಜೆಪಿಯನ್ನು ಸೋಲಿಸುವುದು ಆಗಿದೆಯೇ ಹೊರತು ಅಧಿಕಾರ ಹಿಡಿಯುವುದಲ್ಲ.
ಪಣಜಿ: ಗೋವಾ ವಿಧಾನಸಭೆ ಚುನಾವಣೆ (Goa Assembly Election 2022) ನಿಮಿತ್ತ ಅಲ್ಲಿಗೆ ಭೇಟಿ ಕೊಟ್ಟಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಒಳಒಪ್ಪಂದವಿದೆ. ಇವೆರಡರಲ್ಲಿ ಯಾವುದೇ ಪಕ್ಷಗಳು ಅಧಿಕಾರಕ್ಕೆ ಬಂದರೂ ಮತ್ತೊಂದು ಪಕ್ಷದ ವಿರುದ್ಧ ಕ್ರಮ ಕೈಗೊಳ್ಳಬಾರದು ಎಂಬ ನಿರ್ಣಯ ತೆಗೆದುಕೊಂಡಿವೆ ಎಂದು ಹೇಳಿದರು.
ಗೋವಾದಲ್ಲಿ ರ್ಯಾಲಿಯಲ್ಲಿ ಮಾತನಾಡಿದ ಅರವಿಂದ್ ಕೇಜ್ರಿವಾಲ್, ತಾವು ಗೋವಾ ಚುನಾವಣೆಯಲ್ಲಿ ಗೆದ್ದು, ಸರ್ಕಾರ ರಚನೆ ಮಾಡಿದರೆ ಹಿಂದುಗಳಿಗೆ ಅಯೋಧ್ಯೆಗೆ, ಕ್ರಿಶ್ಚಿಯನ್ನರಿಗೆ ವೆಲಕಣ್ಣಿ ಚರ್ಚ್ಗೆ ಮತ್ತು ಮುಸ್ಲಿಮರಿಗೆ ಅಜ್ಮೇರ್ ಶರೀಫ್ಗೆ ಉಚಿತ ಯಾತ್ರೆ ನಡೆಸುತ್ತೇವೆ. ಅಲ್ಲದೆ ಸಾಯಿಬಾಬಾ ಅನುಯಾಯಿಗಳಿಗೆ ಶಿರಡಿ ದೇವಸ್ಥಾನಕ್ಕೆ ಪ್ರವಾಸವನ್ನೂ ಉಚಿತವಾಗಿ ಮಾಡಿಸಲಾಗುವುದು ಎಂದು ಭರವಸೆ ನೀಡಿದರು.
ಈ ಹಿಂದೆ ಗೋವಾಕ್ಕೆ ಆಗಮಿಸಿದ್ದ ಅರವಿಂದ್ ಕೇಜ್ರಿವಾಲ್ 2022ರ ಚುನಾವಣೆಯಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ನಿಲ್ಲಿಸುವುದಾಗಿ ಹೇಳಿದ್ದರು. ಹಾಗೇ, ತಾವು ಸರ್ಕಾರ ರಚನೆ ಮಾಡಿದರೆ ಇಲ್ಲಿನ ಜನರಿಗೆ ಉಚಿತ ವಿದ್ಯುತ್ ನೀಡಲಾಗುವುದು..ಪ್ರತಿಯೊಬ್ಬ ಯುವಕನಿಗೂ ಉದ್ಯೋಗ ಒದಗಿಸಲಾಗುವುದು ಎಂದು ಭರವಸೆ ನೀಡಿದ್ದರು.
ಕಳೆದ ಕೆಲವು ತಿಂಗಳುಗಳಿಂದ ಗೋವಾದಲ್ಲಿ ಆಪ್ ಪಕ್ಷವನ್ನು ಸೇರ್ಪಡೆಯಾಗುವವರ ಸಂಖ್ಯೆ ಹೆಚ್ಚುತ್ತಿದೆ. ಅಲ್ಲಿನ ಪ್ರಮುಖ ಮಾಸ್ ಲೀಡರ್ಗಳಾದ ದಯಾನಂದ್ ನರ್ವೇಕರ್, ಬಾಬು ನಾನೋಸ್ಕರ್, ಸತ್ಯವಿಜಯ್ ನಾಯ್ಕ್, ರಾಜದೀಪ್ ನಾಯ್ಕ್, ಗಣಪತ್ ಗಾಂವಕರ್, ಡೊಮಿನಿಕ್ ಗಾಂವ್ಕರ್, ರಿತೇಶ್ ಛೋಡಂಕರ್ ಮತ್ತು ಅಮಿತ್ ಪಾಲೇಕರ್ ಎಂಬುವರು ಆಪ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಗೋವಾ ಚುನಾವಣೆ ಮೇಲೆ ಬರೀ ಆಪ್ ಅಷ್ಟೇ ಅಲ್ಲ ಟಿಎಂಸಿ ಕೂಡ ಕಣ್ಣಿಟ್ಟಿದೆ. ಆದರೆ ಮಮತಾ ಬ್ಯಾನರ್ಜಿ ಧ್ಯೇಯ ಇಲ್ಲಿ ಬಿಜೆಪಿಯನ್ನು ಸೋಲಿಸುವುದು ಆಗಿದೆಯೇ ಹೊರತು ಅಧಿಕಾರ ಹಿಡಿಯುವುದಲ್ಲ. 2022ರಲ್ಲಿ ಗೋವಾದಲ್ಲಷ್ಟೇ ಅಲ್ಲದೆ, ಪಂಜಾಬ್, ಉತ್ತರ ಪ್ರದೇಶ, ಉತ್ತರಾಖಂಡ್ ಮತ್ತು ಮಣಿಪುರಗಳಲ್ಲೂ ವಿಧಾನಸಭೆ ಚುನಾವಣೆ ನಡೆಯಲಿದೆ.
ಇದನ್ನೂ ಓದಿ: Viral Photo: ಡಿಐಜಿಯಾಗಿರುವ ಅಪ್ಪನಿಗೆ ಸಲ್ಯೂಟ್ ಮಾಡಿದ ಪೊಲೀಸ್ ಅಧಿಕಾರಿ ಮಗಳು; ಹೆಮ್ಮೆಯ ಕ್ಷಣದ ಫೋಟೋ ವೈರಲ್
Chest Pain: ಕಾಲೇಜಿಗೆ ತೆರಳಿದ್ದ ವಿದ್ಯಾರ್ಥಿ ಎದೆ ನೋವಿನಿಂದ ಕುಸಿದು ಬಿದ್ದು ಸಾವು