ಎವೈ 4.2 ಸೋಂಕಿನ ಹೆಚ್ಚಳ, ದೀಪಾವಳಿ ಹಬ್ಬದಿಂದ ಎಲ್ಲೆಡೆ ಜನಜಾತ್ರೆ; ಸದ್ಯದಲ್ಲೇ ಅಪ್ಪಳಿಸುತ್ತಾ ಕೊವಿಡ್ 3ನೇ ಅಲೆ?
AY 4.2 Variant: ದೀಪಾವಳಿ ಹಬ್ಬದ ಸಂಭ್ರಮದ ಮಧ್ಯೆ ಜನರು ಮಾಸ್ಕ್ಗಳನ್ನು ಧರಿಸಲು ಮತ್ತು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲು ಮರೆಯುವಂತಿಲ್ಲ. ಸ್ವಲ್ಪ ಯಾಮಾರಿದರೂ ದೀಪಾವಳಿ ನಂತರ ಕೋವಿಡ್-19 ಪ್ರಕರಣಗಳ ಸಂಖ್ಯೆ ಹೆಚ್ಚಾಗುವ ಆತಂಕವಿದೆ.
ನವದೆಹಲಿ: ಭಾರತದಲ್ಲಿ ದಿನನಿತ್ಯದ ಕೊವಿಡ್-19 ಪ್ರಕರಣಗಳ ಸಂಖ್ಯೆಯು ಇಳಿಮುಖವಾಗುತ್ತಿದ್ದರೂ 3ನೇ ಅಲೆಯ ಭೀತಿ ಮಾತ್ರ ಇನ್ನೂ ಕಡಿಮೆಯಾಗಿಲ್ಲ. ನವರಾತ್ರಿ ಹಬ್ಬದ ಬೆನ್ನಲ್ಲೇ ಇದೀಗ ದೀಪಾವಳಿ ಹಬ್ಬವೂ ಬರುತ್ತಿರುವುದರಿಂದ ದೀಪಾವಳಿ ಮುಗಿದ ನಂತರ ಭಾರತದಲ್ಲಿ ಕೊರೊನಾ ಮೂರನೇ ಅಲೆಯ ಅಬ್ಬರ ಶುರುವಾಗುವ ಸಾಧ್ಯತೆ ಹೆಚ್ಚಾಗಿದೆ.
ದೀಪಾವಳಿ ಮತ್ತು ಇತರ ಕೆಲವು ಹಬ್ಬಗಳು ಇರುವುದರಿಂದ ಜನರು ಮಾರುಕಟ್ಟೆ ಸ್ಥಳಗಳಲ್ಲಿ ಕೊವಿಡ್ ನಿಯಮಾವಳಿಗಳನ್ನು ಅನುಸರಿಸುತ್ತಿಲ್ಲ ಮತ್ತು ಸರಿಯಾಗಿ ಮಾಸ್ಕ್ ಧರಿಸುತ್ತಿಲ್ಲ. ಮತ್ತೊಂದೆಡೆ ಕೊವಿಡ್ ಡೆಲ್ಟಾ ರೂಪಾಂತರದ ಉಪ-ವಂಶಾವಳಿಯಾದ ಎವೈ 4.2 ಕೇಸುಗಳು ಈಗಾಗಲೇ ಕೆಲವು ರಾಜ್ಯಗಳಲ್ಲಿ ಕಾಣಿಸಿಕೊಳ್ಳುತ್ತಿವೆ. ನಾವು ಕೊಂಚ ಎಚ್ಚರ ತಪ್ಪಿದರೂ ಶೀಘ್ರದಲ್ಲೇ ಕೊವಿಡ್ ಮೂರನೇ ಅಲೆ ಭಾರತವನ್ನು ಅಪ್ಪಳಿಸುತ್ತದೆ ಎಂಬ ಭಯ ಹೆಚ್ಚಾಗಿದೆ.
AY.4.2 ರೂಪಾಂತರಿ ಈ ವರ್ಷದ ಜುಲೈನಲ್ಲಿ ಇಂಗ್ಲೆಂಡ್ನಲ್ಲಿ ಮೊದಲು ಕಾಣಿಸಿಕೊಂಡಿತ್ತು. ಡೆಲ್ಟಾ ರೂಪಾಂತರಕ್ಕಿಂತ ಎವೈ 4.2 ಹೆಚ್ಚು ಸಾಂಕ್ರಾಮಿಕವಾಗಿದ್ದರೂ ಇದು ಡೆಲ್ಟಾ ರೂಪಾಂತರದಷ್ಟು ಮಾರಕವಲ್ಲ ಎಂದು ಸಂಶೋಧಕರು ತಿಳಿಸಿದ್ದಾರೆ. ಕರ್ನಾಟಕದಲ್ಲಿ ಕೋವಿಡ್ -19 ರ ಡೆಲ್ಟಾ ರೂಪಾಂತರದ ಎವೈ 4.2 ರೂಪಾಂತರಿ ಸೋಂಕು ಪ್ರಕರಣಗಳು ಪತ್ತೆಯಾದ ಹಿನ್ನಲೆಯಲ್ಲಿ ಎದ್ದಿರುವ ಆತಂಕ ಶಮನಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮುಂದಾಗಿದೆ.
ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಪ್ರಪಂಚದಾದ್ಯಂತ AY.4.2 ರೂಪಾಂತರದ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. WHO ಇತ್ತೀಚೆಗೆ AY.4.2 ರೂಪಾಂತರದ ಒಟ್ಟು 26,000 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಹೇಳಿರುವ ಪ್ರಕಾರ, ಕೊವಿಡ್ -19ನಿಂದ ವರದಿಯಾದ ಪ್ರಕರಣಗಳು ಮತ್ತು ಸಾವುಗಳ ಜಾಗತಿಕ ಸಂಖ್ಯೆ ಈಗ ಎರಡು ತಿಂಗಳಿನಿಂದ ಹೆಚ್ಚುತ್ತಿದೆ.
ಈ ವರ್ಷದ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಭಾರತ ಕೊವಿಡ್-19ರ ಮಾರಣಾಂತಿಕ ಎರಡನೇ ಅಲೆಯನ್ನು ಎದುರಿಸಿತು. ಆದರೆ, ಕೊವಿಡ್ -19 ಪ್ರಕರಣಗಳು ಈಗ ಗಮನಾರ್ಹವಾಗಿ ಕಡಿಮೆಯಾಗಿದೆ. ಆದರೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ವಿಷಯವನ್ನು ಲಘುವಾಗಿ ತೆಗೆದುಕೊಳ್ಳುವಂತಿಲ್ಲ. ದೀಪಾವಳಿ ಹಬ್ಬದ ಸಂಭ್ರಮದ ಮಧ್ಯೆ ಜನರು ಮಾಸ್ಕ್ಗಳನ್ನು ಧರಿಸಲು ಮತ್ತು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲು ಮರೆಯುವಂತಿಲ್ಲ. ಸ್ವಲ್ಪ ಯಾಮಾರಿದರೂ ದೀಪಾವಳಿ ನಂತರ ಕೋವಿಡ್-19 ಪ್ರಕರಣಗಳ ಸಂಖ್ಯೆ ಹೆಚ್ಚಾಗುವ ಆತಂಕವಿದೆ.
ಇದನ್ನೂ ಓದಿ: ಝೈಡಸ್ ಕ್ಯಾಡಿಲಾ ಕೊವಿಡ್ ಲಸಿಕೆ ಬೆಲೆಯನ್ನು ₹265ಗೆ ಇಳಿಸಲು ಒಪ್ಪಿಗೆ, ಶೀಘ್ರದಲ್ಲೇ ಅಂತಿಮ ನಿರ್ಧಾರ: ವರದಿ
Covid-19 Origin: ಕೊವಿಡ್-19 ಮೂಲ ತಿಳಿಯಲು ಎಂದಿಗೂ ಸಾಧ್ಯವಾಗದಿರಬಹುದು ಎನ್ನುತ್ತಿವೆ ಅಮೆರಿಕ ಗುಪ್ತಚರ ಸಂಸ್ಥೆಗಳು
Published On - 4:07 pm, Tue, 2 November 21