ನವಾಬ್ ಮಲಿಕ್ ಮುಸ್ಲಿಂ ಎಂಬ ಕಾರಣಕ್ಕೆ ದಾವೂದ್ ಇಬ್ರಾಹಿಂ ಜೊತೆ ತಳುಕು ಹಾಕಲಾಗುತ್ತಿದೆ; ಶರದ್ ಪವಾರ್ ಆರೋಪ
ಭೂಗತ ದೊರೆ ದಾವೂದ್ ಇಬ್ರಾಹಿಂ ಮತ್ತು ಆತನ ಸಹಾಯಕರ ಚಟುವಟಿಕೆಗಳಿಗೆ ಸಂಬಂಧಿಸಿದ ಮನಿ ಲಾಂಡರಿಂಗ್ ತನಿಖೆಯಲ್ಲಿ ಫೆಬ್ರವರಿ 23ರಂದು ಜಾರಿ ನಿರ್ದೇಶನಾಲಯವು ನವಾಬ್ ಮಲಿಕ್ ಅವರನ್ನು ಬಂಧಿಸಿತ್ತು.
ಪುಣೆ: ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮುಖ್ಯಸ್ಥ ಶರದ್ ಪವಾರ್ ತಮ್ಮ ಪಕ್ಷದ ನಾಯಕ ಮತ್ತು ಮಹಾರಾಷ್ಟ್ರದ ಸಚಿವ ನವಾಬ್ ಮಲಿಕ್ (Nawab Malik) ಬಂಧನವು ರಾಜಕೀಯ ಪ್ರೇರಿತ ಎಂದು ಆರೋಪಿಸಿದ್ದಾರೆ. ಹಾಗೇ, ಅವರು ಮುಸ್ಲಿಂ ಎಂಬ ಕಾರಣಕ್ಕಾಗಿ ಪರಾರಿಯಾಗಿರುವ ಭೂಗತ ದೊರೆ ದಾವೂದ್ ಇಬ್ರಾಹಿಂ ಜೊತೆ ತಳುಕು ಹಾಕಲು ಪ್ರಯತ್ನಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನವಾಬ್ ಮಲಿಕ್ ರಾಜೀನಾಮೆ ಕೋರಿ ಪ್ರತಿಪಕ್ಷಗಳು ಎತ್ತಿರುವ ಬೇಡಿಕೆಗಳನ್ನೂ ಅವರು ತಳ್ಳಿಹಾಕಿದ್ದಾರೆ. ಭೂಗತ ದೊರೆ ದಾವೂದ್ ಇಬ್ರಾಹಿಂ ಮತ್ತು ಆತನ ಸಹಾಯಕರ ಚಟುವಟಿಕೆಗಳಿಗೆ ಸಂಬಂಧಿಸಿದ ಮನಿ ಲಾಂಡರಿಂಗ್ ತನಿಖೆಯಲ್ಲಿ ಫೆಬ್ರವರಿ 23ರಂದು ಜಾರಿ ನಿರ್ದೇಶನಾಲಯವು ನವಾಬ್ ಮಲಿಕ್ ಅವರನ್ನು ಬಂಧಿಸಿತ್ತು.
“ನವಾಬ್ ಮಲಿಕ್ ಬಂಧನವು ರಾಜಕೀಯ ಪ್ರೇರಿತವಾಗಿದೆ. ದಾವೂದ್ ಇಬ್ರಾಹಿಂ ಮತ್ತು ನವಾಬ್ ಮಲಿಕ್ ಇಬ್ಬರೂ ಮುಸ್ಲಿಂ ಎಂಬ ಕಾರಣಕ್ಕೆ ಅವರ ನಡುವೆ ಸಂಪರ್ಕ ಕಲ್ಪಿಸಲಾಗುತ್ತಿದೆ. ನವಾಬ್ ಮಲಿಕ್ ಮತ್ತು ಆತನ ಕುಟುಂಬದ ಸದಸ್ಯರಿಗೆ ಉದ್ದೇಶಪೂರ್ವಕವಾಗಿ ಕಿರುಕುಳ ನೀಡಲಾಗುತ್ತಿದೆ. ಆದರೆ ನಾವು ಇದರ ವಿರುದ್ದ ಹೋರಾಡುತ್ತೇವೆ” ಎಂದು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಹೇಳಿದ್ದಾರೆ.
ನವಾಬ್ ಮಲಿಕ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಪ್ರತಿಪಕ್ಷ ಬಿಜೆಪಿಯ ಬೇಡಿಕೆಯ ಬಗ್ಗೆ ಕೇಳಿದಾಗ, ಶರದ್ ಪವಾರ್ ಅವರು ಬಿಜೆಪಿಗೆ ಸೇರಿದ ಕೇಂದ್ರ ಸಚಿವ ನಾರಾಯಣ ರಾಣೆ ಮತ್ತು ನವಾಬ್ ಮಲಿಕ್ ಅವರಿಗೆ ವಿಭಿನ್ನ ಮಾನದಂಡಗಳನ್ನು ಅನ್ವಯಿಸಲಾಗುತ್ತಿದೆ ಎಂದು ಟೀಕಿಸಿದ್ದಾರೆ.
ಕಳೆದ ಆಗಸ್ಟ್‌ನಲ್ಲಿ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಸಂಗಮೇಶ್ವರದಲ್ಲಿ ತಮ್ಮ ಸ್ವಾತಂತ್ರ್ಯ ದಿನದ ಭಾಷಣದ ವೇಳೆ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ ವರ್ಷವನ್ನು ಮರೆತಿದ್ದಕ್ಕಾಗಿ ರಾಜ್ಯದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಕಪಾಳಮೋಕ್ಷ ಮಾಡುತ್ತೇನೆ ಎಂಬ ಹೇಳಿಕೆಗಾಗಿ ನಾರಾಯಣ ರಾಣೆ ಅವರನ್ನು ಪೊಲೀಸರು ಬಂಧಿಸಿದ್ದರು.
ಮಹಾರಾಷ್ಟ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಆಯ್ದ ರಾಜಕಾರಣಿಗಳ ಫೋನ್ ಕದ್ದಾಲಿಕೆ ಆರೋಪದ ಬಗ್ಗೆ ಮಾತನಾಡಿದ ಶರದ್ ಪವಾರ್, “ನಾನು ವಿವಿಧ ನಾಯಕರ ಫೋನ್ ಕದ್ದಾಲಿಕೆಯ ದಾಖಲೆಯನ್ನು ನೋಡಿದ್ದೇನೆ. ಇದನ್ನು ದೇವೇಂದ್ರ ಫಡ್ನವಿಸ್ ಸರ್ಕಾರದ ಅವಧಿಯಲ್ಲಿ ಮಾಡಲಾಗಿದೆ. ದೇಶದಲ್ಲಿ ಇಂತಹ ಪರಿಸ್ಥಿತಿಯನ್ನು ನಾನು ಹಿಂದೆಂದೂ ನೋಡಿಲ್ಲ ಎಂದು ಶರದ್ ಪವಾರ್ ಟೀಕಿಸಿದ್ದಾರೆ.
ಇದನ್ನೂ ಓದಿ: Nawab Malik: ಬಂಧನಕ್ಕೊಳಗಾಗಿರುವ ಸಚಿವ ನವಾಬ್ ಮಲಿಕ್ ಹೊಟ್ಟೆ ನೋವಿನಿಂದ ಆಸ್ಪತ್ರೆಗೆ ದಾಖಲು
Nawab Malik: ಸಮೀರ್ ವಾಂಖೆಡೆ ವಿರುದ್ಧದ ಹೇಳಿಕೆಗೆ ಬಾಂಬೆ ಹೈಕೋರ್ಟ್ಗೆ ಬೇಷರತ್ ಕ್ಷಮೆ ಯಾಚಿಸಿದ ನವಾಬ್ ಮಲಿಕ್
Published On - 7:32 pm, Sat, 5 March 22