ಮುಂಬೈ: ‘‘ನಿಮಗೆ ತಾಕ್ತಿದ್ದರೆ ಶಿವಸೇನೆಗೆ ರಾಜೀನಾಮೆ ನೀಡಿ ಚುನಾವಣೆಯನ್ನು ಎದುರಿಸಿ’’ ಎಂದು ಬಂಡಾಯ ಶಾಸಕರಿಗೆ ಮಹಾರಾಷ್ಟ್ರ ಸಚಿವ ಆದಿತ್ಯ ಠಾಕ್ರೆ ಸವಾಲೆಸೆದಿದ್ದಾರೆ. ಶಿವಸೇನೆ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿರುವ ಅವರು, ಅಸ್ಸಾಂನಲ್ಲಿ ಬೀಡುಬಿಟ್ಟಿರುವ ಬಂಡಾಯ ನಾಯಕರಿಗೆ ಆದಿತ್ಯ ಠಾಕ್ರೆ ಸವಾಲೆಸಿದ್ದು, ತಾಕತ್ ಇದ್ದರೆ ಶಿವಸೇನೆಯನ್ನು ತ್ಯಜಿಸಿ ರಾಜೀನಾಮೆ ನೀಡಿ ಚುನಾವಣೆ ಎದುರಿಸಿ ಎಂದು ಹೇಳಿದ್ದಾರೆ.
ನಿಮ್ಮ ಪ್ರಕಾರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅಸಮರ್ಥ ಆಡಳಿತಗಾರ ಎಂಬುದು ನಿಮ್ಮ ಮನಸ್ಸಿನಲ್ಲಿದ್ದರೆ ನೀವೂ ಕೂಡ ಅಸಮರ್ಥ ನಾಯಕರೇ ಆಗುತ್ತೀರಿ, ಹೀಗಾಗಿ ಇಬ್ಬರೂ ಜನರ ಮುಂದೆ ನಿಲ್ಲೋಣ ತೀರ್ಮಾನವನ್ನು ಜನರೇ ತೆಗೆದುಕೊಳ್ಳುತ್ತಾರೆ, ಎಂದೂ ಸತ್ಯ ಗೆಲ್ಲುತ್ತದೆ ಎಂಬ ನಂಬಿಕೆ ಇದೆ ಎಂದರು.
ಅತೃಪ್ತ ಶಾಸಕರ ನಾಯಕ ಏಕನಾಥ್ ಶಿಂಧೆ ಜೊತೆಗಿರುವ 50ಕ್ಕೂ ಹೆಚ್ಚು ನಾಯಕರು ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸುವ ಕಸರತ್ತಿನಲ್ಲಿದ್ದಾರೆ. ಈ ನಡುವೆ ಶಿವಸೇನಾ ಹೆಸರಿಗಾಗಿ ಮೂಲ ಶಿವಸೇನೆ ನಾಯಕರು ಬಂಡಾಯ ಶಾಸಕರ ನಡುವೆ ಫೈಟ್ ಜೋರಾಗಿದೆ.
ಬಂಡಾಯ ಬಣವು ಶರದ್ ಪವಾರ್ ಅವರ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ ಮತ್ತು ಕಾಂಗ್ರೆಸ್ ಜೊತೆಗಿನ ಸೇನಾ ಮೈತ್ರಿಯನ್ನು ಅಸ್ವಾಭಾವಿಕ ಎಂದು ಕರೆದಿದ್ದು, ಬಾಳಾಸಾಹೇಬ್ ಠಾಕ್ರೆ ಸ್ಥಾಪಿಸಿದ ಪಕ್ಷವು ಬಿಜೆಪಿಯೊಂದಿಗೆ ತನ್ನ ಮೈತ್ರಿಯನ್ನು ಮಾಡಿಕೊಳ್ಳುವಂತೆ ಒತ್ತಾಯಿಸಿದೆ.
ಶಿವಸೇನೆ ಹಾಗೂ ಬಾಳಾ ಸಾಹೇಬ್ ಠಾಕ್ರೆ ಹೆಸರು ಬಳಕೆ ಮಾಡದಂತೆ ಸಿಎಂ ಉದ್ಧವ್ ಠಾಕ್ರೆ ಎಚ್ಚರಿಕೆ ನೀಡಿದ್ದಾರೆ. ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ನಿರ್ಧಾರ ಕೈಗೊಂಡಿದ್ದ ಶಿವಸೇನೆ ನಾಯಕರು ಬಂಡಾಯ ಶಾಸಕರಿಗೆ ಪಕ್ಷದ ಹೆಸರು ಮತ್ತು ಅದರ ನಾಯಕರ ಹೆಸರು ಬಳಸಿಕೊಳ್ಳುವ ಅವಕಾಶ ಇಲ್ಲ, ಮತ್ತು ಪಕ್ಷದ್ರೋಹ ಮಾಡಿದ ಏಕನಾಥ್ ಶಿಂಧೆ ವಿರುದ್ಧ ಕ್ರಮಕ್ಕೆ ತಿರ್ಮಾನ ಮಾಡಲಾಗಿತ್ತು.
ಬಂಡಾಯ ಶಾಸಕರು ಶಿವಸೇನೆ ಬಾಳಾ ಸಾಹೇಬ್ ಠಾಕ್ರೆ ಹೆಸರು ಬಳಕೆ ಮಾಡದಿರಲು ಸೂಚಿಸುವಂತೆ ಮೂಲ ಶಿವಸೇನೆ ನಾಯಕರು ಚುನಾವಣೆ ಆಯೋಗದ ಮೊರೆ ಕೂಡಾ ಹೋಗಿದ್ದಾರೆ. ಶಿವಸೇನೆ ಇದುವರೆಗೆ ಏಕನಾಥ್ ಶಿಂಧೆ ಸೇರಿದಂತೆ 16 ಬಂಡಾಯ ಶಾಸಕರನ್ನು ಅನರ್ಹಗೊಳಿಸುವಂತೆ ಸ್ಪೀಕರ್‌ಗೆ ಕೋರಿದ್ದು, ಅವರಿಗೆ ನೋಟಿಸ್ ನೀಡಲಾಗಿದೆ.
Published On - 3:50 pm, Sun, 26 June 22