ಕೊಲ್ಕತ್ತ: ಪಶ್ಚಿಮ ಬಂಗಾಳದ ಉತ್ತರ ಭಾಗದಲ್ಲಿರುವ ಮಾಲದಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋಪಾಲ ಚಂದ್ರ ಸಾಹ (46) ಅವರ ಮೇಲೆ ದುಷ್ಕರ್ಮಿಗಳು ಗುಂಡು ಹಾರಿಸಿದ ಘಟನೆ ಭಾನುವಾರ ರಾತ್ರಿ ನಡೆದಿದೆ. ಸಾಹ ಅವರನ್ನು ತಕ್ಷಣವೇ ಮಾಲದ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಭಾನುವಾರ ರಾತ್ರಿ 9 ಗಂಟೆ ವೇಳೆಗೆ ಸಾಹ ಅವರು ರೋಡ್ ಶೋ ಮುುಗಿಸಿ ಪಕ್ಷದ ಕೆಲವು ಕಾರ್ಯಕರ್ತರೊಂದಿಗೆ ಪಕ್ಷದ ಕಚೇರಿಯಲ್ಲಿ ಕುಳಿತಿದ್ದರು. ಕೆಲವು ಬಿಜೆಪಿ ಕಾರ್ಯಕರ್ತರು ಕಚೇರಿ ಹೊರಗೆ ಕುಳಿತಿದ್ದರು. ನಮಗೆ ಗುಂಡಿನ ಸದ್ದು ಕೇಳಿ ಬಂತು. ಗುಂಪಿನಲ್ಲಿದ್ದ ದುಷ್ಕರ್ಮಿಗಳು ಸಾಹ ಮೇಲೆ ಗುಂಡು ಹಾರಿಸಿದ್ದರು. ಅವರ ಕುತ್ತಿಗೆ ಮತ್ತು ಬೆನ್ನಿಗೆ ಗುಂಡು ತಗಲಿದ್ದು, ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದಿದ್ದೇವೆ. ಅಲ್ಲಿ ಅವರಿಗೆ ಸರ್ಜರಿ ನಡೆಯಲಿದೆ ಎಂದು ಬಿಜೆಪಿಯ ಸ್ಥಳೀಯ ನಾಯಕ ಸತ್ಯಜಿತ್ ಹಲ್ದಾರ್ ಹೇಳಿದ್ದಾರೆ.
ಸಾಹಾ ಅವರ ಚುನಾವಣಾ ಕ್ಷೇತ್ರದ ಬೂತ್ ಮಟ್ಟದ ಬಿಜೆಪಿ ನಾಯಕರಾಗಿರುವ ಸತ್ಯಜಿತ್ ಹಲ್ದಾರ್ ಘಟನೆ ನಡೆಯುವಾಗ ಸ್ಥಳದಲ್ಲಿದ್ದರು. ಜಿಲ್ಲಾ ಮೆಜಿಸ್ಟ್ರೇಟ್ ಮತ್ತು ಪೊಲೀಸ್ ಅಧಿಕಾರಿಗಳೂ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.
ಈ ಘಟನೆ ಖಂಡಿಸಿ ಬಿಜೆಪಿ ಯುವ ಘಟಕದ ನಾಯಕರು ಮತ್ತು ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿ-34ರಲ್ಲಿ ಟೈರ್ ಸುಟ್ಟು ಪ್ರತಿಭಟನೆ ನಡೆಸಿದ್ದಾರೆ. ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಮತ್ತು ರಾಜ್ಯದ ಉಸ್ತುವಾರಿ ವಹಿಸಿರುವ ಅರವಿಂದ್ ಮೆನನ್, ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಸಯಾಂತನ್ ಬಸು, ಪಕ್ಷದ ಪ್ರಧಾನ ಕಾರ್ಯದರ್ಶಿಗಳು ಇಂದು ಮಾಲದಾಕ್ಕೆ ಭೇಟಿ ನೀಡಲಿದ್ದಾರೆ.
ನಾವು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭವಾಗಿದೆ ಎಂದು ಮಾಲದಾ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಇದು ಟಿಎಂಸಿ ಕೃತ್ಯ: ದಿಲೀಪ್ ಘೋಷ್ ಆರೋಪ
ಮಾಲದ ಚುನಾವಣಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋಪಾಲ ಚಂದ್ರ ಸಾಹ ಅವರು ಚುನಾವಣಾ ಪ್ರಚಾರ ನಡೆಸುತ್ತಿದ್ದಾಗ ಟಿಎಂಸಿ ದುಷ್ಕರ್ಮಿಗಳು ಹತ್ಯೆಗೆ ಯತ್ನಿಸಿದ್ದಾರೆ. ಟಿಎಂಸಿಯ ದುಷ್ಕೃತ್ಯ ರಾಜಕಾರಣದ ವಿರುದ್ಧ ಮೇ 2ರಂದು ಜನರು ಪ್ರಬಲ ಉತ್ತರವನ್ನು ನೀಡಲಿದ್ದಾರೆ ಎಂದು ಪಶ್ಚಿಮ ಬಂಗಾಳದ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಟ್ವೀಟ್ ಮಾಡಿದ್ದಾರೆ.
1.1 There was a grave attempt by TMC miscreants to assassinate Malda Constituency’s BJP candidate Shri Gopal Chandra Saha, during the election campaigning. People will provide their strong mandate on 2nd May against the murderous politics of TMC.#PoliticalTerrorism of TMC pic.twitter.com/FnAhUncsXg
— Dilip Ghosh (@DilipGhoshBJP) April 18, 2021
ಮಾಲದಾದಿಂದ ಪಶ್ಚಿಮ ಬಂಗಾದ ಎಲ್ಲೆಡೆ ಜನರು ಟಿಎಂಸಿ ಪಕ್ಷದ ರಾಜಕೀಯ ಭಯೋತ್ಪಾದನೆ ವಿರುದ್ಧ ಇವಿಎಂ ಮೂಲಕ ತಕ್ಕ ಉತ್ತರ ನೀಡಲಿದ್ದಾರೆ ಎಂದಿದ್ದಾರೆ ಘೋಷ್.
1.2 From Malda to everywhere in Paschim Banga,people will give befitting reply through EVMs against such act of perpetration.#PoliticalTerrorism of TMC
— Dilip Ghosh (@DilipGhoshBJP) April 18, 2021
ಪಶ್ಚಿಮ ಬಂಗಾಳದ 294 ವಿಧಾನಸಭಾ ಕ್ಷೇತ್ರಗಳಿಗೆ 8 ಹಂತದಲ್ಲಿ ಚುನಾವಣೆ ನಡೆಯುತ್ತಿದೆ. ಈಗಾಗಲೇ 5 ಹಂತದ ಚುನಾವಣೆ ನಡೆದಿದ್ದು 180 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ಮುಗಿದಿದೆ. 6ನೇ ಹಂತದ ಚುನಾವಣೆ ಮಾರ್ಚ್ 22, 7ನೇ ಹಂತದ ಚುನಾವಣೆ 26, 8ನೇ ಹಂತದ ಚುನಾವಣೆ 29ಕ್ಕೆ ನಡೆಯಲಿದ್ದು ಮೇ 2ರಂದು ಮತಎಣಿಕೆ ನಡೆದು ಫಲಿತಾಂಶ ಪ್ರಕಟವಾಗಲಿದೆ. ಕೊನೆಯ ಹಂತದ ಮತದಾನ ಅಂದರೆ ಏಪ್ರಿಲ್ 29ರಂದು ಮಾಲದಾ ಚುನಾವಣಾ ಕ್ಷೇತ್ರದಲ್ಲಿ ಮತದಾನ ನಡೆಯಲಿದೆ.
ಇದನ್ನೂ ಓದಿ: West Bengal Elections 2021: ಸುಸೂತ್ರವಾಗಿ ನಡೆಯದ 5ನೇ ಹಂತದ ಮತದಾನ; ಟಿಎಂಸಿ-ಬಿಜೆಪಿ ಕಾರ್ಯಕರ್ತರ ನಡುವೆ ಕಲ್ಲುತೂರಾಟ