AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜಕೀಯದಲ್ಲಿ 50 ವರ್ಷಗಳು; ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುರಿತ ಪುಸ್ತಕ ಬಿಡುಗಡೆ

Mallikarjun Kharge: ಪುಸ್ತಕ ಬಿಡುಗಡೆ ಮಾಡಿದ್ದಕ್ಕೆ ಸೋನಿಯಾ ಗಾಂಧಿ ಅವರಿಗೆ ಧನ್ಯವಾದಗಳು. ನನ್ನ ಬಗ್ಗೆ ಸಹವರ್ತಿಗಳು, ಸ್ನೇಹಿತರು ಈ ಪುಸ್ತಕವನ್ನು ಬರೆದಿದ್ದಾರೆ.ಸಾಮಾನ್ಯ ಕಾರ್ಯಕರ್ತನಾದ ನಾನು ಈ ಸ್ಥಾನದವರೆಗೆ ಬಂದಿದ್ದೇನೆ 29 ವರ್ಷಕ್ಕೆ ಶಾಸಕನಾಗಿ ಆಯ್ಕೆಯಾಗಲು ಅವಕಾಶ ನೀಡಿದ ಪಕ್ಷ ಮತ್ತುನನಗೆ ಆಶೀರ್ವದಿಸಿದ ಮತದಾರರಿಗೆ ಧನ್ಯವಾದಗಳು ಎಂದು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ರಾಜಕೀಯದಲ್ಲಿ 50 ವರ್ಷಗಳು; ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುರಿತ ಪುಸ್ತಕ ಬಿಡುಗಡೆ
ಮಲ್ಲಿಕಾರ್ಜುನ ಖರ್ಗೆ ಪುಸ್ತಕ ಬಿಡುಗಡೆ ಕಾರ್ಯಕ್ರಮ
ರಶ್ಮಿ ಕಲ್ಲಕಟ್ಟ
|

Updated on: Nov 29, 2023 | 7:44 PM

Share

ದೆಹಲಿ ನವೆಂಬರ್ 29: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು (Mallikarjun Kharge) ಚುನಾವಣಾ ರಾಜಕೀಯದಲ್ಲಿ 50 ವರ್ಷಗಳ ಪೂರೈಸಿದ್ದು, ಅದರ ಗೌರವಾರ್ಥ ಕಾಂಗ್ರೆಸ್ (Congress) ಪ್ರಕಟಿಸಿರುವ ‘MALLIKARJUN KHARGE: Political Engagement with Compassion, Justice and Inclusive Development’ಎಂಬ ವಿಶೇಷ ಅಭಿನಂದನಾ ಸಂಪುಟವನ್ನು ಸಿಪಿಪಿ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi) ಅವರು ಬುಧವಾರ ದೆಹಲಿಯ ಜವಾಹರ್ ಭವನದಲ್ಲಿ ಬಿಡುಗಡೆ ಮಾಡಿದ್ದಾರೆ. ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಸೋನಿಯಾ ಗಾಂಧಿ, ರಾಜಕೀಯದಲ್ಲಿ 50 ವರ್ಷಗಳು ಸುದೀರ್ಘ ಅವಧಿ. ಮಲ್ಲಿಕಾರ್ಜುನ ಖರ್ಗೆ ಅವರು ಅದರ ಅನಿರೀಕ್ಷಿತ ಹಾದಿಯಲ್ಲಿ ಸಾಗಿ ತಮ್ಮ ರಾಜಕೀಯ ವೃತ್ತಿಜೀವನದುದ್ದಕ್ಕೂ ಎತ್ತರಕ್ಕೆ ಏರುತ್ತಲೇ ಇದ್ದರು. ಒಮ್ಮೆಯೂ ಅವರು ತಮ್ಮ ಸಿದ್ಧಾಂತದಲ್ಲಿ ರಾಜಿ ಮಾಡಿಕೊಳ್ಳಲಿಲ್ಲ, ಒಮ್ಮೆಯೂ ಅವರು ಬಡವರ ವಿಚಾರದಿಂದ ದೂರ ಸರಿಯಲಿಲ್ಲ, ಮತ್ತು ರಾಜಕೀಯ ಯುದ್ಧದಲ್ಲಿ ಗೆಲ್ಲಲು ಅವರು ಒಮ್ಮೆಯೂ ಘನತೆ ಮತ್ತು ನಡವಳಿಕೆಯಲ್ಲಿ ರಾಜಿ ಮಾಡಿಕೊಂಡಿಲ್ಲ. ಅದಕ್ಕಾಗಿಯೇ ಅವರು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾರೆ ಎಂದು ಹೇಳಿದ್ದಾರೆ.

ಅನೇಕ ಜನರು ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುತ್ತಾರೆ, ಆದರೆ ನಮ್ಮ ದೈನಂದಿನ ಜೀವನದಲ್ಲಿ ನಾವು ಅದನ್ನು ಅಭ್ಯಾಸ ಮಾಡುವುದಿಲ್ಲ. ಮಲ್ಲಿಕಾರ್ಜುನ ಖರ್ಗೆಯವರು ಎಲ್ಲರ ಮಾತು ಕೇಳುತ್ತಿದ್ದರು. ನಾನು ಅವರನ್ನು ಮೊದಲು ಭೇಟಿಯಾದಾಗ ಗಮನಿಸಿದ್ದು ಇದನ್ನೇ. ನ್ಯಾಯ, ಸಮಾನತೆ ಮತ್ತು ಸ್ವಾತಂತ್ರ್ಯದ ಕಲ್ಪನೆಗೆ ಅವರ ಬದ್ಧತೆಯನ್ನು ಎಲ್ಲರೂ ಗುರುತಿಸಿದ್ದಾರೆ. ಇದು ಅವರ ಜೀವಂತ ವಾಸ್ತವ ಮತ್ತು ಕಳೆದ ಐದು ದಶಕಗಳ ರಾಜಕೀಯ ಅನುಭವದಿಂದ ಹೊರಹೊಮ್ಮುತ್ತದೆ ಎಂದು ಆರ್​​ಜೆಡಿ ನಾಯಕ ಮನೋಜ್ ಝಾ ಹೇಳಿದ್ದಾರೆ.

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಡಿಎಂಕೆ ಸಂಸದ ಟಿ ಆರ್ ಬಾಲು ಮಲ್ಲಿಕಾರ್ಜುನ ಖರ್ಗೆ ಅವರು 50 ವರ್ಷಗಳಿಗೂ ಹೆಚ್ಚು ಕಾಲ ಕಾಂಗ್ರೆಸ್‌ಗೆ ಸೇವೆ ಸಲ್ಲಿಸಿದ್ದಾರೆ. ಒಂಬತ್ತು ಬಾರಿ ಶಾಸಕರಾಗಿ ಮತ್ತು ಎರಡು ಬಾರಿ ಸಂಸದರಾಗಿ ದಾಖಲೆ ಬರೆದಿದ್ದಾರೆ. ಅಂತಹ ಎತ್ತರವನ್ನು ಸಾಧಿಸಿದ ಕಾಂಗ್ರೆಸ್‌ನ ಅಧ್ಯಕ್ಷರಾದ ಖರ್ಗೆ ಜಿ ಅವರನ್ನು ನಾನು ಅಭಿನಂದಿಸುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ: ತೆಲಂಗಾಣ: ಸುಮ್ಮನೆ ಕುಳಿತುಕೊಳ್ಳಿ, ಇಲ್ಲವಾದರೆ ಹೊರನಡೆಯಿರಿ, ಸಭೆಯಲ್ಲಿ ತಾಳ್ಮೆ ಕಳೆದುಕೊಂಡ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ 

ಇದು ಖರ್ಗೆ ಎಂಬ ಒಬ್ಬ ವ್ಯಕ್ತಿಯ ಆಕರ್ಷಕ ಕಥೆ. ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಏರುವ ಮುನ್ನ ರಾಜಕೀಯ ನಾಯಕ, ಸಮಾಜ ಸುಧಾರಕ ಮತ್ತು ಶಿಕ್ಷಣತಜ್ಞರಾಗಿ ಛಾಪು ಮೂಡಿಸಿದವರ ಕತೆ ಎಂದು ಅಭಿನಂದನಾ ಸಂಪುಟದ ಸಂಪಾದಕ ಸುಖದೇವ್ ಥೋರಟ್ ಹೇಳಿದ್ದಾರೆ.  ಮಲ್ಲಿಕಾರ್ಜುನ ಖರ್ಗೆಯವರ ದೊಡ್ಡ ಗುಣವೆಂದರೆ ಅವರ ಜೀವನ ಮತ್ತು ಕೆಲಸದಲ್ಲಿ ದ್ವೇಷದ ಕುರುಹು ಇಲ್ಲ.ಇದು ಅವರ ಜೀವನದ ದೊಡ್ಡ ಪ್ರಾಯೋಗಿಕ ಸಾಧನೆಯಾಗಿದೆ ಎಂದು ಸಿಪಿಎಂ ನೇತಾಪರ ಸೀತಾರಾಮ್ ಯೆಚೂರಿ ಅಭಿಪ್ರಾಯಪಟ್ಟಿದ್ದಾರೆ.

ಖರ್ಗೆ ಮಾತು

ಒಬ್ಬ ಸಾಮಾನ್ಯ ಪಕ್ಷದ ಕಾರ್ಯಕರ್ತನಾಗಿ, ಭಾರತದ ಪ್ರಜಾಪ್ರಭುತ್ವ ಮತ್ತು ನಮ್ಮ ಸಂವಿಧಾನದಿಂದಾಗಿ ನಾನು ಈ ಸ್ಥಾನವನ್ನು ತಲುಪಲು ಸಾಧ್ಯವಾಯಿತು. ಪ್ರಜಾಪ್ರಭುತ್ವ ಇಲ್ಲದಿದ್ದರೆ ದೇಶದಲ್ಲಿ ರಾಜಕೀಯ ಮತ್ತು ಸಾಮಾಜಿಕ ಹಕ್ಕುಗಳನ್ನು ಪಡೆಯಲು ಸಾಮಾನ್ಯ ಜನರಿಗೆ ಅವಕಾಶವಿರುವುದಿಲ್ಲ. ಇಂದು ಸಂವಿಧಾನ ಮತ್ತು ನಮ್ಮ ಸಂಸದೀಯ ಪ್ರಜಾಪ್ರಭುತ್ವ ಎರಡೂ ಅಪಾಯದಲ್ಲಿದೆ ಎಂಬ ಅಂಶವನ್ನು ನಾನು ನಿರ್ಲಕ್ಷಿಸಲಾರೆ. ಶ್ರೀಮತಿ ಸೋನಿಯಾ ಗಾಂಧಿ ಅವರು ಪುಸ್ತಕ ಬಿಡುಗಡೆ ಮಾಡುತ್ತಿರುವುದು ಹೆಮ್ಮೆಯ ಸಂಗತಿ.. ಲೇಖಕರ ಪ್ರಯತ್ನಗಳು ಮತ್ತು ಈ ಪುಸ್ತಕದ ಮೂಲಕ ಅವರು ತೋರಿಸಿದ ಗೌರವ, ಪ್ರೀತಿ ಮತ್ತು ಪ್ರೀತಿಗಾಗಿ ನಾನು ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಈ ಪುಸ್ತಕಕ್ಕೆ ಸಹಕರಿಸಿದ ಎಲ್ಲರಿಗೂ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ನಿಮ್ಮೆಲ್ಲರ ಸಂದೇಶದಿಂದ ಮನತುಂಬಿ ಬಂದಿದೆ ಎಂದು ಖರ್ಗೆ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ