ಕ್ರಿಕೆಟ್ನಲ್ಲಿ ಪಾಕಿಸ್ತಾನ ಗೆದ್ದಿದ್ದಕ್ಕೆ ಸಂಭ್ರಮಿಸಿದ ಪತ್ನಿ ವಿರುದ್ಧ ದೂರು ನೀಡಿದ ಪತಿ; ಎಫ್ಐಆರ್ ದಾಖಲು
ಉತ್ತರ ಪ್ರದೇಶದಲ್ಲಿ ಯಾರಾದರೂ ಪಾಕಿಸ್ತಾನದ ಗೆಲುವನ್ನು ಸಂಭ್ರಮಿಸಿದರೆ ಅವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲು ಮಾಡಲಾಗುವುದು ಎಂದು ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದರು.
ರಾಂಪುರ: ಟಿ-20 ವಿಶ್ವಕಪ್ನಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಗೆದ್ದಿದ್ದಕ್ಕೆ ಸಂಭ್ರಮಿಸಿದ್ದಾಳೆ ಎಂದು ಪತ್ನಿಯ ವಿರುದ್ಧ ಆರೋಪ ಮಾಡಿರುವ ವ್ಯಕ್ತಿ ಪೊಲೀಸರಿಗೆ ದೂರನ್ನೂ ನೀಡಿದ್ದಾರೆ. ಪತ್ನಿಯಷ್ಟೇ ಅಲ್ಲ ಆಕೆಯ ಇಡೀ ಕುಟುಂಬದವರ ವಿರುದ್ಧವೇ ದೂರು ನೀಡಿರುವ ಪರಿಣಾಮ ಇದೀಗ ಅವರೆಲ್ಲರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಈ ಘಟನೆ ಉತ್ತರಪ್ರದೇಶದ ರಾಂಪುರದಲ್ಲಿ ನಡೆದಿದೆ. ಘಟನೆ ಬಗ್ಗೆ ಮಾಹಿತಿ ನೀಡಿರುವ ಸ್ಥಳೀಯ ಎಸ್ಪಿ ಅಂಕಿತ್ ಮಿತ್ತಲ್, ಅಕ್ಟೋಬರ್ 24ರಂದ ಪಂದ್ಯಾವಳಿ ನಡೆದಿತ್ತು. ಇದರಲ್ಲಿ ಭಾರತ ಸೋತ ನಂತರ ಭಾರತೀಯ ಕ್ರಿಕೆಟ್ ತಂಡವನ್ನು ಅಣುಕಿಸಿ, ಪಾಕಿಸ್ತಾನದ ಗೆಲುವು ಸಂಭ್ರಮಿಸಿದ್ದಾರೆ ಎಂದು ಇಶಾನ್ ಮಿಯಾ ಎಂಬುವರು ತಮ್ಮ ಪತ್ನಿ ಹಾಗೂ ಆಕೆಯ ಕುಟುಂಬದವರ ವಿರುದ್ಧ ದೂರು ನೀಡಿದ್ದಾರೆ. ಇದೀಗ ಎಫ್ಐಆರ್ ದಾಖಲು ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
ಇಶಾನ್ ಮಿಯಾ ರಾಂಪುರದ ಅಝೀಂ ನಗರದವರಾಗಿದ್ದು ಇವರ ಪತ್ನಿಯ ಹೆಸರು ರಬಿಯಾ ಶಂಸಿ. ಅಕ್ಟೋಬರ್ 24ರಂದು ಪಾಕಿಸ್ತಾನ ಗೆಲ್ಲುತ್ತಿದ್ದಂತೆ ರಬಿಯಾ ಮತ್ತು ಆಕೆಯ ಕುಟುಂಬದವರು ಪಟಾಕಿ ಹಚ್ಚಿ ಸಂಭ್ರಮಿಸಿದ್ದಾರೆ. ಅಷ್ಟೇ ಅಲ್ಲ, ಪಾಕ್ ವಿಜಯದ ಖುಷಿಯನ್ನು ವಾಟ್ಸ್ಆ್ಯಪ್ ಸ್ಟೇಟಸ್ ಹಾಕುವ ಮೂಲಕ ವ್ಯಕ್ತಪಡಿಸಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ. ರಾಂಪುರ ಜಿಲ್ಲೆಯ ಗಂಜ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಈ ದಂಪತಿ ಒಟ್ಟಿಗೆ ಇರಲಿಲ್ಲ. ಮದುವೆಯಾಗಿ ಕೆಲವೇ ದಿನಗಳಲ್ಲಿ ಇಬ್ಬರೂ ಪ್ರತ್ಯೇಕವಾಗಿದ್ದಾರೆ. ಆಕೆ ತನ್ನ ತಂದೆ-ತಾಯಿಯೊಟ್ಟಿಗೆ ವಾಸವಾಗಿದ್ದಳು.
ಇನ್ನು ಉತ್ತರ ಪ್ರದೇಶದಲ್ಲಿ ಯಾರಾದರೂ ಪಾಕಿಸ್ತಾನದ ಗೆಲುವನ್ನು ಸಂಭ್ರಮಿಸಿದರೆ ಅವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲು ಮಾಡಲಾಗುವುದು ಎಂದು ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದರು. ಇನ್ನು ಲಖನೌದಲ್ಲಿ ಇಂಜಿನಿಯರಿಂಗ್ ಓದುತ್ತಿದ್ದ ಮೂವರು ಕಾಶ್ಮೀರದ ವಿದ್ಯಾರ್ಥಿಗಳನ್ನು ಇದೇ ಕಾರಣಕ್ಕೆ ಬಂಧಿಸಲಾಗಿತ್ತು.
ಇದನ್ನೂ ಓದಿ: ಶೀಘ್ರವೇ 200 ಕೋಟಿ ರೂಪಾಯಿ ಕ್ಲಬ್ ಸೇರಲಿದೆ ‘ಅಣ್ಣಾಥೆ’; ಬಾಕ್ಸ್ ಆಫೀಸ್ ಉಡೀಸ್ ಮಾಡಿದ ರಜನಿ ಸಿನಿಮಾ