ಹೆಣ್ಣು-ಗಂಡು ಇಬ್ಬರೂ ಸಮಾನರು ಎನ್ನುವ ಈ ಕಾಲದಲ್ಲಿ ಹೆಣ್ಣುಮಗುವನ್ನು ಹೆತ್ತಿದ್ದಕ್ಕೆ ಪತ್ನಿಯನ್ನೇ ಬೆಂಕಿ ಹಚ್ಚಿ ಗಂಡ ಕೊಲೆ ಮಾಡಿರುವ ಘಟನೆ ನಡೆದಿದೆ. ಮಹಾರಾಷ್ಟ್ರದ ಪರ್ಭಾನಿ ಜಿಲ್ಲೆಯಲ್ಲಿ ಮಹಿಳೆ ಮೂರನೇ ಹೆಣ್ಣುಮಗುವಿಗೆ ಜನ್ಮ ನೀಡಿದ್ದಳು, ಕೋಪಗೊಂಡ ಪತಿ ಪತ್ನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ್ದಾನೆ.
ಕುಂಡ್ಲಿಕ್ ಉತ್ತಮ್ ಕಾಳೆ (32) ರಾತ್ರಿ ಗಂಗಾಖೇಡ್ ನಾಕಾದಲ್ಲಿ ಪತ್ನಿ ಮೈನಾಳನ್ನು ಕೊಂದಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ. ಮೈನಾ ಅವರ ಸಹೋದರಿ ನೀಡಿದ ದೂರಿನ ಪ್ರಕಾರ, ಆರೋಪಿಯು ಒಂದೊಮ್ಮೆ ನೀನು ಮೂರನೇ ಸಲವೂ ಹೆಣ್ಣುಮಗುವಿಗೆ ಜನ್ಮ ನೀಡಿದರೆ ಜೀವಂತ ಉಳಿಸುವುದಿಲ್ಲ ಎಂದು ಬೆದರಿಕೆ ಹಾಕುತ್ತಿದ್ದ. ಈ ವಿಚಾರವಾಗಿ ಪದೇ ಪದೇ ಜಗಳವಾಡುತ್ತಿದ್ದ ಎಂದು ತಿಳಿಸಿದ್ದಾರೆ.
ಹಾಗೆಯೇ ಮಗು ವಿಚಾರವಾಗಿ ಮತ್ತೆ ಜಗಳವಾಗಿತ್ತು, ಆಕೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದು, ಆಕೆ ಅರಚುತ್ತಾ ಮನೆಯಿಂದ ಓಡಿ ಹೋಗಿದ್ದಾಳೆ. ಜನರು ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದರು. ಆದರೆ ಆಕೆ ಅಷ್ಟರಲ್ಲೇ ಸುಟ್ಟುಹೋಗಿದ್ದಳು, ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಸಾವನ್ನಪ್ಪಿದ್ದಾಳೆ. ಕೊಲೆ ಆರೋಪಿ ಕಾಳೆಯನ್ನು ಬಂಧಿಸಲಾಗಿದೆ ಎಂದು ಗಂಗಾಖೇಡ್ ಪೊಲೀಸ್ ಠಾಣೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮತ್ತಷ್ಟು ಓದಿ: ದೇವನಹಳ್ಳಿ: ಗೆಳೆಯನ ಹತ್ಯೆ ಮಾಡಿ ದೃಶ್ಯಂ ಸಿನಿಮಾ ರೀತಿ ಕಥೆ ಕಟ್ಟಿದ ವ್ಯಕ್ತಿ, ತನಿಖೆಯಲ್ಲಿ ಬಯಲಾಯ್ತು ಭಯಾನಕ ಸಂಗತಿ
ಈ ವೇಳೆ ದೂರಿನ ಆಧಾರದ ಮೇಲೆ ಪೊಲೀಸರು ಕುಂಡ್ಲಿಕ್ ಕಾಳೆ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದಾರೆ. ಆರೋಪಿಯನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ತನಿಖೆ ಪೂರ್ಣಗೊಳ್ಳುವವರೆಗೂ ಈ ಬಗ್ಗೆ ಯಾವುದೇ ಹೇಳಿಕೆ ನೀಡಲು ಪೊಲೀಸರು ಸಿದ್ಧರಿಲ್ಲ.
ಘಟನೆಯ ಬಳಿಕ ಸ್ಥಳದಲ್ಲಿ ಆಕ್ರೋಶದ ವಾತಾವರಣ ನಿರ್ಮಾಣವಾಗಿದೆ. ಹೆಣ್ಣು ಮಕ್ಕಳ ಬಗ್ಗೆ ಸಮಾಜ ತನ್ನ ಆಲೋಚನೆಯನ್ನು ಬದಲಾಯಿಸಿಕೊಳ್ಳಬೇಕು ಎಂಬುದನ್ನು ಈ ಘಟನೆ ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ಜನರು ಹೇಳುತ್ತಾರೆ. ಕಾನೂನನ್ನು ಇನ್ನಷ್ಟು ಕಟ್ಟುನಿಟ್ಟಾಗಿ ಜಾರಿಗೊಳಿಸುವುದು ಮತ್ತು ಹೆಣ್ಣುಮಕ್ಕಳನ್ನು ಗೌರವಿಸುವ ವಾತಾವರಣವನ್ನು ಸೃಷ್ಟಿಸುವುದು ಇಂದಿನ ಅಗತ್ಯವಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:52 am, Sun, 29 December 24