ಸಿಬಿಐ ಕಚೇರಿಗೆ ಆಗಮಿಸಿದ ಮನೀಶ್ ಸಿಸೋಡಿಯಾ; ಧರಣಿ ನಡೆಸುತ್ತಿದ್ದ ಆಪ್ ನಾಯಕರು, ಕಾರ್ಯಕರ್ತರು ಪೊಲೀಸ್ ವಶಕ್ಕೆ

ಡಿಸಿಎಂ ಮನೀಶ್​ ಸಿಸೋಡಿಯಾಗೆ ಸಮನ್ಸ್ ಖಂಡಿಸಿ ಧರಣಿ ನಡೆಸುತ್ತಿರುವ ಎಎಪಿ ಕಾರ್ಯಕರ್ತರು, ಪೊಲೀಸರ ನಡುವೆ ವಾಗ್ವಾದ ನಡೆದಿದ್ದು, ಆಮ್ ಆದ್ಮಿ ಪಕ್ಷದ ನಾಯಕರು, ಕಾರ್ಯಕರ್ತರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸಿಬಿಐ ಕಚೇರಿಗೆ ಆಗಮಿಸಿದ ಮನೀಶ್ ಸಿಸೋಡಿಯಾ; ಧರಣಿ ನಡೆಸುತ್ತಿದ್ದ ಆಪ್ ನಾಯಕರು, ಕಾರ್ಯಕರ್ತರು ಪೊಲೀಸ್ ವಶಕ್ಕೆ
ಸಿಬಿಐ ಕಚೇರಿಗೆ ಆಗಮಿಸಿದ ಮನೀಶ್ ಸಿಸೋಡಿಯಾ
Edited By:

Updated on: Oct 17, 2022 | 1:53 PM

ನವದೆಹಲಿ: ದೆಹಲಿ ಅಬಕಾರಿ ನೀತಿಯಲ್ಲಿ ಭ್ರಷ್ಟಾಚಾರ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗಲು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ (Manish Sisodia) ಅವರಿಗೆ ಸಿಬಿಐ ಸಮನ್ಸ್​ ನೀಡಿತ್ತು. ಈ ಹಿನ್ನೆಲೆಯಲ್ಲಿ ಮನೀಶ್ ಸಿಸೋಡಿಯಾ ಸಿಬಿಐ ಕಚೇರಿಗೆ ಆಗಮಿಸಿದ್ದಾರೆ. ಈ ಹಿನ್ನೆಲೆಯಲ್ಲಿ ದೆಹಲಿಯ ಸಿಬಿಐ (CBI) ಕಚೇರಿ ಮುಂದೆ ಆಮ್ ಆದ್ಮಿ ಪಕ್ಷದ (Aam Aadmi Party) ಕಾರ್ಯಕರ್ತರು ಧರಣಿ ನಡೆಸುತ್ತಿದ್ದಾರೆ. ಡಿಸಿಎಂ ಮನೀಶ್​ ಸಿಸೋಡಿಯಾಗೆ ಸಮನ್ಸ್ ಖಂಡಿಸಿ ಧರಣಿ ನಡೆಸುತ್ತಿರುವ ಎಎಪಿ ಕಾರ್ಯಕರ್ತರು, ಪೊಲೀಸರ ನಡುವೆ ವಾಗ್ವಾದ ನಡೆದಿದ್ದು, ಆಮ್ ಆದ್ಮಿ ಪಕ್ಷದ ನಾಯಕರು, ಕಾರ್ಯಕರ್ತರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಾಗೇ, ಸಿಬಿಐ ಕಚೇರಿ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್​ ವಹಿಸಲಾಗಿದೆ.

ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಮನೀಶ್ ಸಿಸೋಡಿಯಾ ಅವರನ್ನು ಬೆಂಬಲಿಸಿ ತಮ್ಮ ಕುತ್ತಿಗೆಗೆ ಹಳದಿ ಸ್ಕಾರ್ಫ್ ಹಾಕುವ ಮೂಲಕ ದೆಹಲಿ ಸಿಬಿಐ ಕಚೇರಿ ಎದುರು ಧರಣಿ ನಡೆಸುತ್ತಿದ್ದಾರೆ. ತಮ್ಮ ಕೈಯಲ್ಲಿ ಮನೀಶ್ ಸಿಸೋಡಿಯಾ, ಸತ್ಯೇಂದ್ರ ಜೈನ್ ಮತ್ತು ಭಗತ್ ಸಿಂಗ್ ಅವರ ಪೋಸ್ಟರ್‌ಗಳನ್ನು ಹಿಡಿದುಕೊಂಡು ಘೋಷಣೆಗಳನ್ನು ಕೂಗುತ್ತಿದ್ದಾರೆ.

ಇದನ್ನೂ ಓದಿ: Manish Sisodia: ಸಿಬಿಐ ಮುಂದೆ ಇಂದು ಮನೀಶ್ ಸಿಸೋಡಿಯಾ ವಿಚಾರಣೆಗೆ ಹಾಜರು; ಡಿಸಿಎಂ ಬಂಧನದ ಭೀತಿಯಲ್ಲಿ ಆಪ್

ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಇಂದು ದೆಹಲಿಯ ಅಬಕಾರಿ ನೀತಿ ಹಗರಣದ ಸಿಬಿಐ ತನಿಖೆಗೂ ಮುಂಬರುವ ಗುಜರಾತ್ ವಿಧಾನಸಭಾ ಚುನಾವಣೆಗೂ ಸಂಬಂಧವಿದೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. ಗುಜರಾತ್​ನಲ್ಲಿ ಚುನಾವಣಾ ಫಲಿತಾಂಶ ಪ್ರಕಟವಾಗುವ ಡಿಸೆಂಬರ್ 8ರವರೆಗೆ ಮನೀಶ್ ಸಿಸೋಡಿಯಾ ಅವರನ್ನು ಜೈಲಿನಲ್ಲಿ ಇರಿಸಿಕೊಳ್ಳುತ್ತಾರೆ ಎಂಬ ಅನುಮಾನ ನನಗಿದೆ. ಸಿಬಿಐ ಸಿಸೋಡಿಯಾ ಅವರನ್ನು ವಿಚಾರಣೆಗೆ ಕರೆದಿದ್ದು, ಉಪ ಮುಖ್ಯಮಂತ್ರಿಯನ್ನು ಇಂದೇ ಬಂಧಿಸಬಹುದು ಎಂದು ಆಪ್ ನಾಯಕರು ಟೀಕಿಸಿದ್ದಾರೆ.

“ಡಿಸೆಂಬರ್ 8ರಂದು ಗುಜರಾತ್ ಫಲಿತಾಂಶ ಹೊರಬೀಳಲಿದೆ. ಈ ಜನರು ಸಿಸೋಡಿಯಾ ಅವರನ್ನು ಅಲ್ಲಿಯವರೆಗೆ ಜೈಲಿನಲ್ಲಿ ಇಡುತ್ತಾರೆ. ಆದ್ದರಿಂದ ಅವರು ಗುಜರಾತ್ ಚುನಾವಣೆಯಲ್ಲಿ ಪ್ರಚಾರಕ್ಕೆ ಹೋಗುವುದಿಲ್ಲ ಎಂಬುದು ಬಿಜೆಪಿ ನಾಯಕರ ಲೆಕ್ಕಾಚಾರ” ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ಮನೀಶ್ ಸಿಸೋಡಿಯಾ ಕೂಡ, ಚುನಾವಣೆಗೆ ಒಳಪಟ್ಟಿರುವ ರಾಜ್ಯದಲ್ಲಿ ಪ್ರಚಾರ ಮಾಡುವುದನ್ನು ತಡೆಯಲು ಬಿಜೆಪಿ ನನ್ನನ್ನು “ನಕಲಿ ಪ್ರಕರಣದಲ್ಲಿ ಬಂಧಿಸಬಹುದು” ಎಂದು ನಿನ್ನೆ ಆರೋಪಿಸಿದ್ದರು. ಮುಂದಿನ ದಿನಗಳಲ್ಲಿ ನಾನು ಚುನಾವಣಾ ಪ್ರಚಾರಕ್ಕಾಗಿ ಗುಜರಾತ್‌ಗೆ ಹೋಗಬೇಕಾಗಿತ್ತು. ನಾನು ಗುಜರಾತ್‌ಗೆ ಹೋಗುವುದನ್ನು ತಡೆಯುವುದು ಅವರ ಉದ್ದೇಶವಾಗಿದೆ ಎಂದು ಮನೀಶ್ ಸಿಸೋಡಿಯಾ ಟ್ವೀಟ್ ಮಾಡಿದ್ದಾರೆ. ‘ಗುಜರಾತ್‌ನಲ್ಲಿ ಸೋಲುವುದು ಬಿಜೆಪಿಗೆ ಗೊತ್ತಿರುವುದರಿಂದ ಅವರಿಗೆ ಭಯವಾಗುತ್ತಿದೆ. ಹೀಗಾಗಿ, ಇಂತಹ ತಂತ್ರಗಳನ್ನು ಮಾಡುತ್ತಿದ್ದಾರೆ’ ಎಂದು ಟ್ವೀಟ್ ಮಾಡಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:52 pm, Mon, 17 October 22