Mann Ki Baat: ಪರಿಸರ ಸಂರಕ್ಷಣೆಗೆ ಪಣತೊಡಲು ಕರೆ ನೀಡಿದ ಪ್ರಧಾನಿ ನರೇಂದ್ರ ಮೋದಿ

PM Narendra Modi: ಬೆಂಗಳೂರಿನ ಸಹಕಾರ ನಗರ ಬಸ್ ನಿಲ್ದಾಣದಲ್ಲಿ ಸ್ಥಾಪನೆಯಾಗಿರುವ ವಾಚನಾಲಯದ ಬಗ್ಗೆಯೂ ಅವರು ಪ್ರಸ್ತಾಪಿಸಿದರು.

Mann Ki Baat: ಪರಿಸರ ಸಂರಕ್ಷಣೆಗೆ ಪಣತೊಡಲು ಕರೆ ನೀಡಿದ ಪ್ರಧಾನಿ ನರೇಂದ್ರ ಮೋದಿ
ನರೇಂದ್ರ ಮೋದಿ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Oct 30, 2022 | 12:44 PM

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ (ಅ 30) ಮಾಸಿಕ ರೇಡಿಯೊ ಕಾರ್ಯಕ್ರಮ ‘ಮನ್​ ಕಿ ಬಾತ್’ ಮೂಲಕ ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದರು. ಸುಮಾರು ಅರ್ಧ ಗಂಟೆ ಮಾತನಾಡಿದ ಅವರು, ಪರಿಸರ ಸಂರಕ್ಷಣೆ ಹಾಗೂ ಸೌರಶಕ್ತಿಯ ಬಳಕೆ ಪ್ರಾಮುಖ್ಯತೆಯ ಬಗ್ಗೆ ಒತ್ತಿ ಹೇಳಿದರು. ಬೆಂಗಳೂರಿನ ಸಹಕಾರ ನಗರ ಬಸ್ ನಿಲ್ದಾಣದಲ್ಲಿ ಸ್ಥಾಪನೆಯಾಗಿರುವ ವಾಚನಾಲಯದ ಬಗ್ಗೆಯೂ ಅವರು ಪ್ರಸ್ತಾಪಿಸಿದರು. ‘ಇಂಥ ಪ್ರಯತ್ನಗಳು ಹೆಚ್ಚುಹೆಚ್ಚು ನಡೆಯಬೇಕು’ ಎಂದು ಕರೆನೀಡಿದರು.

‘ವಿದ್ಯಾರ್ಥಿ ಶಕ್ತಿಯು ಭಾರತದ ಬಲ ಹೆಚ್ಚಿಸುತ್ತಿದೆ. ಇಂದಿನ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಭಾರತವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಬಾಹ್ಯಾಕಾಶ ಕ್ಷೇತ್ರವನ್ನು ಭಾರತದ ಯುವಜನರಿಗೆ ಮುಕ್ತಗೊಳಿಸಿದ ನಂತರ ಅಲ್ಲಿ ಕ್ರಾಂತಿಕಾರಿ ಬದಲಾವಣೆಗಳು ಕಂಡು ಬರುತ್ತಿವೆ. ನವೋದ್ಯಮಗಳು ತಾಂತ್ರಿಕ ಆವಿಷ್ಕಾರಗಳ ಮೂಲಕ ಹೊಸ ಸಾಧ್ಯತೆಗಳನ್ನು ತೆರೆದಿಡುತ್ತಿವೆ’ ಎಂದರು.

‘ಭಾರತವು ಏಕಕಾಲಕ್ಕೆ 36 ಉಪಗ್ರಹಗಳನ್ನು ಬಾಹ್ಯಾಕಾಶ ಕಕ್ಷೆಯಲ್ಲಿ ಸ್ಥಾಪಿಸುವ ಮೂಲಕ ಮಹತ್ವದ ಸಾಧನೆ ಮಾಡಿದೆ. ಇದು ಭಾರತಕ್ಕೆ ಇಸ್ರೋ ಕೊಟ್ಟ ದೀಪಾವಳಿ ಉಡುಗೊರೆ. ಇದು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಮತ್ತು ಕಛ್​ನಿಂದ ಕೊಹಿಮಾವರೆಗೆ ಇಡೀ ದೇಶಕ್ಕೆ ಇದು ಹೆಮ್ಮೆಯ ವಿಚಾರವಾಗಿದೆ. ಈ ಉಪಗ್ರಹಗಳಿಂದಾಗಿ ದೇಶದಲ್ಲಿ ಡಿಜಿಟಲ್ ಸಂಪರ್ಕ ವ್ಯವಸ್ಥೆಯು ಮತ್ತಷ್ಟು ಸುಧಾರಿಸಲಿದೆ’ ಎಂದು ಅವರು ಅಶಯ ವ್ಯಕ್ತಪಡಿಸಿದರು.

‘ಸೋಲಾರ್ ಕ್ಷೇತ್ರದಲ್ಲಿ ಭಾರತವು ಹಲವು ಮಹತ್ತರ ಸಾಧನೆಗಳನ್ನು ಮಾಡಿದೆ. ಭಾರತದ ಸಾಧನೆಯಿಂದ ಇಡೀ ಜಗತ್ತು ಇತ್ತು ನೋಡುತ್ತಿದೆ. ಗುಜರಾತ್​ನ ಮೋಧೇರಾ ಗ್ರಾಮದ ಬಹುತೇಕ ಮನೆಗಳು ಸೌರಶಕ್ತಿ ಉತ್ಪಾದಿಸುತ್ತಿವೆ. ಇದನ್ನು ಭಾರತದ ಮೊದಲ ಸೌರ ಗ್ರಾಮ ಎಂದು ಘೋಷಿಸಲಾಗಿದೆ. ಛತ್ ಪೂಜಾ ಸಂಪ್ರದಾಯವು ‘ಏಕ್ ಭಾರತ್, ಶ್ರೇಷ್ಠ ಭಾರತ್’ ಆಶಯದ ಅತಿದೊಡ್ಡ ಉದಾಹರಣೆಯಾಗಿದೆ. ವಿದೇಶಗಳಲ್ಲಿಯೂ ಛತ್ ಪೂಜಾ ಆಚರಣೆ ನಡೆಯುತ್ತಿದೆ. ಇದು ವಿಶ್ವದಾದ್ಯಂತ ಭಾರತದ ಸಂಸ್ಕೃತಿಯನ್ನು ಪ್ರತಿನಿಧಿಸುತ್ತಿದೆ’ ಎಂದು ಹೇಳಿದರು.

‘ಖ್ಯಾತ ಸ್ವಾತಂತ್ರ್ಯ ಹೋರಾಟಗಾರ ಮತ್ತು ಬುಡಕಟ್ಟು ಸಮುದಾಯದ ನಾಯಕ ಬಿರ್ಸಾ ಮುಂಡಾ ಅವರ ಸಾಧನೆಯನ್ನು ಮೋದಿ ಶ್ಲಾಘಿಸಿದರು. ಕಾರ್ತಿಕ ಹುಣ್ಣಿಮೆ ಶುಭಾಶಯವನ್ನು ಮೋದಿ ಕೋರಿದರು. ದೇಶದ ವಿವಿಧೆಡೆ ಈ ಪುಣ್ಯ ದಿನದಂದು ನದಿಗಳಲ್ಲಿ ಶ್ರದ್ಧಾಳುಗಳು ಸ್ನಾನ ಮಾಡುತ್ತಾರೆ. ಅವರೆಲ್ಲರಿಗೂ ನಾನು ಶುಭ ಹಾರೈಸುತ್ತೇನೆ’ ಎಂದರು. ಮಿಷನ್ ಲೈಫ್ (Lifestyle for Environment – LiFe) ಆಶಯವನ್ನು ಎಲ್ಲ ನಾಗರಿಕರು ಅರ್ಥ ಮಾಡಿಕೊಳ್ಳಬೇಕು. ಪರಿಸರ ಸಂರಕ್ಷಣೆಗಾಗಿ ಭಾರತವು ಮುನ್ನಡೆಸುತ್ತಿರುವ ಜಾಗತಿಕ ಅಭಿಯಾನ ಇದು ಎಂದು ಮೋದಿ ಹೇಳಿದರು. ಎಲ್ಲ ಭಾರತೀಯರು ಪರಿಸರದ ಬಗ್ಗೆ ಸೂಕ್ಷ್ಮತೆ ಬೆಳೆಸಿಕೊಳ್ಳಬೇಕು. ಪರಿಸರ ಉಳಿಸಲು ಹೋರಾಡಿದವರಲ್ಲಿ ಭಾರತೀಯರು ಗಮನಾರ್ಹ ಸಂಖ್ಯೆಯಲ್ಲಿದ್ದಾರೆ ಎಂದು ತಿಳಿಸಿದರು.